ADVERTISEMENT

ಚುರುಮುರಿ: ಭತ್ಯೆ ಬಾತ್

ಆನಂದ ಉಳಯ
Published 3 ಮಾರ್ಚ್ 2022, 22:44 IST
Last Updated 3 ಮಾರ್ಚ್ 2022, 22:44 IST
   

‘ಛಲೋ ಆಯಿತು ನೋಡ್ರಿ ಸಂಬಳ, ಭತ್ಯೆ ಹೆಚ್ಚಾದದ್ದು’ ಅಂದರು ಮಂತ್ರಿಗಳ ಹೆಂಡತಿ.

‘ಹೌದ್ರೀ, ಗದ್ದಲದಲ್ಲಿ ಆ ಮಸೂದೆ ಪಾಸಾಗುತ್ತೋ ಇಲ್ಲವೋ ಅಂತ ಹೆದರಿದ್ದೆ. ಸದ್ಯ ಯಾರೂ ಚಕಾರ ಎತ್ತಲಿಲ್ಲ ನೋಡ್ರಿ’ ಅಂದರು ಶಾಸಕರ ವೈಫು.

‘ಈ ವಿಷಯದಲ್ಲೆಲ್ಲ ಅವರು ಜಾಣರು ಬಿಡ್ರಿ. ಮನೆ ನಿರ್ವಹಣೆಗೆ ನಮಗೀಗ 10 ಸಾವಿರ ರೂಪಾಯಿ ಹೆಚ್ಚು ಸಿಗುತ್ತೆ ನೋಡ್ರಿ’.

ADVERTISEMENT

‘ಶಾಸಕರಿಗೂ ಮನೆ ನಿರ್ವಹಣೆ ಇದೆ. ಆದರೆ ನಮಗಿಲ್ರೀ ಆ ಭತ್ಯೆ. ಸೆಷನ್ ನಡೆಯುವಾಗ ದಿನಕ್ಕೆ 5,000 ಹೆಚ್ಚಿಗೆ ಭತ್ಯೆ ಮಾಡಿದಾರಲ್ರೀ ನಿಮ್ಮವರಿಗೆ. ಸೆಷನ್ ಹೆಚ್ಚು ದಿನ ನಡೀಬೇಕ್ರಿ. ಮತ್ತೆ ಗೈರಾಗಬೇಡಿ ಅಂತ ಮನೆಯವರಿಗೆ ಹೇಳಬೇಕ್ರಿ’.

‘ನಮ್ಮ ಮನೆಯವರಿಗೆ ಈಗ ತಿಂಗಳಿಗೆ 2 ಸಾವಿರ ಲೀಟರ್ ಪೆಟ್ರೋಲ್ ಭತ್ಯೆ ಸಿಗುತ್ತೆ. ನಮ್ಮಿಬ್ಬರ ಮಕ್ಕಳೂ ಬೇರೆ ಬೇರೆ ಕಾರ್ ಉಪಯೋಗಿಸಬಹುದು ಕಾಲೇಜಿಗೆ ಹೋಗೋಕೆ, ರೌಂಡ್ಸ್ ಹಾಕೋಕೆ’.

‘ಅಯ್ಯೋ, ನಮಗೆ ಪ್ರಯಾಣ ಭತ್ಯೆ ವರ್ಷಕ್ಕೆ 2.50 ಲಕ್ಷ. ಅದರಲ್ಲೇ ಅಡ್ಜಸ್ಟ್ ಮಾಡಬೇಕು’.

‘ನಿಮಗೆ ಆತಿಥ್ಯ ಭತ್ಯೆ ಸಿಗೋದಿಲ್ಲ ನೋಡ್ರಿ. ಅದಕ್ಕೆ ಮಂತ್ರಿ ಆಗ್ಬೇಕು ಅಂತೀನಿ. ಈಗ 1 ಲಕ್ಷ ಹೆಚ್ಚು ಸಿಗುತ್ತೆ, ಅಂದರೆ ವರ್ಷಕ್ಕೆ 4 ಲಕ್ಷ ಬರುತ್ತೆ ಆತಿಥ್ಯ ಭತ್ಯೆ. ನಮ್ಮ ಆತಿಥ್ಯಾನೂ ಚಲೋ ಮಾಡಕೋಬಹುದು ನೋಡ್ರಿ’.

‘ಅದೃಷ್ಟವಂತರು. ನಮ್ಮ ಆಪ್ತ ಸಹಾಯಕನ ವೇತನ ಹೆಚ್ಚಿಸೇ ಇಲ್ಲ ನೋಡ್ರಿ. 20,000ನೇ ಇದೆ’.

‘ಬಿಡ್ರಿ ಅವರು ದುಡುಕೋತಾರೆ’.

‘ನಮ್ಮ ಕೆಲಸದಾಕಿ ಪಗಾರ ಹೆಚ್ಚು ಮಾಡೀ ಅಂತಿದಾಳೆ. ತೊಗರಿಬೇಳೆ 120 ಆಗಿದೆಯಂತೆ. ಮಗನ ಫೀಸ್...’

‘ಅವರು ಕೇಳ್ತಾನೇ ಇರ್ತಾರೆ. 100 ರೂಪಾಯಿ ಹೆಚ್ಚು ಮಾಡಿ ಸಾಕು’.

‘ಸಾಕಂತೀರಾ? ಸರಿ, ನಾ ಬರ್ತೀನ್ರಿ’.

‘ಹೋಗಿ ಬರ‍್ರಿ. ನಿಮ್ಮವರು ಮಂತ್ರಿ ಆದಾರು ಬಿಡ್ರಿ. ಆಗ ಹೆಚ್ಚು ಭತ್ಯೆ ಸಿಗುತ್ತೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.