
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಬೇಲದಕುಪ್ಪೆ ಮಹದೇಶ್ವರಸ್ವಾಮಿ ದೇವಸ್ಥಾನವನ್ನು ಪ್ರವಾಸಿ ಕೇಂದ್ರ ಎಂದು ಘೋಷಿಸುವ ರಾಜ್ಯ ಸರ್ಕಾರದ ತೀರ್ಮಾನವು ಸರಿಯಾದುದಲ್ಲ. ಶ್ರದ್ಧೆ–ಭಕ್ತಿಯ ಸ್ಥಳವನ್ನು ಪ್ರವಾಸಿ ಸ್ಥಳವನ್ನಾಗಿಸುವ ಹುಮ್ಮಸ್ಸಿನಲ್ಲಿ ಇರುವ ಸರ್ಕಾರ, ದೇಶದ ಅತ್ಯಂತ ಸೂಕ್ಷ್ಮವಾದ ಪರಿಸರ ವಲಯವೊಂದು ಅಸ್ಥಿರಗೊಳ್ಳುವ ಅಪಾಯವನ್ನು ಗ್ರಹಿಸುತ್ತಿಲ್ಲ. ಮಹದೇಶ್ವರಸ್ವಾಮಿ ದೇವಸ್ಥಾನವು ಪ್ರಕೃತಿ ಮತ್ತು ದೈವದ ನಡುವಿನ ಸಾಮರಸ್ಯವನ್ನು ಸಂಕೇತಿಸುವಂತಿದೆ. ಆದರೆ, ಅದನ್ನು ಪ್ರವಾಸಿ ಕೇಂದ್ರವನ್ನಾಗಿ ಘೋಷಿಸುವ ನಡೆಯು, ಪ್ರಕೃತಿಗೂ ದೈವಕ್ಕೂ ಕೇಡು ಬಗೆಯುವಂತಿದೆ. ಈ ದೇವಸ್ಥಾನವು ದಟ್ಟ ಅರಣ್ಯದ ಹೃದಯಭಾಗದಲ್ಲಿ ಶತಮಾನಗಳಿಂದ ಇದೆ. ಮಹದೇಶ್ವರಸ್ವಾಮಿಯು ತನ್ನ ಏಕಾಂತಕ್ಕೆ ಈ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದ ಎಂಬ ನಂಬಿಕೆ ಇದೆ. ಹುಲಿಯು ಮಹದೇಶ್ವರನ ವಾಹನ ಎಂಬ ನಂಬಿಕೆಯೂ ಇದೆ. ಆದರೆ, ಈ ಪ್ರಾಣಿಯ ಉಳಿವು ಮನುಷ್ಯ ತೋರುವ ಸಂಯಮವನ್ನು ಆಧರಿಸಿ ನಿಂತಿದೆ.
ಮಹದೇಶ್ವರಸ್ವಾಮಿ ದೇವಸ್ಥಾನ ಪ್ರದೇಶವನ್ನು ಪ್ರವಾಸಿ ಕೇಂದ್ರ ಎಂದು ಸರ್ಕಾರವು ಘೋಷಿಸಿದ ಸಂದರ್ಭವೇ ವ್ಯಂಗ್ಯದಂತಿದೆ. ಈ ಘೋಷಣೆ ಮಾಡುವುದಕ್ಕೆ ಕೆಲವೇ ದಿನಗಳ ಹಿಂದೆ, ದೇವಸ್ಥಾನಕ್ಕೆ ಸನಿಹದ ಹಳ್ಳಿಯೊಂದರ ಮೇಲೆ ಹುಲಿಯೊಂದು ದಾಳಿ ನಡೆಸಿತ್ತು. ಅಂದರೆ, ಅರಣ್ಯ ಪ್ರದೇಶದಲ್ಲಿ ಇರುವ ಸ್ಥಳಗಳಲ್ಲಿ ಎಚ್ಚರಿಕೆಯ ಹೆಜ್ಜೆ ಇರಿಸಬೇಕೇ ವಿನಾ ಅಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿಸುವ ಅಗತ್ಯವಿಲ್ಲ ಎಂಬುದನ್ನು ಈ ಘಟನೆ ನೆನಪಿಸುವಂತಿದೆ. ಹುಲಿಗಳು ಹಾಗೂ ಪ್ರವಾಸಿಗರ ದಂಡು ಒಂದಕ್ಕೊಂದು ಪೂರಕ ಅಲ್ಲ. ದೇವಸ್ಥಾನ ಇರುವ ಪ್ರದೇಶವನ್ನು ಪ್ರವಾಸಿ ಕೇಂದ್ರವನ್ನಾಗಿಸುವುದರಿಂದ ಮಾನವ–ವನ್ಯಜೀವಿ ಸಂಘರ್ಷವು ಇನ್ನಷ್ಟು ಹೆಚ್ಚಾಗುತ್ತದೆ. ವರ್ಷಗಳಿಂದ ನಡೆದುಬಂದಿರುವ ವನ್ಯಜೀವಿ ಸಂರಕ್ಷಣಾ ಕೆಲಸಗಳಿಗೆ ಹಿನ್ನಡೆ ಆದಂತಾಗುತ್ತದೆ. ಬಂಡೀಪುರದ ಕೇಂದ್ರ ಭಾಗವು ಅಭಿವೃದ್ಧಿಗಾಗಿ ಕಾದಿರುವ ಖಾಲಿ ಪ್ರದೇಶ ಅಲ್ಲ. ಅದು ದೇಶದಲ್ಲಿ ಹುಲಿಗಳಿಗೆ ಇರುವ ಅತ್ಯಂತ ಮುಖ್ಯವಾದ ಆವಾಸಸ್ಥಾನಗಳ ಪೈಕಿ ಒಂದು. ಅಲ್ಲಿನ ಕೆರೆಗಳು, ತೊರೆಗಳು ಹಾಗೂ ಸಸ್ಯಸಂಪತ್ತು ಬಹಳ ಸೂಕ್ಷ್ಮವಾದ ಸಮತೋಲನವೊಂದನ್ನು ಕಾಯ್ದುಕೊಂಡಿವೆ. ಈ ಪ್ರದೇಶವನ್ನು ವಾಹನಗಳ ನಿರಂತರ ಸದ್ದುಗದ್ದಲ ಹಾಗೂ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ತೆರೆಯುವುದು ವನ್ಯಪ್ರಾಣಿಗಳು ಈಗಾಗಲೇ ಅನುಭವಿಸುತ್ತಿರುವ ಒತ್ತಡವನ್ನು ಹೆಚ್ಚಿಸುತ್ತದೆ. ಮುಖ್ಯವಾದ ಸಂಗತಿಯೆಂದರೆ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಅನುಮೋದನೆ ನೀಡಿರುವ ಹುಲಿ ಸಂರಕ್ಷಣಾ ಯೋಜನೆಯು ಹೇಳುವ ಪ್ರಕಾರ, ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರವಾಸೋದ್ಯಮ ಅಥವಾ ನಿರ್ಮಾಣ ಚಟುವಟಿಕೆಗಳು ನಿಗದಿತ ಪ್ರವಾಸಿ ವಲಯಗಳಲ್ಲಿ ಮಾತ್ರ ಆಗಬೇಕು. ಬೇಲದಕುಪ್ಪೆಯು ಈ ಪ್ರವಾಸಿ ವಲಯದ ಒಳಗೆ ಇಲ್ಲ. ಬಂಡೀಪುರ ಹುಲಿ ಸಂರಕ್ಷಣಾ ಯೋಜನೆಯು ಇಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸುವುದಿಲ್ಲ. ಹೀಗಾಗಿ, ಈ ದೇವಸ್ಥಾನವನ್ನು ಪ್ರವಾಸಿ ಕೇಂದ್ರ ಎಂದು ಘೋಷಿಸುವುದು ಪರಿಸರದ ದೃಷ್ಟಿಯಿಂದ ಅಪಾಯಕಾರಿ ಮಾತ್ರವಲ್ಲದೆ, ಕಾನೂನಿನ ದೃಷ್ಟಿಯಿಂದಲೂ ತಪ್ಪು ನಡೆ. ಬಂಡೀಪುರದ ಕೋರ್ ವಲಯದಲ್ಲಿ ಮನುಷ್ಯನ ಹಸ್ತಕ್ಷೇಪ ಬೇಡ ಎಂಬ ಎಚ್ಚರಿಕೆಯ ಮಾತನ್ನು ‘ಎನ್‌ಟಿಸಿಎ’ ಹೇಳುತ್ತಲೇ ಇದೆ. ಅದರ ಕಿವಿಮಾತನ್ನು ಉಪೇಕ್ಷೆ ಮಾಡುವುದು ಪರಿಸರದ ನಿಯಮ ಹಾಗೂ ಕಾನೂನಿನ ಉದ್ದೇಶಪೂರ್ವಕ ಉಲ್ಲಂಘನೆ.
ದೇವಸ್ಥಾನದ ವಾರ್ಷಿಕ ಜಾತ್ರೆಯು ಅಲ್ಲಿನ ಪರಿಸರಕ್ಕೆ ಬಹಳಷ್ಟು ಧಕ್ಕೆ ತರುತ್ತಿದೆ. ಅಲ್ಲಿಗೆ ಸಹಸ್ರಾರು ಮಂದಿ ವಾಹನಗಳಲ್ಲಿ, ಎತ್ತಿನಬಂಡಿಗಳಲ್ಲಿ ಬರುತ್ತಾರೆ. ಅಲ್ಲಿ ಪ್ಲಾಸ್ಟಿಕ್ ಕಸ ಎಸೆಯುತ್ತಾರೆ; ಅಲ್ಲಿನ ಜೀವಸಂಕುಲದ ನೆಮ್ಮದಿಗೆ ಭಂಗ ತರುತ್ತಾರೆ. ಇಂತಹ ಚಟುವಟಿಕೆಗಳಿಗೆ ಒಂದು ಸಾಂಸ್ಥಿಕ ಸ್ವರೂಪವನ್ನು ಒದಗಿಸಿಕೊಡುವುದು ಬಹಳ ದೊಡ್ಡ ಪರಿಸರ ದುರಂತಕ್ಕೆ ನಾಂದಿಹಾಡಿದಂತೆ ಆಗುತ್ತದೆ. ರಾಜ್ಯದ ಅರಣ್ಯ ಪ್ರದೇಶವನ್ನು ರಕ್ಷಿಸುವ ವಿಚಾರದಲ್ಲಿ ಸಚಿವ ಈಶ್ವರ ಖಂಡ್ರೆ ಅವರು ಮುಂದಾಲೋಚನೆಯಿಂದ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ರಾಜ್ಯದ ಹುಲಿ ಕಾರಿಡಾರ್ ರಕ್ಷಣೆ ಹಾಗೂ ಅತಿಕ್ರಮಣಕ್ಕೆ ಒಳಗಾಗಿರುವ ಅರಣ್ಯಭೂಮಿಯನ್ನು ವಶಕ್ಕೆ ಪಡೆಯುವ ಅವರ ಪ್ರಯತ್ನಗಳನ್ನು ಪರಿಸರವಾದಿಗಳು ಶ್ಲಾಘಿಸಿದ್ದಾರೆ. ಅವರು ಅರಣ್ಯ ಸಂರಕ್ಷಣೆಗೆ ತೆಗೆದುಕೊಂಡಿರುವ ಕ್ರಮವನ್ನು ಮುಂದಕ್ಕೆ ಒಯ್ಯಬೇಕು. ಜನಪ್ರಿಯತೆಗಾಗಿ ಬಂಡೀಪುರವನ್ನು ಬಲಿಕೊಡಲು ಬಿಡಬಾರದು. ಮಹದೇಶ್ವರಸ್ವಾಮಿ ದಟ್ಟ ಕಾನನವನ್ನು ಪ್ರತಿನಿಧಿಸುವ ದೇವರೂ ಹೌದು. ಆ ಸ್ವಾಮಿಯ ನಿಜವಾದ ಅರ್ಚನೆಯೆಂದರೆ, ಅರಣ್ಯವನ್ನು ಕಾಪಾಡುವುದು; ಅದನ್ನು ಪ್ರವಾಸೋದ್ಯಮದ ಹೆಸರಿನಲ್ಲಿ ದುರ್ಬಳಕೆ ಮಾಡುವುದಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.