ADVERTISEMENT

ಚುರುಮುರಿ | ಹೊಸ ರಾಮಾಯಣ!

ಬಿ.ಎನ್.ಮಲ್ಲೇಶ್
Published 17 ಜುಲೈ 2020, 21:22 IST
Last Updated 17 ಜುಲೈ 2020, 21:22 IST
.
.   

‘ರೀ... ಪೇಪರ್ ನೋಡಿದ್ರಾ? ಶ್ರೀರಾಮ ಹುಟ್ಟಿದ್ದು ನೇಪಾಳದಾಗಂತೆ. ಏನ್ರಿ ಇದು ಅನ್ಯಾಯ?’ ಮಡದಿ ಗಾಬರಿಯಿಂದ ನ್ಯೂಸ್ ಪೇಪರ್ ತಂದು ತೋರಿಸಿದಳು.

ನನಗೂ ಆಶ್ಚರ್ಯವಾಯಿತು ‘ಅಲೆ ಇವ್ನ, ಇದ್ಯಾವುದಪ ಹೊಸ ಕಿತಿಮಿ? ಈಟು ದಿನ ಇಲ್ಲದ್ದು ಈಗೆಲ್ಲಿಂದ ಬಂತು? ಆ ನೇಪಾಳದ ಮಂದಿಗೆ ತೆಲಿ ಸರಿ ಇರಂಗೆ ಕಾಣಲ್ಲ ಬಿಡು’ ಅಂದೆ.

‘ಮಂದಿ ಅಲ್ಲರೀ, ಅಲ್ಲಿನ ಪ್ರಧಾನಿನೇ ಹೇಳಿರೋದು. ಅಂದ್ರೆ ನಮ್ಮ ರಾಮಾಯಣನೇ ಸುಳ್ಳಾ? ರಾಮ ನೇಪಾಳದಾಗೆ ಹುಟ್ಟಿದ್ರೆ ವನವಾಸಕ್ಕೆ ಗಡಿ ದಾಟಿ ಭಾರತಕ್ಕೆ ಯಾಕೆ ಬರ್ತಿದ್ದ?’

ADVERTISEMENT

‘ಲೇಯ್, ನೀ ಯಾಕೆ ಅಷ್ಟು ತೆಲಿ ಕೆಡಿಸ್ಕಂತಿ? ಆ ನೇಪಾಳ ಇರಾದೇ ಮೂರು ಮುಕ್ಕಾಲು ಅಡಿ. ಆ ಚೀನಾದೋರ ಮಾತು ಕೇಳ್ಕಂಡು ಏನೇನೋ ವದರ್ತಾರೆ ಅಂದ್ರೆ ಅದೆಲ್ಲ ನಿಜ ಆಗಿಬಿಡುತ್ತಾ?’

‘ಅಲ್ಲ ಅದೇ ಅಂತೀನಿ, ಅವರೇನು ಹೊಸ ರಾಮಾಯಣ ಬರೆಯೋಕೆ ಹೊಂಟಾರೇನು? ನೇಪಾಳದ ರಾಮ, ಭಾರತದ ಆಂಜನೇಯ, ಲಂಕಾದ ರಾವಣ... ಮೂರು ದೇಶಗಳ ಕತಿ ಆತಲ್ರಿ ಇದು?’

‘ಸದ್ಯ ರಾಮ ಚೀನಾದಾಗೆ ಹುಟ್ಟಿದ್ದ ಅಂತ ಹೇಳಿಲ್ಲಲ್ಲ ಖುಷಿ ಪಡು. ಈಗ ನೀ ಎಲ್ಲಿ ಹುಟ್ಟಿದ್ದು ಅಂತ ನಿಮ್ಮಪ್ಪ ಅವ್ವ ಹೇಳ್ಬೇಕು. ಬೇರೇರು ಹೇಳಿದ್ರೆ ಅದಕ್ಕೆ ಕಿಮ್ಮತ್ ಐತಾ? ನಮ್ ನಂಬಿಕಿ ನಮಗೆ ಅಲ್ವ?’

‘ಅಲ್ಲ, ಇವರ‍್ನ ಹಂಗೇ ಬಿಟ್ರೆ ನಾಳೆ ಶ್ರೀಕೃಷ್ಣನೂ ನಮ್ಮಲ್ಲೇ ಹುಟ್ಟಿದ ಅನ್ನೋ ಪೈಕಿ...’

‘ಅನ್ಲಿಬಿಡು, ಕೃಷ್ಣ ಒಬ್ನೇ ಅಲ್ಲ, ಭಾರತದ ಎಲ್ಲ ದೇವರುಗಳೂ ಅಲ್ಲೇ ಹುಟ್ಟಿದ್ದು ಅನ್ಲಿ. ನಮ್ಮ ದೇವರುಗಳೆಲ್ಲ ಅಲ್ಲಿ ಹುಟ್ಟಿದ ಮೇಲೆ ಆ ದೇಶಾನೇ ನಮ್ಮದು ಅಂದ್ರಾತು...’

‘ಕರೆಕ್ಟ್‌‌ ಹೇಳಿದ್ರಿ ಕಣ್ರಿ, ಆದ್ರೂ ಆ ಚೀನಾದೋರ ಮಾತು ಕೇಳ್ಕಂಡು ಕುಣೀತಾರಲ್ಲ ಆ ನೇಪಾಳದೋರಿಗೆ ಏನಾದ್ರು ಮಾಡ್ಲೇಬೇಕು...’ ಮಡದಿಗೆ ಕೋಪ ಕಡಿಮೆಯಾಗಲಿಲ್ಲ.

‘ಅಷ್ಟೆ ತಾನೇ, ಆ ನೇಪಾಳದೋರಿಗೆ ಎರಡು ಜಾಪಾಳ ಮಾತ್ರೆ ಹಾಕಿದ್ರೆ ಎಲ್ಲ ಸರಿ ಹೋಗ್ತತಿ ಬಿಡು...’ ನಾನು ಸಮಾಧಾನಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.