ADVERTISEMENT

ಚುರುಮುರಿ: ಸುಧಾರಣಾ ಸುಂಕ

ಲಿಂಗರಾಜು ಡಿ.ಎಸ್
Published 2 ಫೆಬ್ರುವರಿ 2026, 19:12 IST
Last Updated 2 ಫೆಬ್ರುವರಿ 2026, 19:12 IST
   

ಭರತನ ಮನೆಗೆ ಯುರೋಪಣ್ಣಾರು ಮುಕ್ತ ಯಾಪಾರಕ್ಕೆ ಬಂದು ಸುಂಕದ ಮಾತು–ಕತೆ ಆತಿತ್ತು. ಯುರೋಪಣ್ಣಾರು ‘ಇದು ಸರ್ವ ಒಪ್ಪಂದಗಳ ತಾಯಿ ಕನ್ರಿ’ ಅಂತಿದ್ರು.

ರಷ್ಯಪ್ಪ, ಚೀನಣ್ಣ, ಬೇಲಿ ಮರೇಲಿ ನಿಂತು ಕದ್ದು ನೋಡ್ತಿದ್ದಾಗಲೂ ಪಾಕಣ್ಣ ‘ಅಣೈ ಏನಾದ್ರೂ ದಾನ ಕೊಡಿ’ ಅಂತ ಕೇಳ್ತಿದ್ದ.

‘ಹೌಡೀ ಭರತ. ಸುಂಕದ ಮಾತಾಡ್ತಿದ್ದಂಗಿತ್ತು? ಇನ್ನೊಂದೀಟು ಜನ ಕೆಲಸಕ್ಕೆ ಕಳುಗಿಸೋ ಭರತ’ ಅಂದ್ಕಂದು ಅಮೆರಿಕಯ್ಯ ಎಂಟ್ರಿ ತಗಂದ. ಕಂಡೋರಿಗೆಲ್ಲ ಸುಂಕ ಜಡಿಯೋ ಇವನ ಕ್ಯಾಮೆ ಕಂಡು ಜನ ಈಯಪ್ಪನಿಗೆ ಸುಂಕಪ್ಪಯ್ಯ ಅಂತ ಅಡ್ಡೆಸರಿಟ್ಟಿದ್ದರು.

ADVERTISEMENT

‘ನಮ್ಮೋರೆಲ್ಲಾ ನಿಂತಾವೆ ಕೆಲಸಕ್ಕಿರದು ಮರೆತೋತಾ ಸುಂಕಪ್ಪಣ್ಣ? ಆದ್ರೂ ನಮಗೇ ಜಾಸ್ತಿ ಸುಂಕ, ವೀಸಾ ಪೀಜು ಜಡೀತಿದ್ದೀಯಪ್ಪ’ ಅಂದ ಭರತ.

‘ನಿನ್ನಂತಾ ದಾಸತ್ತುಗಾರ ನನ್ನ ಜೊತೆಗಿರದು ಕಂಡ್ರೆ ಎಲ್ಲಾರಿಗೂ ಹೊಟ್ಟುರಿ ಕಲಾ. ಬಂದು ನಿನಗೆ ಚಾಡಿ ಹೇಳ್ತರೆ. ಅದೆಲ್ಲಾ ತಲೆಗಾಕಬ್ಯಾಡ’ ಸುಂಕಪ್ಪಣ್ಣ ಹೇಳಿದ.

‘ನೀನು ಚೀನಣ್ಣನ ಮನೆಗೋಗಿ ಅವನ ಹೊಲದಾಗಲ ರೇರ್‌ಅರ್ತು ಮಣ್ಣೆಲ್ಲಾ ನಿನಗೇ ಮಾರಬಕು ಅಂತ ಕಾಲಿಡಕಂದಿದ್ದಂತೆ?’ ಭರತ ಹಂಗಿಸಿದ.

‘ಪಾಕಣ್ಣನ, ನೇಪಾಳಿ ಮನೆ ಸೊಂಪ್ಲಲ್ಲಿ ರೋಡು ಮಾಡಿಕ್ಯಂದು ಅವರುನ್ನ್ಯಾಕೆ ಬಾಳಗೆಡ್ಸತೀಯೋ ಚೀನಣ್ಣ ಅಂದುದ್ದು ತಪ್ಪಾತ? ಉಕ್ರೇನಿ ಗುಳೆ ಎಬ್ಬಿಸಕ್ಕೆ ರಷ್ಯಪ್ಪ ನಿನ್ನ ದುಡ್ಡು ಬಳಸಿಗ್ಯತಿರೋರು ತಪ್ಪಲ್ಲವಾ?’ ಅಂದ ಸುಂಕಪ್ಪಯ್ಯ.

‘ನೀನು ವೆನುಜುವೇಲಮ್ಮನ ಮನೆಗೆ ಸರೋತ್ತಲ್ಲಿ ನುಗ್ಗಿದ್ಯಾಕೋ? ಈಗ ಇರಾನುನ್ನ, ಗ್ರೀನ್‌ಲ್ಯಾಂಡುನ್ನ ಗಾವು ಸಿಗಿತೀನಿ ಅಂದಂತೆ?’ ಭರತನ ಮಾತಿಗೆ ಸುಂಕಪ್ಪಯ್ಯನ ಮುಖ ಕೆಂಪಾತು.

‘ಅಲ್ಲಿ–ಇಲ್ಲಿ ಮರೇಲಿ ನಿಂತೋರೆಲ್ಲಾ ಒಂದು ತಿಳಕಳಿ... ಡಾಲರ್ ಬುಟ್ಟು, ನನ್ನ ಬುಟ್ಟು ಯಾರೂ ಏನೂ ಮಾಡಾಕೆ ಆಗೋಲ್ಲ’ ಎಂದು ಸುಂಕಪ್ಪಯ್ಯ ಸಿಟ್ಟುಗಂದು ಹೊಂಟೋದ.

‘ಎಲ್ಲೋದ್ರೂ ಸುಂಕಪ್ಪಯ್ಯ ಟ್ಯಾಕ್ಸ್ ಟೆರರಿಸಂ ಬುಡಕುಲ್ಲ’ ಅಂತ ಮರೇಲಿ ನಿಂತಿದ್ದ ಚೀನಣ್ಣ.

ರಷ್ಯಪ್ಪ ನೆಟಿಕೆ ಮುರಿದು ಕಿಸಕ್ ಅಂತ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.