ADVERTISEMENT

ಚುರುಮುರಿ: ಬಿಗ್‌ಬ್ಯಾಶ್ ಕಥೆ

ಲಿಂಗರಾಜು ಡಿ.ಎಸ್
Published 19 ಜನವರಿ 2026, 23:30 IST
Last Updated 19 ಜನವರಿ 2026, 23:30 IST
   

ಈ ಸಾರಿ ಬಿಗ್‌ಬ್ಯಾಶ್‌ ಸೀಜನ್ನು ಅನಾಯಕತ್ವ ಹೆಂಗಿರತದೆ ಅಂತ ತೋರಿಸ್ತದೆ ಅಣ್ಣ. ನಾಕು ಜನ ಫೈನಲ್ಲಿಗೆ ಬಂದವ್ರೆ. ರಾಮಸಿದ್ದಯ್ಯ, ಕುಮಾರಶಿವ ಚೆನ್ನಾಗಿ ಆಡ್ತಾವ್ರೆ. ಇವರಿಗಿಂತಾ ಫ್ಯಾನುಗಳದ್ದೇ ಹವಾ ಜಾಸ್ತಿಯಾಗ್ಯದೆ. ಕಂಡುದ್ದು ಕಾಣುದ್ದನ್ನೆಲ್ಲಾ ತಾರಾಕ್ಯಂದು ಮಾತಾಡ್ತರೆ ಅಣ್ಣಾ. ಸಾವುಕಾರರು, ಪರಮಣ್ಣನೂ ಟವಲ್ ಹಾಕ್ಯವರೆ. ಇವರಿಬ್ಬರೂ ಜನಕ್ಕೆ ‘ನಾವು ಆಟಕ್ಕುಂಟು ಲೆಕ್ಕಕ್ಕಿಲ್ಲ. ಆದರೂ ನಮಗೇ ವೋಟ್ ಮಾಡಿ, ಪ್ಲೀಸ್ ವೋಟ್ ಮಾಡಿ’ ಅಂತ ಕೇಳಿಕ್ಯಂದ್ರಂತೆ ಅಣ್ಣಾ.

ಪೋಟಾಪೋಟಿ ತೇಜಿಯಾಯ್ತಿದ್ದಂಗೆ ರಾಮಸಿದ್ದಯ್ಯ, ಕುಮಾರಶಿವ ಅವರವರ ಹೆಸರುಬಲ ಹೇಳಿಕ್ಯಂದರು ಅಣ್ಣಾ.

ರಾಮಸಿದ್ದಯ್ಯ ‘ನಾನು ಜನಕ್ಕೆ ಅವರದ್ದೇ ದುಡ್ಡಲ್ಲಿ ಅವರಿಗೇ ಗ್ಯಾರಂಟಿ ಕೊಟ್ಟುದನಿ. ಕೇರಳದಲ್ಲಿ ಆನೆ ತುಳಿದು ಸತ್ತೋರಿಗೆ ಹತ್ತು ಲಕ್ಸ, ಕೋಗಿಲುಗಳಿಗೆ ಫ್ಲಾಟು ಕೊಡ್ತಿವ್ನಿ. ಮೂಡಾಕ್ಕು ನನಗೂ ಏನೇನು ಸಂಬಂಜ ಇಲ್ಲ ಕನ್ರಿ. ನನಗೇ ಮಂಡಿನೋವದೆ. ಒಂದ್ಸಾರಿ ಚೇರಲ್ಲಿ ಕೂತ್ರೆ ಏಳಕ್ಕಾಗ್ಕಿಲ್ಲ. ನನಗೇ ವೋಟಾಕಿ ಪ್ಲೀಸ್’ ಅಂತ ಕೇಳಿಕ್ಯಂದರು ಅಣ್ಣಾ.

ADVERTISEMENT

ಕುಮಾರಶಿವ ‘ನಾನು ನಿಷ್ಠೂರಾದ್ರೂ ಪರವಾಗಿಲ್ಲ. ಬೆಂಗಳೂರು ಜನಕ್ಕೆ ಒಳ್ಳೇದಾಗಬಕು, ಸುರಂಗ ಮಾಡಬಕು. ನೀರು, ಕರಂಟು ರೇಟಿಗೆ ಜನ ಭಯ ಬೀಳಬಕು. ನಾನೇ ಬಾಸ್ ಆಗಬಕು ಅಂತ ಎಷ್ಟು ತ್ಯಾಗ ಮಾಡಿ ಜೀವ ತೇದುದನಿ ಗೊತ್ತೇನ್ರಿ. ನೀವೆಲ್ಲಾ ನನಗೇ ವೋಟಾಕಿ ಗೆಲ್ಸಿ ಅಂತ ಪ್ರಾರ್ಥನೆ ಮಾಡ್ತೀನಿ’ ಅಂದೋರು ಕಣ್ಣಗೆ ನೀರಾಕ್ಕ್ಯಂದ್ರು ಅಣ್ಣಾ.

ರಾಮಸಿದ್ದಯ್ಯ, ಕುಮಾರಶಿವರಿಗೇ ಜಾಸ್ತಿ ವೋಟು ಬಂದವಂತೆ. ‘ಊರೂರೆಲ್ಲಾ ರಿಪಬ್ಲಿಕ್ಕಾಗ್ಯವೆ. ಬಿಗ್‌ಬ್ಯಾಶಲ್ಲಿ ನಮಗೆ ಯಾರು, ಎಲ್ಲಿ–ಯಾವಾಗ ಕಡೆಗೂಟ ಇಕ್ತರೋ ಕಾಣ್ನಲ್ಲಾ’ ಅಂತ ಜನ ಯದಾರು ಬೀಳ್ತಾವ್ರೆ ಅಣ್ಣಾ.

ಬಿಗ್‌ಬ್ಯಾಶ್ ಇಚಾರ ಗಾಳಿಗಂಟ್ಲು ಆಯ್ತಿರದು ಕಂಡು ದೊಡ್ಡೋರು ನಾಕೂ ಜನಕ್ಕೆ ‘ನಿಮಿಗೆ ಯೇಗ–ಯೇಗ್ತೆ ಇದ್ರೆ ಬಾಸ್ ಆಯ್ತಿರ. ನೀವೀಗ ಮನೆಗೋಗಿ ನಾಳಾಕೆ ದಿಲ್ಲಿಗೆ ಬಲ್ರಿ’ ಅಂತಂದು ಪಾರಿನ್ನಿಗೆ ಕಡೆದೋದ್ರಂತೆ ಅಣ್ಣಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.