ADVERTISEMENT

ಸಂಪಾದಕೀಯ | ಸಾಂಸ್ಕೃತಿಕ ಸಂಸ್ಥೆಗಳಿಗೆ ಅಂಕುಶ: ಸರ್ವಾಧಿಕಾರಿ ಧೋರಣೆಯ ಲಕ್ಷಣ

ಸಂಪಾದಕೀಯ
Published 22 ಡಿಸೆಂಬರ್ 2025, 22:30 IST
Last Updated 22 ಡಿಸೆಂಬರ್ 2025, 22:30 IST
ಸಂಪಾದಕೀಯ
ಸಂಪಾದಕೀಯ   

ಇತ್ತೀಚೆಗಷ್ಟೇ ಮುಕ್ತಾಯವಾದ ‘ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಕೆಲವು ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎದುರಾಗಿರುವ ಆತಂಕಗಳ ಕುರಿತ ಪ್ರಶ್ನೆಗಳನ್ನು ಮತ್ತೆ ಮುನ್ನೆಲೆಗೆ ತರುವಂತಿದೆ. ಈ ಕ್ರಮ, ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸರ್ಕಾರದ ಅನಗತ್ಯ ಹಸ್ತಕ್ಷೇಪಕ್ಕೆ ನಿದರ್ಶನವೂ ಆಗಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಬೇಕಿದ್ದ ಕೆಲವು ಸಿನಿಮಾಗಳ ಪ್ರದರ್ಶನವನ್ನು ತಡೆಹಿಡಿಯುವಂತೆ ಕೇರಳ ಸರ್ಕಾರಕ್ಕೆ ಸೂಚಿಸಿದೆ. ಇದರಿಂದಾಗಿ 19 ಸಿನಿಮಾಗಳಿಗೆ ಸೆನ್ಸಾರ್ ವಿನಾಯಿತಿ ನಿರಾಕರಿಸಲಾಗಿದೆ. ಇವುಗಳಲ್ಲಿ ಕೆಲವು ಸಿನಿಮಾಗಳಿಗೆ ನಂತರದಲ್ಲಿ ಅನುಮತಿ ದೊರೆತರೂ, ಚಿತ್ರೋತ್ಸವದ ಒಟ್ಟಾರೆ ವೇಳಾಪಟ್ಟಿ ಅಸ್ತವ್ಯಸ್ತಗೊಂಡಿತು. ಸಿನಿಮಾಗಳ ಪ್ರದರ್ಶನಕ್ಕೆ ತಡೆಯೊಡ್ಡುವ ಕ್ರಮ, ಸೆನ್ಸಾರ್‌ಶಿಪ್‌ ಪ್ರವೃತ್ತಿಯು ಹೊಸ ಕ್ಷೇತ್ರಗಳನ್ನು ಕಂಡುಕೊಳ್ಳಲು ನಡೆಸಿದ ಹುಡುಕಾಟದಂತಿದೆ. ಸೆ‌ನ್ಸಾರ್ ವಿನಾಯಿತಿ ನಿರಾಕರಣೆಯ ಕ್ರಮವನ್ನು ಧಿಕ್ಕರಿಸುವುದಾಗಿ ಹೇಳಿದ ಕೇರಳ ಸರ್ಕಾರ, ವೇಳಾಪಟ್ಟಿ ಪ್ರಕಾರ ಎಲ್ಲ ಸಿನಿಮಾಗಳನ್ನು ಪ್ರದರ್ಶಿಸುವಂತೆ ಆಯೋಜಕರಿಗೆ ಸೂಚಿಸಿತ್ತು. ಆದರೂ ಕೆಲವು ಸಿನಿಮಾಗಳ ಪ್ರದರ್ಶನವನ್ನು ಅಂತಿಮವಾಗಿ ರದ್ದುಗೊಳಿಸಲಾಯಿತು. ಅನುಮತಿ ನಿರಾಕರಣೆಯನ್ನು ಆಡಳಿತಾತ್ಮಕ ಕ್ರಮ ಎಂದು ಕೇಂದ್ರ ಸಚಿವಾಲಯ ಹೇಳಿದ್ದರೂ, ಇದು ರಾಜಕೀಯಪ್ರೇರಿತ ಪ್ರಕ್ರಿಯೆ ಎಂದು ವಿಶ್ಲೇಷಿಸಲಾಗುತ್ತಿದೆ‌. ಕೇಂದ್ರ ಸರ್ಕಾರದ ತೀರ್ಮಾನವನ್ನು ಕಟುವಾಗಿ ಟೀಕಿಸಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವೈವಿಧ್ಯವನ್ನು ಹಾಗೂ ಭಿನ್ನ ಧ್ವನಿಗಳನ್ನು ಹತ್ತಿಕ್ಕುವ ಸಂಘ ಪರಿವಾರದ ಅಜೆಂಡಾವನ್ನು ಹೇರುವ ಮತ್ತೊಂದು ಪ್ರಯತ್ನ ಇದೆಂದು ಟೀಕಿಸಿದ್ದಾರೆ. ವಿವಿಧ ಚಿತ್ರೋತ್ಸವಗಳಲ್ಲಿ ಭಾಗವಹಿಸಿರುವ ಸಿನಿಮಾಗಳಿಗೆ ಕೇರಳ ದಲ್ಲಿನ ಉತ್ಸವದಲ್ಲಿ ಪ್ರದರ್ಶನಗೊಳ್ಳಲು ಅನುಮತಿ ನಿರಾಕರಿಸಿರುವುದಕ್ಕೆ ನ್ಯಾಯ ಯುತ ಕಾರಣಗಳನ್ನು ಕೇಂದ್ರ ಸರ್ಕಾರ ನೀಡಿಲ್ಲ. ಹಾಸ್ಯಾಸ್ಪದ, ತಪ್ಪು ಹಾಗೂ ಅವಿವೇಕದ ನಿರ್ಧಾರ ಸರ್ಕಾರದ್ದಾಗಿದೆ.

ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾದ ಸಿನಿಮಾಗಳಲ್ಲಿ, ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲೊಂದಾದ ಹಾಗೂ ಈ ವರ್ಷ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ‘ಬ್ಯಾಟಲ್‌ಷಿಪ್ ಪೊಟೆಂಕಿನ್’ ಸೇರಿದೆ. ಅನುಮತಿ ದೊರೆಯದಿರುವ ಕೆಲವು ಪ್ಯಾಲೆಸ್ಟೀನ್ ಸಿನಿಮಾಗಳನ್ನು, ಅವು ಪ್ಯಾಲೆಸ್ಟೀನ್ ಎನ್ನುವ ಕಾರಣಕ್ಕಾಗಿ ಅವಕೃಪೆಗೆ ಒಳಗಾಗಿರಬಹುದು ಎನ್ನುವ ಅನುಮಾನವಿದೆ. ನಿರಾಕರಣೆಗೆ ಒಳಗಾಗಿರುವ ಅರ್ಜೆಂಟೀನಾದ, 1968ರ ರಾಜಕೀಯ ಸಾಕ್ಷ್ಯಚಿತ್ರ ‘ದಿ ಅವರ್ ಆಫ್ ದಿ ಫರ್ನೇಸಸ್’ ಕ್ರಾಂತಿಕಾರಿ ಚಳವಳಿಯ ಕಥಾವಸ್ತು ಒಳಗೊಂಡಿದೆ. ‘ಬೀಫ್’ ಹೆಸರಿನ ಸ್ಪ್ಯಾನಿಶ್ ಚಿತ್ರವೂ ಪ್ರದರ್ಶನವಂಚಿತವಾಗಿದೆ‌. ಬೀಫ್ ಎನ್ನುವುದೀಗ ಆಕ್ಷೇಪಾರ್ಹ ಆಹಾರವಷ್ಟೇ ಆಗಿರದೆ, ಅಸ್ವೀಕೃತ ಪದವೂ ಆಗಿದೆ. ಚೋದ್ಯದ ಸಂಗತಿಯೆಂದರೆ, ಈ ಸಿನಿಮಾದ ಕಥಾವಸ್ತು ಆಹಾರಕ್ಕೆ ಸಂಬಂಧಿಸಿದ್ದಾಗಿರದೆ, ಹಿಪ್ ಹಾಪ್ ಸಂಸ್ಕೃತಿ ಕುರಿತದ್ದಾಗಿದೆ. ಸಿನಿಮಾ ನೋಡದೆಯೇ ನಿಷೇಧ ಹೇರುವ ಮನಃಸ್ಥಿತಿಯ ಸಂದರ್ಭದಲ್ಲಿ ಚಾರ್ಲಿ ಚಾಪ್ಲಿನ್‌ರ ಅಭಿಜಾತ ಸಿನಿಮಾ ‘ಗ್ರೇಟ್ ಡಿಕ್ಟೇಟರ್’ ಪ್ರದರ್ಶನಗೊಳ್ಳುವ ಸಾಧ್ಯತೆಯೇ ಇಲ್ಲ. ದೇಶದ ಭದ್ರತೆ ಹಾಗೂ ಸಮಗ್ರತೆಗೆ ಧಕ್ಕೆ ಉಂಟಾಗಬಹುದಾದ ಸಂದರ್ಭ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಎದುರಾಗಬಹುದಾದ ಸಂದರ್ಭದಲ್ಲಿ ಸಿನಿಮಾವೊಂದರ ಪ್ರದರ್ಶನಕ್ಕೆ ಅನುಮತಿ ನಿರಾಕರಿಸುವ ಅಧಿಕಾರ ಸಚಿವಾಲಯಕ್ಕಿದೆ. ಯಾವ ಸಕಾರಣಗಳೂ ಇಲ್ಲದೆ ಹೇರಲಾದ ನಿರ್ಬಂಧವು ಪೂರ್ವಗ್ರಹಗಳಿಂದ ಕೂಡಿದುದಾಗಿದೆ ಹಾಗೂ ವಿರೋಧ ಪಕ್ಷ ಆಡಳಿತದಲ್ಲಿರುವ ರಾಜ್ಯದಲ್ಲಿನ ಪ್ರತಿಷ್ಠಿತ ಸಾಂಸ್ಕೃತಿಕ ಉತ್ಸವವೊಂದನ್ನು ಅಸ್ತವ್ಯಸ್ತಗೊಳಿಸುವ ಉದ್ದೇಶ ಹೊಂದಿರುವಂತಿದೆ.

ಸಿನಿಮಾ ಮಾತ್ರವಲ್ಲದೆ, ಸಾಹಿತ್ಯಕ್ಕೆ ಸಂಬಂಧಿಸಿದಂತೆಯೂ ಕೇಂದ್ರ ಸರ್ಕಾರ ಹಸ್ತಕ್ಷೇಪ ನಡೆಸಲು ಮುಂದಾಗಿದೆ. ಡಿಸೆಂಬರ್‌ 18ರಂದು ಪ್ರಕಟಗೊಳ್ಳಬೇಕಾಗಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿಯ 2025ರ ಸಾಲಿನ ವಾರ್ಷಿಕ ಪ್ರಶಸ್ತಿಗಳ ಘೋಷಣೆಯನ್ನು ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದೆ. ಈ ಮುಂದೂಡುವಿಕೆಗೆ, ತನ್ನ ಅನುಮೋದನೆಯಿಲ್ಲದೆ ಪ್ರಶಸ್ತಿಗಳನ್ನು ಪ್ರಕಟಿಸಬಾರದು ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ನೀಡಿದ ನಿರ್ದೇಶನ ಕಾರಣವಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಸ್ವಾಯತ್ತ ಸಂಸ್ಥೆಯಾಗಿದ್ದು, ಇದುವರೆಗೂ ಅದರ ಚಟುವಟಿಕೆಗಳಲ್ಲಿ ಹಾಗೂ ಪ್ರಶಸ್ತಿ ಪ್ರಕ್ರಿಯೆಯಲ್ಲಿ ಸರ್ಕಾರ ಮೂಗು ತೂರಿಸುತ್ತಿರಲಿಲ್ಲ. ಇದೇ ಮೊದಲ ಬಾರಿಗೆ ಅಕಾಡೆಮಿಯ ಪ್ರಶಸ್ತಿ ಪ್ರಕ್ರಿಯೆಯಲ್ಲಿ ಸರ್ಕಾರ ಹಸ್ತಕ್ಷೇಪ ನಡೆಸಿದೆ. ಸಾಹಿತ್ಯ ಮತ್ತು ಸಿನಿಮಾದಂಥ ಕಲಾಪ್ರಕಾರಗಳಲ್ಲಿ ನಡೆಸುವ ಹಸ್ತಕ್ಷೇಪ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಸುವ ಹಲ್ಲೆ ಹಾಗೂ ಕಲಾಸ್ಫೂರ್ತಿಗೆ ವಿರುದ್ಧವಾದುದು. ಸ್ವಾಯತ್ತ ಸಂಸ್ಥೆಗಳು ಹಾಗೂ ಕಲಾಪ್ರಕಾರಗಳ ಮೇಲೆ ಹತೋಟಿ ಸಾಧಿಸುವ ಸರ್ಕಾರದ ಪ್ರಯತ್ನ ಸರ್ವಾಧಿಕಾರಿ ಧೋರಣೆಯ ಲಕ್ಷಣವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.