‘ಕ್ಲಾಸಿನಲ್ಲಿ ನಿಮ್ಮ ಮಗಳು ಕೆಮ್ಮಿದಳು, ಸೀನಿದಳು, ಮನೆಗೆ ಕರೆದುಕೊಂಡು ಹೋಗಿ’ ಎಂದು ಸ್ಕೂಲ್ ಟೀಚರ್ ಫೋನ್ ಮಾಡಿದ್ದರು. ಶಂಕ್ರಿ ಮಗಳನ್ನು ಮನೆಗೆ ಕರೆತಂದಿದ್ದ.
‘ಕೊರೊನಾ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಜ್ವರ, ಕೆಮ್ಮು, ಸೀನು ಕಂಡುಬಂದರೆ ರಜೆ ಕೊಟ್ಟು ಮನೆಗೆ ಕಳುಹಿಸಿ’ ಎಂದು ಶಾಲೆಗಳಿಗೆ ಸರ್ಕಾರ ಸೂಚನೆ ನೀಡಿದ್ದರ ಪರಿಣಾಮ ಇದು.
ಮಧ್ಯಾಹ್ನ ಸುಮಿಗೆ ಟೀಚರ್ ಫೋನ್ ಮಾಡಿ, ‘ನಿಮ್ಮ ಮಗಳ ಕೆಮ್ಮು, ಸೀನು ಹೇಗಿದೆ? ಡಾಕ್ಟರ್‌ಗೆ ತೋರಿಸಿದ್ರಾ?’ ಎಂದು ಕೇಳಿದರು.
‘ಇಲ್ಲಾ ಟೀಚರ್, ಮನೆಗೆ ಬಂದಾಗಿನಿಂದ ಮಗಳು ಒಮ್ಮೆಯೂ ಕೆಮ್ಮಲಿಲ್ಲ, ಸೀನಲಿಲ್ಲ’ ಅಂದಳು ಸುಮಿ.
‘ನೆಗ್ಲೆಕ್ಟ್ ಮಾಡ್ಬೇಡಿ, ಹೆಲ್ತ್ ಚೆಕಪ್ ಮಾಡಿಸಿ. ಹುಷಾರಾದ ಮೇಲೆ ವರ್ಕ್ ಫ್ರಮ್ ಹೋಮ್ ಮಾಡಿಸಿ’.
‘ವರ್ಕ್ ಫ್ರಮ್ ಹೋಮಾ?!’
‘ಕೆಮ್ಮು–ಸೀನುಗಳ ಸೀಜನ್‌ನಲ್ಲಿ ಹೋಮ್ ವರ್ಕ್ ಅನ್ನು ವರ್ಕ್ ಫ್ರಮ್ ಹೋಮ್ ಅಂತೀವಿ... ನಿಮ್ಮ ಮಗಳು ಸೈನ್ಸ್ ಕ್ಲಾಸ್‌ನಲ್ಲಿ ಮೂರು ಬಾರಿ ಸೀನಿದಳು, ಆರು ಬಾರಿ ಕೆಮ್ಮಿದಳು. ಇಂಗ್ಲಿಷ್ ಕ್ಲಾಸ್‌ನಲ್ಲಿ ನಾಲ್ಕು ಸಲ ಕೆಮ್ಮಿದಳು. ಮ್ಯಾಥ್ಸ್ ಕ್ಲಾಸ್‌ನಲ್ಲಿ ಎಂಟು ಸಲ ಕೆಮ್ಮಿದಳು’ ಮಗಳ ಕ್ಲಾಸ್ ರೂಮ್ ಕೆಮ್ಮಿಸ್ಟ್ರಿ ಹೇಳಿದರು ಟೀಚರ್.
‘ಬೇರೆ ಮಕ್ಕಳು ಕೆಮ್ಮಲಿಲ್ವಾ?’
‘ಕೆಮ್ಮಿದ, ಸೀನಿದ ಹನ್ನೆರಡು ಮಕ್ಕಳಿಗೆ ರಜೆ ಕೊಟ್ಟು ಮನೆಗೆ ಕಳಿಸಿದ್ವಿ. ಆ ಮಕ್ಕಳನ್ನು ಮನೆಗೆ ಕಳಿಸಿದ ಮೇಲೆ ಕ್ಲಾಸಿನ ಎಲ್ಲಾ ಮಕ್ಕಳೂ ಸೀನಲು, ಕೆಮ್ಮಲು ಶುರು ಮಾಡಿದರು. ನಮಗೆ ಗಾಬರಿಯಾಯ್ತು. ಹೆಚ್ಚೆಂಗೆ ಕಂಪ್ಲೇಂಟ್ ಮಾಡಿದ್ದಿ?’
‘ಹೆಚ್ಚೆಂ ಏನಂದ್ರು?’
‘ನಾಳೆ ಸ್ಕೂಲಿಗೆ ಡಾಕ್ಟರನ್ನು ಕರೆಸಿ ಕೆಮ್ಮುವ, ಸೀನುವ ಮಕ್ಕಳಿಗೆ ಇಂಜೆಕ್ಷನ್ ಹಾಕಿಸೋಣ ಅಂದರು. ಹಾಗೆ ಹೇಳಿದ ನಂತರ ಯಾವ ಮಕ್ಕಳೂ ಸೀನಲೂ ಇಲ್ಲ, ಕೆಮ್ಮಲೂ ಇಲ್ಲ...’ ಎಂದು ಟೀಚರ್ ಫೋನ್ ಕಟ್ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.