ADVERTISEMENT

ನಿರ್ಲಕ್ಷ್ಯದಿಂದಲೇ ಸಾಕಾನೆ ಸಾವು: ಕಾಡಿನ ಮಾರ್ಗ ಸುರಕ್ಷಿತವಾಗಿಸಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 19:39 IST
Last Updated 9 ಅಕ್ಟೋಬರ್ 2018, 19:39 IST
elephant
elephant   

ನಸುಕಿನಲ್ಲಿ ರಸ್ತೆ ದಾಟಿ, ಅರಣ್ಯದ ಒಂದು ಬದಿಯಿಂದ ಮತ್ತೊಂದು ಬದಿಯಲ್ಲಿದ್ದ ಮತ್ತಿಗೋಡು ಆನೆ ಶಿಬಿರಕ್ಕೆ ಹೋಗುತ್ತಿದ್ದ ಅರಣ್ಯ ಇಲಾಖೆಯ ಸಾಕಾನೆ ರಂಗನಿಗೆ ಕೇರಳದ ಕಣ್ಣೂರಿನಿಂದ ಕೊಡಗು ಜಿಲ್ಲೆಯ ವಿರಾಜಪೇಟೆ ಮಾರ್ಗವಾಗಿ ಬೆಂಗಳೂರಿಗೆ ಅತಿ ವೇಗವಾಗಿ ಬರುತ್ತಿದ್ದ ಕಲ್ಪಕಾ ಬಸ್‌ ಡಿಕ್ಕಿ ಹೊಡೆದಿದ್ದರಿಂದ, ಆನೆಯ ಬೆನ್ನು ಮೂಳೆ ಮುರಿದು ರಕ್ತಸ್ರಾವವಾಗಿ ಆರು ಗಂಟೆಗಳ ಕಾಲ ನರಳಿ ಸತ್ತಿದೆ.

ಯಾತನಾಮಯವಾದ ದಾರುಣ ಘಟನೆ ಇದು. ಈ ಭಾಗದಲ್ಲಿ ರಸ್ತೆಯು ನೇರವಾಗಿದೆ. ಸಾಮಾನ್ಯ ವೇಗದಲ್ಲಿ ವಾಹನ ಹೋಗುತ್ತಿದ್ದಿದ್ದರೆ ಸಲಗದಂತಹ ದೊಡ್ಡ ಪ್ರಾಣಿ ರಸ್ತೆ ದಾಟುವುದು ಬಸ್‌ ಚಾಲಕನಿಗೆ ಕಾಣಿಸಿರುತ್ತಿತ್ತು. ಹೀಗಾಗಿ ಈ ಪ್ರಕರಣದಲ್ಲಿ ಅತಿ ವೇಗವೇ ಅಪಘಾತಕ್ಕೆ ಕಾರಣವಾಗಿದೆ ಎಂಬುದು ಸ್ಪಷ್ಟ.

ರಸ್ತೆಯ ಒಂದು ಬದಿಯಲ್ಲಿ ನಾಗರಹೊಳೆ ಅಭಯಾರಣ್ಯವಿದ್ದರೆ ಮತ್ತೊಂದು ಬದಿಯಲ್ಲಿ ತಿತಿಮತಿ ಪ್ರಾದೇಶಿಕ ಅರಣ್ಯವಿದೆ. ರಾತ್ರಿ ವೇಳೆ ಮೇವು ತಿನ್ನುವುದಕ್ಕಾಗಿ ಸಾಕಾನೆಗಳನ್ನು ಕಾಡಿಗೆ ಬಿಡುವುದು ವಾಡಿಕೆ. ಆನೆಯು ಮುಂಜಾನೆ 2.30ರ ವೇಳೆ ಶಿಬಿರಕ್ಕೆ ವಾಪಸಾಗುವಾಗ ಈ ದುರಂತ ಘಟಿಸಿದ್ದು, ಪಶುವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗಿಲ್ಲ. ವಾಹನದ ವೇಗ ತಡೆಯಲು ರಸ್ತೆಗೆ ಉಬ್ಬನ್ನು ನಿಗದಿತ ಅಂತರದಲ್ಲಿ ಹಾಕಿದ್ದರೆ ಈ ದುರ್ಘಟನೆಯನ್ನು ತಡೆಯಬಹುದಿತ್ತು.

ADVERTISEMENT

ಈ ಆನೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸುತ್ತ ಎಂಟು ಪುಂಡಾನೆಗಳ ಜೊತೆ ಹೊಲ, ಗದ್ದೆ ಮೇಲೆ ದಾಳಿ ಮಾಡುತ್ತಾ, ‘ರೌಡಿ ರಂಗ’ ಎಂದು ಕುಖ್ಯಾತಿ ಪಡೆದಿತ್ತು. ಇದನ್ನು ಮಾಗಡಿ ಬಳಿ ಸೆರೆ ಹಿಡಿಯಾಗಿತ್ತು. ಆನೆಚೌಕೂರು ವಲಯದ ಆನೆ ಶಿಬಿರದಲ್ಲಿ ಇದಕ್ಕೆ ತರಬೇತಿ ನೀಡಲಾಗಿತ್ತು. ಮುಂದಿನ ವರ್ಷದಿಂದ ಮೈಸೂರು ದಸರಾ ಮೆರವಣಿಗೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ಚಿಂತನೆಯನ್ನೂ ಅರಣ್ಯ ಇಲಾಖೆ ನಡೆಸಿತ್ತು.

ಅಷ್ಟರಲ್ಲಿ ಈ ಅವಘಡ ಜರುಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ರಾತ್ರಿ ವಾಹನ ಸಂಚಾರ ಬಂದ್‌ ಆದ ನಂತರ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಪರ್ಯಾಯ ಮಾರ್ಗವೆಂದರೆ ಕುಟ್ಟ– ಗೋಣಿಕೊಪ್ಪ– ಹುಣಸೂರು ಮೂಲಕ ಮೈಸೂರಿಗೆ ಹೋಗುವ ದಾರಿ. ತಿತಿಮತಿಯಿಂದ ಅಳ್ಳೂರು ಗೇಟ್‌ವರೆಗೆ 9.2 ಕಿ.ಮೀ. ರಸ್ತೆಯು ದಟ್ಟ ಕಾಡಿನ ನಡುವೆ ಹಾದು ಹೋಗುತ್ತದೆ. ಈ ಪರ್ಯಾಯ ಮಾರ್ಗವನ್ನು ರಾಜ್ಯ ಲೋಕೋಪಯೋಗಿ ಇಲಾಖೆಯು ಕೆಲ ವರ್ಷಗಳ ಹಿಂದೆ ಅಭಿವೃದ್ಧಿಗೊಳಿಸಿದೆ. ಆದರೆ ವೇಗಕ್ಕೆ ಕಡಿವಾಣ ಹಾಕುವ ರಸ್ತೆ ಉಬ್ಬುಗಳನ್ನು ಅಲ್ಲಲ್ಲಿ ಹಾಕಿಲ್ಲ. ಈ ದುರ್ಘಟನೆ ನಂತರವಾದರೂ ತುರ್ತಾಗಿ ಈ ಕಾರ್ಯ ಆಗಬೇಕಿದೆ.

ಅಪಘಾತ ಮಾಡಿರುವ ಕಲ್ಪಕಾ ಬಸ್‌ನ ಮಾಲೀಕ ಸೇರಿದಂತೆ ಹನ್ನೆರಡು ಬಸ್‌ ಕಂಪನಿ ಮಾಲೀಕರು ಬಂಡೀಪುರದಲ್ಲಿ ರಾತ್ರಿ ಬಸ್‌ ಸಂಚಾರ ನಿಷೇಧ ತೆರವು ಮಾಡುವಂತೆ ರಾಜ್ಯ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಸಲಗ ರಂಗನ ಅಪಘಾತ ಪ್ರಕರಣವನ್ನು ನೋಡಿದರೆ ನಿಷೇಧ ತೆರವಾದರೆ ಅಪಘಾತಗಳ ಸರಣಿಯೇ ಆಗುತ್ತದೆ ಎನ್ನಬಹುದು. ಯಾವುದೇ ಕಾರಣಕ್ಕೂ ಬಂಡೀಪುರ ರಾತ್ರಿ ಸಂಚಾರ ನಿಷೇಧ ತೆರವು ಮಾಡಬಾರದು.

ಇದು ರಾಜ್ಯದ ನಿಲುವು ಆಗಬೇಕು. ತಿತಿಮತಿಯಿಂದ ಅಳ್ಳೂರು ಗೇಟ್‌ವರೆಗೆ ಎತ್ತರಿಸಿದ ಹೆದ್ದಾರಿ ನಿರ್ಮಿಸುವಂತೆ ವನ್ಯಜೀವಿ ತಜ್ಞರು ಈಗಾಗಲೇ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ. ಈ ಯೋಜನೆಯನ್ನು ಸರ್ಕಾರ ಜಾರಿ ಮಾಡಬೇಕು. ಆಗ ಮಾತ್ರ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಅಪಘಾತಮುಕ್ತವಾಗುತ್ತದೆ. ಇಲ್ಲವಾದರೆ ಕನಿಷ್ಠ ಪಕ್ಷ ರಸ್ತೆ ಉಬ್ಬನ್ನಾದರೂ ಅಳವಡಿಸಿ, ಅಪಘಾತಮುಕ್ತ ವಲಯವನ್ನಾಗಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.