ADVERTISEMENT

ಸಂಪಾದಕೀಯ: ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಕಳಕಳಿಗೆ ಸ್ಪಂದಿಸಲಿ ಸರ್ಕಾರ

ಸಂಪಾದಕೀಯ
Published 20 ಡಿಸೆಂಬರ್ 2024, 21:58 IST
Last Updated 20 ಡಿಸೆಂಬರ್ 2024, 21:58 IST
   

ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ಗೊ.ರು. ಚನ್ನಬಸಪ್ಪ ಅವರು ಆಡಿರುವ ಮಾತುಗಳು, ನಾಡಿನ ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಆಗುಹೋಗುಗಳಿಗೆ ಸ್ಪಂದಿಸುವಂತಿವೆ; ‘ಸುವರ್ಣ ಮಹೋತ್ಸವ’ ಸಂಭ್ರಮದಲ್ಲಿರುವ ಕರ್ನಾಟಕದ ನಾಳೆಗಳನ್ನು ರೂಪಿಸಲು ಅಗತ್ಯವಾದ ಕಿವಿಮಾತುಗಳಂತಿವೆ.

ಸಮಾಜದ ಆರೋಗ್ಯಕ್ಕೆ ಅಗತ್ಯವಾದ ತಾತ್ವಿಕ ತಳಹದಿಯನ್ನು ರೂಪಿಸಿಕೊಟ್ಟಿರುವ ಕನ್ನಡ ಸಾಹಿತ್ಯದ ‘ವಿವೇಕ ಪರಂಪರೆ’ಯ ಭಾಗವಾಗಿ ಹಾಗೂ ಹಿರಿಯ ಮುತ್ಸದ್ದಿಯೊಬ್ಬರ ಅನುಭವದ ಅಭಿವ್ಯಕ್ತಿಯ ರೂಪದಲ್ಲಿ ಗೊರುಚ ಅವರ ಮಾತುಗಳನ್ನು ಗಮನಿಸಬೇಕಾಗಿದೆ. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಬೋಧನೆಯಲ್ಲಿ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು ಎಂದು ಅಭಿಪ್ರಾಯಪಟ್ಟಿರುವ ಅವರು, ಬೇರೆ ಯಾವ ಭಾಷೆಯನ್ನು ಯಾವ ಕಾರಣದಿಂದಲೂ ಶಿಕ್ಷಣ ಮಾಧ್ಯಮವನ್ನಾಗಿ ಹೇರಕೂಡದು ಎಂದು ಒತ್ತಾಯಿಸಿದ್ದಾರೆ.

ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಸರ್ಕಾರ ತೆರೆಯುವುದನ್ನಾಗಲೀ ಖಾಸಗಿ ಶಾಲೆಗಳಿಗೆ ಅನುಮತಿ ಕೊಡುವುದನ್ನಾಗಲೀ ಕೂಡಲೇ ನಿಲ್ಲಿಸಬೇಕು ಎನ್ನುವ ಅವರ ಆಗ್ರಹವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕನ್ನಡವನ್ನು ಶಿಕ್ಷಣ ಮಾಧ್ಯಮದ ಭಾಷೆಯನ್ನಾಗಿಸಬೇಕು ಹಾಗೂ ಒಂದು ಭಾಷೆ–ವಿಷಯವಾಗಿ ಇಂಗ್ಲಿಷ್‌ ಕಲಿಸಬಹುದು ಎನ್ನುವ ಅವರ ಸಲಹೆ ಕಾರ್ಯಸಾಧ್ಯವಾದುದು ಹಾಗೂ ಕನ್ನಡದ ಹಿತದೃಷ್ಟಿಯಿಂದ ಅಗತ್ಯವಾದುದು.

ADVERTISEMENT

ಗ್ರಾಮೀಣ ಪ್ರದೇಶದಲ್ಲಿನ ಸಾವಿರಾರು ಸರ್ಕಾರಿ ಶಾಲೆಗಳು ಸೂರು, ಗೋಡೆ ಉರುಳುವ ಸ್ಥಿತಿಯಲ್ಲಿರುವ ಬಗ್ಗೆ ಸರ್ಕಾರದ ಗಮನಸೆಳೆದಿರುವ ಸಮ್ಮೇಳನಾಧ್ಯಕ್ಷರು, ಶಿಥಿಲಗೊಂಡ ಶಾಲೆಗಳನ್ನು ಸರಿಪಡಿಸುವ ಮೂಲಕ ಮಕ್ಕಳಿಗೆ ಮತ್ತು ಪೋಷಕರಿಗೆ ಸರ್ಕಾರಿ ಶಾಲೆಗಳು ಆಕರ್ಷಕವಾಗುವಂತೆ ಉನ್ನತೀಕರಿಸಬೇಕು ಎಂದು ನೀಡಿರುವ ಸಲಹೆ ಸರಿಯಾಗಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಬಲವರ್ಧನೆಗಾಗಿ ಶಾಶ್ವತ ಅನುದಾನ ನೀಡಬೇಕು ಹಾಗೂ ವಿಶೇಷ ಕಾರ್ಯೋದ್ದೇಶಗಳಿಗಾಗಿ ರೂಪುಗೊಂಡಿರುವ ಜಾನಪದ ವಿಶ್ವವಿದ್ಯಾಲಯ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ನೃತ್ಯ ವಿಶ್ವವಿದ್ಯಾಲಯವನ್ನು ನಾಡಿನ ಅಮೂಲ್ಯ ಸಾಂಸ್ಕೃತಿಕ ಕೇಂದ್ರಗಳಾಗಿ ಸರ್ಕಾರ ಭಾವಿಸಬೇಕೆನ್ನುವ ಗೊರುಚ ಅವರ ಅಭಿಪ್ರಾಯಕ್ಕೆ ಕನ್ನಡ ಸಂಸ್ಕೃತಿಯನ್ನು ಬಲಪಡಿಸುವ ದಿಸೆಯಲ್ಲಿ ವಿಶೇಷ ಮಹತ್ವವಿದೆ.

ಸಮಾಜದಲ್ಲಿನ ಧಾರ್ಮಿಕ ಸಾಮರಸ್ಯ ಕ್ಷೀಣಿಸುತ್ತಿರುವ ಬಗ್ಗೆ ಗೊರುಚ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಧರ್ಮ ಮತ್ತು ರಾಜಕಾರಣದ ಹೆಸರಿನಲ್ಲಿ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿರುವವರಿಗೆ ಹಿರೀಕರೊಬ್ಬರು ಹೇಳಿರುವ ಪಾಠಗಳಂತಿವೆ. ವ್ಯಕ್ತಿ ಹಾಗೂ ಸಮಷ್ಟಿ ನೆಲೆಯಲ್ಲಿ ಒಂದುಗೂಡಿಸಬೇಕಾದ ಧರ್ಮಗಳು ಅಸಹನೆ ಹಾಗೂ ಅಸಮಾನತೆಯನ್ನು ಬಿತ್ತುತ್ತಿರುವ ಸಾಧನಗಳಾಗಿ ಬದಲಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ‘ನಾವು ಕಟ್ಟುವವರಾಗಬೇಕೇ ಹೊರತು ಕೆಡಹುವರು ಆಗಬಾರದು; ನಾವು ಮುಂದೆ ಹೋಗಬೇಕೇ ವಿನಾ ಹಿಂದೆ ಹೋಗಬಾರದು’ ಎಂದು ವಿವೇಕದ ಮಾತುಗಳನ್ನಾಡಿದ್ದಾರೆ. ಧಾರ್ಮಿಕ ಕೇಂದ್ರಗಳನ್ನು ಮತೀಯ ಸಂಘರ್ಷದ ಕೇಂದ್ರಗಳನ್ನಾಗಿಸುತ್ತಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, ಬ್ಯಾಂಕು ವ್ಯವಹಾರಗಳಲ್ಲಿ, ಅಂಚೆ ಕಚೇರಿಗಳಲ್ಲಿ ರಾಜ್ಯಭಾಷೆಗಳನ್ನು ನಿರ್ಲಕ್ಷಿಸಿ ಹಿಂದಿಯನ್ನು ಹೇರುವ ಕೇಂದ್ರ ಸರ್ಕಾರದ ಹುನ್ನಾರವನ್ನು ಟೀಕಿಸಿದ್ದು, ಬಹುಭಾಷಾ ಸಂಸ್ಕೃತಿ ನೀತಿಯನ್ನು ಸಂವಿಧಾನಾತ್ಮಕವಾಗಿ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಾಜ್ಯದ ತೆರಿಗೆ ಪಾಲನ್ನು ಕೇಂದ್ರ ಸರ್ಕಾರ ವಂಚಿಸುತ್ತಿದೆ ಎನ್ನುವ ಮಾತುಗಳಲ್ಲಿ ಸತ್ಯಾಂಶವಿದ್ದು, ರಾಜ್ಯಗಳ ಹಣಕಾಸು ಸ್ವಾಯತ್ತತೆಯನ್ನು ಸಂರಕ್ಷಿಸುವ ಕಾರ್ಯವನ್ನು ಒಕ್ಕೂಟ ಸರ್ಕಾರ ಮಾಡಬೇಕು ಎಂದು ಸಮ್ಮೇಳನಾಧ್ಯಕ್ಷರು ಹೇಳಿರುವುದು ಕುತೂಹಲಕರ.

‘ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ’ ಎನ್ನುವ ನುಡಿಪರಂಪರೆಯ ಮಾತನ್ನು ಪುನರುಚ್ಚರಿಸಿರುವ ಸಮ್ಮೇಳನಾಧ್ಯಕ್ಷರು, ಆದರ್ಶ ಜನತಂತ್ರದ ಬಹುಮುಖ್ಯ ಗುಣದ ರೂಪದಲ್ಲಿ ಭಾಷಾಭಿಮಾನವನ್ನು ಗುರುತಿಸಿದ್ದಾರೆ. ಜಾಗತಿಕ ಸಂವಹನದ ಚಹರೆಯನ್ನು ಬದಲಾಯಿಸುತ್ತಿರುವ ತಂತ್ರಜ್ಞಾನದ ನೆರವು ಪಡೆದು ಕನ್ನಡ ಭಾಷೆ ಇನ್ನಷ್ಟು ಶ್ರೀಮಂತವಾಗಿ ಆ ಮೂಲಕ ಕಿರಿಯ ಪೀಳಿಗೆಯ ಎದೆಗೆ ಬೀಳುವ ಅಕ್ಷರ ಆಗಬೇಕಿದೆ ಎನ್ನುವ ಅವರ ಆಶಯವನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಕನ್ನಡ ಹಾಗೂ ಕನ್ನಡಿಗರ ಹಿತವೂ ಅಡಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.