ADVERTISEMENT

ಸಂಪಾದಕೀಯ | ಏರ್ ಇಂಡಿಯಾ ವಿಮಾನ ದುರಂತ; ಕಾರಣ ಪತ್ತೆ ಈ ಹೊತ್ತಿನ ಆದ್ಯತೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 0:24 IST
Last Updated 14 ಜೂನ್ 2025, 0:24 IST
<div class="paragraphs"><p>ಸಂಪಾದಕೀಯ.&nbsp;</p></div>

ಸಂಪಾದಕೀಯ. 

   

ಲಂಡನ್‌ಗೆ ತೆರಳಬೇಕಿದ್ದ ಏರ್‌ ಇಂಡಿಯಾ ವಿಮಾನವು ಗುಜರಾತಿನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಆಗಸದತ್ತ ಜಿಗಿದ ಕೆಲವೇ ಕ್ಷಣಗಳಲ್ಲಿ ದುರಂತ ಅಂತ್ಯ ಕಂಡಿದೆ. ಈ ದುರ್ಘಟನೆಯಲ್ಲಿ
265ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ. ಇವರಲ್ಲಿ ಪ್ರಯಾಣಿಕರು, ವಿಮಾನದ ಸಿಬ್ಬಂದಿ, ವೈದ್ಯಕೀಯ ವಿದ್ಯಾರ್ಥಿಗಳು ಸೇರಿದ್ದಾರೆ. ಇದು ದೇಶ ಕಂಡ ಅತಿಕೆಟ್ಟ ವಿಮಾನ ದುರಂತಗಳ ಪೈಕಿ ಒಂದು. ದುರಂತಕ್ಕೆ ಈಡಾದ ವಿಮಾನವು ಬಿ.ಜೆ. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಿಲಯದ ಕ್ಯಾಂಟೀನ್‌ಗೆ ಅಪ್ಪಳಿಸಿದೆ. ಇದರಿಂದಾಗಿ ಅಲ್ಲಿನ ಕೆಲವು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ.
ಗಾಯಗೊಂಡ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ದುರಂತದಲ್ಲಿ ಪ್ರಾಣ ಕಳೆದುಕೊಂಡವರ ನಿರ್ದಿಷ್ಟ ಸಂಖ್ಯೆ ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ವಿಮಾನದಲ್ಲಿ ಇದ್ದ ಒಬ್ಬ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಪ್ರಾಣ ಉಳಿಸಿಕೊಂಡಿದ್ದಾರೆ. ಏರ್ ಇಂಡಿಯಾ ವಿಮಾನಯಾನ ಕಂಪನಿಗೆ ಸೇರಿದ ಬೋಯಿಂಗ್ 787–8 ಡ್ರೀಮ್‌ಲೈನರ್ ವಿಮಾನವು ಟೇಕ್ ಆಫ್ ಆದ ನಂತರದಲ್ಲಿ ಜನವಸತಿ ಪ್ರದೇಶದಲ್ಲಿ ಬೀಳುವ ಮುನ್ನ ಕೆಲವು ಕ್ಷಣ ಮಾತ್ರ ಆಗಸದಲ್ಲಿ ಇತ್ತು. ವಿಮಾನವು ಕೆಳಕ್ಕೆ ಜಾರಿದ ಹಾಗೂ ನೆಲಕ್ಕೆ ಅಪ್ಪಳಿಸಿ ಬೆಂಕಿಯುಂಡೆಯಂತೆ ಆದ ದೃಶ್ಯಗಳು ದೇಶವನ್ನು ಆಘಾತಕ್ಕೆ ನೂಕಿವೆ. ವಿದ್ಯಾರ್ಥಿ ನಿಲಯದಲ್ಲಿ ಉಂಟಾದ ಹಾನಿಯ ಚಿತ್ರಗಳು ದುರಂತದ ತೀವ್ರತೆಯನ್ನು ಇನ್ನಷ್ಟು ತೀಕ್ಷ್ಣಗೊಳಿಸಿವೆ.

ವಿಮಾನ ದುರಂತಕ್ಕೆ ಕಾರಣ ಏನು ಎಂಬ ಬಗ್ಗೆ ವಿಮಾನ ಅಪಘಾತ ತನಿಖಾ ಸಂಸ್ಥೆ (ಎಎಐಬಿ) ತನಿಖೆ ನಡೆಸುತ್ತಿದೆ. ವಿಮಾನದ ಕಪ್ಪುಪೆಟ್ಟಿಗೆ ಶುಕ್ರವಾರ ಸಿಕ್ಕಿದ್ದು, ಅಪಘಾತಕ್ಕೆ ಕಾರಣ ಪತ್ತೆ ಮಾಡುವಲ್ಲಿ ಅಧಿಕಾರಿಗಳಿಗೆ ಇದು ನೆರವಾಗಲಿದೆ. ವಿಮಾನದಲ್ಲಿ ಮಿತಿಗಿಂತ ಹೆಚ್ಚು ಭಾರ ಹೊರಿಸಲಾಗಿತ್ತೇ, ವಿಮಾನದ ಎರಡೂ ಎಂಜಿನ್‌ಗಳು ವಿಫಲಗೊಂಡವೇ, ವಿಮಾನಕ್ಕೆ ಹಕ್ಕಿ ಬಡಿಯಿತೇ ಎಂಬ ಅನುಮಾನಗಳನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ವಿಮಾನದಲ್ಲಿ ಇದ್ದ ಇಂಧನದ ಪ್ರಮಾಣ, ವಾತಾವರಣದಲ್ಲಿನ ತಾಪಮಾನ, ವಿಮಾನವು ಪತನಕ್ಕೂ ಮೊದಲು ತಲುಪಿದ್ದ ಎತ್ತರ ಅಥವಾ ಈ ಪೈಕಿ ಒಂದಕ್ಕಿಂತ ಹೆಚ್ಚಿನ ಅಂಶಗಳ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಈ ಅಪಘಾತವು ಡ್ರೀಮ್‌ಲೈನರ್ ಮಾದರಿಯ ವಿಮಾನಗಳು ಸೇರಿದಂತೆ ಬೋಯಿಂಗ್ ಕಂಪನಿಯ ವಿಮಾನಗಳ ಸುರಕ್ಷತೆಯ ಬಗ್ಗೆ ಮತ್ತೆ ಚರ್ಚೆಗಳು ನಡೆಯುವಂತೆ ಮಾಡಿದೆ. ಡ್ರೀಮ್‌ಲೈನರ್ ಮಾದರಿಯ ವಿಮಾನವು ಹೀಗೆ ಪತನಗೊಂಡಿರುವುದು ಇದೇ ಮೊದಲಾಗಿದ್ದರೂ ಇದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಗಳು ಮೊದಲಿನಿಂದಲೂ ಇವೆ. ಬೋಯಿಂಗ್ ಕಂಪನಿಯಲ್ಲಿ ಹಿಂದೆ ಕೆಲಸ ಮಾಡಿದ್ದ ಒಬ್ಬ ಎಂಜಿನಿಯರ್ ಕೂಡ ಈ ಪ್ರಶ್ನೆ ಎತ್ತಿದ್ದಿದೆ. ಇಂಡೊನೇಷ್ಯಾ ಮತ್ತು
ಇಥಿಯೋಪಿಯಾದಲ್ಲಿ ಕ್ರಮವಾಗಿ 2018 ಹಾಗೂ 2019ರಲ್ಲಿ ನಡೆದ 737 ಮ್ಯಾಕ್ಸ್ ಜೆಟ್‌ಲೈನರ್ ವಿಮಾನ ದುರಂತಗಳಿಗೆ ವಿಮಾನದಲ್ಲಿ ಇದ್ದ ಲೋಪ ಕಾರಣ ಎನ್ನಲಾಗಿದೆ. ಅಮೆರಿಕದ ನ್ಯಾಯ ಇಲಾಖೆಯ ಜೊತೆ ಈಚೆಗೆ ಒಪ್ಪಂದ ಮಾಡಿಕೊಂಡಿರುವ ಕಂಪನಿಯು ಅಪಘಾತಗಳಿಗೆ ಸಂಬಂಧಿಸಿದಂತೆ ಕಾನೂನಿನ ಕ್ರಮದಿಂದ ತಪ್ಪಿಸಿಕೊಳ್ಳಲು ಯತ್ನ ನಡೆಸಿದೆ.

ADVERTISEMENT

ಅಮೆರಿಕದ ವೈಮಾನಿಕ ಆಡಳಿತ ವಿಭಾಗವು (ಎಫ್‌ಎಎ) ವಿಮಾನ ತಯಾರಿಕೆ ಹಾಗೂ ಬಿಡಿಭಾಗ ಜೋಡಣೆ ಪ್ರಕ್ರಿಯೆ ಬಗ್ಗೆ ತನಿಖೆ ಆರಂಭಿಸಿದೆ. ಬೋಯಿಂಗ್‌ನ ಘಟಕಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಇರುವುದನ್ನು ಎಫ್‌ಎಎ ನಡೆಸಿದ ತಪಾಸಣೆಯು ಕಂಡುಕೊಂಡ ನಂತರ ಈ ತನಿಖೆ ಶುರುವಾಗಿದೆ. ದೆಹಲಿಯಲ್ಲಿ ಈಚೆಗೆ ತೆರೆದಿರುವ ಅತ್ಯಾಧುನಿಕ ಡಿಜಿಟಲ್ ವೈಮಾನಿಕ ದತ್ತಾಂಶ ಸಂಗ್ರಹಣಾ ವ್ಯವಸ್ಥೆ ಹಾಗೂ ಕಾಕ್‌ಪಿಟ್ ಧ್ವನಿ ದಾಖಲು ಪ್ರಯೋಗಾಲಯದ ಮೂಲಕ ತನಿಖೆ ನಡೆಸಲು ಕೇಂದ್ರ ಸರ್ಕಾರದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮುಂದಾಗಿದೆ‌. ವಿಮಾನ ದುರಂತದ ಬಗ್ಗೆ ಏರ್ ಇಂಡಿಯಾ ಹಾಗೂ ಬೋಯಿಂಗ್ ಕಂಪನಿಯಿಂದ ಪ್ರತಿಕ್ರಿಯೆ ಬಂದಿಲ್ಲ. ಬೋಯಿಂಗ್ ಕಂಪನಿಯ ಡ್ರೀಮ್‌ಲೈನರ್ ಮಾದರಿಯು ಅತ್ಯಂತ ಹೆಚ್ಚು ಮಾರಾಟವಾಗುವ ಅಗಲ ದೇಹದ ಪ್ರಯಾಣಿಕ ವಿಮಾನ. ಈ ವಿಮಾನದಲ್ಲಿ ಇದ್ದ ಪೈಲಟ್‌ಗಳಿಗೆ ಬಹಳ ಅನುಭವ ಇತ್ತು‌. ಈ ದುರಂತಕ್ಕೆ ನಿಖರ ಕಾರಣ ಏನು ಎಂಬುದನ್ನು ಗೊತ್ತು ಮಾಡಿಕೊಳ್ಳಬೇಕಿರುವುದು ಭಾರತದ ವಿಮಾನಯಾನ ವಲಯಕ್ಕೆ ಮಾತ್ರವೇ ಅಲ್ಲದೆ, ಇಡೀ ಜಗತ್ತಿಗೆ ಮುಖ್ಯವಾಗುತ್ತದೆ. ವಿಮಾನಯಾನ ವಲಯವು ವಿಸ್ತರಣೆ ಕಾಣುತ್ತಿರುವ ಈ ಹೊತ್ತಿನಲ್ಲಿ ವಿಮಾನ ಪ್ರಯಾಣ ಸುರಕ್ಷಿತ ಎಂಬ ವಿಶ್ವಾಸ ಮೂಡಿಸಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.