2014ರಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯು ಆರ್‌ಎಸ್‌ಎಸ್‌ನ ಗುಪ್ತ ಕಾರ್ಯಸೂಚಿಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸುತ್ತಿದೆ. ಭಾರತದಲ್ಲಿ ಮುಸ್ಲಿಮರನ್ನು ಮತ್ತು ಇತರ ಹಿಂದೂಯೇತರ ಸಮುದಾಯಗಳನ್ನು ರಾಷ್ಟ್ರದ ಎರಡನೇ ದರ್ಜೆ ಪ್ರಜೆಗಳನ್ನಾಗಿ ಕಾಣುವ ಕಾರ್ಯಸೂಚಿಯ ಮುಂದುವರಿದ ಭಾಗವೇ ವಕ್ಫ್ ತಿದ್ದುಪಡಿ ಮಸೂದೆ. ಸಂಘ ಪರಿವಾರದ ಮೂಲಭೂತವಾದಕ್ಕೆ ಅನುಗುಣವಾಗಿ ಮುಸ್ಲಿಮರ ವಿರುದ್ಧ ರಾಜಕೀಯ ಹುನ್ನಾರ, ಧಾರ್ಮಿಕ ದ್ವೇಷ, ಅಸೂಯೆ ಎಲ್ಲವೂ ಈ ಮಸೂದೆಯಲ್ಲಿ ಅಡಗಿವೆ
ವೈವಿಧ್ಯದಲ್ಲಿ ಏಕತೆಯನ್ನು ಪ್ರತಿಪಾದಿಸಿಕೊಂಡಿರುವ ವಿಶ್ವದ ಅತಿ ದೊಡ್ಡ ರಾಷ್ಟ್ರ ಭಾರತ. ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಸ್ವಾತಂತ್ರ್ಯವನ್ನು ಗಳಿಸಿ, ಜನತಂತ್ರ ವ್ಯವಸ್ಥೆಯನ್ನು ಅಳವಡಿಸಿಕೊಂಡು ಡಾ.ಬಿ.ಆರ್.ಅಂಬೇಡ್ಕರ್ ಅವರ ನಾಯಕತ್ವದಲ್ಲಿ ದೊರೆತ ಸಂವಿಧಾನವನ್ನು ಅನುಸರಣೆ ಮಾಡಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿ ಮಾಡಿಕೊಂಡ ನಮ್ಮ ದೇಶ ಈಗ ಹೋಗುತ್ತಿರುವ ದಾರಿ ಅಪಾಯಕಾರಿಯಾಗಿದೆ.
ನಮ್ಮ ದೇಶದ ವಕ್ಫ್ ಕಾಯ್ದೆಗೆ ಶತಮಾನದ ಇತಿಹಾಸವಿದೆ. ಬ್ರಿಟಿಷರ ಕಾಲದಲ್ಲೇ ವಕ್ಫ್ ಆಸ್ತಿಗಳನ್ನು ಕಾಯ್ದೆಯ ವ್ಯಾಪ್ತಿಗೆ ತರಲಾಗಿತ್ತು. ಅಂತಿಮವಾಗಿ 1995ರ ಕಾಯ್ದೆಯ ಮುಖಾಂತರ ದೇಶದಲ್ಲಿರುವ ವಕ್ಫ್ ಆಸ್ತಿಗಳನ್ನು ಸಂರಕ್ಷಣೆ ಮಾಡಲು ಕೇಂದ್ರ ವಕ್ಫ್ ಕೌನ್ಸಿಲ್, ರಾಜ್ಯ ವಕ್ಫ್ ಮಂಡಳಿ ಮತ್ತು ವಕ್ಫ್ ಟ್ರಿಬ್ಯೂನಲ್‌ಗಳು ರಚನೆಯಾದವು. ಮುಸ್ಲಿಂ ಸಮುದಾಯದ ಬಡವರ ಮತ್ತು ದುರ್ಬಲ ವರ್ಗದವರ ಪ್ರಯೋಜನಕ್ಕಾಗಿ ದೇವರ ಹೆಸರಿನಲ್ಲಿ ದಾನ ಮಾಡುವ ಆಸ್ತಿಗಳೇ ವಕ್ಫ್ ಆಸ್ತಿಗಳಾಗಿವೆ. ಮುಸ್ಲಿಂ ಸಮುದಾಯದ ಪ್ರಯೋಜನಕ್ಕಾಗಿ ಮೌಖಿಕವಾಗಿ ಅಥವಾ ಲಿಖಿತವಾಗಿ ನೂರಾರು ವರ್ಷಗಳಿಂದ ವಕ್ಫ್ ಹೆಸರಿನಲ್ಲಿ ಮುಸ್ಲಿಮರು ಅಥವಾ ಅಲ್ಲದವರೂ ಆಸ್ತಿಗಳನ್ನು ದಾನವಾಗಿ ನೀಡುತ್ತಾ ಬಂದಿದ್ದಾರೆ. ಸಮಾಜದ ಇತರೆ ವಾಹಿನಿಗಳಲ್ಲಿ ಕಂಡುಬರುವ ಲೋಪಗಳ ರೀತಿಯಲ್ಲಿ ವಕ್ಫ್ ಆಸ್ತಿಯ ನಿರ್ವಹಣೆ ಮತ್ತು ಸಂರಕ್ಷಣೆಯಲ್ಲಿ ಕೆಲವು ಲೋಪಗಳು ಆಗಿರಬಹುದು. ಆದರೆ, ಒಲ್ಲದವರಿಗೆ ಮೊಸರಲ್ಲಿ ಕಲ್ಲು ಎಂಬಂತೆ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ವಕ್ಫ್ ಕಾಯ್ದೆ ತಿದ್ದುಪಡಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಇಡೀ ವಕ್ಫ್ ಆಸ್ತಿಯನ್ನು ಸರ್ಕಾರದ ಹಿಡಿತಕ್ಕೆ ತೆಗೆದುಕೊಳ್ಳುವ ವ್ಯವಸ್ಥಿತವಾದ ಪಿತೂರಿ ನಡೆಸಿದೆ.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ತಮ್ಮ ಸಂಘಟನೆ ಬಲಯುತವಾಗಿ ಇಲ್ಲದ ಕಾರಣ ಸಂಘ ಪರಿವಾರ ಮತ್ತು ಹಿಂದೂ ಮಹಾಸಭಾಗಳು ಬ್ರಿಟಿಷರೊಂದಿಗೆ ಶಾಮೀಲಾಗಿ ಮೂಲಭೂತವಾದಕ್ಕೆ ಪೂರಕವಾಗಿ ಹಿಂದೂ ರಾಷ್ಟ್ರದ ಘೋಷಣೆಯ ಆಲೋಚನೆಯನ್ನು ಪ್ರತಿಪಾದಿಸಿದ್ದವು. ಇದೇ ಕಾರಣಕ್ಕಾಗಿ ತ್ರಿವರ್ಣ ಧ್ವಜವನ್ನು ವಿರೋಧಿಸಿ ಹಿಂದೂ ರಾಷ್ಟ್ರಕ್ಕೆ ಕೇಸರಿ ಧ್ವಜ ಮತ್ತು ಹಿಂದೂ ಧಾರ್ಮಿಕ ಆಚರಣೆಗಳಿಗೆ ಪೂರಕವಾದ ಮನುಸ್ಮೃತಿ ಆಧಾರಿತ ಕಾನೂನು ಬೇಕು ಎಂದು ಆಗ್ರಹವಾಗಿ ಹೇಳಿದ್ದವು. ಆದರೆ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ವಲ್ಲಭ ಭಾಯಿ ಪಟೇಲ್, ಡಾ.ಅಂಬೇಡ್ಕರ್ ಹಾಗೂ ಇತರ ರಾಷ್ಟ್ರೀಯ ನಾಯಕರ ಜನಾಂದೋಲನ ಧ್ವನಿಗೆ ಅನುಗುಣವಾಗಿ ಸರ್ವಧರ್ಮಗಳನ್ನೂ ಒಳಗೊಂಡ, ಒಕ್ಕೂಟ ವ್ಯವಸ್ಥೆಯ ವೈವಿಧ್ಯದಲ್ಲಿ ಏಕತೆಯನ್ನು ಸಾರುವ ಜಾತ್ಯತೀತ ರಾಷ್ಟ್ರಕ್ಕೆ ಸಂವಿಧಾನದ ಮೂಲಕ ಅವಕಾಶ ಕಲ್ಪಿಸಲಾಯಿತು.
ಭಾರತದ ಅನೇಕ ಸಾರ್ವತ್ರಿಕ ಚುಣಾವಣೆಗಳಲ್ಲಿ ಜನರ ತಿರಸ್ಕಾರಕ್ಕೆ ಒಳಗಾಗಿದ್ದ ಅಂದಿನ ಜನಸಂಘ ಮತ್ತು ಇಂದಿನ ಬಿಜೆಪಿ, ಬೇರೆ ಬೇರೆ ಕಾರಣಗಳಿಗೆ ಹಿಂದೆ ತಮ್ಮ ರಹಸ್ಯ ಕಾರ್ಯಸೂಚಿಗಳನ್ನು ಕೈಬಿಟ್ಟಿದ್ದವು. 2014ರ ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ಅಧಿಕಾರ ಪಡೆದಿರುವ ಬಿಜೆಪಿ, ಈಗ ಆರ್‌ಎಸ್‌ಎಸ್‌ನ ಗುಪ್ತ ಕಾರ್ಯಸೂಚಿಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸುತ್ತಿದೆ. ಭಾರತದಲ್ಲಿ ಮುಸ್ಲಿಮರನ್ನು ಮತ್ತು ಇತರೆ ಹಿಂದೂಯೇತರ ಸಮುದಾಯಗಳನ್ನು ರಾಷ್ಟ್ರದ ಎರಡನೇ ದರ್ಜೆ ಪ್ರಜೆಗಳನ್ನಾಗಿ ಕಾಣುವ ಕಾರ್ಯಸೂಚಿಯ ಮುಂದುವರಿದ ಭಾಗವೇ ವಕ್ಫ್ ತಿದ್ದುಪಡಿ ಮಸೂದೆ.
ನ್ಯಾ.ಸಾಚಾರ್ ಸಮಿತಿ ವರದಿಗೆ ಅನುಗುಣವಾಗಿ ದೇಶದ ಮುಸ್ಲಿಮರ ಸಾಮಾಜಿಕ ಅಭಿವೃದ್ಧಿಗೆ ಚಿಂತಿಸದ ಕೇಂದ್ರದ ಬಿಜೆಪಿ ಸರ್ಕಾರ, ಪೌರತ್ವ ಕಾಯ್ದೆ, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ, ಹಿಜಾಬ್, ಹಲಾಲ್ ಹೆಸರಿನಲ್ಲಿ ಮುಸ್ಲಿಮರನ್ನು ಸಮಾಜ ವಾಹಿನಿಯಿಂದ ದೂರ ತಳ್ಳುವ ಪ್ರಯತ್ನ ಮಾಡುತ್ತಿದೆ. ಈಗ ಸಂಸತ್ತಿನಲ್ಲಿ ಅಂಗೀಕಾರವಾಗಿರುವ ವಕ್ಫ್ ತಿದ್ದುಪಡಿ ಮಸೂದೆಯು ಸಂವಿಧಾನದ 26ನೇ ವಿಧಿ ಮತ್ತು ಧಾರ್ಮಿಕ ದತ್ತಿ ಕಾಯ್ದೆಗೆ ವಿರುದ್ಧವಾಗಿದೆ. ತಿದ್ದುಪಡಿ ಮಸೂದೆಯು ಸುಪ್ರೀಂ ಕೋರ್ಟ್‌ನ ವಕ್ಫ್ ಕಾಯ್ದೆಯ ತೀರ್ಪುಗಳಿಗೆ ಅನುಗುಣವಾಗಿ ಇಲ್ಲ. 2013ರ ತಿದ್ದುಪಡಿಯ ಮೂಲಕ ಜಾರಿಗೊಳಿಸಲಾಗಿದ್ದ ಕೆಲವು ಕಲಂಗಳನ್ನು ಕೈಬಿಡುವುದರ ಮೂಲಕ ವಕ್ಫ್ ಮಸೂದೆಯನ್ನು ದುರ್ಬಲಗೊಳಿಸಲಾಗಿದೆ. ಮಸೂದೆಯಿಂದ ಬಾಧಿತರಾಗುವ ಮುಸ್ಲಿಮರನ್ನು, ಮುಸ್ಲಿಂ ಸಂಘಟನೆಗಳನ್ನು ಮತ್ತು ಮುಸ್ಲಿಂ ಸಮುದಾಯವನ್ನು ಪರಿಗಣಿಸಿ ಅವರ ಅಭಿಪ್ರಾಯಗಳಿಗೆ ಮಾನ್ಯತೆ ನೀಡಿಲ್ಲ. ಈ ಮಸೂದೆಯ ಮುಖಾಂತರ ಮುಸ್ಲಿಂ ಸಮುದಾಯದ ವಿರುದ್ಧ ನಡೆಸಿರುವ ಹುನ್ನಾರ ಬಹಿರಂಗವಾಗಿ ಕಾಣುತ್ತಿದೆ. ವಕ್ಫ್ ಮಸೂದೆ ಹೆಸರಿನಲ್ಲಿ ಧಾರ್ಮಿಕವಾಗಿ ಮುಸ್ಲಿಂ ಸಮುದಾಯವನ್ನು ಶೋಷಣೆ ಮಾಡುವ ಕೆಲಸವನ್ನು ಮಾಡಲಾಗಿದೆ. ತಿದ್ದುಪಡಿ ಮಸೂದೆಯ ಹೆಸರಿನಲ್ಲಿ ವಕ್ಫ್ ಆಸ್ತಿಯ ಮೇಲೆ ಹಿಡಿತವನ್ನು ಹೊಂದುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಿದೆ. ಆಸ್ತಿಯನ್ನು ದಾನ ಮಾಡಲು ಕನಿಷ್ಠ 5 ವರ್ಷ ಇಸ್ಲಾಂ ಧರ್ಮ ಆಚರಣೆ ಮಾಡಿರಬೇಕೆಂಬ ನಿಯಮ ಹಾಸ್ಯಾಸ್ಪದವಾಗಿದೆ. ನಿಯಮಗಳನ್ನು ರಚಿಸಲು ರಾಜ್ಯ ಸರ್ಕಾರಗಳಿಗೆ ಇದ್ದಂತಹ ಅಧಿಕಾರವನ್ನು ಕಸಿಯುವ ಪ್ರಯತ್ನವನ್ನು ಮಾಡಲಾಗಿದೆ. ಒಟ್ಟಾರೆಯಾಗಿ ತಿದ್ದುಪಡಿ ಮಸೂದೆಯು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ.
1987ರಲ್ಲಿ ಬೊಫೋರ್ಸ್ ಹಗರಣಕ್ಕೆ ಸಂಬಂಧಪಟ್ಟಂತೆ ಸಂಸತ್ ಮೊದಲ ಜಂಟಿ ಸಂಸದೀಯ ಸಮಿತಿಯನ್ನು ರಚಿಸಿತು. ವಕ್ಫ್ ಕಾಯ್ದೆಯ ತಿದ್ದುಪಡಿಗೆ ಸಂಬಂಧಪಟ್ಟಂತೆ ಬಿಜೆಪಿ ಸಂಸದರಾದ ಜಗದಾಂಬಿಕಾ ಪಾಲ್ ಅಧ್ಯಕ್ಷತೆಯಲ್ಲಿ ಉದ್ದೇಶಿತ ತಿದ್ದುಪಡಿ ಮಸೂದೆಗೆ ಶಕ್ತಿ ತುಂಬುವ ಕಾರಣಕ್ಕಾಗಿ ಜಂಟಿ ಸದನ ಸಮಿತಿಯನ್ನು ರಚಿಸಲಾಯಿತು. ಸಮಿತಿಯು ಸುಮಾರು 111 ಗಂಟೆ ಚರ್ಚೆ ನಡೆಸಿ, 92 ಲಕ್ಷ ಇ–ಮೇಲ್ ಅಭಿಪ್ರಾಯ ಸಂಗ್ರಹಿಸಿದೆ. ಆದರೆ, ಸಮಿತಿಯಲ್ಲಿನ ವಿರೋಧ ಪಕ್ಷದ ಸದಸ್ಯರ ಅಭಿಪ್ರಾಯಗಳಿಗೆ ಮನ್ನಣೆ ನೀಡದೆ ಸಂಘ ಪರಿವಾರದ ಆಣತಿಯಂತೆ ಸಂಸತ್ತಿಗೆ ವರದಿ ಸಲ್ಲಿಸಿದೆ. ಸಮಿತಿಯಲ್ಲಿದ್ದ ವಿರೋಧ ಪಕ್ಷದ ಸದಸ್ಯರು ತಿದ್ದುಪಡಿ ಮಸೂದೆಯ 28 ಕಲಂಗಳನ್ನು ಕೈಬಿಡಲು ಲಿಖಿತವಾಗಿ ತಿಳಿಸಿದ್ದರೂ ಅದನ್ನು ಪರಿಗಣಿಸಲಾಗಿಲ್ಲ. ಮುಸ್ಲಿಮರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಮತ್ತು ಅವರ ಧಾರ್ಮಿಕ ಆಚರಣೆಗೆ ಧಕ್ಕೆ ತರುವ ಅಂಶಗಳನ್ನು ಮಸೂದೆಯಲ್ಲಿ ಸೇರಿಸಲಾಗಿದೆ. ವಕ್ಫ್ ಆಸ್ತಿ ಸಂರಕ್ಷಣಾ ಸಮಿತಿಯಲ್ಲಿ ಇಬ್ಬರು ಮುಸ್ಲಿಮೇತರರನ್ನು ನೇಮಕ ಮಾಡಲು ಅವಕಾಶ ನೀಡಿ ಜಿಲ್ಲಾಧಿಕಾರಿಗಳ ಮೂಲಕ ವಕ್ಫ್ ಆಸ್ತಿಯ ನಿರ್ವಹಣೆಯನ್ನು ಸರ್ಕಾರದ ತೆಕ್ಕೆಗೆ ತೆಗೆದುಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ, ಮಠ ಮಂದಿರಗಳಲ್ಲಿ, ಜೈನ ಮಂದಿರಗಳಲ್ಲಿ ಅಥವಾ ಗುರುದ್ವಾರದ ಸಮಿತಿಗಳಲ್ಲಿ ಇತರೆ ಸಮುದಾಯದವರು ನೇಮಕವಾಗಲು ಕಾನೂನಿನಲ್ಲಿ ಅವಕಾಶ ಇಲ್ಲದಿರುವಾಗ, ವಕ್ಫ್ ಆಸ್ತಿಯ ಸಮಿತಿಗಳಲ್ಲಿ ಮುಸ್ಲಿಮೇತರರನ್ನು ನೇಮಿಸುವುದರ ಹಿಂದೆ ರಾಜಕೀಯ ಹುನ್ನಾರ, ಧಾರ್ಮಿಕ ದ್ವೇಷ, ಅಸೂಯೆ ಎಲ್ಲವೂ ಮಿಳಿತಗೊಂಡಿವೆ. ಸಂಘ ಪರಿವಾರದ ಮೂಲಭೂತವಾದಕ್ಕೆ ಅನುಗುಣವಾಗಿ ಮುಸ್ಲಿಮರ ಮೇಲೆ ವಿಷ ಕಾರುವ, ಅವರನ್ನು ಈ ದೇಶದ ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವ ವ್ಯವಸ್ಥಿತ ಪ್ರಯತ್ನವನ್ನು ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ಕಾಣಬಹುದು.
ಈ ಮಸೂದೆಯು ಸಂವಿಧಾನದ ಆಶಯಗಳಿಗೆ ಮಾರಕವಾಗಿದ್ದು, ಡಾ. ಅಂಬೇಡ್ಕರ್ ಅವರ ಪರಿಕಲ್ಪನೆಯ ಸರ್ವಧರ್ಮಗಳ ಸಂವಿಧಾನ ಭಾರತವನ್ನು ಒಡೆಯುವ ಪ್ರಯತ್ನ ಎನ್ನುವುದರಲ್ಲಿ ಅನುಮಾನವಿಲ್ಲ.
ಲೇಖಕ: ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.