ADVERTISEMENT

ತೆರಿಗೆ ಶೋಧದ ಗುರಿ ವಿರೋಧ ಪಕ್ಷಗಳು ಮಾತ್ರವೇ?

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 20:30 IST
Last Updated 12 ಏಪ್ರಿಲ್ 2019, 20:30 IST
ಐಟಿ
ಐಟಿ   

ಆದಾಯ ತೆರಿಗೆ ಇಲಾಖೆಯ ಅನುಷ್ಠಾನ ನಿರ್ದೇಶನಾಲಯವನ್ನು ಕೇಂದ್ರದ ಆಡಳಿತಾರೂಢರು ವಿರೋಧ ಪಕ್ಷಗಳನ್ನು ಹಣಿಯಲು ಬಳಸುತ್ತಿದ್ದಾರೆ ಎಂಬ ಆರೋಪಕ್ಕೆ ಈಗ ಐದು ವರ್ಷ ತುಂಬಿದೆ. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಏರಿದ ನಂತರ ಪ್ರತೀ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಎದುರಾಳಿ ಪಕ್ಷಗಳ ನಾಯಕರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಶೋಧಗಳು ನಡೆಯುತ್ತಿವೆ.

ಕಳೆದ ಆರು ತಿಂಗಳಲ್ಲಿ ನಡೆದಿರುವ 17 ದೊಡ್ಡ ಪ್ರಮಾಣದ ಆದಾಯ ತೆರಿಗೆ ಶೋಧಗಳಲ್ಲಿ 16 ಪ್ರಕರಣಗಳಲ್ಲಿ ಇರುವವರು ಬಿಜೆಪಿಯೇತರ ಪಕ್ಷಗಳ ನಾಯಕರು. ಕರ್ನಾಟಕದಲ್ಲಂತೂ ಇದು ಪ್ರಹಸನದ ಮಟ್ಟಕ್ಕೆ ಹೋಗಿದೆ. ಆದಾಯ ತೆರಿಗೆ ಇಲಾಖೆಯು ಬಿಜೆಪಿಯೇತರ ಪಕ್ಷಗಳ ನಾಯಕರನ್ನು ಗುರಿಯಾಗಿಟ್ಟುಕೊಂಡು ಶೋಧ ನಡೆಸುತ್ತಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮುಂತಾದವರು ಪ್ರತಿಭಟನೆ ನಡೆಸಿದ್ದರು. ಇದರಿಂದ ತಮ್ಮ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗಿದೆ ಎಂದು ಆರೋಪಿಸಿ ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ ಬಿ.ಆರ್. ಬಾಲಕೃಷ್ಣನ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

ಆಯೋಗದ ಸೂಚನೆಯಂತೆ, ಪ್ರತಿಭಟನೆ ನಡೆಸಿದವರ ಮೇಲೆ ಸ್ಥಳೀಯ ಪೊಲೀಸರು ದೂರು ದಾಖಲಿಸಿದ್ದಾರೆ. ಆಡಳಿತಾರೂಢರಿಗೆ ಅನುಕೂಲ ಕಲ್ಪಿಸುವ ಏಕೈಕ ಉದ್ದೇಶದಿಂದ ಆದಾಯ ತೆರಿಗೆ ಇಲಾಖೆಯು ವಿರೋಧ ಪಕ್ಷಗಳ ಮೇಲೆ ಶೋಧ ಕಾರ್ಯ ನಡೆಸಿರುವಂತೆ ಮೇಲ್ನೋಟಕ್ಕೇ ಕಾಣಿಸುತ್ತಿದೆ. ಆದ್ದರಿಂದ ಇಲಾಖೆಯ ಪ್ರಧಾನ ಆಯುಕ್ತರಿಗೆ ದೂರು ನೀಡುವ ನೈತಿಕ ಅರ್ಹತೆಯೇ ಇಲ್ಲ. ಈ ದೂರಿನ ಉದ್ದೇಶವೂ ಬಿಜೆಪಿಯೇತರ ಪಕ್ಷಗಳ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸುವುದಷ್ಟೇ ಆಗಿದೆ. ಚುನಾವಣೆಗೆ ಮುನ್ನ ನಡೆಯುತ್ತಿರುವ ಆದಾಯ ತೆರಿಗೆ ಶೋಧಗಳ ಹಿಂದೆ ದುರುದ್ದೇಶವಿರುವ ಸಂಶಯವನ್ನು ಎಲ್ಲಾ ರಾಜಕೀಯ ಪಕ್ಷಗಳು ವ್ಯಕ್ತಪಡಿಸಿವೆ. ಇಲಾಖೆ ತನ್ನ ನಿತ್ಯದ ಕರ್ತವ್ಯ ನಿರ್ವಹಣೆಯ ಭಾಗವಾಗಿ ಇದನ್ನು ಮಾಡುತ್ತಿದೆ ಎಂಬ ಸರ್ಕಾರದ ವಾದವನ್ನು ನಂಬುವುದಕ್ಕೆ ಯಾವ ಆಧಾರವೂ ಇಲ್ಲ. ಅಲ್ಲದೆ ಚುನಾವಣೆ ನೀತಿ ಸಂಹಿತೆ ಈ ಸಂಸ್ಥೆಗಳಿಗೆ ಅನ್ವಯವಾಗದೇ ಇರುವುದು ಅಚ್ಚರಿ.

ADVERTISEMENT

ಆದಾಯ ತೆರಿಗೆ ಇಲಾಖೆಯು ಬಿಜೆಪಿಯೇತರ ಪಕ್ಷಗಳ ನಾಯಕರನ್ನುದುರುದ್ದೇಶಪೂರ್ವಕವಾಗಿ ಗುರಿಯಾಗಿಟ್ಟುಕೊಂಡು ಶೋಧಗಳನ್ನು ನಡೆಸಲಿದೆ ಎಂದು ಕುಮಾರಸ್ವಾಮಿ ಬಹಳ ಮುಂಚೆಯೇ ಹೇಳಿದ್ದರು. ಅವರು ಹೇಳದೇ ಇದ್ದರೂ ಇಲಾಖೆಯ ದುರುದ್ದೇಶವಂತೂ ಸ್ಪಷ್ಟವಾಗಿತ್ತು. ಇನ್ನು ದಾಳಿಯಲ್ಲಿ ವಶಪಡಿಸಿಕೊಳ್ಳಲಾದ ಮೊತ್ತ, ಕಾಗದ ಪತ್ರಗಳ ಕುರಿತಂತೆ ಇಲಾಖೆ ನೀಡುತ್ತಿದ್ದ ಹೇಳಿಕೆಗಳ ಉದ್ದೇಶವೂ ಹೆಚ್ಚುಕಡಿಮೆ ಸ್ಪಷ್ಟವೇ. ಬಿಜೆಪಿಯೇತರ ಪಕ್ಷಗಳ ನಾಯಕರನ್ನು ಜನರ ಎದುರು ನಕಾರಾತ್ಮಕವಾಗಿ ಚಿತ್ರಿಸುವುದು, ಅದರ ಮೂಲಕ ಚುನಾವಣಾ ಕಣದಲ್ಲೊಂದು ಅಸಮಾನತೆಯನ್ನು ಸೃಷ್ಟಿಸುವುದಕ್ಕೆ ಇಲಾಖೆಯು ಪ್ರಯತ್ನಿಸಿದಂತೆ ಕಾಣಿಸುತ್ತದೆ.

ಇಲಾಖೆಗಳು ನಿರ್ದಿಷ್ಟ ರಾಜಕೀಯ ಒಲವನ್ನು ಹೊಂದಿದ್ದರೆ ಪ್ರಜಾಪ್ರಭುತ್ವಕ್ಕೆ ಅದಕ್ಕಿಂತ ದೊಡ್ಡ ಹಾನಿ ಮತ್ತೊಂದಿಲ್ಲ. ಆದರೆ ಆದಾಯ ತೆರಿಗೆ ಇಲಾಖೆಯು ಕೇಂದ್ರದ ಆಡಳಿತಾರೂಢರ ಏಜೆಂಟಿನಂತೆ ಕಾರ್ಯ ನಿರ್ವಹಿಸುತ್ತಿರುವುದನ್ನು ಈತನಕದ ಉದಾಹರಣೆಗಳು ಸಾಬೀತು ಮಾಡುತ್ತಿವೆ. ಇಲಾಖೆಯೊಂದನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುವುದು ಈ ಹಿಂದೆಯೂ ಸಂಭವಿಸಿತ್ತು. ರಾಜಕೀಯ ಎದುರಾಳಿಗಳನ್ನು ನಕಾರಾತ್ಮಕವಾಗಿ ಚಿತ್ರಿಸುವುದಷ್ಟೇ ಅಲ್ಲದೆ, ಅವರನ್ನು ಹಣಿಯುವುದಕ್ಕೆ ಆದಾಯ ತೆರಿಗೆ ಇಲಾಖೆಯನ್ನು ವ್ಯವಸ್ಥಿತವಾಗಿ ಬಳಸಿಕೊಂಡಿರುವುದು ಇದೇ ಮೊದಲು ಎಂಬಂತೆ ಕಾಣಿಸುತ್ತದೆ. ಚುನಾವಣೆಗಳ ಹೊತ್ತಿನಲ್ಲಿ ನಡೆಸುವ ಶೋಧಗಳನ್ನು ಅಧಿಕಾರಾರೂಢರು ಎಷ್ಟೇ ಸಮರ್ಥಿಸಿಕೊಂಡರೂ ಅದು ಸಂಶಯಗಳಿಗೆ ಕಾರಣವಾಗಿಯೇ ತೀರುತ್ತದೆ.

ಈಗ ನಡೆದಿರುವ ಹೆಚ್ಚಿನ ಶೋಧಗಳೆಲ್ಲವೂ ಬಿಜೆಪಿಯೇತರ ಪಕ್ಷಗಳ ನಾಯಕರನ್ನೇ ಒಳಗೊಂಡಿವೆ. ಇದರ ಅರ್ಥ ಬಿಜೆಪಿಯಲ್ಲಿ ಭ್ರಷ್ಟರೇ ಇಲ್ಲ ಎಂದು ಜನರು ನಂಬಬೇಕು ಎಂದೇ? ಬಿಜೆಪಿ ಸಂಗ್ರಹಿಸಿದ ಸಂಪನ್ಮೂಲ ದಲ್ಲಿ ಶೇಕಡ 95ರಷ್ಟು ಪ್ರಮಾಣವು ಯಾವುದೇ ಲೆಕ್ಕಪತ್ರಗಳಿಗೆ ಸಿಗದೇ ಇರುವುದು ಅಷ್ಟೇ ಅಲ್ಲ ಅನಾಮಿಕ ಮೂಲಗಳಿಗೆ ಸೇರಿದ್ದು. ಅಂದರೆ ಹಣ ಸಂಗ್ರಹದ ವಿಚಾರದಲ್ಲಿ ಇತರ ಪಕ್ಷಗಳಿಗಿಂತ ಹೆಚ್ಚು ಅಪಾರದರ್ಶಕವಾಗಿರುವ ಬಿಜೆಪಿ, ಅಧಿಕಾರ ದುರುಪಯೋಗ ಪಡಿಸಿಕೊಂಡು ಉಳಿದವರನ್ನು ಖಳನಾಯಕರನ್ನಾಗಿ ಚಿತ್ರಿಸುತ್ತಿದೆ. ಈ ಪ್ರವೃತ್ತಿಯನ್ನು ತಡೆಯಲು ಆದಾಯ ತೆರಿಗೆ ಇಲಾಖೆ ಮತ್ತು ಅನುಷ್ಠಾನ ನಿರ್ದೇಶನಾಲಯಗಳಂಥ ಸಂಸ್ಥೆಗಳು ಚುನಾವಣಾ ನೀತಿ ಸಂಹಿತೆಗೆ ಒಳಪಡುವಂತೆ ಮಾಡುವುದು ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.