
ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಒಕ್ಕೂಟ ತತ್ತ್ವಕ್ಕೆ ಎಸಗುತ್ತಿರುವ ಅಪಚಾರವಾಗಿದೆ. ದೇಶದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿರುವ ರಾಜ್ಯಕ್ಕೆ ಕೇಂದ್ರದಿಂದ ನ್ಯಾಯಬದ್ಧವಾಗಿ ದೊರೆಯಬೇಕಾದ ಪಾಲನ್ನು ನೀಡದೆ ವಂಚಿಸಲಾಗುತ್ತಿದೆ. ಎಲ್ಲ ರಾಜ್ಯಗಳನ್ನು ಸಮಾನ ದೃಷ್ಟಿಯಿಂದ ನೋಡಬೇಕಾದ ಕೇಂದ್ರ ಸರ್ಕಾರ, ತನ್ನ
ಮಿತ್ರಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಭರಪೂರ ಅನುದಾನ ನೀಡುತ್ತಿದ್ದು, ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿರುವ ಕರ್ನಾಟಕಕ್ಕೆ ದೊರಕಬೇಕಾದ ಪಾಲು ನೀಡುವಲ್ಲಿ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ. ಕರ್ನಾಟಕದ 24 ಇಲಾಖೆಗಳ ಪ್ರಸ್ತಾವಗಳು ಅನುದಾನಕ್ಕಾಗಿ ಹಾಗೂ ಅನುಮೋದನೆಗಾಗಿ ವರ್ಷಗಳಿಂದ ಕೇಂದ್ರದ ವಿವಿಧ ಸಚಿವಾಲಯಗಳ ಮುಂದಿವೆ. ಇವುಗಳಲ್ಲಿ ಒಂದೇ ಒಂದು ಪ್ರಸ್ತಾವಕ್ಕೂ ಇತ್ತೀಚೆಗೆ ಅನುಮೋದನೆ ಸಿಕ್ಕಿಲ್ಲ. ಕಳೆದ 17 ತಿಂಗಳುಗಳಲ್ಲಿ ರಾಜ್ಯದ ಎರಡು ಯೋಜನೆಗಳಿಗಷ್ಟೇ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ₹3,432 ಕೋಟಿ ಮೊತ್ತದ ಬಳ್ಳಾರಿ–ಚಿಕ್ಕಜಾಜೂರು ರೈಲು ಮಾರ್ಗ ಹಾಗೂ ಬೆಂಗಳೂರಿನ ನಮ್ಮ ಮೆಟ್ರೊ ಮೂರನೇ ಹಂತದ ಯೋಜನೆಗೆ ಕೇಂದ್ರದಿಂದ ಹಸಿರುನಿಶಾನೆ ಸಿಕ್ಕಿದೆ. ಅದರಲ್ಲೂ, ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿದ 19 ತಿಂಗಳು ಕಳೆದ ಬಳಿಕ ಮೆಟ್ರೊ
ಯೋಜನೆಗೆ ಅನುಮತಿ ದೊರೆತಿದೆ. ಇದಕ್ಕೆ ತದ್ವಿರುದ್ಧವಾಗಿ, ಆಂಧ್ರಪ್ರದೇಶ ಹಾಗೂ ಬಿಹಾರದ ಅಭಿವೃದ್ಧಿ ಯೋಜನೆ ಗಳಿಗೆ ತಲಾ ₹1 ಲಕ್ಷ ಕೋಟಿಗೂ ಹೆಚ್ಚಿನ ಹಣ ಕೇಂದ್ರದಿಂದ ದೊರಕಿದೆ. ‘2024ರ ಜೂನ್‌ನಿಂದ ಇಲ್ಲಿಯವರೆಗೆ ಆಂಧ್ರಪ್ರದೇಶಕ್ಕೆ ಕೇಂದ್ರ ಸರ್ಕಾರ ₹3 ಲಕ್ಷ ಕೋಟಿ ಆರ್ಥಿಕ ಸಹಾಯ ನೀಡಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು.
ಕೇಂದ್ರದ ಎನ್‌ಡಿಎ ಮೈತ್ರಿಕೂಟದ ಸರ್ಕಾರದಲ್ಲಿ ಕರ್ನಾಟಕದ ಜೆಡಿಎಸ್ ಕೂಡ ಪಾಲುದಾರ ಪಕ್ಷವಾಗಿದೆ ಹಾಗೂ ಆ ಪಕ್ಷದ ಎಚ್.ಡಿ. ಕುಮಾರಸ್ವಾಮಿ ಸಂಪುಟ ದರ್ಜೆ ಸಚಿವರಾಗಿದ್ದಾರೆ. ಅವರು ಸ್ವಯಂ ಆಸಕ್ತಿ ವಹಿಸಿ, ಭದ್ರಾವತಿಯ ವಿಶ್ವೇಶ್ವರಾಯ ಉಕ್ಕಿನ ಕಾರ್ಖಾನೆಯ ಪುನಶ್ಚೇತನಕ್ಕೆ ₹4,000 ಕೋಟಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಹಲವು ತಿಂಗಳು ಕಳೆದಿದ್ದರೂ ಇದುವರೆಗೆ ಅದಕ್ಕೆ ಫಲ ಸಿಕ್ಕಿಲ್ಲ. ಆದರೆ, ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆಯ ಪುನರುಜ್ಜೀವನಕ್ಕೆ ಕೇಂದ್ರ ಸರ್ಕಾರ ಕಳೆದ ವರ್ಷವೇ ದೊಡ್ಡ ಪ್ಯಾಕೇಜ್ ಪ್ರಕಟಿಸಿದೆ. ಕರ್ನಾಟಕ ರಾಜ್ಯಕ್ಕೆ 15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ ಆರೋಗ್ಯ ಅನುದಾನವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎರಡು ವರ್ಷಗಳಿಂದ ಬಿಡುಗಡೆ ಮಾಡಿಲ್ಲ. ಜಲಜೀವನ್ ಮಿಷನ್ ಯೋಜನೆಯಲ್ಲೂ ಕೇಂದ್ರದ ಪಾಲು ₹4,574 ಕೋಟಿ ಬರಬೇಕಿದೆ. ವಿಪತ್ತು ಪರಿಹಾರ ಅನುದಾನ, ಕೇಂದ್ರ ಪ್ರಾಯೋಜಿತ ಯೋಜನೆಗಳ ಪಾಲು, ಮೂಲಸೌಕರ್ಯ ಯೋಜನೆಗಳಿಗೆ ಒದಗಿಸಬೇಕಾದ ನೆರವಿಗೆ ಸಂಬಂಧಿಸಿದಂತೆಯೂ ಕರ್ನಾಟಕ ಕಡೆಗಣನೆಗೆ ಒಳಗಾಗಿರುವ ನಿದರ್ಶನಗಳೇ ಹೆಚ್ಚು. ಈ ನಿರ್ಲಕ್ಷ್ಯ ಹಾಗೂ ರಾಜ್ಯದ ಅಭಿವೃದ್ಧಿ ಯೋಜನೆಗಳ ಕಡೆಗಣನೆಗೆ ಕೇಂದ್ರ
ಸರ್ಕಾರದ ರಾಜಕೀಯ ಧೋರಣೆ ಕಾರಣವಾಗಿರುವಂತೆಯೇ, ರಾಜ್ಯವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳ ಲೋಪವೂ ಕಾರಣವಾಗಿದೆ. ಸರ್ಕಾರದ ಪ್ರಸ್ತಾವಗಳ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂವಹನ ನಡೆಸುವುದರಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ತಮ್ಮ ಪಕ್ಷದ ನಾಯಕರ ಮನವೊಲಿಸಿ ಹಣ ತರಬೇಕಾದ, ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿ ಸಂಸದರು, ಸಚಿವರು ಕೂಡ ಹೊಣೆಗೇಡಿತನದಿಂದ ವರ್ತಿಸುತ್ತಿದ್ದಾರೆ. ಕರ್ನಾಟಕಕ್ಕೆ ಅನ್ಯಾಯವಾದರೂ ಪಕ್ಷವನ್ನು ಪ್ರಶ್ನಿಸದಿರುವ ಜನಪ್ರತಿನಿಧಿಗಳ ಧೋರಣೆ ರಾಜ್ಯಕ್ಕೂ, ಮತದಾರರಿಗೂ ಮಾಡುತ್ತಿರುವ ವಿಶ್ವಾಸದ್ರೋಹ.
ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ದೇಶದ ಮುಂಚೂಣಿ ರಾಜ್ಯಗಳಲ್ಲೊಂದಾಗಿದೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಉತ್ಪಾದನಾ ವಲಯಗಳ ಮೂಲಕ ಕರ್ನಾಟಕದಿಂದ ಗಣನೀಯ ವರಮಾನ ಕೇಂದ್ರ ಸರ್ಕಾರಕ್ಕೆ ದೊರೆಯುತ್ತಿದೆ. ಆದರೆ, ಇದಕ್ಕೆ ಪ್ರತಿಯಾಗಿ ರಾಜ್ಯದ ಮೂಲಸೌಕರ್ಯ, ನೀರಾವರಿ, ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೆ ನೆರವು ನೀಡಲು ಕೇಂದ್ರ ಚೌಕಾಸಿ ನಡೆಸುತ್ತಿದೆ. ಈ ಧೋರಣೆ, ತೆರಿಗೆ ಸಂಗ್ರಹದಲ್ಲಿ ದೊಡ್ಡ ಸಾಧನೆ ತೋರಿದ ರಾಜ್ಯಗಳನ್ನು ಉತ್ತೇಜಿಸುವ ಬದಲು ಶಿಕ್ಷಿಸುವಂತಿದೆ. ಕೇಂದ್ರ ಸರ್ಕಾರ ನೀಡುವ ಅನುದಾನ ಕರುಣೆ ಆಗಿರದೆ, ರಾಜ್ಯಕ್ಕೆ ಸಂವಿಧಾನಬದ್ಧವಾಗಿ ದೊರೆಯಬೇಕಾದ ಪಾಲಾಗಿದೆ. ಈ ಪಾಲನ್ನು ವಂಚಿಸುವುದು ರಾಜ್ಯವನ್ನು ಆರ್ಥಿಕ ಬಿಕ್ಕಟ್ಟಿಗೆ ದೂಡುವ ಪ್ರಯತ್ನವಾಗಿರುವಂತೆಯೇ, ಒಕ್ಕೂಟ ವ್ಯವಸ್ಥೆಯ ಅಡಿಪಾಯವನ್ನು ಶಿಥಿಲಗೊಳಿಸುವ ಪ್ರಯತ್ನವೂ ಆಗಿದೆ. ಗಣತಂತ್ರ ವ್ಯವಸ್ಥೆಯಲ್ಲಿ ಅಪನಂಬಿಕೆ ಉಂಟಾಗುವಂತೆ ಕೇಂದ್ರ ಸರ್ಕಾರ ನಡೆದುಕೊಳ್ಳಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.