ADVERTISEMENT

ಪ್ರಜಾವಾಣಿ ಚರ್ಚೆ| ರಾಜ್ಯ ಸರ್ಕಾರದಿಂದ ಪರಿಶಿಷ್ಟರ ‘ಹಣ ತಿರುವು ಯೋಜನೆ’

ಕಾಂಗ್ರೆಸ್ ಸರ್ಕಾರವು ಎಸ್‌ಸಿಎಸ್‌ಪಿ– ಟಿಎಸ್‌ಪಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿ ದಲಿತರಿಗೆ ಅನ್ಯಾಯ ಮಾಡಿದೆಯೆ?

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 23:30 IST
Last Updated 20 ಫೆಬ್ರುವರಿ 2026, 23:30 IST
ಗೋವಿಂದ ಎಂ.ಕಾರಜೋಳ
ಗೋವಿಂದ ಎಂ.ಕಾರಜೋಳ   

ಭಾರತಕ್ಕೆ ಸ್ವಾತಂತ್ರ್ಯ ಬಂದ ಏಳೂವರೆ ದಶಕಗಳಲ್ಲಿ ಕಾಂಗ್ರೆಸ್‌ ನಾಯಕತ್ವವು ಎರಡು ವಿಷಯಗಳನ್ನು ಮತಬ್ಯಾಂಕ್‌ಗಳನ್ನಾಗಿ ಮಾಡಿಕೊಂಡಿದೆ. ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರ ಉದ್ಧಾರಕರು, ರಕ್ಷಕರು ತಾವು ಎಂದು ಅದರ ನಾಯಕರು ಡಂಗೂರ ಬಾರಿಸಿಕೊಂಡು ಬರುತ್ತಿದ್ದಾರೆ. ಆ ಹಣೆಪಟ್ಟಿಯ ಆಧಾರದಲ್ಲಿಯೇ ಅವರ ರಾಜಕೀಯ ನಡೆಯುತ್ತಿದೆ. ಆದರೆ, ಇಷ್ಟು ವರ್ಷಗಳಲ್ಲಿ ಆ ಸಮುದಾಯಗಳ ಹೆಸರಲ್ಲಿ ರಾಜಕೀಯ ಮಾಡಿದವರು ಉದ್ಧಾರವಾದರೇ ಹೊರತು, ಸಮುದಾಯದವರು ಮಾತ್ರ ಅಲ್ಲಿಯೇ ಉಳಿದುಕೊಂಡರು. ಈಗ ಕರ್ನಾಟಕದಲ್ಲಿ ಗ್ಯಾರಂಟಿ ಹಾಗೂ ಎಸ್‌ಸಿಎಸ್‌ಪಿ– ಟಿಎಸ್‌ಪಿ ಅನುದಾನಗಳ ವಿಷಯದಲ್ಲಿಯೂ ದಶಕದ ಹಿಂದಿನ ಟೋಪಿಗೆ ಹೊಸ ಬಣ್ಣ ಹಚ್ಚಿ ಚಲಾವಣೆಗೆ ತರಲಾಗುತ್ತಿದೆ.

ಪರಿಶಿಷ್ಟ ಸಮುದಾಯದ ಅಭಿವೃದ್ಧಿಗೆ ಪ್ರತಿ ಇಲಾಖೆಯಲ್ಲೂ ಹಣ ಮೀಸಲಿಡುವ ಬಗ್ಗೆ ಎಸ್‌ಸಿಎಸ್‌ಪಿ– ಟಿಎಸ್‌ಪಿ ಕಾಯ್ದೆಯನ್ನು ಜಾರಿಗೆ ತಂದಾಗ, ಕಾಂಗ್ರೆಸ್‌ ಸರ್ಕಾರವು ಅದನ್ನು ಅನುಸರಿಸುವ ಭರವಸೆ ಕೊಟ್ಟಿತ್ತು. ಅವರು ಚುನಾವಣೆಯ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯನ್ನು ಘೋಷಿಸಿದಾಗ, ಎರಡನ್ನೂ ವಿಲೀನಗೊಳಿಸುವ ಪ್ರಸ್ತಾವ ಮಾಡಿರಲಿಲ್ಲ. ಆದರೆ ಅಧಿಕಾರದ ಗದ್ದುಗೆ ಏರಿದಾಗ ಎಂದಿನಂತೆ ಪರಿಶಿಷ್ಟರ ಉದ್ಧಾರ ಹಾಗೂ ರಕ್ಷಣೆಯ ವಿಚಾರ ಮರೆತುಹೋಯಿತು. ಏಕೆಂದರೆ, ಚುನಾವಣೆಗಳು ಬಂದಾಗ ಟೋಪಿ ಹಾಕಲು ಮಾತ್ರವೇ ಕಾಂಗ್ರೆಸ್‌ಗೆ ಪರಿಶಿಷ್ಟರು ನೆನಪಾಗುತ್ತಾರೆ. ಅಧಿಕಾರಕ್ಕೇರಿದ ನಂತರ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಆಮೂಲಾಗ್ರ ಅಭಿವೃದ್ಧಿಗೆ ಮೀಸಲಿಟ್ಟ ಹಣವೆಲ್ಲ ಗ್ಯಾರಂಟಿ ಕಡೆಗೆ ಹರಿಯಲು ಶುರುವಾಯಿತು. ಪರಿಣಾಮವಾಗಿ ಪರಿಶಿಷ್ಟರ ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ ಹಣದಲ್ಲಿ ಕೊರತೆಯಾಗಲು ಆರಂಭವಾಯಿತು. ಇದರ ಫಲಿತಾಂಶವೇನೆಂದರೆ, ಮೂರು ವರ್ಷಗಳಲ್ಲಿ ₹39 ಸಾವಿರ ಕೋಟಿಗೂ ಅಧಿಕ ಎಸ್‌ಸಿಎಸ್‌ಪಿ– ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗಿದೆ.

ಈ ವಿಚಾರವನ್ನು ಪ್ರಸ್ತಾಪಿಸಿದಾಗ ಸಿದ್ದರಾಮಯ್ಯ ಸರ್ಕಾರದಿಂದ ಕಪೋಲಕಲ್ಪಿತವಾದ, ಆಧಾರರಹಿತವಾದ ಸಮಜಾಯಿಷಿ ಬರುತ್ತದೆ. ‘ಗ್ಯಾರಂಟಿ ಯೋಜನೆಯ ಲಾಭ ಪಡೆಯುವ ಪರಿಶಿಷ್ಟರಿಗೆ ಈ ಹಣ ವರ್ಗಾವಣೆ ಮಾಡಲಾಗಿದೆ’ ಎನ್ನುತ್ತಾರೆ. ಈ ಸಮರ್ಥನೆಯು ವಿರೋಧಾಭಾಸದಿಂದ ಕೂಡಿದೆ. 

ADVERTISEMENT

ಗ್ಯಾರಂಟಿ ಯೋಜನೆಯನ್ನು ಜಾತಿ ಅಥವಾ ಸಮುದಾಯವಾರು ನೀಡುತ್ತಿಲ್ಲ. ಎಲ್ಲ ಗ್ಯಾರಂಟಿ ಯೋಜನೆಗಳನ್ನು ಎಲ್ಲರಿಗೂ ನೀಡಲಾಗುತ್ತಿದೆ. ಆದರೆ, ಇಲ್ಲಿ ಹಣ ಖರ್ಚು ಮಾಡಿದ್ದಕ್ಕೆ ಪರಿಶಿಷ್ಟರು ಎನ್ನುವ ಲೆಕ್ಕ ತೋರಿಸಲಾಗಿದೆಯಷ್ಟೇ. ಇದರಿಂದಾಗಿ ಪರಿಶಿಷ್ಟರ ವಸತಿ, ರಸ್ತೆ, ಶಿಕ್ಷಣ, ಆರೋಗ್ಯ ಹಾಗೂ ಇತರ ಮೂಲಭೂತ ಆದ್ಯತೆಗಳಿಗೆ ಮೀಸಲಿಡಬೇಕಾದ ಅನುದಾನ ಮಾಯವಾಗುತ್ತಿದೆ. ಪರಿಶಿಷ್ಟ ವರ್ಗದವರು ಕಳೆದ ಬಾರಿ ಕಾಂಗ್ರೆಸ್‌ ಜೊತೆಗೆ ಕೈಜೋಡಿಸುವಾಗ, ಎಸ್‌ಸಿಎಸ್‌ಪಿ–ಟಿಎಸ್‌ಪಿ ಅನುದಾನದ ಜೊತೆಗೆ ಗ್ಯಾರಂಟಿ ಯೋಜನೆಯ ಲಾಭವೂ ತಮಗೆ ದೊರೆಯುತ್ತದೆ ಎಂದುಕೊಂಡಿದ್ದರು. ಆದರೆ, ಕಾಂಗ್ರೆಸ್ ಸರ್ಕಾರವು ರಾಜ್ಯದ ಎಲ್ಲ ಜನರಿಗೆ ಮಾಡಿದ ಮೋಸವನ್ನೇ ಇನ್ನೂ ದೊಡ್ಡ ಪ್ರಮಾಣದಲ್ಲಿ ಎಸ್‌ಸಿ –ಎಸ್‌ಟಿಯವರಿಗೆ ಮಾಡಿದೆ. ಕಾನೂನು ಪ್ರಕಾರ ಪರಿಶಿಷ್ಟ ವರ್ಗಕ್ಕೆ ಮೀಸಲಿಟ್ಟಿದ್ದ ಹಣವನ್ನು ಲಪಟಾಯಿಸಿ, ಗ್ಯಾರಂಟಿ ಮೂಲಕ ಅವರಿಗೆ ಅದನ್ನು ನೀಡಿ ದೊಡ್ಡ ಸಾಧನೆ ಮಾಡಿದಂತೆ ಬೀಗುತ್ತಿದೆ.

ಕಾಂಗ್ರೆಸ್‌ ಸರ್ಕಾರ ಮಾಡಿದ ಈ ಮೋಸಕ್ಕೆ ಸ್ಪಷ್ಟ ಉದಾಹರಣೆ ಎಂದರೆ, ಕೆಲವು ಇಲಾಖೆಗಳಲ್ಲಿನ ಅನುದಾನದಲ್ಲಿನ ಕೊರತೆ ಮತ್ತು ಕೆಲವು ಇಲಾಖೆಗಳಲ್ಲಿನ ಅನುದಾನದ ಏರಿಕೆ. ಇಂಧನ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಹಾರ ಹಾಗೂ ಸಾರಿಗೆ ಇಲಾಖೆಯಲ್ಲಿನ ಅನುದಾನವು ಹೆಚ್ಚಳವಾಗಿದೆ. ಗ್ಯಾರಂಟಿಗಾಗಿ ಬೇರೆ ಇಲಾಖೆಗಳಲ್ಲಿನ ಎಸ್‌ಸಿಎಸ್‌ಪಿ– ಟಿಎಸ್‌ಪಿ ಹಣವನ್ನು ಆ ಇಲಾಖೆಗಳಿಗೆ ವರ್ಗಾಯಿಸಿದ್ದೇ ಈ ಏರಿಕೆಗೆ ಕಾರಣವಾಗಿದೆ. ಆದರೆ ಪರಿಶಿಷ್ಟ ವರ್ಗದ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಮಾಜ ಕಲ್ಯಾಣ, ವಸತಿ, ಕಂದಾಯ, ಶಿಕ್ಷಣ, ಆದಿವಾಸಿ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿನ ಅನುದಾನದಲ್ಲಿ ಸುಮಾರು ಶೇ 5ರವರೆಗೆ ಕಡಿತವಾಗಿದೆ. ಪರಿಶಿಷ್ಟ ವರ್ಗದ ಅಭಿವೃದ್ಧಿಗಾಗಿಯೇ ಮೀಸಲಾಗಿರುವ ನಿಗಮ-ಮಂಡಳಿಗಳಿಗೆ ನೀಡುವ ಅನುದಾನಕ್ಕೂ ಕೊಕ್ಕೆ ಹಾಕಲಾಗಿದೆ. ಇನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಳಿದುಳಿದ ಹಣದ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ಏನು ಮಾಡಿತು ಎನ್ನುವುದನ್ನು ಕನ್ನಡಿಗರು ನೋಡಿದ್ದಾರೆ.

ಗ್ಯಾರಂಟಿ ಯೋಜನೆಗಳಿಗೆ ಹಣ ಸಂಗ್ರಹಿಸಲು ಅನ್ಯ ಮಾರ್ಗಗಳಿವೆ ಎಂದು ಕಾಂಗ್ರೆಸ್‌ ಚುನಾವಣೆ ಸಂದರ್ಭದಲ್ಲಿ ಹೇಳಿತ್ತು. ಆದರೆ ಅಧಿಕಾರಕ್ಕೆ ಬಂದ ನಂತರದ ಸ್ಥಿತಿ ಅವರು ಹೇಳಿದ್ದಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಪರಿಶಿಷ್ಟರಿಗೆ ಮೀಸಲಿಟ್ಟ ಹಣವೇ ಗ್ಯಾರಂಟಿಗೆ ದೊಡ್ಡ ಹಣದ ಮೂಲವಾಗಿದೆ. ಪರಿಶಿಷ್ಟರ ಕೇರಿಗಳ ಮುಂದೆ ಆಗಬೇಕಿದ್ದ ರಸ್ತೆ, ಸಮುದಾಯ ಭವನಗಳು ಕಾಣೆಯಾಗಿವೆ. ಪರಿಶಿಷ್ಟರ ಮನೆಗಳಲ್ಲಿನ ಪ್ರತಿಭಾನ್ವಿತ ಮಕ್ಕಳ ಶಿಕ್ಷಣಕ್ಕೆ ಸಿಗಬೇಕಿದ್ದ ನೆರವಿನ ಹಣಕ್ಕೆ ಕೊರತೆಯಾಗಿದೆ. ಪರಿಶಿಷ್ಟ ವರ್ಗದಲ್ಲಿ ಉದ್ಯಮ ಕಟ್ಟುವ ಕನಸು ಕಾಣುತ್ತಿರುವವರಿಗೆ ಸರ್ಕಾರದ ನೆರವು ಗಗನಕುಸುಮವಾಗಿದೆ. ಕುಟುಂಬಕ್ಕೆ ಸೂರು ಕಟ್ಟಿಕೊಳ್ಳಬೇಕು ಎನ್ನುವ ಪರಿಶಿಷ್ಟರ ಮಹದಾಸೆಗೆ ತಣ್ಣೀರು ಎರಚಲಾಗಿದೆ.

ಪರಿಶಿಷ್ಟ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಹಣವನ್ನು ಮೀಸಲಾಗಿರಿಸಬೇಕು. ಮತ ಬ್ಯಾಂಕ್ ರಾಜಕಾರಣದ ಯೋಜನೆಗಳಿಗಾಗಿ ಬಳಸಿಕೊಳ್ಳಬಾರದು. ಆ ಹಣವನ್ನು ಸಾರ್ವತ್ರಿಕ ಯೋಜನೆಗಳಿಗೆ ಬಳಸಬಾರದು. ದಲಿತರಿಗೆ ಉದ್ಯೋಗ ಸೃಷ್ಟಿ ಮಾಡಲು, ಸ್ವಯಂ ಉದ್ಯೋಗ ಕಲ್ಪಿಸಲು ಹಣ ಮೀಸಲಿಡಬೇಕು. ಅವರ ಶಿಕ್ಷಣಕ್ಕೆ, ಅವರ ಮಕ್ಕಳಿಗೆ ಬಳಸಬೇಕು. ಅವರಿಗೆ ವಸತಿ ಶಾಲೆಗಳನ್ನು ನಿರ್ಮಿಸಬೇಕು. ಅವರಿಗೆ ತಾಂತ್ರಿಕ ಶಿಕ್ಷಣ ಕೊಡಬೇಕು. ದಲಿತರ ಮಕ್ಕಳು ಅಖಿಲ ಭಾರತ ಸೇವೆಗೆ ಆಯ್ಕೆ ಆಗುವ ರೀತಿ ಶಿಕ್ಷಣ, ತರಬೇತಿ ಕೊಡಬೇಕು.

ಸ್ವಯಂ ಉದ್ಯೋಗ ಮಾಡಲು ಫಲಾನುಭವಿಗಳ ಬಳಿ ಹಣ ಇರಬೇಕಾಗುತ್ತದೆ. ಆದರೆ, ಹಾಗೆ ಹಣ ಇಲ್ಲದಿರುವ ಅನೇಕರಿದ್ದಾರೆ. ಅಂಥ ಬಡ ಪರಿಶಿಷ್ಟರ ಮಕ್ಕಳಿಗೆ ಸ್ವಯಂ ಉದ್ಯೋಗ ಮಾಡಲು ಸರ್ಕಾರ ನೆರವು ನೀಡಬೇಕು. ಭೂ ಒಡೆತನ ಯೋಜನೆಯಲ್ಲಿ ಅರ್ಹರಿಗೆ ಭೂಮಿ ಕೊಡಬೇಕು. ಅಂಥ ಭೂಮಿಯಲ್ಲಿ ಗಂಗಾ ಕಲ್ಯಾಣ ಯೋಜನೆಯ ಅಡಿ ಒಂದು ಕೊಳವೆ ಬಾವಿ ತೋಡಿಕೊಟ್ಟರೆ, ಒಂದು ಕುಟುಂಬಕ್ಕೆ ಅನುಕೂಲ ಆಗುತ್ತದೆ, ಒಂದು ಕುಟುಂಬ ಉದ್ಧಾರ ಆಗುತ್ತದೆ. ಅವರ ಬದುಕು ಹಸನಾಗುತ್ತದೆ. ನಮ್ಮ ಸರ್ಕಾರ ಇದ್ದಾಗ ಇಂಥ ಅನೇಕ ಕೆಲಸಗಳನ್ನು ಮಾಡಿದ್ದೇವೆ. ಆದರೆ, ಈ ಸರ್ಕಾರ ಬಂದ ನಂತರದ ಈ ಮೂರು ವರ್ಷದಲ್ಲಿ ಕೊಳವೆ ಬಾವಿಗೆ ದುಡ್ಡಿಲ್ಲ. ಗಂಗಾ ಕಲ್ಯಾಣಕ್ಕೆ ಅನುದಾನವಿಲ್ಲ. ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ ಒಂದೋ ಎರಡೋ ಕೊಳವೆ ಬಾವಿ ನೀಡಿದರೆ, ಶಾಸಕರು ಯಾರಿಗೆ ಎಂದು ಕೊಡುವುದು? ಹೀಗಾಗಿ ಇಡೀ ಯೋಜನೆಯನ್ನೇ ಕೈಬಿಟ್ಟಂತಾಗಿದೆ.            

ಇಂದು ಬಡವರಿಗೆ ಮನೆ ಕಟ್ಟಲು ಒಂದು ನಿವೇಶನ ಸಹ ಇಲ್ಲದಂತಾಗಿದೆ. ಈಗ ಏನಾಗಿದೆ ಅಂದರೆ, ಒಬ್ಬ ತಂದೆಗೆ ಇಬ್ಬರು ಮೂವರು ಮಕ್ಕಳು ಇದ್ದರೆ, ಎಲ್ಲರೂ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. 20x30 ಅಡಿಯ ನಿವೇಶನ ಕೂಡ ಲಭ್ಯವಿಲ್ಲದಂತಾಗಿದೆ. ಬಡವರಿಗೆ, ಅದರಲ್ಲೂ ವಿಶೇಷವಾಗಿ ಎಸ್‌ಸಿ, ಎಸ್‌ಟಿ ಸಮುದಾಯಗಳ ಜನರಿಗೆ ನಿವೇಶನಗಳನ್ನು ಹಂಚುವ ಕೆಲಸ ಆಗಬೇಕು. ಕಾಂಗ್ರೆಸ್ ಸರ್ಕಾರವು ಎಸ್‌ಸಿಎಸ್‌ಪಿ–ಟಿಎಸ್‌ಪಿ ಹಣದಲ್ಲಿ ಇಂಥ ಯೋಜನೆಗಳನ್ನು ರೂಪಿಸುವ ಬದಲು ಆ ಹಣವನ್ನು ಇತರೆ ವೆಚ್ಚಗಳಿಗೆ ಬಳಸಿ ದಲಿತರಿಗೆ ಅನ್ಯಾಯ ಮಾಡುತ್ತಿದೆ.

ಎಸ್‌ಸಿಎಸ್‌ಪಿ ಟಿಎಸ್‌ಪಿ ಹಣ ದುರ್ಬಳಕೆ ಖಂಡಿಸಿ ಬೆಂಗಳೂರಿನಲ್ಲಿ ನಡೆದ ಧರಣಿ ಸತ್ಯಾಗ್ರಹ ಸಂಗ್ರಹ ಚಿತ್ರ

ಮೂವರು ಅಪರಾಧಿಗಳು

ಸಿದ್ದರಾಮಯ್ಯ ಸರ್ಕಾರವು ರಾಜ್ಯದ ಜನರ ಒಂದು ಪ್ರಶ್ನೆಗೆ ಉತ್ತರಿಸಬೇಕಿದೆ; ಕಳೆದ ಬಜೆಟ್‌ನಲ್ಲಿ ಎಸ್‌ಸಿಎಸ್‌ಪಿ– ಟಿಎಸ್‌ಪಿಗೆ ₹42 ಸಾವಿರ ಕೋಟಿ ಹಣವನ್ನು ಸರ್ಕಾರ ಮೀಸಲಿಟ್ಟಿತ್ತು. ಈ ಪೈಕಿ ₹14 ಸಾವಿರ ಕೋಟಿ ಹಣವನ್ನು ಕಾನೂನುಬಾಹಿರವಾಗಿ ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗಿದೆ. ಅಂದರೆ ಪರಿಶಿಷ್ಟರಿಗೆ ಸಿಗಬೇಕಿದ್ದ ಮೊತ್ತದಲ್ಲಿ ಶೇ 30ಕ್ಕೂ ಅಧಿಕ ಹಣ ಇತರೆ ಉದ್ದೇಶಗಳಿಗೆ ಬಳಕೆಯಾಗಿದೆ; ಗೃಹಲಕ್ಷ್ಮಿಗೆ ₹7400 ಕೋಟಿ ಗೃಹಜ್ಯೋತಿಗೆ ₹2700 ಕೋಟಿ ಅನ್ನಭಾಗ್ಯಕ್ಕೆ ₹1700 ಕೋಟಿ ಹಾಗೂ ಶಕ್ತಿ ಯೋಜನೆಗೆ ₹1500 ಕೋಟಿಗೂ ಅಧಿಕ ಹಣ ಹರಿದಿದೆ. ನದಿ ತಿರುವು ಯೋಜನೆಯಂತೆ ಪರಿಶಿಷ್ಟರ ಅನುದಾನ ತಿರುವು ಯೋಜನೆಯನ್ನು ಕಾಂಗ್ರೆಸ್‌ ಯಶಸ್ವಿಯಾಗಿ ಮಾಡಿ ಟೋಪಿ ಹಾಕಿದೆ. ಇದೇ ಸಿದ್ದರಾಮಯ್ಯ ಅವರು ಮಾಡಿದ ಎಸ್‌ಸಿಎಸ್‌ಪಿ–ಟಿಎಸ್‌ಪಿ ಕಾಯ್ದೆ ಪ್ರಕಾರ ಹಣ ವರ್ಗಾಯಿಸುವುದು ಅಥವಾ ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದು ಅಪರಾಧ. ಹಾಗಿದ್ದರೆ ಗ್ಯಾರಂಟಿ ಯೋಜನೆಗೆ ಹಣ ತಿರುಗಿಸಿದ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್‌ ಹಾಗೂ ಎಚ್‌.ಸಿ.ಮಹದೇವಪ್ಪ ಅವರನ್ನು ಈ ಪ್ರಕರಣದಲ್ಲಿ ಮೊದಲ ಮೂವರು ಆರೋಪಿಗಳ ಸ್ಥಾನದಲ್ಲಿ ಕೂರಿಸಬೇಕಲ್ಲವೇ?

ಲೇಖಕ: ಬಿಜೆಪಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.