‘ಗುಡ್ಡೆ, ಈ ಬಾಹ್ಯಾಕಾಶ ನಿಲ್ದಾಣ ಅಂದ್ರೆ ಏನದು? ಹೆಂಗಿರ್ತತಿ?’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.
‘ಏನೋಪ್ಪ, ನಂಗೂ ಸರಿಯಾಗಿ ಗೊತ್ತಿಲ್ಲ. ಅಲ್ಲಿ ದಿನಕ್ಕೆ 16 ಹಗಲು, 16 ರಾತ್ರಿಯಂತೆ. ಅಲ್ಲಿಂದ ಕೆಳಕ್ಕೆ ನೋಡಿದ್ರೆ ಭೂಮಿ ಕಾಣ್ಸುತ್ತಂತೆ...’ ಗುಡ್ಡೆ ಹೇಳಿದ.
‘ಹೌದಾ? ಹಂಗಾರೆ ಭೂಮಿ ಮೇಲೆ ನಡೆಯೋದೆಲ್ಲ ಕಾಣ್ಸುತ್ತೆ ಅನ್ನು. ಟ್ರಂಪ್ ಏನ್ಮಾಡ್ತದಾನೆ, ನಮ್ ನಮೋ ಸಾಹೇಬ್ರು ಎಲ್ಲಿ ಭಾಷಣ ಮಾಡ್ತದಾರೆ, ಬಂಡೆ ಸಾಹೇಬ್ರು ಯಾವ ಗುಡೀಲಿ ಗಂಟೆ ಹೊಡೀತಿದಾರೆ, ಎಲ್ಲ ಅಲ್ಲಿಂದ್ಲೇ ನೋಡಬೋದು ಅಲ್ವಾ?’ ಕೊಟ್ರೇಶಿ ಕೇಳಿದ.
‘ಅಲ್ಲಿ ನನ್ ಚಾದಂಗಡಿ ತರ ಹೋಟ್ಲೂ ಅದಾವ?’ ಮಂಜಮ್ಮಗೂ ಕುತೂಹಲ.
‘ಲೇಯ್, ಏನ್ ಮಬ್ಬದೀರಲೆ... ಅದೇನು ಸಿಟಿ ಬಸ್ ಸ್ಟ್ಯಾಂಡಾ? ಅಲ್ಲಿ ಶೇಂಗಾ, ಸೌತೀಕಾಯಿ ಮಾರ್ತಾರೆ ಅನ್ಕಂಡ್ರಾ? ಅದು ಆಕಾಶದಾಗೆ ತೇಲೋ ನೌಕೆ. ನಿಮಿಷಕ್ಕೆ 480 ಕಿ.ಮೀ. ಸ್ಪೀಡಲ್ಲಿ ಭೂಮಿನ ಸುತ್ತುತ್ತಂತೆ...’ ತೆಪರೇಸಿ ಬಿಡಿಸಿ ಹೇಳಿದ.
‘ಯಪ್ಪಾ... ಅಷ್ಟು ಸ್ಪೀಡಾ?’ ಗುಡ್ಡೆಗೆ ಆಶ್ಚರ್ಯ.
‘ಅಲ್ಲಿ ಗ್ರಾವಿಟೇಶನ್ ಇರಲ್ಲ, ಎಲ್ರೂ ತೇಲ್ತಾ ಇರ್ತಾರೆ. ಏನಾದ್ರು, ಯಾರನ್ನಾದ್ರು ಹಿಡ್ಕಂಡೇ ಇರ್ಬೇಕು...’
‘ಕರೆಕ್ಟ್, ಈ ಎಂಎಲ್ಸಿ, ನಿಗಮ, ಮಂಡಳಿ, ಅಕಾಡೆಮಿ ಬೇಕಂದ್ರೆ ನಾವೂ ಯಾರನ್ನಾದ್ರು ಹಿಡ್ಕಳ್ತೀವಲ್ಲ, ಆ ತರ...’ ದುಬ್ಬೀರ ನಕ್ಕ.
‘ಥೋ... ಇವ್ನು ಎಲ್ಲಿಂದೆಲ್ಲಿಗೋ ಹೋದ’ ಎಂದ ಮಂಜಮ್ಮ, ‘ಅಲ್ಲ, ನಾವು ನಿಂತಿರೋ ಬಸ್ಸು, ರೈಲು ಹತ್ತೋದೇ ಕಷ್ಟ. ಅಂಥದ್ರಲ್ಲಿ 480 ಕಿ.ಮೀ. ಸ್ಪೀಡಲ್ಲಿ ಸುತ್ತೋ ಆ ನೌಕೇನ ಆಕಾಶದಲ್ಲಿ ಹೆಂಗೆ ಹಿಡೀತಾರೆ? ಒಳಕ್ಕೆ ಹೆಂಗೆ ಹತ್ಕಂತಾರೆ?’ ಮಂಜಮ್ಮ ಕೇಳಿದಳು.
‘ಅದೇ ಮಂಜಮ್ಮ, ನೌಕೆ ಆಗ್ಲೀ, ಮುಖ್ಯಮಂತ್ರಿ ಕುರ್ಚಿ ಆಗ್ಲೀ ಹಿಡಿಯೋದು, ಹತ್ತೋದು ಬಾಳ ಕಷ್ಟ. ಬೇಕಾದ್ರೆ ಪಟ್ ಅಂತ ಇಳಿದುಬಿಡಬಹುದು’ ಎಂದ ದುಬ್ಬೀರ ನಗುತ್ತಾ. ಹರಟೆಕಟ್ಟೆಯಲ್ಲಿ ನಗುವಿನ ಅಲೆ ತೇಲಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.