ADVERTISEMENT

‘ಮಹಾ’ ಬಿಕ್ಕಟ್ಟಿಗೆ ಶಿವಸೇನಾ ಕಾರಣ ಜನಾದೇಶಕ್ಕೆ ಬೆಲೆ ಇಲ್ಲವೇ?

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 20:22 IST
Last Updated 15 ನವೆಂಬರ್ 2019, 20:22 IST
   

ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣಾ ಫಲಿತಾಂಶವು ಹೊರಬಿದ್ದ ಕೂಡಲೇ ಶುರುವಾದ ಮಹಾ ರಾಜಕೀಯ ನಾಟಕಕ್ಕೆ ರಾಷ್ಟ್ರಪತಿ ಆಡಳಿತ ಹೇರಿಕೆಯಿಂದ ತಾತ್ಕಾಲಿಕವಾಗಿ ತೆರೆಬಿದ್ದಿದೆ. ಆದರೆ, ತೆರೆಮರೆಯಲ್ಲಿನ ಚಟುವಟಿಕೆಗಳು ಬಿರುಸಾಗಿಯೇ ಇವೆ. ಮಹಾರಾಷ್ಟ್ರದ ಮತದಾರರು ನೀಡಿದ ತೀರ್ಪು ಯಾವುದೇ ಗೊಂದಲಕ್ಕೆ ಆಸ್ಪದ ಇಲ್ಲದಷ್ಟು ಸುಸ್ಪಷ್ಟ. ಚುನಾವಣಾಪೂರ್ವದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದ ಬಿಜೆಪಿ–ಶಿವಸೇನಾ ಮೈತ್ರಿಕೂಟವೇ ಸರ್ಕಾರ ರಚಿಸಬೇಕು ಎಂಬುದು ಅಲ್ಲಿನ ಜನಾದೇಶ.

ಆದರೆ, ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಎರಡೂ ಪಕ್ಷಗಳ ನಡುವಿನ ಹಗ್ಗಜಗ್ಗಾಟ ದೀರ್ಘ ಪ್ರಹಸನಕ್ಕೆ ದಾರಿ ತೆರೆದಿದೆ. ಆಡಳಿತದ ಅರ್ಧ ಅವಧಿಗೆ ತನಗೂ ಮುಖ್ಯಮಂತ್ರಿಯ ಪಟ್ಟ ಬೇಕೆಂದು ಶಿವಸೇನಾ ಪಟ್ಟು ಹಿಡಿದಿದ್ದು, ಪ್ರಮುಖ ಖಾತೆಗಳನ್ನು ಪಡೆಯುವ ಸಲುವಾಗಿ ಅದರ ಬೆದರಿಕೆ ತಂತ್ರದಂತೆ ಮೊದಮೊದಲು ಗೋಚರಿಸಿತು. ಆದರೆ, ವಾರಗಳು ಉರುಳಿದರೂ ತನ್ನ ಈ ಬೇಡಿಕೆಯಿಂದ ಅದು ಒಂದಿಂಚೂ ಆಚೀಚೆ ಸರಿಯಲಿಲ್ಲ. ಮುಖ್ಯಮಂತ್ರಿ ಪಟ್ಟ ಬೇಕೆಂಬ ಬೇಡಿಕೆಯನ್ನು ಕೈಬಿಡಲಿಲ್ಲ. ಇದರಿಂದಾಗಿ, ಸ್ಪಷ್ಟ ಜನಾದೇಶ ಇದ್ದ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ.

ಬಿಜೆಪಿ– ಶಿವಸೇನಾ ಮೈತ್ರಿ ಅತ್ಯಂತ ಹಳೆಯದು. ಅಲ್ಲದೆ, ಎರಡೂ ಪಕ್ಷಗಳು ಒಂದನ್ನೊಂದು ಮೀರಿಸುವಷ್ಟು ಹಿಂದುತ್ವದ ಪ್ರತಿಪಾದನೆಯಲ್ಲಿ ತೊಡಗಿರುವಂಥವು. ರಾಜಕೀಯ ಅಧಿಕಾರದ ಮುಂದೆ ಮೈತ್ರಿ ಮತ್ತು ಸಿದ್ಧಾಂತ ಗೌಣ ಎನ್ನುವುದು ಮಹಾರಾಷ್ಟ್ರದ ಬೆಳವಣಿಗೆಗಳಿಂದ ಮತ್ತೊಮ್ಮೆ ಸಾಬೀತಾಗಿದೆ. ಮುಖ್ಯಮಂತ್ರಿ ಹುದ್ದೆಗೆ ಶಿವಸೇನಾ ಮಾಡುತ್ತಿರುವ ಹಕ್ಕು ಪ್ರತಿಪಾದನೆ ನ್ಯಾಯ
ಯುತವಾದುದಲ್ಲ. ಏಕೆಂದರೆ, ಅದು ಗೆದ್ದಿರುವುದು ಕೇವಲ 56 ಸ್ಥಾನಗಳನ್ನು. ಬಿಜೆಪಿಯು ಇದಕ್ಕಿಂತ ಹೆಚ್ಚುಕಡಿಮೆ ದುಪ್ಪಟ್ಟು ಸ್ಥಾನ ಪಡೆದಿದೆ. ಹೀಗಿದ್ದೂ ಬಿಜೆಪಿಯ ಸಖ್ಯವನ್ನು ತೊರೆದಿರುವುದರ ಹಿಂದೆ ಅವಕಾಶವಾದಿ ರಾಜಕಾರಣವಲ್ಲದೆ ಮತ್ತೇನೂ ಇದ್ದಂತಿಲ್ಲ.

ಸೈದ್ಧಾಂತಿಕವಾಗಿ ತೀವ್ರ ಭಿನ್ನ ನಿಲುವು ಹೊಂದಿರುವ ಎನ್‌ಸಿಪಿ, ಕಾಂಗ್ರೆಸ್‌ ಜೊತೆಗೆ ಕೈಜೋಡಿಸಿ ಸರ್ಕಾರ ರಚಿಸಲು ಶಿವಸೇನಾ ಈಗ ಮುಂದಾಗಿದೆ.ಚುನಾವಣೆಯಲ್ಲಿ ಶಿವಸೇನಾವನ್ನೂ ಒಳಗೊಂಡ ಬಿಜೆಪಿ ಮೈತ್ರಿಕೂಟದ ವಿರುದ್ಧ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಸೆಣಸಿದ್ದವು. ಅದೇ ಪಕ್ಷಗಳ ಜೊತೆ ಅಧಿಕಾರ ಹಂಚಿಕೊಳ್ಳುವ ನಡೆ ನೈತಿಕವೇ ಎಂಬ ಪ್ರಶ್ನೆ ಎದುರಾಗುತ್ತದೆ.

ADVERTISEMENT

‘ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಿ’ ಎಂಬುದು ತಮಗೆ ಸಿಕ್ಕಿರುವ ಜನಾದೇಶ ಎಂದು ಎನ್‌ಸಿಪಿ ನೇತಾರ ಶರದ್‌ ಪವಾರ್‌ ಹೇಳಿದ್ದ ಮಾತು ಸರಿಯಾಗಿಯೇ ಇದೆ. ಚುನಾವಣೆಯಲ್ಲಿ ಒಂದುವೇಳೆ ಯಾವ ಪಕ್ಷಕ್ಕೂ ಸ್ಪಷ್ಟ ಜನಾದೇಶ ಸಿಗದಿದ್ದಾಗ ಚುನಾವಣೋತ್ತರ ಮೈತ್ರಿ ಮೂಲಕ ಸರ್ಕಾರ ರಚಿಸುವ ಪ್ರಯತ್ನಗಳು ನಡೆಯುವುದು ಸಹಜ. ಆದರೆ, ಮಹಾರಾಷ್ಟ್ರದ ಸನ್ನಿವೇಶ ಭಿನ್ನ. ಚುನಾವಣಾಪೂರ್ವದ
ಮೈತ್ರಿಕೂಟವೊಂದರ ನೇತೃತ್ವದಲ್ಲೇ ಸರ್ಕಾರ ರಚನೆಯಾಗಲಿ ಎಂಬುದು ಅಲ್ಲಿನ ಮತದಾರರ ಆಶಯ. ಅದಕ್ಕೆ ಅಗತ್ಯ ಸಂಖ್ಯಾಬಲವೂ ಇದೆ.

ಚುನಾವಣಾಪೂರ್ವದ ಒಂದು ಮೈತ್ರಿಕೂಟ ಗೆದ್ದು, ಮತ್ತೊಂದು ಸೋತಿರುವುದು ಗೋಡೆ ಮೇಲಿನ ಬರಹದಷ್ಟೇ ಸ್ಪಷ್ಟ. ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಏಕೈಕ ಉದ್ದೇಶದಿಂದ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಏನಾದರೂ ಶಿವಸೇನಾ ಜತೆ ಕೈಜೋಡಿಸಿದರೆ ಅದು ಅನೈತಿಕ ಮಾತ್ರವಲ್ಲ, ಜನಾದೇಶಕ್ಕೆ ಬಗೆದ ದ್ರೋಹವೂ ಹೌದು.ಹಿಂದುತ್ವದ ಪ್ರಬಲ ಪ್ರತಿಪಾದಕ ಎನಿಸಿದ ಶಿವಸೇನಾ ಜತೆ ಈ ಎರಡೂ ಪಕ್ಷಗಳು ಕೈಜೋಡಿಸುವುದು ಸೈದ್ಧಾಂತಿಕವಾಗಿಯೂ ಆತ್ಮಹತ್ಯಾತ್ಮಕ.

ಇಂತಹ ಅವಕಾಶವಾದಿ ಮೈತ್ರಿಕೂಟದಿಂದ ಸುಭದ್ರ ಸರ್ಕಾರ ಸಾಧ್ಯವೇ? ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುವುದಕ್ಕೆ ಮುನ್ನ ಸರ್ಕಾರ ರಚನೆಗೆ ಇರುವ ಎಲ್ಲ ಸಾಧ್ಯತೆಗಳನ್ನು ರಾಜ್ಯಪಾಲರು ಶೋಧಿಸಿಲ್ಲ ಎಂಬ ಆರೋಪ ಇದೆ. ಅವರ ನಿರ್ಧಾರವು ಆತುರದಿಂದ ಕೂಡಿತ್ತು ಎಂಬ ಆಕ್ಷೇಪವೂ ಇದೆ. ಕಾಲಾವಕಾಶದ ವಿಚಾರದಲ್ಲಿ ರಾಜ್ಯಪಾಲರು ತಾರತಮ್ಯದಿಂದ ನಡೆದುಕೊಂಡಿದ್ದಾರೆ ಎಂಬ ಆಪಾದನೆಯೂ ಇದ್ದು, ಅದರಲ್ಲಿ ಹುರುಳಿಲ್ಲದೇ ಇಲ್ಲ. ಈಗ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ನಡುವೆ ಮೈತ್ರಿ ಮೂಡುವ ಸಾಧ್ಯತೆ ಗೋಚರಿಸಿದೆ. ಒಂದುವೇಳೆ, ಈ ಮೈತ್ರಿಕೂಟವು ಸರ್ಕಾರ ರಚಿಸಿದರೆ, ಸೈದ್ಧಾಂತಿಕವಾಗಿ ವಿರೋಧಾಭಾಸದ ಕೂಡಿಕೆಯೇ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.