ADVERTISEMENT

ಚರ್ಚೆ | ಕೇಂದ್ರ ಬಜೆಟ್; ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ: ಸಚಿವ ಕೃಷ್ಣಬೈರೇಗೌಡ

ಕೇಂದ್ರದ 2026ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆಯೇ ಎನ್ನುವ ಬಗ್ಗೆ ಸಚಿವ ಕೃಷ್ಣಬೈರೇಗೌಡ ಅವರ ಲೇಖನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 0:30 IST
Last Updated 14 ಫೆಬ್ರುವರಿ 2026, 0:30 IST
<div class="paragraphs"><p>ತೆರಿಗೆ ಪಾಲು, ಕೃಷ್ಣಬೈರೇಗೌಡ</p></div>

ತೆರಿಗೆ ಪಾಲು, ಕೃಷ್ಣಬೈರೇಗೌಡ

   
ದೇಶದ ಸಂವಿಧಾನವು ಜನರ ಯೋಗಕ್ಷೇಮ ಹಾಗೂ ಅಭಿವೃದ್ಧಿ ಕರ್ತವ್ಯದಲ್ಲಿ 2/3 ಭಾಗದ ಹೊಣೆಯನ್ನು ರಾಜ್ಯಗಳಿಗೆ ವಹಿಸಿದೆ. ಆದರೆ, 2/3ರಷ್ಟು ಆದಾಯವನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ. ಈ ನಿಯಮ ರಾಜ್ಯಗಳ ಸುಸ್ಥಿರ ಅಭಿವೃದ್ಧಿಗೆ ಮಾರಕ. ಹೆಚ್ಚಿನ ಪ್ರಮಾಣದ ಅಭಿವೃದ್ಧಿ ಕೆಲಸಗಳನ್ನು ರಾಜ್ಯಗಳೇ ಮಾಡಬೇಕು. ಆದರೆ, ಆದಾಯ ಮಾತ್ರ ಕೇಂದ್ರದ ಪಾಲಾದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ? ಸಾರ್ವಜನಿಕರೂ‌ ಅವರ ಯೋಗಕ್ಷೇಮದ ಬೇಡಿಕೆ ಹಾಗೂ ಅಭಿವೃದ್ಧಿ ಅಗತ್ಯಗಳಿಗೆ ರಾಜ್ಯ ಸರ್ಕಾರಗಳನ್ನೇ ಅವಲಂಬಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರವು ರಾಜ್ಯಗಳ ಆರ್ಥಿಕ ಸ್ವಾಯತ್ತೆಗೆ ಕೊಕ್ಕೆ ಹಾಕಿ ಕೂತಿರುವುದು ಗಣತಂತ್ರ ಒಕ್ಕೂಟ ವ್ಯವಸ್ಥೆಯ ಅಣಕವಲ್ಲದೆ ಮತ್ತೇನು?

‘ವಿಕಸಿತ ಭಾರತ’ ಎಂಬ ಪದದ ಅರ್ಥ ಮತ್ತು ವ್ಯಾಪ್ತಿ ಅಗಾಧವಾದದ್ದು. ಆದರೆ, ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲು ಹೆಣಗಾಡುತ್ತಿರುವ ದಕ್ಷಿಣದ ರಾಜ್ಯಗಳಿಗೆ ಸತತ ಅನ್ಯಾಯವನ್ನಷ್ಟೇ ಎಸಗುತ್ತಿರುವ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ, ಈ ಪದವನ್ನು ಕೇವಲ ತೋರ್ಪಡಿಕೆಗೆ ಬಳಸುತ್ತಿದೆ; ಅದರ ನಿಜವಾದ ಹೆಜ್ಜೆ ತದ್ವಿರುದ್ಧ ದಿಕ್ಕಿನಲ್ಲಿದೆ. ಅದಕ್ಕೊಂದು ತಾಜಾ ಉದಾಹರಣೆಯೇ ಕೇಂದ್ರದ 2026ರ ಬಜೆಟ್.

ಪ್ರತಿಯೊಂದು ರಾಜ್ಯದ ಸ್ವಾಯತ್ತೆಯು ಸುಸ್ಥಿರ ಆದಾಯದ ಮೇಲೆ ನಿಂತಿದೆ. ಆ ನಿಟ್ಟಿನಲ್ಲಿ ಜಿಎಸ್‌ಟಿ ತೆರಿಗೆ ವ್ಯವಸ್ಥೆ ಜಾರಿಯಾಗುವವರೆಗೆ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳು ಸ್ವಾಯತ್ತವಾಗಿಯೇ ಇದ್ದವು. ಆದರೆ, ಜಿಎಸ್‌ಟಿ ಜಾರಿಯು ರಾಜ್ಯಗಳ ಸ್ವಾಯತ್ತೆಗೆ ಬಿದ್ದ ಮೊದಲ ಕೊಡಲಿ ಪೆಟ್ಟು. ಜಿಎಸ್‌ಟಿಯಿಂದಾಗಿ ರಾಜ್ಯಗಳು ಪ್ರತಿ ವಸ್ತುವಿನ ಮೇಲೆ ತೆರಿಗೆ ನಿರ್ಧರಿಸುವ ಮತ್ತು ಸಂಗ್ರಹಿಸುವ ತನ್ನ ಪರಮಾಧಿಕಾರವನ್ನೇ ಕಳೆದುಕೊಂಡವು. ಅಲ್ಲದೆ, ತೆರಿಗೆ ಸಂಗ್ರಹದಲ್ಲಿ ತಮ್ಮ ಪಾಲು ಪಡೆಯಲು ಕೇಂದ್ರವನ್ನು ಅವಲಂಬಿಸುವಂತಾದವು. ಇದು ದುರದೃಷ್ಟಕರ.

ADVERTISEMENT

ಜಿಎಸ್‌ಟಿ ಜಾರಿಯಿಂದ ರಾಜ್ಯಕ್ಕೆ ವಾರ್ಷಿಕ ₹20 ಸಾವಿರ ಕೋಟಿಯಿಂದ ₹25 ಸಾವಿರ ಕೋಟಿಯಷ್ಟು ತೆರಿಗೆ ನಷ್ಟ ಉಂಟಾಗಿತ್ತು. ಈ ನಷ್ಟವನ್ನು ಭರಿಸುವುದೇ ಕಷ್ಟವಾಗಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕಳೆದ ವರ್ಷ ಜಿಎಸ್‌ಟಿ ದರದಲ್ಲಿ ಬದಲಾವಣೆಗಳನ್ನು ಮಾಡಿದೆ. ಈ ವ್ಯವಸ್ಥೆ ರಾಜ್ಯಗಳ ತೆರಿಗೆ ಆದಾಯವನ್ನು ರಕ್ಷಿಸುವಂತಿದ್ದರೆ, ಇದರ ಸಂಪೂರ್ಣ ಲಾಭ ದೇಶದ ಜನಸಾಮಾನ್ಯರಿಗೆ ಸಿಗುವಂತಿದ್ದರೆ ನಮ್ಮದೇನೂ ತಕರಾರಿಲ್ಲ. ಆದರೆ, ಈ ಜಿಎಸ್‌ಟಿ ಸರಳೀಕರಣದಿಂದ ಜನರಿಗೂ ಲಾಭವಿಲ್ಲ, ರಾಜ್ಯಕ್ಕೂ ವಾರ್ಷಿಕ ಸುಮಾರು ₹15 ಸಾವಿರ ಕೋಟಿಯಿಂದ ₹20 ಸಾವಿರ ಕೋಟಿವರೆಗೆ ಆದಾಯ ಕೊರತೆಯಾಗಿದೆ. ಜಿಎಸ್‌ಟಿ ಬೆಳವಣಿಗೆ ಶೇ 12ರಿಂದ ಶೇ 5ಕ್ಕೆ ಇಳಿಕೆಯಾಗಿದೆ.

ಈ ನಷ್ಟವನ್ನು ತುಂಬಿಕೊಡಲು ಜಿಎಸ್‌ಟಿ ಮಂಡಳಿ ಬಳಿ ಯಾವುದೇ ಪರಿಹಾರದ ಯೋಜನೆ ಇಲ್ಲ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ‘ವಿಕಸಿತ ಭಾರತ’ ಬಜೆಟ್‌ನಲ್ಲಿಯೂ ಈ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಅಸಲಿಗೆ ಜಿಎಸ್‌ಟಿ ತೆರಿಗೆ ವ್ಯವಸ್ಥೆ ಸ್ಥಿರಗೊಳ್ಳುವವರೆಗೆ ಕೇಂದ್ರ ಸರ್ಕಾರ ತನ್ನ ಖಜಾನೆಯಿಂದ ಒಂದು ರೂಪಾಯಿಯನ್ನೂ ನೀಡುವ ಅಗತ್ಯವಿಲ್ಲ. ಬದಲಿಗೆ ಜಿಎಸ್‌ಟಿ ಮಂಡಳಿ ಪರಿಧಿಯಲ್ಲೇ ಪ್ರತಿಯೊಂದು ರಾಜ್ಯಕ್ಕೂ ಪರಿಹಾರ ನೀಡಬಹುದು. ಕೇಂದ್ರ ಸರ್ಕಾರ ಸೆಸ್, ಸರ್‌ಚಾರ್ಜ್ ಮೂಲಕ ಸಂಗ್ರಹಿಸುವ ತೆರಿಗೆ ಹಣವನ್ನು ರಾಜ್ಯಗಳ ಜೊತೆ ಹಂಚಿಕೊಳ್ಳುವುದೇ ಇದಕ್ಕಿರುವ ಏಕೈಕ ಪರಿಹಾರ.

ಕೇಂದ್ರದ ಆದಾಯದಲ್ಲಿ ಜಿಎಸ್‌ಟಿ ಪಾಲು ಶೇ 28ರಷ್ಟು ಮಾತ್ರ. ಉಳಿದ ಶೇ 72ರಷ್ಟು ಆದಾಯವನ್ನು ಕೇಂದ್ರ ಸರ್ಕಾರ ವಿವಿಧ ಮೂಲಗಳಿಂದ ಗಳಿಸುತ್ತದೆ. ನೇರ ತೆರಿಗೆ, ಆದಾಯ ತೆರಿಗೆ, ಕಸ್ಟಮ್ಸ್, ಡಿವಿಡೆಂಡ್‌ ಹಾಗೂ ವಿವಿಧ ಸೆಸ್‌ಗಳು ಕೇಂದ್ರದ ಆದಾಯದ ಮೂಲ. ಸೆಸ್ ಮೂಲಕವೇ ಕೇಂದ್ರ ಸರ್ಕಾರ ಶೇ 17ರಿಂದ
ಶೇ 20ರಷ್ಟು ಆದಾಯ ಗಳಿಸುತ್ತದೆ. 2024-25ರ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ಸೆಸ್ ಮೂಲಕ ₹3.87 ಲಕ್ಷ ಕೋಟಿ ಹಣ ಸಂಗ್ರಹಿಸಿದೆ. ಸರ್‌ಚಾರ್ಚ್ ಮೂಲಕ ₹1.53 ಲಕ್ಷ ಕೋಟಿ ಸೇರಿ ಒಟ್ಟಾರೆ ₹5.40 ಲಕ್ಷ ಕೋಟಿ ಸಂಗ್ರಹಿಸಿದೆ. 2025-26 ನೇ ಸಾಲಿಗೆ ಇದನ್ನು ₹5.91 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದೆ. ಕೇಂದ್ರ ಸರ್ಕಾರ ಸೆಸ್-ಸರ್‌ಚಾರ್ಜ್ ಆದಾಯದಲ್ಲಿ ಒಂದು ರೂಪಾಯಿಯನ್ನೂ ರಾಜ್ಯಗಳ ಜೊತೆ ಹಂಚಿಕೊಳ್ಳುವುದಿಲ್ಲ. ತೆರಿಗೆಗಳನ್ನು ವ್ಯವಸ್ಥಿತವಾಗಿ ಸೆಸ್‌ಗಳಿಗೆ ಬದಲಾಯಿಸಿ, ರಾಜ್ಯಗಳಿಗೆ ಅದರಲ್ಲಿ ಏನೂ ಪಾಲು ಕೊಡದೇ ಸಂಪೂರ್ಣ ಹಣವನ್ನು ತಾನೇ ಇಟ್ಟುಕೊಳ್ಳುವ ವ್ಯವಸ್ಥಿತ ಮಾರ್ಗ ಅನುಸರಿಸುತ್ತಿದೆ.

ರಾಜ್ಯಗಳ ಒಟ್ಟು ಆದಾಯದಲ್ಲಿ ಜಿಎಸ್‌ಟಿ ಪಾಲು ಶೇ 50. ಹೀಗಾಗಿ ಅಭಿವೃದ್ಧಿಗೆ ಹಾಗೂ ಆದಾಯ ಸಂಗ್ರಹಣೆಗೆ ರಾಜ್ಯಗಳು ಜಿಎಸ್‌ಟಿಯನ್ನೇ ನೆಚ್ಚಿಕೊಂಡಿವೆ. 2022ರಲ್ಲಿ ಜಿಎಸ್‌ಟಿ ತೆರಿಗೆ ನಷ್ಟ ಪರಿಹಾರ ಯೋಜನೆಯನ್ನು ತೆಗೆದುಹಾಕಿದ ನಂತರ ರಾಜ್ಯಗಳ ಆದಾಯದಲ್ಲಿ ಶೇ 25ರಷ್ಟು ಖೋತಾ ಆಗಿದೆ. ಇಂತಹ ಸಂದರ್ಭದಲ್ಲಿ ಜಿಎಸ್‌ಟಿ ಸರಳೀಕರಣ ಎಂಬ ಸೂತ್ರದ ಅಡಿಯಲ್ಲಿ ರಾಜ್ಯಗಳ ಆದಾಯಕ್ಕೆ ಹೆಚ್ಚುವರಿಯಾಗಿ ಶೇ 20ರಷ್ಟು ನಷ್ಟ ಉಂಟುಮಾಡಿದರೆ ರಾಜ್ಯಗಳ ಆರ್ಥಿಕ ಸ್ವಾಯತ್ತೆ ಪ್ರಶ್ನಾರ್ಥಕವಾಗುವುದಿಲ್ಲವೇ? ಇದಕ್ಕೊಂದು ಪರಿಹಾರ ಬೇಡವೇ?

ಜಿಎಸ್‌ಟಿ ಪರಿಚಯಿಸುವಾಗ ಈ ನೂತನ ತೆರಿಗೆ ವ್ಯವಸ್ಥೆ ಆರ್ಥಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತದೆ ಎನ್ನಲಾಗಿತ್ತು. ಇದು ನಿಜವಾಗಿದ್ದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಆದಾಯ ದುಪ್ಪಟ್ಟಾಗಬೇಕಿತ್ತು. ಆದರೆ ಕಳೆದ ಏಳೆಂಟು ವರ್ಷಗಳಲ್ಲಿ ಈ ಹೇಳಿಕೆ ಸುಳ್ಳು ಎಂದು ಸಾಬೀತಾಗಿದೆ. ಪ್ರತಿ ವರ್ಷವೂ ಎಲ್ಲ ರಾಜ್ಯಗಳ ನಿವ್ವಳ ಆದಾಯ ಗಣನೀಯವಾಗಿ ಇಳಿಯುತ್ತಲೇ ಇದೆ. ಜಿಎಸ್‌ಟಿಗೂ ಮುನ್ನ ವ್ಯಾಟ್ ಅಡಿಯಲ್ಲಿ ತೆರಿಗೆ ಸಂಗ್ರಹಿಸುತ್ತಿದ್ದ ಕಾಲದಲ್ಲಿ ದೇಶದ ಜಿಡಿಪಿಗೆ ವ್ಯಾಟ್ ಕೊಡುಗೆ ಶೇ 6.1ರಷ್ಟಿತ್ತು. ಆದರೆ, ಈಗ ಜಿಎಸ್‌ಟಿ ಬಳಿಕ ಈ ಪ್ರಮಾಣ ಶೇ 6.1ಕ್ಕೆ ತಲುಪಿಲ್ಲ. ಪ್ರಸ್ತುತ ಜಿಡಿಪಿಗೆ ಜಿಎಸ್‌ಟಿ ಕೊಡುಗೆ ಶೇ 5.9ರಷ್ಟು ಮಾತ್ರ. ಒಟ್ಟಾರೆ ಜಿಎಸ್‌ಟಿಯಿಂದಾಗಿ ರಾಜ್ಯ ಹಾಗೂ ಕೇಂದ್ರಕ್ಕೆ ಆದಾಯ ನಷ್ಟವಾಗುತ್ತಿರುವುದು ಸ್ಪಷ್ಟ. ಜಿಎಸ್‌ಟಿ ವ್ಯವಸ್ಥೆಗೂ ಮುನ್ನ ಇದ್ದ ಆದಾಯ ಹಾಗೂ ಇಂದಿನ ಆದಾಯ ಹೋಲಿಕೆ ಮಾಡಿದರೆ ಕರ್ನಾಟಕದ ಆದಾಯ ಜಿಎಸ್‌ಟಿ ನಂತರ ₹25 ಸಾವಿರ ಕೋಟಿ ಕಡಿಮೆ ಆಗಿದೆ.

ಸಂವಿಧಾನವು ಜನರ ಯೋಗಕ್ಷೇಮ ಹಾಗೂ ಅಭಿವೃದ್ಧಿ ಕರ್ತವ್ಯದಲ್ಲಿ 2/3 ಭಾಗದ ಹೊಣೆಯನ್ನು ರಾಜ್ಯಗಳಿಗೆ ವಹಿಸಿದೆ. ಆದರೆ, 2/3 ರಷ್ಟು ಆದಾಯವನ್ನು ಕೇಂದ್ರಕ್ಕೆ ನೀಡಿದೆ. ಈ ನಿಯಮ ರಾಜ್ಯಗಳ ಸುಸ್ಥಿರ ಅಭಿವೃದ್ಧಿಗೆ ಮಾರಕ. ಹೆಚ್ಚಿನ ಪ್ರಮಾಣದ ಅಭಿವೃದ್ಧಿ ಕೆಲಸಗಳನ್ನು ರಾಜ್ಯಗಳೇ ಮಾಡಬೇಕು. ಆದರೆ, ಆದಾಯ ಮಾತ್ರ ಕೇಂದ್ರದ ಪಾಲಾದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ? ಸಾರ್ವಜನಿಕರೂ ಅವರ ಯೋಗಕ್ಷೇಮದ ಬೇಡಿಕೆ ಹಾಗೂ ಅಭಿವೃದ್ಧಿ ಅಗತ್ಯಗಳಿಗೆ ರಾಜ್ಯ ಸರ್ಕಾರಗಳನ್ನೇ ಅವಲಂಬಿಸಿದ್ದಾರೆ. ಆದರೆ, ಕೇಂದ್ರವು ರಾಜ್ಯಗಳ ಆರ್ಥಿಕ ಸ್ವಾಯತ್ತೆಗೆ ಕೊಕ್ಕೆ ಹಾಕಿ ಕೂತಿರುವುದು ಗಣತಂತ್ರ ಒಕ್ಕೂಟ ವ್ಯವಸ್ಥೆಯ ಅಣಕವಲ್ಲದೆ ಮತ್ತೇನು?

ಹಣಕಾಸು ಆಯೋಗವಂತೂ ಹೆಜ್ಜೆ ಹೆಜ್ಜೆಗೂ ಕರ್ನಾಟಕಕ್ಕೆ ಅನ್ಯಾಯವನ್ನಷ್ಟೇ ಮಾಡುತ್ತಿದೆ. 14ನೇ ಹಣಕಾಸು ಆಯೋಗವು ಶೇ 4.71ರಷ್ಟು ಪಾಲನ್ನು ನಮಗೆ ಒದಗಿಸಿತ್ತು. 15ನೇ ಹಣಕಾಸು ಆಯೋಗವು ಇದನ್ನು ಶೇ 3.64ಕ್ಕೆ ಇಳಿಸುವ ಮೂಲಕ ಘೋರ ಅನ್ಯಾಯ ಮಾಡಿತು. ಉದಾಹರಣೆಗೆ, ರಾಜ್ಯಗಳಿಗೆ ಹಂಚಿಕೆ ಮಾಡುವ ₹100ರಲ್ಲಿ ಮೊದಲು ಕರ್ನಾಟಕಕ್ಕೆ ₹4.71 ಸಿಗುತ್ತಿದ್ದರೆ, 15ನೇ ಆಯೋಗವು ಅದನ್ನು ₹3.64ಕ್ಕೆ ಇಳಿಸಿತು. ಇದರಿಂದ ರಾಜ್ಯಕ್ಕೆ ನೇರವಾಗಿ ಸುಮಾರು ₹80 ಸಾವಿರ ಕೋಟಿಯಷ್ಟು ಬೃಹತ್ ಪ್ರಮಾಣದ ತೆರಿಗೆ ಪಾಲು ಸಿಗದೆ ಅನ್ಯಾಯವಾಯಿತು.

ಇದಲ್ಲದೆ, ಕಲ್ಯಾಣ ಕರ್ನಾಟಕದ ಹಿಂದುಳಿದ ಪ್ರದೇಶ ಮತ್ತು ಜಾಗತಿಕ ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟಗಳ ಅಭಿವೃದ್ಧಿಗೆ ವಿಶೇಷ ಹೊಂದಾಣಿಕೆಯ ಅನುದಾನ ನೀಡಬೇಕು; ಬರಪೀಡಿತ ಮಧ್ಯ ಕರ್ನಾಟಕಕ್ಕೆ ನೀರು ಒದಗಿಸಲು ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ ಈ ಹಿಂದೆಯೇ ಘೋಷಿಸಿದ್ದ ₹5,300 ಕೋಟಿ ಬಿಡುಗಡೆಗೂಳಿಸಬೇಕು, ಮೇಕೆದಾಟು ಮತ್ತು ಮಹದಾಯಿ ಯೋಜನೆಗಳಿಗೆ ಅನುಮೋದನೆ ನೀಡಬೇಕು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರ ಗೌರವಧನ ₹5,000 ಮತ್ತು ಅಡುಗೆಯವರು ಮತ್ತು ಸಹಾಯಕರಿಗೆ ₹2,000ಕ್ಕೆ ಹೆಚ್ಚಳಗೊಳಿಸಬೇಕು, ಪ್ರಧಾನ ಮಂತ್ರಿ ಆವಾಜ್ ಯೋಜನೆ ನೆರವನ್ನು ನಗರ ಪ್ರದೇಶದ ಮನೆಗಳಿಗೆ ₹1.5 ಲಕ್ಷದಿಂದ ₹5 ಲಕ್ಷಕ್ಕೆ ಮತ್ತು ಗ್ರಾಮೀಣ ಮನೆಗಳಿಗೆ ₹72 ಸಾವಿರದಿಂದ ₹3 ಲಕ್ಷಕ್ಕೆ ಹೆಚ್ಚಿಸಬೇಕು, ವೃದ್ಧಾಪ್ಯ, ವಿಧವೆಯರು ಮತ್ತು ಅಂಗವಿಕಲರ ಪಿಂಚಣಿ ಹೆಚ್ಚಿಸಬೇಕು ಎಂದು ರಾಜ್ಯ ಸರ್ಕಾರವು ಸಾಲು ಸಾಲು ಬೇಡಿಕೆಗಳನ್ನು ಕೇಂದ್ರದ ಮುಂದೆ ಇಟ್ಟಿತ್ತು. ಆದರೆ, ‘ನೀವು ಏನೇ ಬೇಡಿಕೆ ಮುಂದಿಟ್ಟರೂ ನಾವು ನಮ್ಮಿಷ್ಟದಂತೆ ಏನು ಬೇಕೋ ಅದನ್ನೇ ಮಾಡುತ್ತೇವೆ’ ಎನ್ನುವ ಕೇಂದ್ರದ ವರ್ತನೆಗೆ ಮತ್ತೊಂದು ಬಜೆಟ್ ಸಾಕ್ಷಿಯಾಗಿದೆಯಷ್ಟೆ. ನಮ್ಮ ಮನವಿಗೆ ಕಿವಿಗೊಡದ ಈ ಬಜೆಟ್ ನಮಗೆ ಅಚ್ಚರಿಯನ್ನೇನೂ ನೀಡಿಲ್ಲ; ಆದರೆ, ತನ್ನ ಬೆವರು ಹರಿಸಿ ಕೇಂದ್ರಕ್ಕೆ ತೆರಿಗೆ ನೀಡುವ ಕನ್ನಡಿಗರಿಗೆ ಆಘಾತವನ್ನು ನೀಡಿರುವುದು ಮಾತ್ರ ಸುಳ್ಳಲ್ಲ.

ರಾಜ್ಯದ ಬೇಡಿಕೆಗೆ ಕೇಂದ್ರದ ಮೌನ

ದೇಶದ ಆರ್ಥಿಕ ಶಕ್ತಿಯಲ್ಲಿ ಚಾಲಕ ಸ್ಥಾನದಲ್ಲಿರುವ ಕರ್ನಾಟಕ ತಲಾವಾರು ಆರ್ಥಿಕ ಉತ್ಪಾದಕತೆಯಲ್ಲಿ ಮೊದಲ ಸ್ಥಾನದಲ್ಲಿದೆ. ತೆರಿಗೆ, ಸೆಸ್ ಮುಂತಾದ ರೂಪದಲ್ಲಿ ಕೇಂದ್ರ ಸರ್ಕಾರವು ಕರ್ನಾಟಕದಿಂದ ವಾರ್ಷಿಕ ₹4.5 ಲಕ್ಷ ಕೋಟಿಯಿಂದ ₹5 ಲಕ್ಷ ಕೋಟಿಗಳಷ್ಟು ಸಂಗ್ರಹಿಸುತ್ತದೆ. ಕೇಂದ್ರ ಸರ್ಕಾರಕ್ಕೆ ಅತಿಹೆಚ್ಚು ಹಣ ಸಂದಾಯ ಮಾಡುವ ರಾಜ್ಯಗಳ ಪೈಕಿ ಮೊದಲ ಸ್ಥಾನದಲ್ಲಿರುವ ಕರ್ನಾಟಕ ತೆರಿಗೆ ಪಾಲು ಮತ್ತು ಅನುದಾನ ಪಡೆಯುವಲ್ಲಿ ಕೆಳಗಿರುವುದು ದುರದೃಷ್ಟಕರ. ಹೀಗಾಗಿ 14ನೇ ಹಣಕಾಸು ಆಯೋಗ ಶಿಫಾರಸು ಮಾಡಿದಂತೆ ಶೇ 4.71ಕ್ಕಿಂತ ಹೆಚ್ಚು ತೆರಿಗೆ ಪಾಲನ್ನು ಕರ್ನಾಟಕಕ್ಕೆ ನೀಡಬೇಕು ಹಾಗೂ 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ ₹11,495 ಕೋಟಿ ವಿಶೇಷ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬುದು ರಾಜ್ಯ ಸರ್ಕಾರದ ಒತ್ತಾಯವಾಗಿತ್ತು. ಆದರೆ, ಕರ್ನಾಟಕಕ್ಕೆ ಶೇ 4.13 ರಷ್ಟು ಮಾತ್ರ ತೆರಿಗೆ ಪಾಲು ಹಂಚಿಕೆ ಮಾಡಲಾಗಿದೆ. ಇದರಿಂದಲೇ ಕರ್ನಾಟಕಕ್ಕೆ ವಾರ್ಷಿಕವಾಗಿ ಸುಮಾರು ₹9,000 ಕೋಟಿಯಿಂದ ₹10 ಸಾವಿರ ಕೋಟಿವರೆಗೆ ನಷ್ಟವಾಗಲಿದೆ. 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ ವಿಶೇಷ ಅನುದಾನ ಬಿಡುಗಡೆಗೆ ಸಂಬಂಧಿಸಿಯೂ ಕೇಂದ್ರ ಸರ್ಕಾರ ಎಂದಿನ ಅದೇ ಮೌನ ವಹಿಸಿದೆ.

ಲೇಖಕ: ಕರ್ನಾಟಕದ ಕಂದಾಯ ಸಚಿವ, ರಾಷ್ಟ್ರೀಯ ಜಿಎಸ್‌ಟಿ ಮಂಡಳಿ ಸದಸ್ಯ

.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.