ADVERTISEMENT

ಸುಲೇಮಾನಿ ಹತ್ಯೆ ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ಧಕ್ಕೆ ಕಾರಣವಾಗದಿರಲಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 3:31 IST
Last Updated 6 ಜನವರಿ 2020, 3:31 IST
ಖಾಸಿಂ ಸುಲೇಮಾನಿ
ಖಾಸಿಂ ಸುಲೇಮಾನಿ   

ಅಮೆರಿಕದ ಅಧ್ಯಕ್ಷ ಸ್ಥಾನದ ಚುನಾವಣೆ ಹತ್ತಿರವಾಗುತ್ತಿದೆ; ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮೇಲೆ ಅಧಿಕಾರ ದುರ್ಬಳಕೆಯ ಆರೋಪದಡಿ ವಾಗ್ದಂಡನೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ ಮತ್ತು ಈ ವರ್ಷದ ಕೊನೆಗೆ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ಅವರು ಪುನರಾಯ್ಕೆಗೆ ಪ್ರಯತ್ನಿಸಲಿದ್ದಾರೆ.

ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ನ ಕಮಾಂಡರ್‌ ಮೇಜರ್‌ ಜನರಲ್‌ ಖಾಸಿಂ ಸುಲೇಮಾನಿ ಅವರನ್ನುಬಾಗ್ದಾದ್‌ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಅಮೆರಿಕವು ಕ್ಷಿಪಣಿ ದಾಳಿ ಮೂಲಕ ಹತ್ಯೆ ಮಾಡಿದೆ. ಈ ಎರಡು ವಿದ್ಯಮಾನಗಳ ನಡುವೆ ಸಂಬಂಧ ಇಲ್ಲ ಎಂದು ಹೇಳುವುದು ಕಷ್ಟ.

ಯಾಕೆಂದರೆ, ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮ 2012ರಲ್ಲಿ ಪುನರಾಯ್ಕೆ ಬಯಸಿದ್ದ ಸಂದರ್ಭ. ‘ಚುನಾವಣೆ ಗೆಲ್ಲುವುದಕ್ಕಾಗಿ ಒಬಾಮ ಅವರು ಇರಾನ್‌ ಮೇಲೆ ಯುದ್ಧ ಘೋಷಿಸಬಹುದು’ ಎಂದು ಟ್ರಂಪ್‌ ಅವರು ಆಗ ಪದೇ ಪದೇ ಟ್ವೀಟ್‌ ಮಾಡಿದ್ದರು. ಈಗ, ಅಮೆರಿಕ ಮತ್ತು ಇರಾನ್‌ ನಡುವಣ ಸಂಘರ್ಷವು ಇನ್ನಷ್ಟು ತೀಕ್ಷ್ಣವಾಗುವಂತಹ ಕ್ರಮವನ್ನು ಟ್ರಂಪ್‌ ಕೈಗೊಂಡಿದ್ದಾರೆ. ಸುಲೇಮಾನಿಯವರ ಹತ್ಯೆಯ ಸುದ್ದಿಯ ಜತೆಗೇ, ಟ್ರಂಪ್‌ ಅವರ ಆದೇಶದ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ ಎಂಬ ಸುದ್ದಿಯೂ ಪ್ರಕಟವಾಗಿದೆ.

ADVERTISEMENT

ಇದು ಏನನ್ನು ಸೂಚಿಸುತ್ತದೆ? ಪುನರಾಯ್ಕೆ ಸಲುವಾಗಿ ದೇಶದಲ್ಲಿ ರಾಷ್ಟ್ರೀಯತೆಯ ಉನ್ಮಾದವನ್ನು ಸೃಷ್ಟಿಸಲು ಯತ್ನಿಸುವುದು ಮತ್ತು ಅದಕ್ಕಾಗಿ ಬೇರೊಂದು ದೇಶವನ್ನು ಗುರಿ ಮಾಡಿಕೊಳ್ಳುವುದು ಇಡೀ ಜಗತ್ತಿನ ಮೇಲೆ ಅಪಾಯಕಾರಿ ಪರಿಣಾಮ ಉಂಟು ಮಾಡಬಲ್ಲದು ಎಂಬುದು ಸುಲೇಮಾನಿ ಹತ್ಯೆಯಲ್ಲಿ ಇರುವ ಪಾಠ. ಮಧ್ಯಪ್ರಾಚ್ಯದ ಅತ್ಯಂತ ಪ್ರಭಾವಿ ಕಮಾಂಡರ್‌ ಎಂದು ಸುಲೇಮಾನಿಯವರನ್ನು ಬಣ್ಣಿಸಲಾಗುತ್ತಿದೆ.

ಮಧ್ಯಪ್ರಾಚ್ಯದಲ್ಲಿ ಪ್ರಬಲವಾಗುತ್ತಿದ್ದ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರಗಾಮಿ ಗುಂಪನ್ನು ಸದೆಬಡಿಯುವಲ್ಲಿ ಸುಲೇಮಾನಿ ಪಾತ್ರ ಮಹತ್ವದ್ದೇ ಆಗಿತ್ತು. ಐಎಸ್‌ ವಿರುದ್ಧ ಹೋರಾಡುವುದಕ್ಕಾಗಿ ಬಂಡುಕೋರ ಗುಂಪುಗಳಿಗೆ ತರಬೇತಿ ಮತ್ತು ಶಸ್ತ್ರಾಸ್ತ್ರ ಕೊಟ್ಟು ಸುಲೇಮಾನಿ ಕಳುಹಿಸಿದ್ದರು. ಈ ಬಂಡುಕೋರ ಗುಂಪುಗಳು ಮತ್ತು ಅಮೆರಿಕದ ಯೋಧರು ಜತೆ ಜತೆಯಾಗಿ ಐಎಸ್‌ ವಿರುದ್ಧ ಹೋರಾಡಿದ್ದರು. ಈಗ, ‘ಸುಲೇಮಾನಿ ಕೈಗೆ ಅಮೆರಿಕದ ಯೋಧರ ರಕ್ತ ಅಂಟಿದೆ’ ಎಂದು ಅಮೆರಿಕ ಆರೋಪಿಸಿದೆ.

ಮಧ್ಯಪ್ರಾಚ್ಯದ ಬಂಡುಕೋರ ಗುಂಪುಗಳಿಗೆ ಸುಲೇಮಾನಿ ಬಗ್ಗೆ ಅಪಾರ ಗೌರವ ಇದೆ. ಸುಲೇಮಾನಿ ಹತ್ಯೆಗೆ ಸೇಡು ತೀರಿಸಿಕೊಳ್ಳುವುದು ಖಚಿತ ಎಂದು ಇರಾನ್‌ ಸರ್ಕಾರವೇ ಹೇಳಿದೆ. ಬಂಡುಕೋರ ಗುಂಪುಗಳು ಕೂಡ ಸುಮ್ಮನೇ ಇರುವ ಸಾಧ್ಯತೆ ಇಲ್ಲ. ಹತ್ಯೆಗೆ ಪ್ರತೀಕಾರಕ್ಕೆ ಮುಂದಾದರೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಇರಾನ್‌ ಮೇಲೆ ದಾಳಿ ನಡೆಸುವುದಾಗಿ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ. ಹಾಗೆಲ್ಲ ಆಗದಿರಲಿ ಎಂದು ಆಶಿಸೋಣ. ಯುದ್ಧ ಮತ್ತು ದ್ವೇಷ ಎಲ್ಲೆಡೆಯೂ ಎಲ್ಲರಿಗೂ ವಿನಾಶ ಮತ್ತು ನಷ್ಟವನ್ನು ಮಾತ್ರ ತರಬಲ್ಲವು ಎಂಬ ಸತ್ಯವು ಆಳುವ ವರ್ಗಕ್ಕೆ ಮನವರಿಕೆ ಆಗಲಿ.

ಹತ್ಯೆಯ ತಕ್ಷಣದ ಪರಿಣಾಮವಾಗಿ ಕಚ್ಚಾ ತೈಲದ ದರದಲ್ಲಿ ಶೇ 4.5ರಷ್ಟು ಏರಿಕೆಯಾಗಿದೆ. ತೈಲಕ್ಕಾಗಿ ಆಮದಿನ ಮೇಲೆ ಅವಲಂಬಿತವಾಗಿರುವ ಎಲ್ಲ ದೇಶಗಳಿಗೂ ಇದು ಹೊಡೆತ.ತನ್ನ ತೈಲ ಅಗತ್ಯದ ಶೇ 83ರಷ್ಟನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಭಾರತದಅರ್ಥವ್ಯವಸ್ಥೆಯು ಈಗಾಗಲೇ ಹೈರಾಣಾಗಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿಯ ಹೊಡೆತಕ್ಕೆ ಸಿಲುಕಿ ರೈತ ಹತಾಶನಾಗಿದ್ದಾನೆ.

ಉದ್ಯಮ ವಲಯವು ಕಷ್ಟದ ದಿನಗಳನ್ನು ಎದುರಿಸುತ್ತಿದೆ, ವ್ಯಾಪಾರ–ವಹಿವಾಟು ಹಿನ್ನಡೆ ಅನುಭವಿಸಿದೆ. ನಿರುದ್ಯೋಗ ಸಮಸ್ಯೆಯು ಸುಮಾರು 45 ವರ್ಷಗಳಲ್ಲೇ ಅತ್ಯಂತ ತೀವ್ರವಾಗಿದೆ ಎಂದು ವರದಿಗಳು ಹೇಳುತ್ತಿವೆ. ಇಂತಹ ಸಂದರ್ಭದಲ್ಲಿ ತೈಲ ಆಮದಿಗಾಗಿ ಇನ್ನೂಹೆಚ್ಚಿನ ಮೊತ್ತವನ್ನು ವೆಚ್ಚ ಮಾಡುವುದು ಅರ್ಥ ವ್ಯವಸ್ಥೆಯ ಚೇತರಿಕೆಗೆ ಬಹುದೊಡ್ಡ ತೊಡಕಾಗಬಹುದು.

ಕೇಂದ್ರದ ಬಜೆಟ್‌ ಮಂಡನೆ ದಿನ ಹತ್ತಿರ ಬರುತ್ತಿದೆ. ಉದ್ಯಮ ಕ್ಷೇತ್ರದ ಚೇತರಿಕೆಗೆ ಬಜೆಟ್‌ನಲ್ಲಿ ಏನಾದರೂ ಕ್ರಮಗಳು ಇರಬಹುದು ಎಂಬ ಆಸೆ ಇದೆ. ಜತೆಗೆ, ಆದಾಯ ತೆರಿಗೆಯಲ್ಲಿ ವಿನಾಯಿತಿ ಸಿಗಬಹುದು ಎಂಬ ನಿರೀಕ್ಷೆ ಮಧ್ಯಮ ವರ್ಗದಲ್ಲಿ ದಟ್ಟವಾಗಿ ಇದೆ. ತೈಲ ಬೆಲೆಯಲ್ಲಿನ ಏರಿಕೆ ಈ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಬಹುದು. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಅತ್ಯಂತ ವಿವೇಚನೆಯಿಂದ ನಿರ್ಧಾರಗಳನ್ನು ಕೈಗೊಳ್ಳುವುದು ಅಗತ್ಯ. ತೈಲ ದರ ಏರಿಕೆಯು ಜನರಿಗೆ ಹೊರೆಯಾಗದಂತೆ ನೋಡಿಕೊಳ್ಳುವುದರ ಜತೆಗೆ, ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವತ್ತಲೂ ಗಮನ ಹರಿಸಬೇಕಿದೆ. ಯುದ್ಧದಾಹಿಗಳಿಗೆ ವಿವೇಕದ ಪಾಠ ಹೇಳಿ, ಸಂಭಾವ್ಯ ಅಪಾಯದಿಂದ ಜಗತ್ತನ್ನು ರಕ್ಷಿಸುವ ಹೊಣೆಗಾರಿಕೆ ಭಾರತದ ನಾಯಕತ್ವಕ್ಕೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.