ADVERTISEMENT

ಚುರುಮುರಿ: ಕ್ರೂರ ಜಗತ್ತು! 

ಗುರು ಪಿ.ಎಸ್‌
Published 12 ಏಪ್ರಿಲ್ 2024, 23:30 IST
Last Updated 12 ಏಪ್ರಿಲ್ 2024, 23:30 IST
   

‘ನಾನು ನಂಬಿದವರೇ ನನ್ನ ಬೆನ್ನಿಗೆ ಚೂರಿ ಹಾಕಿದರು’ ಗೊಣಗತೊಡಗಿದ ಮುದ್ದಣ್ಣ. 

‘ಯಾಕೋ, ಏನಾಯ್ತು?’ ಆತಂಕದಿಂದ ಕೇಳಿದ ಸ್ನೇಹಿತ ವಿಜಿ. 

‘ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ನಾನಿವತ್ತು ಎಮ್ಮೆಲ್ಲೆ ಆಗಿರ್ತಿದ್ದೆ’. 

ADVERTISEMENT

‘ನೀನು ಮತದಾರರಿಗೆ ‘ಎಲ್ಲ’ ವ್ಯವಸ್ಥೆ ಮಾಡಿರಲಿಲ್ಲ ಅನಿಸುತ್ತೆ, ಅದಕ್ಕೇ ಸೋತಿದ್ದೀಯ’. 

‘ನನ್ನ ಕ್ಷೇತ್ರದಲ್ಲಿ ಒಂದೊಂದು ಕುಟುಂಬಕ್ಕೆ ಇಂತಿಷ್ಟು ಅಂತ ದುಡ್ಡು ಕೊಡೋಕೆ ನಿರ್ಧರಿಸಿ, ಆಪ್ತರ ಕೈಯಲ್ಲಿ ಕೊಟ್ಟು ಹಂಚೋಕೆ ಹೇಳಿದ್ದೆ’. 

‘ಹಾಗಿದ್ದರೆ ಗೆಲ್ಲಬೇಕಿತ್ತಲ್ಲ...’ 

‘ಆ ದುಡ್ಡು ಜನರಿಗೆ ತಲುಪಿದ್ದರೆ ತಾನೆ?’

‘ಮತ್ತೆ ಏನಾಯ್ತು?’ 

‘ನಾನು ಹೇಗೆ ಸಂಪಾದನೆ ಮಾಡಿದ್ದೆನೋ ಅದು ಹಾಗೇ ಸೋರಿಹೋಯಿತು. ಸೋಲು ನನ್ನದಾಯಿತು’ ತಲೆ ಮೇಲೆ ಕೈ ಹೊತ್ತ ಮುದ್ದಣ್ಣ.

‘ದುಡ್ಡು ತೆಗೆದುಕೊಂಡೋರಿಗಾದರೂ ಉಪಕಾರ ಸ್ಮರಣೆ ಇರಬೇಡ್ವಾ? ಕ್ರೂರ ಜಗತ್ತು ಮುದ್ದಣ್ಣ ಇದು’ ಗಾಯದ ಮೇಲೆ ಉಪ್ಪು ಸವರುವ ಮಾತನಾಡಿದ ವಿಜಿ. 

‘ನಾನು ಸೋಲು ಒಪ್ಪಿಕೊಳ್ಳುವುದಿಲ್ಲ. ಫೀನಿಕ್ಸ್‌ನಂತೆ ಮತ್ತೆ ಎದ್ದು ಬರ್ತೀನಿ. ಲೋಕಸಭಾ ಎಲೆಕ್ಷನ್‌ಗೆ ನಿಲ್ತೀನಿ ಮತ್ತು ಈ ಹಿಂದೆ ಮಾಡಿದ ತಪ್ಪನ್ನು ಮಾಡಲ್ಲ’ .

‘ಅಂದ್ರೆ, ಈ ಬಾರಿ ದುಡ್ಡು ಹಂಚಲ್ವಾ?’ 

‘ಹಂಚುತ್ತೇನೆ. ಆದ್ರೆ, ನನ್ನ ಆಪ್ತರ ಕೈಗೆ ದುಡ್ಡು ಕೊಡಲ್ಲ. ನೇರವಾಗಿ ಮತದಾರರ ಕೈಗೆ ಹಣ ಸಿಗುವ ಹಾಗೆ ಮಾಡ್ತೀನಿ. ನನ್ನ ಕ್ಷೇತ್ರದ ಒಂದೊಂದು ಏರಿಯಾದ ಪ್ರಮುಖ ಮನೆಯಲ್ಲಿ ಒಂದೊಂದು ಫಂಕ್ಷನ್‌ ಮಾಡಿಸ್ತೀನಿ. ಅದಕ್ಕೆಲ್ಲ ನಾನೇ ದುಡ್ಡು ಕೊಡ್ತೀನಿ. ಬರ್ತ್‌ಡೇ, ಮದುವೆ, ಮುಂಜಿ, ನಾಮಕರಣ ಹೀಗೆ, ಆ ಫಂಕ್ಷನ್‌ಗೆ ಹೋದವರಿಗೆ ಆ ಮನೆಯವರೇ ಗಿಫ್ಟ್‌ ಕೊಡೋ ರೀತಿ ವ್ಯವಸ್ಥೆ ಮಾಡ್ತೀನಿ’. 

‘ಗುಡ್‌ ಐಡಿಯಾ. ಆದರೆ, ಗಿಫ್ಟ್‌ ತಗೊಂಡ ನಂತರವೂ ಜನ ನಿನಗೆ ವೋಟ್ ಹಾಕದಿದ್ರೆ?’ 

‘ಏನ್‌ ಮಾಡೋದು, ಇದು ಕ್ರೂರ ಜಗತ್ತು ಎಂದುಕೊಂಡು ಸುಮ್ಮನಾಗೋದು’ ಎನ್ನುತ್ತಾ ಆಕಾಶ ನೋಡತೊಡಗಿದ ಮುದ್ದಣ್ಣ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.