ADVERTISEMENT

ಸಂಪಾದಕೀಯ | ಇಸ್ರೇಲ್–ಹಮಾಸ್ ಶಾಂತಿ ಒಪ್ಪಂದ: ಗಾಜಾದಲ್ಲಿ ನೆಲಸಲಿ ಶಾಶ್ವತ ಶಾಂತಿ

ಇಸ್ರೇಲ್‌ ಮತ್ತು ಹಮಾಸ್‌ ನಡುವಣ ಎರಡು ವರ್ಷಗಳ ಯುದ್ಧ ಕೊನೆಗೊಂಡಿದೆ. ಗಾಜಾ ಪಟ್ಟಿಯಲ್ಲಿ ಇನ್ನಾದರೂ ಶಾಶ್ವತ ಶಾಂತಿ ಸ್ಥಾಪನೆಯ ಪ್ರಯತ್ನಗಳು ನಡೆಯಲಿ.

ಸಂಪಾದಕೀಯ
Published 14 ಅಕ್ಟೋಬರ್ 2025, 22:58 IST
Last Updated 14 ಅಕ್ಟೋಬರ್ 2025, 22:58 IST
   

ಸಾವುನೋವುಗಳ ಚೀತ್ಕಾರದಿಂದ ಕಂಗೆಟ್ಟಿದ್ದ ಗಾಜಾ ಪಟ್ಟಿಯೊಳಗೆ ಜೀವಸಂಚಾರದ ಕಲರವ ಕೇಳಿಸತೊಡಗಿದೆ. ನೆರವಿನ ಸಾಮಗ್ರಿಗಳನ್ನು ಹೊತ್ತಿರುವ ಟ್ರಕ್‌ಗಳು ಗಾಜಾ ಪ್ರವೇಶಿಸುತ್ತಿವೆ. ಐರೋಪ್ಯ ಒಕ್ಕೂಟ, ಪ್ಯಾಲೆಸ್ಟೀನಿಯನ್ ಪ್ರಾಧಿಕಾರ ಹಾಗೂ ವಿಶ್ವಸಂಸ್ಥೆಯ ಮಾನವೀಯ ನೆರವು ಸಂಸ್ಥೆ ಸೇರಿದಂತೆ ಹಲವು ಸಂಘಟನೆಗಳು ಪ್ಯಾಲೆಸ್ಟೀನಿಯರಿಗೆ ನೆರವು ನೀಡಲು ಮುಂದಾಗಿವೆ. ಇಸ್ರೇಲ್‌ನ ಸೇನಾಪಡೆಗಳ ಸದ್ದುಗದ್ದಲ ಗಾಜಾಪಟ್ಟಿಯಿಂದ ನಿಧಾನವಾಗಿ ಕಡಿಮೆಯಾಗುತ್ತಿದೆ ಹಾಗೂ ತಮ್ಮ ವಾಸಸ್ಥಳಗಳನ್ನು ತೊರೆದುಹೋಗಿದ್ದ ಅಸಂಖ್ಯಾತ ಪ್ಯಾಲೆಸ್ಟೀನಿಯರು ಮನೆಗಳಿಗೆ ಮರಳುತ್ತಿದ್ದು, ಹೊಸ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಹಮಾಸ್‌ ಸೆರೆಯಲ್ಲಿದ್ದ ಒತ್ತೆಯಾಳುಗಳು ಬಿಡುಗಡೆಗೊಂಡಿದ್ದಾರೆ. ಇಸ್ರೇಲ್‌ ಜೈಲುಗಳಲ್ಲಿದ್ದ ಪ್ಯಾಲೆಸ್ಟೀನ್‌ ಕೈದಿಗಳಿಗೂ ಸ್ವಾತಂತ್ರ್ಯ ದೊರೆತಿದೆ. ಇಸ್ರೇಲ್‌ ಪ್ರಹಾರದಿಂದ ಸದ್ಯಕ್ಕೆ ಪಾರಾಗಿರುವ ಗಾಜಾ ಪಟ್ಟಿಯಲ್ಲಿ ಸಂಕಟ–ಸೂತಕದ ನಡುವೆಯೂ, ಯುದ್ಧ ಕೊನೆಗೊಂಡಿರುವ ಕಾರಣದಿಂದಾಗಿ ನೆಮ್ಮದಿಯ ನಿಟ್ಟುಸಿರು ಹೊರಹೊಮ್ಮುತ್ತಿದೆ. 2023ರ ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ಹಮಾಸ್‌ ಬಂಡುಕೋರರು ನಡೆಸಿದ ದಾಳಿಯೊಂದಿಗೆ ಆರಂಭವಾದ ಯುದ್ಧ ಕೊನೆಗೊಂಡಿದೆ. ಹಮಾಸ್‌ ದಾಳಿಯಲ್ಲಿ 1,200 ಇಸ್ರೇಲಿಗರು ಮೃತಪಟ್ಟಿದ್ದರು. ಬಂಡುಕೋರರು 251 ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ಇಸ್ರೇಲ್‌ ನಡೆಸಿದ ಪ್ರತಿದಾಳಿಯಲ್ಲಿ ಹಮಾಸ್‌ ಬಂಡು
ಕೋರರ ಜೊತೆಗೆ, ಪ್ಯಾಲೆಸ್ಟೀನ್‌ನ ಕನಿಷ್ಠ 67 ಸಾವಿರ ನಾಗರಿಕರು ಬಲಿಯಾಗಿದ್ದಾರೆ ಎನ್ನಲಾಗಿದೆ. ಗಾಜಾಪಟ್ಟಿಯಲ್ಲಿ ಎಗ್ಗಿಲ್ಲದೆ ನಡೆದ ಮಾನವಹಕ್ಕುಗಳ ಹರಣ ಹಾಗೂ ಆ ಅಮಾನವೀಯ ವಿದ್ಯಮಾನಕ್ಕೆ ಅಂತರರಾಷ್ಟ್ರೀಯ ಸಮುದಾಯ ಮೂಕಪ್ರೇಕ್ಷಕನಾದುದು ಮಾನವೀಯತೆಗಾದ ಬಹು ದೊಡ್ಡ ಗಾಯವಾಗಿದೆ.

ಎರಡು ವರ್ಷಗಳ ಸಂಘರ್ಷದ ನಂತರ, ಅಮೆರಿಕದ ಅಧ್ಯಕ್ಷ ಟ್ರಂಪ್‌ ಅವರ ನೇತೃತ್ವದಲ್ಲಿ ಇಸ್ರೇಲ್‌ ಮತ್ತು ಹಮಾಸ್‌ ಶಾಂತಿ ಒಪ್ಪಂದ ಮಾಡಿಕೊಂಡಿವೆ. ಸುದೀರ್ಘ ಹಾಗೂ ನೋವಿನಿಂದ ಕೂಡಿದ ದುಃಸ್ವಪ್ನ ಕೊನೆಗೊಂಡಿದೆ; ಪಶ್ಚಿಮ ಏಷ್ಯಾದ ಪಾಲಿಗಿದು ಐತಿಹಾಸಿಕ ಮುಂಜಾವು ಎಂದು ಟ್ರಂಪ್‌ ಬಣ್ಣಿಸಿದ್ದಾರೆ. ಈ ಸಂದರ್ಭವನ್ನು ಶಾಂತಿ ಮತ್ತು ಅಭಿವೃದ್ಧಿಗೆ ಬಳಸಿಕೊಳ್ಳಬೇಕೆಂದು ಅವರು ಕರೆನೀಡಿದ್ದಾರೆ. ಶಾಂತಿಯ ಬಗೆಗಿನ ಟ್ರಂಪ್ ಅವರ ಆಶಯ ಸರಿಯಾಗಿಯೇ ಇದೆ. ಆದರೆ, ಗಾಜಾ ಪಟ್ಟಿಯಲ್ಲಿ ನಡೆದ ವಿಧ್ವಂಸಕ ಕೃತ್ಯಗಳಿಗೆ ಹಾಗೂ ಮಾನವಹಕ್ಕುಗಳ ಹರಣಕ್ಕೆ ಅಮೆರಿಕದ ಪರೋಕ್ಷ ಬೆಂಬಲವೂ ಇತ್ತೆನ್ನುವುದು ಗುಟ್ಟೇನೂ ಅಲ್ಲ. ಯುದ್ಧದ ವ್ಯಾಪಾರಿಗಳೇ ಶಾಂತಿದೂತರೂ ಆಗುವ ದ್ವಿಪಾತ್ರ ಅಭಿನಯಕ್ಕೆ ವಿಶ್ವ ಸಾಕ್ಷಿಯಾಗಿದೆ. ಭಯೋತ್ಪಾದನೆ ಮತ್ತು ಹಿಂಸಾಮಾರ್ಗದಿಂದ ಶಾಶ್ವತವಾಗಿ ಹಿಂದೆ ಸರಿಯುವಂತೆ ಪ್ಯಾಲೆಸ್ಟೀನಿಯರಿಗೆ ಕರೆ ನೀಡಿರುವ ಟ್ರಂಪ್‌ ಅವರಿಗೆ, ಇದೇ ಮಾತನ್ನು ಅಮೆರಿಕದ ಮಿತ್ರರಾಷ್ಟ್ರ ಇಸ್ರೇಲ್‌ಗೂ ಹೇಳಬೇಕೆಂದು ಅನ್ನಿಸದಿರುವುದೇ ಸಂಘರ್ಷ ಮತ್ತು ಶಾಂತಿಯ ಕಥನವನ್ನು ಹೇಳುವಂತಿದೆ.

ಇಸ್ರೇಲ್‌ ಮತ್ತು ಹಮಾಸ್‌ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿದ್ದರೂ, ಗಾಜಾ ಪಟ್ಟಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಂತಿ ನೆಲಸುವ ಬಗ್ಗೆ ಅನುಮಾನಗಳಿದ್ದೇ ಇವೆ. ಒಪ್ಪಂದದ ಪ್ರಕಾರ, ಒತ್ತೆಯಾಳುಗಳನ್ನು ಹಮಾಸ್‌ ಬಿಡುಗಡೆ ಮಾಡಿದೆ. ಆದರೆ, ಒತ್ತೆಯಾಳುಗಳ ಮೃತದೇಹಗಳ ಹಸ್ತಾಂತರ ಪೂರ್ಣಗೊಂಡಿಲ್ಲ. ಅನೇಕ ಒತ್ತೆಯಾಳುಗಳ ಮೃತದೇಹಗಳು ನಾಪತ್ತೆಯಾಗಿವೆ. ತನ್ನ ದೇಶದ ಪ್ರತಿ ನಾಗರಿಕನ ದೇಹದ ಹಸ್ತಾಂತರವೂ ನಡೆದು, ಅಂತ್ಯಕ್ರಿಯೆ ನಡೆಯುವವರೆಗೂ ಇಸ್ರೇಲ್‌ ವಿರಮಿಸುವುದಿಲ್ಲ ಎಂದು ಆ ದೇಶದ ವಕ್ತಾರರೊಬ್ಬರು ಹೇಳಿದ್ದಾರೆ. ಇದರ ಜೊತೆಗೆ, ಹಮಾಸ್‌ ಸಂಘಟನೆಯ ಭವಿಷ್ಯವೂ ಅಸ್ಪಷ್ಟವಾಗಿದೆ. ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸುವ ಹಮಾಸ್‌ ಸದಸ್ಯರು ಶಾಂತಿಯುತ ಬದುಕು ಕಟ್ಟಿಕೊಳ್ಳಲು ಅಥವಾ ಬೇರೆ ದೇಶಗಳಿಗೆ ತೆರಳಲು ಇಸ್ರೇಲ್‌ ಎಷ್ಟರಮಟ್ಟಿಗೆ ಅವಕಾಶ ಮಾಡಿಕೊಡುತ್ತದೆ ಎನ್ನುವುದು ಪ್ರಶ್ನೆಯಾಗಿಯೇ ಇದೆ. ಗಾಜಾದಿಂದ ಇಸ್ರೇಲ್‌ ‍ಪಡೆಗಳು ಪೂರ್ಣ ಪ್ರಮಾಣದಲ್ಲಿ ಹಿಂದಿರುಗುವ ಸಾಧ್ಯತೆಯ ಬಗ್ಗೆಯೂ ಅನುಮಾನ ಉಳಿದಿದೆ. ಗಾಜಾದ ಆಡಳಿತದ ಮೇಲ್ವಿಚಾರಣೆಗೆ ‘ಶಾಂತಿ ಮಂಡಳಿ’ ಸ್ಥಾಪಿಸುವ ಚಿಂತನೆಗಳ ನಡುವೆಯೇ, ಮುಂದಿನ ದಿನಗಳಲ್ಲಿ ಗಾಜಾದ ಆಡಳಿತದಲ್ಲಿ ಹಮಾಸ್‌ ಯಾವುದೇ ಪಾತ್ರವನ್ನು ವಹಿಸುವುದು ಸಾಧ್ಯವಿಲ್ಲ ಎಂದು ಅಮೆರಿಕ ಮತ್ತು ಇಸ್ರೇಲ್‌ ಪುನರುಚ್ಚರಿಸಿವೆ. ಗಾಜಾದಲ್ಲಿ ಹಮಾಸ್‌ ಸಂಘಟನೆಯನ್ನು ಅಪ್ರಸ್ತುತಗೊಳಿಸುವ ಪ್ರಯತ್ನ ಸೃಷ್ಟಿಸಬಹುದಾದ ಪರಿಣಾಮಗಳು ಯಾವ ಬಗೆಯದೆನ್ನುವುದನ್ನು ಕಾಲವೇ ನಿರ್ಣಯಿಸಬೇಕು. ಪ್ಯಾಲೆಸ್ಟೀನಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹೋದರೆ, ಶಾಂತಿ ಒಪ್ಪಂದದ ಫಲಿತಾಂಶ ದೀರ್ಘಕಾಲಿಕ ಆಗಿರಲು ಸಾಧ್ಯವಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.