
ಬಸವರಾಜ ಬೊಮ್ಮಾಯಿ
ಗ್ಯಾರಂಟಿ ಯೋಜನೆಗಳ ಪರಿಣಾಮ ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ನೀರಾವರಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಅತ್ಯಂತ ಕಡಿಮೆ ದುಡ್ಡು ಖರ್ಚು ಮಾಡಲಾಗುತ್ತಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತಗಳಲ್ಲಿ ರಾಜ್ಯಕ್ಕೆ ಹಿನ್ನಡೆಯಾಗಿರುವುದು ತುಂಬಲಾರದ ನಷ್ಟ. ಇದನ್ನು ಸರಿಪಡಿಸಲು ಮುಂದೆ ಬರುವಂತಹ ಸರ್ಕಾರ ಹರಸಾಹಸ ಪಡಬೇಕಾಗುತ್ತದೆ. ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯ ಹೆಚ್ಚು ಸಾಲ ಮಾಡಿದ್ದರು. ಈಗಲೂ ಅತಿ ಹೆಚ್ಚು ಸಾಲ ಮಾಡಿದ್ದಾರೆ. ಅವರು ಈ ಅವಧಿಯಲ್ಲಿ ₹6 ಲಕ್ಷ ಕೋಟಿಗಿಂತ ಹೆಚ್ಚು ಹೊರೆಯನ್ನು ರಾಜ್ಯದ ಜನರ ಮೇಲೆ ಹೇರಲಿದ್ದಾರೆ
ಹದಿನಾರನೇ ಹಣಕಾಸು ಆಯೋಗ ನೀಡಿರುವ ವರದಿಯನ್ನು ಕೇಂದ್ರ ಸರ್ಕಾರ ಸ್ವೀಕಾರ ಮಾಡಿದೆ. ಈ ಸಂದರ್ಭದಲ್ಲಿ ರಾಜ್ಯದ ಹಣಕಾಸಿನ ಮೇಲೆ ಶಿಫಾರಸುಗಳು ಯಾವ ರೀತಿಯಲ್ಲಿ ಪರಿಣಾಮ ಬೀರಲಿವೆ ಎಂದು ನೋಡುವುದು ಬಹಳ ಮುಖ್ಯ. 16ನೇ ಹಣಕಾಸು ಆಯೋಗವು 15ನೇ ಹಣಕಾಸು ಆಯೋಗಕ್ಕಿಂತ ಬಹಳ ವಿಭಿನ್ನವಾಗಿದೆ. ಹೊಸ ನಿಯಮಗಳು ಮತ್ತು ವಿವಿಧ ಅಂಶಗಳಿಗೆ ನೀಡಿದ ಆದ್ಯತೆಯ (ವೇಟೇಜ್) ಅನುಸಾರ ಕರ್ನಾಟಕ ಸೇರಿದಂತೆ ದೇಶದ ಎಲ್ಲ ರಾಜ್ಯಗಳಿಗೆ ಒಟ್ಟು ₹8 ಲಕ್ಷ ಕೋಟಿ ನೀಡಬೇಕು ಎಂದು ಹಣಕಾಸು ಆಯೋಗ ಶಿಫಾರಸು ಮಾಡಿದೆ. ಈ ಪೈಕಿ ₹4.4 ಲಕ್ಷ ಕೋಟಿಯಷ್ಟನ್ನು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಮತ್ತು ₹3.6 ಲಕ್ಷ ಕೋಟಿ ಮೊತ್ತವನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕು ಎಂದು ಆಯೋಗವು ವರದಿಯಲ್ಲಿ ಹೇಳಿದೆ.
15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ರಾಜ್ಯಕ್ಕೆ ಶೇ 3.65ರಷ್ಟು ತೆರಿಗೆ ಪಾಲು ಸಿಕ್ಕಿತ್ತು. 16ನೇ ಹಣಕಾಸು ಆಯೋಗವು ಈ ಪಾಲಿನ ಪ್ರಮಾಣವನ್ನು ಶೇ 4.13ಕ್ಕೆ ಹೆಚ್ಚಿದೆ. ಅಂದರೆ, ಕೇಂದ್ರದಿಂದ ಬರಬೇಕಾದ ಮೊತ್ತದಲ್ಲಿ ಶೇ 15 ರಷ್ಟು ಏರಿಕೆಯಾಗಿದೆ. ಹೀಗಾಗಿ ಕರ್ನಾಟಕಕ್ಕೆ ಹೆಚ್ಚಿನ ಹಣಕಾಸಿನ ನೆರವು ಸಿಗಲಿದೆ. ರಾಜ್ಯಕ್ಕೆ ಈವರೆಗೆ ತೆರಿಗೆ ಪಾಲಾಗಿ ₹55,663 ಕೋಟಿ ಹಣ ಬರುತ್ತಿತ್ತು. 16ನೇ ಹಣಕಾಸು ಆಯೋಗದ ಶಿಫಾರಸಿನಂತೆ ₹63,049 ಕೋಟಿ ಬರಲಿದೆ. ಇದರಿಂದ ರಾಜ್ಯಕ್ಕೆ ₹7,387 ಕೋಟಿ ಹೆಚ್ಚುವರಿಯಾಗಿ ಸಿಗಲಿದೆ. ಇದು ಒಂದು ಭಾಗವಾದರೆ, ಗ್ರ್ಯಾಂಟ್ ಇನ್ ಏಡ್ ಹಂಚಿಕೆಯಲ್ಲೂ ಹೆಚ್ಚಾಗಲಿದೆ. ನೈಸರ್ಗಿಕ ವಿಪತ್ತು ನಿರ್ವಹಣೆಗೆ ₹6,019 ಕೋಟಿ ಮೀಸಲಿಡಲಾಗಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳುವುದು ರಾಜ್ಯ ಸರ್ಕಾರದ ಕೈಯಲ್ಲಿದೆ. ಆದರೆ, ರಾಜ್ಯದ ಸದ್ಯದ ಹಣಕಾಸು ಪರಿಸ್ಥಿತಿ ನೋಡಿದರೆ ಬಹಳ ನಿರಾಸೆಯಾಗುತ್ತದೆ.
2022-23ರಲ್ಲಿ ರಾಜ್ಯದ ರಾಜಸ್ವ ಹೆಚ್ಚಳ ಹೆಚ್ಚು ಇತ್ತು. ಅದನ್ನು ರಾಜಸ್ವ ಕೊರತೆಯ ರಾಜ್ಯ ಮಾಡಿರುವುದು ಈಗಿನ ಸರ್ಕಾರದ ಕೊಡುಗೆ. ರಾಜ್ಯ ಸರ್ಕಾರ ತೀವ್ರ ಸಾಲದ ಸುಳಿಗೆ ಈಗಾಗಲೇ ಸಿಲುಕಿದೆ. ಕಳೆದ ವರ್ಷ ₹1.16 ಲಕ್ಷ ಕೋಟಿ ಸಾಲ ಪಡೆದಿದ್ದರೂ ಬಜೆಟ್‌ನಲ್ಲಿ ಹೇಳಿದಂತೆ ಆ ಮೊತ್ತವನ್ನು ಬಂಡವಾಳ ಹೂಡಿಕೆಗೆ ಬಳಸುವಲ್ಲಿ ವಿಫಲವಾಗಿದೆ. ಹೀಗಾಗಿ ಶಾಲೆ, ಗ್ರಾಮೀಣ ರಸ್ತೆಗಳು, ರಾಜ್ಯ ಮಟ್ಟದ ರಸ್ತೆಗಳ ನಿರ್ಮಾಣ ನಿಧಾನಗತಿಯಲ್ಲಿ ನಡೆಯುತ್ತಿದೆ. ಜೊತೆಗೆ ರಾಜ್ಯ ಸರ್ಕಾರವು ಒಟ್ಟು ರಾಜ್ಯದ ರಾಜಸ್ವ ವೆಚ್ಚದಲ್ಲಿ ಶೇ 9.26ರಷ್ಟು ಮೊತ್ತವನ್ನು ನೇರ ಹಣ ವರ್ಗಾವಣೆ ಮೂಲಕ (ಗ್ಯಾರಂಟಿಗಳಿಗೆ ಕೊಡುತ್ತಿದೆ) ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವುದು ರಾಜ್ಯದ ಹಣಕಾಸು ಪರಿಸ್ಥಿತಿಯ ಮೇಲೆ ಬಹಳ ದೊಡ್ಡ ಹೊರೆ ಬೀಳುವಂತೆ ಮಾಡಿದೆ. ಜೊತೆಗೆ, ರಾಜ್ಯ ಸರ್ಕಾರ ಪ್ರತಿ ವರ್ಷ ಒಟ್ಟು ಆದಾಯದಲ್ಲಿ ಸಾಲದ ನಿರ್ವಹಣೆಗೆ ಅತಿ ಹೆಚ್ಚು ಖರ್ಚು ಮಾಡುತ್ತಿದೆ. ಒಟ್ಟು ರಾಜಸ್ವ ಆದಾಯದಲ್ಲಿ ಶೇ 14ರಷ್ಟು ಸಾಲದ ಮರುಪಾವತಿಗೆ ವೆಚ್ಚ ಮಾಡುತ್ತಿರುವುದು ಅತ್ಯಂತ ಕಳವಳಕಾರಿ. ಸರ್ಕಾರವು ತನ್ನ ಒಟ್ಟು ಆದಾಯದಲ್ಲಿ ಶೇ 83ರಷ್ಟನ್ನು ರಾಜಸ್ವ ವೆಚ್ಚಕ್ಕೆ ಅಂದರೆ ಸಂಬಳ, ಪಿಂಚಣಿ, ಸಾಲ ತೀರಿಸಲು ಮತ್ತು ಸಬ್ಸಿಡಿಗೆ ಖರ್ಚು ಮಾಡುತ್ತಿರುವುದರಿಂದ ಅಭಿವೃದ್ಧಿಗೆ ಹಣ ಇಲ್ಲದಿರುವುದು ಸ್ಪಷ್ಟವಾಗಿದೆ. ಸಾಲ ಪಡೆದು ಜನಪ್ರಿಯ ಯೋಜನೆಗಳಿಗೆ ಹಣ ಕೊಡುತ್ತಿರುವುದು ರಾಜ್ಯವನ್ನು ಆರ್ಥಿಕ ಬಿಕ್ಕಟ್ಟಿಗೆ ತಳ್ಳುವುದರಲ್ಲಿ ಅನುಮಾನವಿಲ್ಲ. 2025ರ ಮಾರ್ಚ್‌ಗೆ ಕರ್ನಾಟಕದ ವರಮಾನದಲ್ಲಿ ಶೇ 26ಕ್ಕಿಂತ ಹೆಚ್ಚು ಮೊತ್ತ ಸಾಲದಿಂದ ಬರುತ್ತಿರುವುದು ಸರ್ಕಾರ ಮಂಡಿಸಿರುವ ಬಜೆಟ್‌ನಿಂದ ಗೊತ್ತಾಗುತ್ತದೆ. ಹೀಗೆ, ಸಂಪೂರ್ಣವಾಗಿ ಎಲ್ಲ ಗಡಿ ಮೀರಿರುವ ಆರ್ಥಿಕ ನಿರ್ವಹಣೆಯನ್ನು ಸರಿಪಡಿಸದೆ, ಕೇಂದ್ರದ ಮೇಲೆ ಪದೇ ಪದೇ ಟೀಕೆ ಮಾಡುವುದು, ಅನ್ಯಾಯ ಆಗಿದೆ ಅಂತ ಕೂಗು ಹಾಕುವುದರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಸುಳ್ಳನ್ನೇ ನೂರು ಬಾರಿ ಹೇಳಿ ಸತ್ಯ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.
ಜಿಎಸ್‌ಟಿಯಿಂದಾಗಿ ರಾಜ್ಯದ ಆದಾಯ ಕಡಿಮೆ ಆಗಿದೆ ಎಂಬುದು ಅವರು ಮಾಡುವ ಪ್ರಮುಖ ಆಪಾದನೆಗಳಲ್ಲೊಂದು. ಮೊದಲು ಜಾರಿಯಲ್ಲಿದ್ದ ಅಬಕಾರಿ ತೆರಿಗೆ, ಮಾರಾಟ ತೆರಿಗೆ ಹಾಗೂ ಇನ್ನಿತರ ತೆರಿಗೆಗಳು ಒಂದು ರೀತಿಯಲ್ಲಿ ತೆರಿಗೆ ಭಯೋತ್ಪಾದನೆಯಂತಿದ್ದವು. ಹಲವು ತೆರಿಗೆಗಳಿಂದಾಗಿ ವ್ಯಾಪಾರಸ್ಥರಿಗೆ, ತೆರಿಗೆದಾರರಿಗೆ, ಜನಸಾಮಾನ್ಯರಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಕಿರುಕುಳ ಆಗುತ್ತಿತ್ತು. ಈಗ ಜಾರಿಯಲ್ಲಿರುವ ಜಿಎಸ್‌ಟಿ ಪರಿಕಲ್ಪನೆ ಬಿಜೆಪಿಯದ್ದಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೇ ಜಿಎಸ್‌ಟಿ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡನೆ ಮಾಡಿತ್ತು. ಆದರೆ, ಅದಕ್ಕೆ ಜಾರಿಗೊಳಿಸಲು ಸಾಧ್ಯವಾಗಲಿಲ್ಲ. ಅವರು ಈ ಹಿಂದೆ ಮಂಡಿಸಿದ್ದ ಕಾನೂನನ್ನು ಈಗ ಅವರೇ ವಿರೋಧಿಸುತ್ತಿರುವುದು ಕಾಂಗ್ರೆಸ್‌ನವರ ಹೊಸ ನೀತಿ. ಜಿಎಸ್‌ಟಿ ಜಾರಿಯ ನಂತರದಲ್ಲಿ ರಾಜ್ಯಗಳಿಗೆ ಆಗುತ್ತಿದ್ದ ನಷ್ಟವನ್ನು ತಪ್ಪಿಸುವುದಕ್ಕಾಗಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವರಮಾನ ನಷ್ಟ ಪರಿಹಾರವನ್ನು (ಶೇ 14ರಷ್ಟು ವಾರ್ಷಿಕ ಅಭಿವೃದ್ಧಿಯ ಆಧಾರದಲ್ಲಿ) ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಿಗೆ 2022ರವೆಗೆ ಐದು ವರ್ಷ ನೀಡಿದೆ. ಹೀಗಾಗಿ, ಈಗ ಕಾಂಗ್ರೆಸ್‌ನವರು ಮಾಡುತ್ತಿರುವ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ.
15ನೇ ಹಣಕಾಸಿನ ಆಯೋಗದ ಅನುದಾನದ ಒಟ್ಟು ಮೊತ್ತ 14ನೇ ಹಣಕಾಸಿನ ಆಯೋಗಕ್ಕಿಂತ ದೊಡ್ಡದಿರುವುದರಿಂದ ರಾಜ್ಯಕ್ಕೆ ₹1 ಲಕ್ಷ ಕೋಟಿ ಹೆಚ್ಚು ಹಣ ಬಂದಿದೆ. ಆದರೆ, ರಾಜ್ಯ ಸರ್ಕಾರ ಇದನ್ನು ಮುಚ್ಚಿ ಹಾಕುತ್ತಿದೆ. ತನ್ನ ವೈಫಲ್ಯ ಮರೆಮಾಚಲು ಪ್ರಯತ್ನ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಪರಿಣಾಮ ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ನೀರಾವರಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಅತ್ಯಂತ ಕಡಿಮೆ ದುಡ್ಡು ಖರ್ಚು ಮಾಡಲಾಗುತ್ತಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತಗಳಲ್ಲಿ ರಾಜ್ಯಕ್ಕೆ ಹಿನ್ನಡೆಯಾಗಿರುವುದು ತುಂಬಲಾರದ ನಷ್ಟ. ಇದನ್ನು ಸರಿಪಡಿಸಲು ಮುಂದೆ ಬರುವಂತಹ ಸರ್ಕಾರ ಹರಸಾಹಸ ಪಡಬೇಕಾಗುತ್ತದೆ. ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚು ಸಾಲ ಮಾಡಿದ್ದರು. ಈಗಲೂ ಅತಿ ಹೆಚ್ಚು ಸಾಲ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಈ ಅವಧಿಯಲ್ಲಿ ₹6 ಲಕ್ಷ ಕೋಟಿಗಿಂತ ಹೆಚ್ಚು ಹೊರೆಯನ್ನು ರಾಜ್ಯದ ಜನರ ಮೇಲೆ ಹೇರಲಿದ್ದಾರೆ. ಇದು ರಾಜ್ಯಕ್ಕೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಅತಿ ದೊಡ್ಡ ಅನ್ಯಾಯ.
ಇದನ್ನು ಸರಿಯಾಗಿ ನಿರ್ವಹಿಸಲು ಕೇಂದ್ರ ಸರ್ಕಾರ 50 ವರ್ಷಕ್ಕೆ ಬಂಡವಾಳ ವೆಚ್ಚದ ಮೇಲೆ ಸಾಲ ಕೊಡುತ್ತಿರುವುದನ್ನು ಬಳಸಿಕೊಳ್ಳಬೇಕು. ಬಂಡವಾಳ ವೆಚ್ಚ ಹೆಚ್ಚು ಮಾಡಬೇಕು. ಗ್ಯಾರಂಟಿ ಜೊತೆಗೆ ಗ್ಯಾರಂಟಿ ಉಸ್ತುವಾರಿಗಳಿಗೆ, ಸಾಧನಾ ಸಮಾವೇಶಕ್ಕಾಗಿ ಹೆಚ್ಚು ಹಣವನ್ನು ಖರ್ಚು ಮಾಡುತ್ತಿದ್ದಾರೆ. 50ಕ್ಕೂ ಹೆಚ್ಚು ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ಸಚಿವ ಸ್ಥಾನ ಕೊಟ್ಟು ವೆಚ್ಚ ಮಾಡುತ್ತಿದ್ದಾರೆ. ರಾಜಕೀಯ ವೆಚ್ಚವನ್ನು ಸಂಪೂರ್ಣವಾಗಿ ತೆಗೆದು ಹಾಕಿ, ಅನುಪಯುಕ್ತ ವೆಚ್ಚ ಕಡಿಮೆ ಮಾಡಿ ರಾಜ್ಯದ ಜನರ ಮೇಲೆ ಈಗಾಗಲೇ ₹1 ಲಕ್ಷ ಕೋಟಿ ಹೊಸ ತೆರಿಗೆ ಹಾಕಿದ್ದಾರೆ. ಅದನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ಸಿದ್ದರಾಮಯ್ಯ ಪ್ರಯತ್ನ ಮಾಡಬೇಕು. ಕೇಂದ್ರದ ಮೇಲೆ ದೂಷಣೆ ಮಾಡುವುದನ್ನು, ಸುಳ್ಳು ಹೇಳಿ ರಾಜ್ಯದ ಜನರ ದಾರಿ ತಪ್ಪಿಸುವುದನ್ನು ಬಿಡಬೇಕು. ಜನರಿಗೆ ಸತ್ಯ ಹೇಳಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದರೆ ಒಳ್ಳೆಯದು. ಇಲ್ಲದಿದ್ದರೆ ರಾಜ್ಯಕ್ಕೆ ಹಣಕಾಸಿನ ಸಂಕಷ್ಟ ತಂದಿರುವ ಮುಖ್ಯಮಂತ್ರಿ ಎನ್ನುವ ಅಪಖ್ಯಾತಿಗೆ ಅವರು ಗುರಿಯಾಗಲಿದ್ದಾರೆ. ಇದು ನನ್ನೊಬ್ಬನದ್ದಲ್ಲ; ರಾಜ್ಯದ ಜನಸಾಮಾನ್ಯರ ಅಭಿಪ್ರಾಯವೂ ಹೌದು.
ಸೆಸ್: ಸುಳ್ಳು ಆರೋಪ
ಅವರು ಮಾಡುತ್ತಿರುವ ಎರಡನೇ ಆರೋಪ ಸೆಸ್‌ನಲ್ಲಿ ರಾಜ್ಯಕ್ಕೆ ಪಾಲಿಲ್ಲ ಎನ್ನುವುದು. ಈ ವ್ಯವಸ್ಥೆ 1960ರಿಂದಲೇ ಜಾರಿಯಲ್ಲಿದೆ. ಸೆಸ್ ಎನ್ನುವುದು ವಿಶೇಷ ಕಾರ್ಯಕ್ರಮಗಳಿಗೆ ಇರುವಂತಹದ್ದು. ಇದನ್ನು ಸಂಸತ್ತಿನ ಮೂಲಕ ಅವತ್ತಿನ ಕಾಂಗ್ರೆಸ್ ಸರ್ಕಾರವೇ ಜಾರಿ ಮಾಡಿದೆ. ಅದು ಸಿ.ಎಂ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲವೆ? ಹಿಂದೆ ಅವರೇ ರೂಪಿಸಿರುವ ಕಾನೂನನ್ನು ಈಗ ಅವರೇ ಟೀಕಿಸುತ್ತಿದ್ದಾರೆ. ಜಿಎಸ್‌ಟಿ ಬಂದ ಮೇಲೆ ಮದ್ಯ, ತಂಬಾಕಿನ ಮೇಲಿನ ಸೆಸ್ ವರಮಾನವನ್ನು ಎಲ್ಲ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ರೂಪದಲ್ಲಿ ಕೊಡಲು ತೀರ್ಮಾನ ಮಾಡಿದ್ದರಿಂದ ಸೆಸ್‌ನಲ್ಲಿ ರಾಜ್ಯದ ಪಾಲು ಇದೆ ಎನ್ನುವುದು ಸ್ಪಷ್ಟ. 15ನೇ ಹಣಕಾಸು ಆಯೋಗದ ವರದಿಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ. ಅವರ ಸರ್ಕಾರ ಇದ್ದಾಗಲೇ ವರದಿ ಅಂತಿಮವಾಗಿದ್ದು. ಮತ್ತು 15ನೇ ಹಣಕಾಸು ಆಯೋಗದ ಹಣ ವಿತರಣೆಗೆ ಕರಾರುಗಳನ್ನು ನಿರ್ಧಾರ ಮಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರವೇ ಇತ್ತು. ಅವರ ಸರ್ಕಾರದ ಐದು ಜನ ಸಚಿವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಆಗ ಪ್ರತಿಭಟಿಸದೆ ಈಗ ಕೇಂದ್ರದ ಮೇಲೆ ಗೂಬೆ ಕೂರಿಸುವುದು ರಾಜಕೀಯ ಪ್ರೇರಿತವಾದ ನಡೆಯಾಗುತ್ತದೆ.
ಲೇಖಕ: ಸಂಸದ, ಮಾಜಿ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.