ADVERTISEMENT

‍ಪ್ರಜಾವಾಣಿ ಚರ್ಚೆ| ಪರಿಶಿಷ್ಟರ ಅಭಿವೃದ್ಧಿಗೆ ನಮ್ಮಷ್ಟು ಅನುದಾನ ಯಾರೂ ಕೊಟ್ಟಿಲ್ಲ

ಕಾಂಗ್ರೆಸ್ ಸರ್ಕಾರವು ಎಸ್‌ಸಿಎಸ್‌ಪಿ– ಟಿಎಸ್‌ಪಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿ ದಲಿತರಿಗೆ ಅನ್ಯಾಯ ಮಾಡಿದೆಯೆ?

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 23:30 IST
Last Updated 20 ಫೆಬ್ರುವರಿ 2026, 23:30 IST
ಡಾ.ಎಚ್.ಸಿ.ಮಹದೇವಪ್ಪ
ಡಾ.ಎಚ್.ಸಿ.ಮಹದೇವಪ್ಪ   

ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಸರ್ಕಾರವು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಪರಿಶಿಷ್ಟ ಸಮುದಾಯಗಳ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಪರಿಶಿಷ್ಟರ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಅವರ ಬದುಕು ಹಸನುಗೊಳಿಸುವ ದಿಸೆಯಲ್ಲಿ ಮಹತ್ವದ ಕಾಯ್ದೆಗಳನ್ನೂ ರೂಪಿಸಿದೆ. ಈ ಪೈಕಿ ಬಡ್ತಿ ಮೀಸಲಾತಿ ಕಾಯ್ದೆ, ಗುತ್ತಿಗೆ ಮೀಸಲಾತಿ ಕಾಯ್ದೆ, ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ)/ಪರಿಶಿಷ್ಟ ಪಂಗಡ (ಟಿಎಸ್‌ಪಿ) ಕಾಯ್ದೆಗಳು ಪ್ರಮುಖವಾದವು. ನಮ್ಮ ಈಗಿನ ಸರ್ಕಾರವು ಎಸ್‌ಸಿಎಸ್‌ಪಿ/ಟಿಎಸ್‌‍‍ಪಿ ‌ಕಾಯ್ದೆಯಲ್ಲಿದ್ದ 7ಡಿ ಸೆಕ್ಷನ್‌ ರದ್ದುಪಡಿಸಿದೆ. ಅಲ್ಲದೇ, ಪಿಟಿಸಿಎಲ್‌ ಕಾಯ್ದೆಯಲ್ಲಿದ್ದ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವನ್ನೂ ಮಾಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜಿಲ್ಲೆಗೆ ಒಂದರಂತೆ ಡಿಸಿಆರ್‌ಇ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿ, ಪರಿಶಿಷ್ಟರ ಮೇಲಿನ ದೌರ್ಜನ್ಯದ ಪ್ರಕರಣಗಳು ಕ್ಷಿಪ್ರ ಅವಧಿಯಲ್ಲಿ ಇತ್ಯರ್ಥಗೊಳಿಸಬೇಕೆಂದು ಆದೇಶ ಹೊರಡಿಸಿದೆ. 

ಪರಿಶಿಷ್ಟರ ಏಳಿಗೆಗಾಗಿ ಹಿಂದಿನ ಸರ್ಕಾರಗಳು ಮಾಡಿದ್ದಕ್ಕಿಂತಲೂ ಎರಡು–ಮೂರು ಪಟ್ಟು ಹೆಚ್ಚಿನ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂಬುದು ಈ ಅವಧಿಯಲ್ಲಿ ಆಡಳಿತದ ಭಾಗವಾಗಿ ಕೆಲಸ ಮಾಡುತ್ತಿರುವ ನಾವೆಲ್ಲರೂ ಹೆಮ್ಮೆಯಿಂದ ಹೇಳಿಕೊಳ್ಳುವಂತಹ ಸಂಗತಿ. ಅದರಲ್ಲೂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಏಳಿಗೆಗಾಗಿ ಅವರ ಜನಸಂಖ್ಯೆಯ ಆಧಾರದ ಮೇಲೆ ಅವರಿಗೆ ಅನುದಾನವನ್ನು ನಿಗದಿಪಡಿಸುತ್ತಾ ಬಂದಿರುವ ಸರ್ಕಾರವು 2023ರಿಂದ ಇಲ್ಲಿಯವರೆಗೆ ₹83,824 ಕೋಟಿ ಹಣವನ್ನು ಹಂಚಿಕೆ ಮಾಡಿದೆ. ಇದರಲ್ಲಿ ₹69,527 ಕೋಟಿ ಖರ್ಚು ಮಾಡಿದೆ.

ಎಸ್‌ಸಿಎಸ್‌ಪಿ/ಟಿಎಸ್‌ಪಿ ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಸುಮಾರು ₹42 ಸಾವಿರ ಕೋಟಿ ಅನುದಾನವನ್ನು ಸರ್ಕಾರವು ನಿಗದಿಪಡಿಸಿದೆ.

ADVERTISEMENT

ಇದು ಕೆಲಸ ಮಾಡುವುದು ಹೇಗೆ?:ಸಮಾಜ ಕಲ್ಯಾಣ ಇಲಾಖೆಗೆ ಬಜೆಟ್‌ನಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯಡಿ ₹42 ಸಾವಿರ ಕೋಟಿ ಹಂಚಿಕೆ ಮಾಡಲಾಗಿದೆ. ಎಂದ ಮಾತ್ರಕ್ಕೆ, ಆ ಸಂಪೂರ್ಣ ಅನುದಾನದ ಮೇಲೆ ಸಮಾಜ ಕಲ್ಯಾಣ ಇಲಾಖೆಗೆ ನಿಯಂತ್ರಣ ಇರುವುದಿಲ್ಲ. ಸರ್ಕಾರವು ಬಜೆಟ್ ಮೂಲಕ ಮೀಸಲಿಟ್ಟ ಅನುದಾನವನ್ನು ಸರ್ಕಾರದ ಎಲ್ಲಾ 30 ಇಲಾಖೆಗಳಿಗೆ ಹಂಚಲಾಗುತ್ತದೆ. ಹೀಗೆ ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಲಾದ ಅನುದಾನದ ವೆಚ್ಚ ಮತ್ತು ಅಭಿವೃದ್ಧಿಯ ಮೇಲ್ವಿಚಾರಣೆಯನ್ನು ಮಾತ್ರ ಸಮಾಜ ಕಲ್ಯಾಣ ಇಲಾಖೆ ನೋಡಲ್ ಏಜೆನ್ಸಿಯಾಗಿ ನಿರ್ವಹಿಸುತ್ತದೆ. ಪರಿಶಿಷ್ಟ ಜಾತಿಯವರ ಅಭಿವೃದ್ಧಿಗಾಗಿ ರೂಪಿಸಿರುವ ಕಾರ್ಯಕ್ರಮಗಳು ಪ್ರತಿಯೊಂದು ಇಲಾಖೆಯಲ್ಲೂ ಎಷ್ಟರ ಮಟ್ಟಿಗೆ ಜಾರಿಯಾಗಿವೆ, ಅದರಿಂದ ಪರಿಶಿಷ್ಟರ ಬದುಕು ಎಷ್ಟರ ಮಟ್ಟಿಗೆ ಸುಧಾರಣೆ ಕಂಡಿದೆ ಮುಂತಾದ ಅಂಶಗಳನ್ನು ಇಲಾಖೆಯು ಗಮನಿಸುತ್ತದೆ.

ಹೀಗೆ ಗಮನಿಸಿದಾಗ, ಪರಿಶಿಷ್ಟರ ಬದುಕಿಗೆ ಹಿಂದಿನ ಸರ್ಕಾರ ಮಾಡಿರುವ ಹಂಚಿಕೆ ಮತ್ತು ನಮ್ಮ ಸರ್ಕಾರವು ಮಾಡಿರುವಂತಹ ಹಣದ ಹಂಚಿಕೆಯ ಚಿತ್ರಣವು ಎದುರಿಗೆ ಬರುತ್ತದೆ. 2019ರಿಂದ 2023ರ ತನಕ ಅಂದರೆ, ಐದು ವರ್ಷಗಳಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯಡಿ ಹಂಚಿಕೆಯಾಗಿರುವ ಅನುದಾನದ ಪ್ರಮಾಣವು ಸರಾಸರಿ ₹27,612.03 ಕೋಟಿ. ಆದರೆ, 2023ರಿಂದ 2026ರ ನಡುವೆ ನಮ್ಮ ಸರ್ಕಾರ ಹಂಚಿಕೆ ಮಾಡಿದ ಅನುದಾನ ₹83,824 ಸಾವಿರ ಕೋಟಿ. ಇದು ಬಿಜೆಪಿ ಮತ್ತು ಇನ್ಯಾವುದೇ ಪಕ್ಷದ ಸರ್ಕಾರಕ್ಕಿಂತಲೂ ಹೆಚ್ಚಿಗೆ ಪ್ರಮಾಣದಲ್ಲಿ ನೀಡಿರುವಂತಹ ಹಣವಾಗಿದ್ದು, ಪರಿಶಿಷ್ಟರ ಅಭಿವೃದ್ಧಿಯ ಬಗ್ಗೆ ಸರ್ಕಾರದ ಬದ್ಧತೆಯ ಪ್ರತೀಕವಾಗಿದೆ.

2023ರ ಚುನಾವಣೆಯ ಸಂದರ್ಭದಲ್ಲಿ ಜನರಿಗೆ ಭರವಸೆ ನೀಡಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ನಮ್ಮ ಸರ್ಕಾರವು ಪರಿಣಾಮಕಾರಿಯಾಗಿ ಜಾರಿಗೊಳಿಸಿದೆ. ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ/ ಟಿಎಸ್‌ಪಿ ಯೋಜನೆಯ ಹಣವನ್ನು ವಿನಿಯೋಗಿಸಲಾಗಿದೆ ಎಂಬ ಮಾತನ್ನು ಆರೋಪ ಮಾಡುವ ಧಾಟಿಯಲ್ಲಿ ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಈ ವಿಚಾರವನ್ನು ಚರ್ಚೆಯ ಕೇಂದ್ರಬಿಂದುವನ್ನಾಗಿ ಮಾಡಲಾಗುತ್ತಿದೆ. ಆದರೆ. ಈ ಆರೋಪದಲ್ಲಿ ಹುರುಳಿಲ್ಲ. 

ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಯಲ್ಲಿ ಪರಿಶಿಷ್ಟ ಸಮುದಾಯಗಳಿಗೆ ಸೇರಿದ ಸುಮಾರು 56,88,822ರಷ್ಟು ಜನರಿದ್ದು, ಶಕ್ತಿ ಮತ್ತು ಗೃಹಜ್ಯೋತಿ ಯೋಜನೆಯಡಿ ಇರುವ ಪರಿಶಿಷ್ಟ ಸಮುದಾಯಗಳ ಫಲಾನುಭವಿಗಳ ಸಂಖ್ಯೆಯೂ ಹಲವು ಲಕ್ಷಗಳಷ್ಟಿದೆ. ಈ ಫಲಾನುಭವಿಗಳು ಬಹುತೇಕ ಭೂ ರಹಿತ ಸ್ಥಿತಿಯಲ್ಲಿದ್ದಾರೆ. ದೈನಂದಿನ ಶ್ರಮದ ಆಧಾರದಲ್ಲಿ ಅದೆಷ್ಟೋ ಪರಿಶಿಷ್ಟ ಕುಟುಂಬಗಳು ಬದುಕುತ್ತಿವೆ. ಹೀಗಾಗಿ ಯಾರೇ ಆಗಲಿ ಆರೋಪ ಮಾಡುವ ಮುನ್ನ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿರುವ ಜನರ ಸ್ಥಿತಿಯನ್ನು ಕಣ್ಣೆದುರಿಗೆ ತಂದುಕೊಂಡು ಸರ್ಕಾರದ ಈ ಪ್ರಯತ್ನವನ್ನು ಸಂವೇದನೆಯಿಂದ ನೋಡಲೇಬೇಕಾದ ಅಗತ್ಯವಿದೆ.

ರಾಜ್ಯದಲ್ಲಿ ಜನಸಂಖ್ಯಾವಾರು ಅತ್ಯಂತ ಹೆಚ್ಚಾಗಿರುವ ಪರಿಶಿಷ್ಟ ಸಮುದಾಯಗಳ ನಿರೀಕ್ಷೆಯು ಸಹಜವಾಗಿ ಹೆಚ್ಚಾಗಿದೆ. ಈ ಒಂದು ಕಾರಣಕ್ಕಾಗಿಯೇ ಪರಿಶಿಷ್ಟ ಸಮುದಾಯಗಳಿಗೆ ಕಲ್ಪಿಸಿರುವ ಸೌಲಭ್ಯಗಳನ್ನು ಹೆಚ್ಚಾಗಿ ನೀಡಲು ಮತ್ತು ಪರಿಶಿಷ್ಟರ ಬಹುಕಾಲದ ಬೇಡಿಕೆಯಾದಂತಹ ಅಂಬೇಡ್ಕರ್‌ ಮ್ಯೂಸಿಯಂ ಮತ್ತು ದೇಶದ ಅತಿದೊಡ್ಡ ಅಂಬೇಡ್ಕರ್‌ ಪ್ರತಿಮೆಯನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದು ಅವರೂ ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ.

ಇದರ ಜೊತೆಗೆ, ನಮ್ಮ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳು ದೇಶದ ಎಲ್ಲಾ ವಲಯಗಳಲ್ಲಿ ಅಂದರೆ ವೈದ್ಯಕೀಯ, ಶಿಕ್ಷಣ, ವಿಜ್ಞಾನ, ಕ್ರೀಡೆ, ಕಲೆ ಮತ್ತು ಸಾಹಿತ್ಯ, ಎಂಜಿನಿಯರಿಂಗ್, ಪೈಲಟ್, ಐಎಎಸ್/ಐಪಿಎಸ್ ಆದಿಯಾಗಿ ದೇಶದ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದ ವಿಭಾಗದಲ್ಲಿ ಪರಿಣಾಮಕಾರಿಯಾಗಿ ತರಬೇತಿಯನ್ನು ಪಡೆಯಬೇಕೆಂಬ ಉದ್ದೇಶದಿಂದ ಅವರಿಗೆ ಪ್ರಬುದ್ಧ ಯೋಜನೆಯಡಿಯಲ್ಲಿ ಇನ್ನು ಮುಂದೆ ಯೋಜಿತ ರೀತಿಯಲ್ಲಿ ಅವಕಾಶಗಳನ್ನು ಕಲ್ಪಿಸುವ ಬಗ್ಗೆ ಇಲಾಖೆಯು ಗಂಭೀರವಾಗಿ ಯೋಚಿಸಿದೆ. ಎಲ್ಲ ವಲಯಗಳಲ್ಲಿಯೂ ಪರಿಶಿಷ್ಟ ಸಮುದಾಯವರಿಗೆ ವಿಪುಲ ಅವಕಾಶಗಳು ಸೃಷ್ಟಿಯಾಗಬೇಕು ಎಂಬುದೇ ಇಲ್ಲಿನ ಸದಾಶಯವಾಗಿದೆ.

ಶೈಕ್ಷಣಿಕ ವಲಯದಲ್ಲಿ ಪರಿಶಿಷ್ಟ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಈಗಾಗಲೇ ಕ್ರೈಸ್ ವಸತಿ ಶಿಕ್ಷಣ ಸಂಸ್ಥೆಯ ಸಮೂಹದಡಿ ಬಹುವಂತಹ ಎಲ್ಲಾ 821 ವಸತಿ ಶಾಲೆಗಳಲ್ಲಿ ಒಂದಿಲ್ಲೊಂದು ರೀತಿಯ ಶೈಕ್ಷಣಿಕ ಚಟುವಟಿಕೆಯನ್ನು ನೀಡುತ್ತಿರುವ ನಮ್ಮ ಇಲಾಖೆಯು, ಮೂಲ ಸೌಕರ್ಯದ ಅಭಿವೃದ್ಧಿ ವಿಷಯದಲ್ಲೂ ಹಿಂದೆ ಬಿದ್ದಿಲ್ಲ.

ಮಾನ್ಯ ಮುಖ್ಯಮಂತ್ರಿಯವರ ದೂರದೃಷ್ಟಿಗೆ ಅನುಸಾರವಾಗಿ ಹೋಬಳಿಗೊಂದು ವಸತಿ ಶಾಲೆ ಪ್ರಸ್ತಾವದಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಹಲವು ಹೊಸ ವಸತಿ ಶಾಲೆಗಳ ನಿರ್ಮಾಣ ಕಾರ್ಯವೂ ಜರುಗುತ್ತಿದ್ದು, ಇದೊಂದು ಬಹುಮುಖ್ಯವಾದಂತಹ ಕೆಲಸವಾಗಿದೆ. ಇದರ ಜೊತೆ ಜೊತೆಗೆ ಕೇಂದ್ರದಿಂದಲೂ ಸಹ ಪರಿಶಿಷ್ಟ ಸಮುದಾಯದ ಏಳಿಗೆಗಾಗಿ ಅರ್ಹವಾಗಿ ದೊರೆಯಬೇಕಿರುವ ರಾಜ್ಯದ ಪಾಲನ್ನೂ ನ್ಯಾಯಬದ್ಧವಾಗಿ ನೀಡಿದರೆ ಅದರಿಂದ ಎಲ್ಲರಿಗೂ ಅನುಕೂಲ ಆಗುತ್ತದೆ ಎಂಬ ಸಂಗತಿಯನ್ನೂ ಇದೇ ವೇಳೆ ಪ್ರಸ್ತಾಪಿಸುತ್ತಾ, ಪರಿಶಿಷ್ಟ ಸಮುದಾಯಗಳ ಏಳಿಗೆಯ ವಿಷಯದಲ್ಲಿ ರಾಜ್ಯ ಸರ್ಕಾರ ಎಂದಿಗೂ ರಾಜಿಯಿಲ್ಲದ ನಿಲುವು ಹೊಂದಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ. 

ಎಸ್‌ಸಿಎಸ್‌ಪಿ–ಟಿಎಸ್‌ಪಿಗೆ ಅನುದಾನ

ಲೇಖಕ: ಸಮಾಜ ಕಲ್ಯಾಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.