ಸ್ಪೇಡೆಕ್ಸ್ ಯೋಜನೆ
ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಕೆಲವೇ ಕೆಲವು ದೇಶಗಳ ಸಾಲಿಗೆ ಸೇರಿದ ಹೆಮ್ಮೆ ಈಗ ಭಾರತದ್ದಾಗಿದೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಮೆಚ್ಚುಗೆಗೆ ಅರ್ಹವಾದ ಮತ್ತೊಂದು ಸಾಧನೆಯನ್ನು ಮಾಡಿದೆ. ಸ್ಪೇಡೆಕ್ಸ್ ಯೋಜನೆಯ ಭಾಗವಾಗಿ ಬಾಹ್ಯಾಕಾಶದಲ್ಲಿ ಉಪಗ್ರಹಗಳೆರಡನ್ನು ಜೋಡಿಸುವಲ್ಲಿ ಯಶಸ್ವಿಯಾಗಿದೆ. ಇದೊಂದು ಐತಿಹಾಸಿಕ ಕ್ಷಣ ಎಂದು ಇಸ್ರೊ ಬಣ್ಣಿಸಿದೆ. ಅದು ನಿಜವೂ ಹೌದು. ದೇಶವು ಭವಿಷ್ಯದಲ್ಲಿ ಕೈಗೊಳ್ಳುವ ಬಾಹ್ಯಾಕಾಶ ಸಂಶೋಧನೆಗಳಿಗೆ ಉಪಗ್ರಹ ಜೋಡಣೆ ತಂತ್ರಜ್ಞಾನವು ನೆರವಾಗಲಿದೆ.
ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಕೆಲವೇ ಕೆಲವು ದೇಶಗಳ ಸಾಲಿಗೆ ಈಗ ಭಾರತವೂ ಸೇರಿದೆ. ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ ಈ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿವೆ. ‘ಚೇಸರ್’ ಮತ್ತು ‘ಟಾರ್ಗೆಟ್’ ಎಂಬ ಎರಡು ಉಪಗ್ರಹಗಳನ್ನು ಪಿಎಸ್‌ಎಲ್‌ವಿ ರಾಕೆಟ್ ಮೂಲಕ ಭೂಮಿಯ ಕೆಳಹಂತದ ಕಕ್ಷೆಗೆ ಸೇರಿಸಲಾಗಿತ್ತು. ಈ ಎರಡು ಉಪಗ್ರಹಗಳನ್ನು ಗುರುವಾರ ಜೋಡಣೆ ಮಾಡಲಾಗಿದೆ. ಜೋಡಣೆ ಕಾರ್ಯಾಚರಣೆಯು ಯೋಜನೆಯಂತೆಯೇ ನಡೆದಿದೆ. 2024ರ ಡಿಸೆಂಬರ್ 30ರಂದು ಈ ಕಾರ್ಯಾಚರಣೆಗೆ ಚಾಲನೆ ನೀಡಲಾಗಿತ್ತು. ತಾಂತ್ರಿಕ ಕಾರಣಗಳಿಂದಾಗಿ ಜೋಡಣೆ ಕಾರ್ಯಾಚರಣೆಯನ್ನು ಎರಡು ಬಾರಿ ಮುಂದೂಡಲಾಗಿತ್ತು. ತಾಂತ್ರಿಕ ಸಮಸ್ಯೆಗಳು ಏನು ಎಂಬುದನ್ನು ಸರಿಯಾಗಿ ಗುರುತಿಸಿ, ಸರಿಪಡಿಸಲಾಗಿದೆ ಎಂಬುದನ್ನು ಈಗಿನ ಯಶಸ್ವಿ ಜೋಡಣೆಯು ತೋರಿಸುತ್ತದೆ.
ಜೋಡಣೆಯ ಬಳಿಕ ಈ ಎರಡು ಬಾಹ್ಯಾಕಾಶ ನೌಕೆಗಳು ವಿದ್ಯುತ್ ಅನ್ನು ಪರಸ್ಪರ ಹಂಚಿಕೊಳ್ಳಲಿವೆ. ಬಳಿಕ ಇವುಗಳನ್ನು ಪ್ರತ್ಯೇಕಿಸ ಲಾಗುವುದು. ಎರಡೂ ಉಪಗ್ರಹಗಳು ಅವುಗಳಲ್ಲಿ ಅಳವಡಿಸಿರುವ ಉಪಕರಣಗಳ ಮೂಲಕ ಪ್ರತ್ಯೇಕವಾಗಿಯೇ ಸುಮಾರು ಎರಡು ವರ್ಷ ಕೆಲಸ ಮಾಡಲಿವೆ.
ಭಾರತೀಯ ಅಂತರಿಕ್ಷ ನಿಲ್ದಾಣವನ್ನು 2035ರ ಹೊತ್ತಿಗೆ ಸ್ಥಾಪಿಸುವ ಗುರಿಯನ್ನು ಭಾರತ ಹಾಕಿಕೊಂಡಿದೆ. ಈ ಗುರಿ ಸಾಧನೆಗೆ ಉಪಗ್ರಹ ಜೋಡಣೆ ತಂತ್ರಜ್ಞಾನ ಅತ್ಯಗತ್ಯ. ಬಾಹ್ಯಾಕಾಶ ನಡಿಗೆ, ಅತ್ಯಲ್ಪ ಗುರುತ್ವಬಲದ ಪ್ರಯೋಗಗಳು ಮತ್ತು ಇತರ ಬಾಹ್ಯಾಕಾಶ ಸಂಶೋಧನೆಗಳನ್ನು ನಡೆಸಲು ಬಾಹ್ಯಾಕಾಶ ನಿಲ್ದಾಣವನ್ನು ಹೊಂದಿರಬೇಕಾಗು ತ್ತದೆ. 2027ರಲ್ಲಿ ನಡೆಸಲು ಉದ್ದೇಶಿಸಲಾಗಿರುವ ಚಂದ್ರಯಾನ–4 ಯೋಜನೆಗೂ ಉಪಗ್ರಹ ಜೋಡಣೆ ತಂತ್ರಜ್ಞಾನದ ಅಗತ್ಯ ಇದೆ. ಚಂದ್ರನ ಮೇಲ್ಮೈ ಮಣ್ಣಿನ ಮಾದರಿಯನ್ನು ಭೂಮಿಗೆ ತರುವುದು ಚಂದ್ರಯಾನ–4 ಯೋಜನೆಯ ಉದ್ದೇಶವಾಗಿದೆ.
ಚಂದ್ರನ ಮೇಲೆ ಮನುಷ್ಯನನ್ನು ಇಳಿಸುವುದು ಮತ್ತು ಇತರ ಗ್ರಹಗಳಲ್ಲಿ ನಡೆಸಲಾಗುವ ಪ್ರಯೋಗಗಳಿಗೂ ಉಪಗ್ರಹ ಜೋಡಣೆ ತಂತ್ರಜ್ಞಾನವು ಬೇಕಾಗಿದೆ. ನವೋದ್ಯಮಗಳು ಮತ್ತು ಇತರ ಸಂಸ್ಥೆಗಳು ಕೈಗೊಳ್ಳಲು ಉದ್ದೇಶಿಸಿರುವ ಪ್ರಯೋಗಗಳಿಗೂ ಈ ತಂತ್ರಜ್ಞಾನವು ನೆರವಾಗಲಿದೆ. ಅತ್ಯಲ್ಪ ಗುರುತ್ವಬಲ ಪರಿಸ್ಥಿತಿಯಲ್ಲಿ ಗಿಡವೊಂದರ ಬೆಳವಣಿಗೆ ಹೇಗೆ ಎಂಬ ಪ್ರಯೋಗವೂ ಇದರಲ್ಲಿ ಸೇರಿದೆ. ಪಿಎಸ್‌ಎಲ್‌ವಿ–ಸಿ60 ಪಿಒಇಎಂ–4 ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಿದ್ದ ಗೋವಿನಜೋಳದ ಬೀಜಗಳು ನಾಲ್ಕು ದಿನಗಳಲ್ಲಿ ಮೊಳಕೆಯೊಡೆದಿವೆ ಎಂದು ಇಸ್ರೊ ಘೋಷಿಸಿದೆ.
ಸ್ಪೇಡೆಕ್ಸ್ ಯೋಜನೆಯ ಭಾಗವಾಗಿ ಬಾಹ್ಯಾಕಾಶದಲ್ಲಿ ರೋಬೊ ಮೂಲಕ ಕಾರ್ಯಾಚರಣೆ ನಡೆಸುವಲ್ಲಿಯೂ ಇಸ್ರೊ ಯಶಸ್ವಿಯಾಗಿದೆ. ಇತರ ದೇಶಗಳ ಉಪಗ್ರಹಗಳ ಜೋಡಣೆ ಮತ್ತು ದುರಸ್ತಿಗೆ ಜೋಡಣೆ ತಂತ್ರಜ್ಞಾನವು ಬಳಕೆಯಾಗುತ್ತದೆ. ಹಾಗಾಗಿ, ವಾಣಿಜ್ಯ ರೀತಿಯಲ್ಲಿಯೂ ಇದನ್ನು ಲಾಭದಾಯಕವಾಗಿ ಬಳಸಿಕೊಳ್ಳಬಹುದು.
ಇಸ್ರೊ ಕಾರ್ಯಾಚರಣೆಗಳು ಕಳೆದ ಕೆಲವು ವರ್ಷಗಳಲ್ಲಿ ವಿಸ್ತರಣೆಗೊಂಡಿವೆ ಮತ್ತು ವೈವಿಧ್ಯವನ್ನು ಮೈಗೂಡಿಸಿಕೊಂಡಿವೆ. ಕಳೆದ ಐದು ದಶಕಗಳಲ್ಲಿ ಇಸ್ರೊದ ಬೆಳವಣಿಗೆ ಶ್ಲಾಘನೀಯ. ಹವಾಮಾನ ಮುನ್ಸೂಚನೆ ನೀಡುವ ಮತ್ತು ಸಂವಹನಕ್ಕೆ ಬಳಸಬಹುದಾದ ಮೂಲಭೂತ ಉಪಗ್ರಹ ಉಡ್ಡಯನದಿಂದ ಅಂತರಗ್ರಹ ಪರಿಶೋಧನೆ ಮತ್ತು ಬಾಹ್ಯಾಕಾಶ ಸಂಶೋಧನೆಯನ್ನು ನಡೆಸುವಂತಹ ಮಹತ್ವದ ವೈಜ್ಞಾನಿಕ ಸಂಸ್ಥೆಯಾಗಿ ರೂಪುಗೊಂಡಿದೆ. ಈ ಸಂಸ್ಥೆಯು ದೇಶದ ವರ್ಚಸ್ಸು ಹೆಚ್ಚಿಸಿದೆ.
ಬಾಹ್ಯಾಕಾಶ ಸಂಶೋಧನೆಯಲ್ಲಿ ಪ್ರಮುಖ ದೇಶವಾಗಿ ಭಾರತ ಹೊಮ್ಮುವಂತೆ ಮಾಡಿದೆ. ಮಾನವನ ಪ್ರಗತಿಯು ಮುಂದಿನ ದಶಕಗಳಲ್ಲಿ ಬಾಹ್ಯಾಕಾಶ ವಿಜ್ಞಾನದ ಪರಿಣತಿಯೊಂದಿಗೆ ತಳಕು ಹಾಕಿಕೊಂಡಿದೆ. ಈ ಕ್ಷೇತ್ರದಲ್ಲಿ ಇಸ್ರೊ ಮಹತ್ವದ ಸಂಸ್ಥೆಯಾಗಿ ಉಳಿಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.