ADVERTISEMENT

ಸಂಪಾದಕೀಯ | ದೆಹಲಿಯಲ್ಲಿ ಸ್ಫೋಟ: ಹೇಯಕೃತ್ಯ; ಸುರಕ್ಷತೆ ಸರ್ಕಾರದ ಆದ್ಯತೆಯಾಗಲಿ

ಸಂಪಾದಕೀಯ
Published 11 ನವೆಂಬರ್ 2025, 19:30 IST
Last Updated 11 ನವೆಂಬರ್ 2025, 19:30 IST
...
...   
ದೆಹಲಿಯಲ್ಲಿ ನಡೆದಿರುವ ಕೃತ್ಯವು ಭಯೋತ್ಪಾದನೆಯ ಅಪಾಯ ಇನ್ನೂ ಇದೆ ಎನ್ನುವುದರ ಸಂಕೇತ. ಆಂತರಿಕ ಭದ್ರತೆ ಮತ್ತು ಗುಪ್ತಚರ ವೈಫಲ್ಯದ ಬಗ್ಗೆ ಅನುಮಾನ ಮೂಡಿಸಿದೆ.

ದೆಹಲಿಯ ಕೆಂಪು ಕೋಟೆಯ ಬಳಿ ಕಾರೊಂದರಲ್ಲಿ ಸಂಭವಿಸಿದ ಸ್ಫೋಟದಿಂದ 12 ಜನ ಸಾವನ್ನಪ್ಪಿ, 20ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆಯು ಭಯೋತ್ಪಾದನೆಯ ಭೀತಿಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಈ ಹೇಯಕೃತ್ಯವು, ಆಂತರಿಕ ಭದ್ರತೆಯ ವಿಷಯವಾಗಿ ಕಳವಳ ಪಡುವಂತೆಯೂ ಮಾಡಿದೆ. ಇದೊಂದು ಆತ್ಮಹತ್ಯಾ ದಾಳಿಯಾಗಿತ್ತು ಎನ್ನುವುದು ಈಗ ನಿಚ್ಚಳವಾಗಿದ್ದು, ಸಂಚುಕೋರರಲ್ಲಿ ಒಬ್ಬನನ್ನು ಡಾ. ಉಮರ್‌ ನಬಿ ಎಂದು ಗುರ್ತಿಸಲಾಗಿದೆ. ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿರುವ ಜನದಟ್ಟಣೆ ಪ್ರದೇಶದಲ್ಲಿ ಸಂಭವಿಸಿದ ಈ ಘಟನೆಯು ಒಂದು ಭಯೋತ್ಪಾದನೆಯ ದಾಳಿಯಾಗಿತ್ತು ಎನ್ನುವ ಸಂಕೇತಗಳು ಸ್ಪಷ್ಟವಾಗಿ ಗೋಚರಿಸಿವೆ. ಕೃತ್ಯ ನಡೆಸಲು ಆಯ್ಕೆ ಮಾಡಿಕೊಂಡ ಸ್ಥಳ ಮತ್ತು ಸಮಯವನ್ನು ಗಮನಿಸಿದಾಗ, ಜನರನ್ನು ಕೊಲ್ಲುವ, ಸಾಧ್ಯವಾದಷ್ಟು ಹಾನಿ ಉಂಟು ಮಾಡುವ ಮತ್ತು ಗರಿಷ್ಠ ಪ್ರಮಾಣದಲ್ಲಿ ಸಾರ್ವಜನಿಕ ಗಮನವನ್ನು ಸೆಳೆಯುವ ಉದ್ದೇಶ ಇದರ ಹಿಂದಿತ್ತು ಎನ್ನುವುದು ಸುಸ್ಪಷ್ಟ. ಯಾವುದೇ ಭಯೋತ್ಪಾದನಾ ಕೃತ್ಯದ ಮುಖ್ಯ ಉದ್ದೇಶವೂ ಇದೇ ಆಗಿರುತ್ತದೆ. ಕೆಂಪು ಕೋಟೆಯು ಭಾರತದ ಪರಂಪರೆಯ ಸಂಕೇತವಾಗಿದ್ದು, ಅದರ ಅಕ್ಕಪಕ್ಕದ ಪ್ರದೇಶಗಳು ಸದಾ ಜನದಟ್ಟಣೆಯಿಂದ ಕೂಡಿರುತ್ತವೆ. ಅಲ್ಲಿ ನಡೆಯುವ ಇಂತಹ ಕೃತ್ಯದ ಪರಿಣಾಮವು ಆ ಪ್ರದೇಶಗಳನ್ನಷ್ಟೇ ಅಲ್ಲದೆ ಅವುಗಳ ಆಚೆಗೂ ತುಂಬಾ ವ್ಯಾಪಕವಾಗಿ ಪ್ರಭಾವವನ್ನು ಉಂಟು ಮಾಡುವಂಥದ್ದಾಗಿರುತ್ತದೆ.

ಸಂಚುಕೋರರು ಹೊಂದಿದ್ದ ಸಂಪರ್ಕ ಹಾಗೂ ಸಂಬಂಧಗಳನ್ನು ಗುರ್ತಿಸುವಲ್ಲಿ ತನಿಖಾ ತಂಡಗಳು ಈಗಾಗಲೇ ಯಶಸ್ವಿಯಾಗಿವೆ. ತನಿಖೆಯು ಪ್ರಗತಿ ಸಾಧಿಸಿದಂತೆ, ಈ ಕೃತ್ಯದ ಹಿಂದಿರುವ ಜಾಲ, ಅದರ ವ್ಯಾಪ್ತಿ ಮತ್ತು ಹಿಂದಿನ ಪಿತೂರಿ ಸಂಪೂರ್ಣ ಬಯಲಾಗಲಿದೆ. ದೆಹಲಿಗೆ ಹತ್ತಿರದಲ್ಲಿರುವ ಫರೀದಾಬಾದ್‌ನಲ್ಲಿ ಭಾನುವಾರ ಪೊಲೀಸರು ಅಪಾರ ಪ್ರಮಾಣದ ಸ್ಫೋಟಕ ಮತ್ತು ಶಸ್ತ್ರಾಸ್ತ್ರ ವಶಪಡಿಸಿಕೊಂಡ ಘಟನೆಗೂ ಕಾರಿನಲ್ಲಿ ಸಂಭವಿಸಿದ ಸ್ಫೋಟ ಕೃತ್ಯಕ್ಕೂ ಸಂಬಂಧ ಇರುವುದು ಮೇಲ್ನೋಟಕ್ಕೆ ಸ್ಪಷ್ಟ. ತನಿಖೆಯ ಜಾಡು ಈಗ ಜಮ್ಮು–ಕಾಶ್ಮೀರವನ್ನೂ ತಲುಪಿದೆ. ಏಕೆಂದರೆ, ಫರೀದಾಬಾದ್‌ನಲ್ಲಿ ಬಂಧನಕ್ಕೆ ಒಳಗಾಗಿರುವ ಶಂಕಿತರ ಸಂಪರ್ಕಗಳು ಕಾಶ್ಮೀರ ಕಣಿವೆಯೊಂದಿಗೆ ಬೆಸೆದಿವೆ. ದೆಹಲಿಯಲ್ಲಿ ಸ್ಫೋಟಗೊಂಡ ಕಾರಿನ ಮಾಲೀಕನೂ ಕಾಶ್ಮೀರದ ಪುಲ್ವಾಮಾ ಪ್ರದೇಶಕ್ಕೆ ಸೇರಿದವನು ಎಂಬ ಮಾಹಿತಿ ಕೂಡ ಬೆಳಕಿಗೆ ಬಂದಿದೆ. 2019ರ ಪುಲ್ವಾಮಾ ದಾಳಿಗೂ ಈ ಕೃತ್ಯಕ್ಕೂ ಸಂಬಂಧ ಇರುವಂತೆಯೂ ತೋರುತ್ತಿದೆ. ಸಂಚುಕೋರರು ಜೈಷ್‌–ಎ–ಮೊಹಮ್ಮದ್‌ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ ಕುರಿತೂ ಶಂಕೆ ಬಲವಾಗಿದೆ. ಫರಿದಾಬಾದ್‌ನಲ್ಲಿ ಶಂಕಿತರ ಜಾಲ ಭೇದಿಸಿದ ಹೊತ್ತಿನಲ್ಲೇ ಗುಜರಾತ್‌ನ ಭಯೋತ್ಪಾದನಾ ನಿಗ್ರಹ ಪಡೆಯು ಅಂತರರಾಷ್ಟ್ರೀಯ ಸಂಪರ್ಕ ಹೊಂದಿದ ಕೆಲವು ವ್ಯಕ್ತಿಗಳನ್ನು ಅಹಮದಾಬಾದ್‌ನಲ್ಲಿ ಬಂಧಿಸಿದೆ. ಈ ಎಲ್ಲ ಘಟನಾವಳಿಗಳ ಹಿನ್ನೆಲೆಯಲ್ಲಿ ಪೂರ್ಣಚಿತ್ರ ಒಡಮೂಡಲು ತನಿಖೆಯ ಫಲಶ್ರುತಿಗಾಗಿ ಕಾಯಬೇಕಿದೆ.

ದೆಹಲಿಯಲ್ಲಿ ಭಯೋತ್ಪಾದಕರ ದಾಳಿ ನಡೆದು ಹಲವು ವರ್ಷಗಳೇ ಗತಿಸಿದ್ದವು. ಜಮ್ಮು–ಕಾಶ್ಮೀರ ಹೊರತುಪಡಿಸಿದರೆ ದೇಶದ ಬೇರೆ ಭಾಗಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಯಾವ ದಾಳಿಯೂ ನಡೆದಿರಲಿಲ್ಲ. ಭಯೋತ್ಪಾದನೆಯಿಂದ ದೇಶವನ್ನು ಮುಕ್ತಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಪದೇ ಪದೇ ಹೆಮ್ಮೆಯಿಂದ ಹೇಳಿಕೊಂಡಿದ್ದುಂಟು. ದೆಹಲಿಯಲ್ಲಿ ನಡೆದಿರುವ ಕೃತ್ಯವು ಆಘಾತವನ್ನು ಉಂಟುಮಾಡಿದೆ ಮತ್ತು ಭಯೋತ್ಪಾದನೆಯ ಅಪಾಯ ಇನ್ನೂ ಇದೆ ಎಂಬುದನ್ನು ಮನದಟ್ಟುಮಾಡಿದೆ. ಪ್ರತಿಯೊಂದು ಭಯೋತ್ಪಾದನಾ ದಾಳಿಯೂ ಆಂತರಿಕ ಭದ್ರತೆ ಮತ್ತು ಗುಪ್ತಚರ ವೈಫಲ್ಯದ ಕುರಿತು ಪ್ರಶ್ನೆಗಳನ್ನು ಎತ್ತುವಂತೆ ಮಾಡುತ್ತದೆ. ಅದರಲ್ಲೂ ಅತ್ಯಂತ ಹೆಚ್ಚಿನ ಭದ್ರತೆ ಇರುವ ಪ್ರದೇಶದಲ್ಲಿಯೇ ಈಗಿನ ಕೃತ್ಯ ನಡೆದಿದೆ. ‘ಇದೊಂದು ಹೃದಯಹೀನ ಭಯೋತ್ಪಾದಕರ ಕೃತ್ಯ’ ಎಂದು ಹೇಳಿ ಸರ್ಕಾರ ಹಾಗೂ ಭದ್ರತಾ ಏಜೆನ್ಸಿಗಳು ತಮ್ಮ ಹೊಣೆಯಿಂದ ನುಣುಚಿಕೊಳ್ಳುವಂತಿಲ್ಲ. ಏಕೆಂದರೆ, ಈ ದುಷ್ಕೃತ್ಯದಿಂದ ಅಮೂಲ್ಯ ಜೀವಗಳು ಬಲಿಯಾಗಿವೆ ಮತ್ತು ಜನರಲ್ಲಿದ್ದ ಸುರಕ್ಷತೆಯ ಭಾವಕ್ಕೂ ಗಾಸಿಯಾಗಿದೆ. ದೇಶದ ಜನರು ನೆಮ್ಮದಿಯಿಂದ ಮತ್ತು ಸುರಕ್ಷತೆಯ ಭಾವದಿಂದ ಬದುಕು ಸಾಗಿಸುವ ಹಕ್ಕನ್ನು ಹೊಂದಿದ್ದಾರೆ ಮತ್ತು ಅವರ ಈ ಹಕ್ಕನ್ನು ಸಂರಕ್ಷಿಸುವುದು ಎಲ್ಲ ಸರ್ಕಾರಗಳ ಹೊಣೆಯಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.