ADVERTISEMENT

ಸಂಪಾದಕೀಯ | ಸರ್ಕಾರಿ ನೌಕರರ ಹೀನಾಯ ನಿಂದನೆ: ಪುಂಡ ನಡವಳಿಕೆಗೆ ಕಡಿವಾಣ ಬೇಕು

ಸಂಪಾದಕೀಯ
Published 19 ಜನವರಿ 2026, 23:30 IST
Last Updated 19 ಜನವರಿ 2026, 23:30 IST
   

ರಾಜ್ಯದಲ್ಲಿ ಇ‌ತ್ತೀಚೆಗೆ ನಡೆದ ಕೆಲವು ಘಟನೆಗಳನ್ನು ಗಮನಿಸಿದರೆ ಪ್ರಾಮಾಣಿಕ, ದಕ್ಷ ಅಧಿಕಾರಿಗಳು ನಿರ್ಭಯವಾಗಿ ಕೆಲಸ ಮಾಡುವಂತಹ ವ್ಯವಸ್ಥೆ ದಿನೇ ದಿನೇ ಕುಸಿಯುತ್ತಿದೆ ಎಂಬ ಸಂಶಯ ಮೂಡುತ್ತದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಾ ಗೌಡ ಅವರನ್ನು ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವಾಚ್ಯ ಶಬ್ದಗಳಿಂದ ಬೈದಿರುವುದಲ್ಲದೇ, ಕಚೇರಿಗೆ ಬೆಂಕಿ ಹಾಕುವ ಬೆದರಿಕೆ ಒಡ್ಡಿದ್ದರು. ವಸತಿ ಸಚಿವ ಬಿ.ಝೆಡ್. ಜಮೀರ್ ಅಹಮದ್‌ ಖಾನ್ ಅವರ ಮಗ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾದ ಪ್ರಚಾರಕ್ಕೆ ಹಾಕಿದ್ದ ಅನಧಿಕೃತ ಬ್ಯಾನರ್ ತೆರವುಗೊಳಿಸಿದ್ದಕ್ಕೆ ಅಮೃತಾ ಗೌಡ ನಿಂದನೆಗೆ ಒಳಗಾಗಬೇಕಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಮೈಸೂರು ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರದ ಗುಡಮಾದನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದ ವ್ಯಕ್ತಿಯೊಬ್ಬರು ಅಡಿಕೆ ತೋಟ ಮಾಡಿದ್ದರು. ಇದರ ಪರಿಶೀಲನೆಗೆ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಜಿ. ಭವ್ಯಾ ಅವರು ಗ್ರಾಮ ಸಹಾಯಕರಾದ ನವೀನ್‌ಕುಮಾರ್ ಜತೆಗೆ ಹೋಗಿದ್ದರು. ಅಲ್ಲಿಗೆ ಧಾವಿಸಿದ್ದ ಒತ್ತುವರಿದಾರ, ಜೆಡಿಎಸ್‌ ನಾಯಕರ ಒಡನಾಟ ಇರುವ ಪುಟ್ಟಸ್ವಾಮಿ, ‘ಮೊದಲು ನಿಮ್ಮ ಹೆಣ ಬೀಳುತ್ತದೆ’ ಎಂದು ಬೆದರಿಕೆ ಹಾಕಿದ್ದರು. 

ರಾಮನಗರ ಜಿಲ್ಲೆ ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಮಾಗಡಿ ತಹಶೀಲ್ದಾರ್ ಶರತ್ ಕುಮಾರ್ ಅವರಿಗೆ ಒಮ್ಮೆ ‘ನಿಮ್ಮ ಮುಖಕ್ಕೆ ಗುದ್ದುವೆ’ ಎಂದರೆ, ಮತ್ತೊಮ್ಮೆ, ‘ಚಪ್ಪಲಿಯಲ್ಲಿ ಹೊಡೆಸಬೇಕಾಗುತ್ತದೆ’ ಎಂದು ಧಮಕಿ ಹಾಕಿದ್ದರು. ಹಿಂದೆಯೂ ಕರ್ನಾಟಕದಲ್ಲಿ ಇಂತಹ ಘಟನೆಗಳು ನಡೆದಿವೆ. ಸಿದ್ದರಾಮಯ್ಯ ಅವರು ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ, ಅವರ ಆಪ್ತ ಮರೀಗೌಡ ಅವರು ಅಂದಿನ ಜಿಲ್ಲಾಧಿಕಾರಿ ಸಿ. ಶಿಖಾ ಅವರಿಗೆ ಬೆದರಿಕೆ ಹಾಕಿದ್ದರು. ಬಳಿಕ ಮರೀಗೌಡರನ್ನು ದೂರ ಇಟ್ಟಿದ್ದ ಸಿದ್ದರಾಮಯ್ಯ ಎರಡನೇ ಅವಧಿಯಲ್ಲಿ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷ ಸ್ಥಾನ ದಯಪಾಲಿಸಿದರು. ಅಧಿಕಾರಿಗಳ ಹಿತಕಾಯಬೇಕಾದ, ರಾಜ್ಯದಲ್ಲಿ ನಿಮಗೆಲ್ಲ ಸುರಕ್ಷಿತ ವಾತಾವರಣ ಇದೆ ಎಂದು ಭರವಸೆ ಮೂಡಿಸಬೇಕಾದ ಸಿದ್ದರಾಮಯ್ಯ ಈ ಅವಧಿಯಲ್ಲಿಯೂ ಎರಡು ಬಾರಿ ಎಡವಿದರು. ವಿಜಯನಗರ ಜಿಲ್ಲೆಯ ಬಂಡಿಹಳ್ಳಿ ಗ್ರಾಮದಲ್ಲಿ ಸರ್ವಧರ್ಮ ಸಾಮೂಹಿಕ ಮದುವೆ ಸಮಾರಂಭದ ವೇದಿಕೆಯಲ್ಲಿ ಸ್ವಾಮೀಜಿಯವರ ಜತೆ ಅಲ್ಲಿನ ಜಿಲ್ಲಾಧಿಕಾರಿ ದಿವಾಕರ್ ಆಸೀನರಾಗಿದ್ದರು. ಇದನ್ನು ಗಮನಿಸಿದ ಸಿದ್ದರಾಮಯ್ಯ ಅವರು ವೇದಿಕೆಯಲ್ಲಿಯೇ ಜಿಲ್ಲಾಧಿಕಾರಿಗೆ ಗದರಿದ್ದರು. ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಭಾಷಣ ಮಾಡುವಾಗ ಬಿಜೆಪಿಯವರು ಪ್ರತಿಭಟನೆ ಮಾಡಿದರು. ಅಲ್ಲಿನ ಭದ್ರತೆಯ ಉಸ್ತುವಾರಿಯಲ್ಲಿದ್ದ ಎಸಿಪಿ ನಾರಾಯಣ ಭರಮನಿ ಅವರ ಮೇಲೆ ಮುಖ್ಯಮಂತ್ರಿಯವರು ಕೈ ಎತ್ತಿದ್ದ ಪ್ರಕರಣವೂ ವರದಿಯಾಗಿತ್ತು. ವರ್ಷದ ಹಿಂದೆ ಬೆಳಗಾವಿಯಲ್ಲಿ ನಡೆದ ಅಧಿವೇಶನದ ವೇಳೆ ವಿಧಾನಪರಿಷತ್ತಿನಲ್ಲೇ ಬಿಜೆ‍ಪಿ ಸದಸ್ಯ ಸಿ.ಟಿ. ರವಿ ಅವರು ಮಾತಿನ ಭರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಅವಾಚ್ಯ ಶಬ್ದ ಬಳಸಿದರೆಂಬ ಗಂಭೀರ ಆರೋಪ, ಸಂಸದೀಯ ವ್ಯವಸ್ಥೆಗೆ ಕಪ್ಪುಚುಕ್ಕೆಯಾಗಿತ್ತು. ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ
ಎನ್. ರವಿಕುಮಾರ್ ಅವರು ಕಲಬುರಗಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಅಲ್ಲಿನ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಅವರನ್ನು ಟೀಕಿಸುವ ಸಿಟ್ಟಿನಲ್ಲಿ ‘ಪಾಕಿಸ್ತಾನ’ ಪದ ಬಳಸಿ, ವಿವಾದಕ್ಕೆ ಗುರಿಯಾಗಿದ್ದರು. ಇಂತಹ ಘಟನೆಗಳು ನಮ್ಮ ವ್ಯವಸ್ಥೆ ದಿನದಿಂದ ದಿನಕ್ಕೆ ಕೆಟ್ಟ ಹಾದಿಯ ಕಡೆಗೆ ಸಾಗುತ್ತಿರುವುದರ ಸೂಚಕ.

ದಕ್ಷತೆಯಿಂದ ಕೆಲಸ ಮಾಡಿ, ಜನಪರವಾಗಿರುವ ಅಧಿಕಾರಿಗಳಲ್ಲಿ ಸುರಕ್ಷತೆಯ ಭಾವನೆ ಮೂಡಿಸಬೇಕಾದವರೇ ಸಂಯಮ ಕಳೆದುಕೊಂಡು ಹರಿಹಾಯುವುದು ಸರಿಯಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಬೀದಿಬದಿ ಪುಢಾರಿಗಳು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ದೊಣ್ಣೆ ಹಿಡಿಯುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಇಂತಹ ಘಟನೆಗಳು ತಮ್ಮ ಸಮೂಹದ ಅಧಿಕಾರಿಗಳ ಮೇಲೆ ನಡೆದಾಗ ಐಎಎಸ್ ಅಥವಾ ಕೆಎಎಸ್ ಅಧಿಕಾರಿಗಳ ಸಂಘ ಪ್ರತಿಭಟನಾತ್ಮಕ ಪತ್ರವನ್ನು ಸರ್ಕಾರದ ಮುಖ್ಯಸ್ಥರಿಗೆ ನೀಡಿದ್ದು ಉಂಟು. ಸರ್ಕಾರಿ ನೌಕರರ ಸಂಘ ಪ್ರತಿಭಟನೆಗೆ ಇಳಿದ ಪೂರ್ವ ನಿದರ್ಶನಗಳಿವೆ. ಅಂತಹ ಪ್ರತಿಭಟನೆಯ ಸ್ವರ ಈಗ ಎದ್ದಿಲ್ಲ. ಹಾಗೆಂದು, ಈ ವಿಷಯದಲ್ಲಿ ಮುಖ್ಯಮಂತ್ರಿ ಮೌನ ವಹಿಸಬಾರದು. ದಕ್ಷ ಅಧಿಕಾರಿ–ಸಿಬ್ಬಂದಿಯ ರಕ್ಷಣೆಗೆ ನಿಲ್ಲಬೇಕಾದುದು ಅವರ ತಕ್ಷಣದ ಕರ್ತವ್ಯ. ಅಧಿಕಾರಿ, ಸಿಬ್ಬಂದಿಗೆ ರಾಜ್ಯದಲ್ಲಿ ಸುರಕ್ಷಿತ ವಾತಾವರಣ ಕಲ್ಪಿಸುವ ಬಗ್ಗೆ ರಾಜ್ಯ ಮುಖ್ಯಕಾರ್ಯದರ್ಶಿಗೆ, ಪೊಲೀಸ್ ಮಹಾನಿರ್ದೇಶಕರಿಗೆ ಸೂಕ್ತ ನಿರ್ದೇಶನ ನೀಡಿ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮವಾಗುವಂತೆ ನೋಡಿಕೊಳ್ಳಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.