
ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸಲು ಸಾಧ್ಯವಾಗದೆ ಇರುವುದಕ್ಕೆ ರಾಜ್ಯ ಸರ್ಕಾರ ಅನುವು ಮಾಡಿಕೊಡದಿರುವುದೇ ಕಾರಣ ಎಂದು ರಾಜ್ಯ ಚುನಾವಣಾ ಆಯೋಗ ಹೇಳಿದೆ. ಅವಧಿ ಮುಗಿಯಲಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ ಮಾಡದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ನಲವತ್ತಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ, ಚುನಾವಣೆ ನಡೆಸಲು ಸಾಧ್ಯವಾಗದಿರುವ ಬಗ್ಗೆ ಆಯೋಗ ತನ್ನ ಅಸಹಾಯಕತೆ ವ್ಯಕ್ತಪಡಿಸಿದೆ. ಸ್ಥಳೀಯ ಸಂಸ್ಥೆಗಳಿಗೆ ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಯುವಂತಾಗಬೇಕು ಎಂದು ನಾಲ್ಕೈದು ವರ್ಷಗಳಿಂದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುತ್ತಿರುವುದನ್ನು ನ್ಯಾಯಮೂರ್ತಿಎಸ್. ಸುನೀಲ್ ದತ್ ಯಾದವ್ ಅವರನ್ನೊಳಗೊಂಡ ಏಕಸದಸ್ಯ ನ್ಯಾಯಪೀಠದ ಗಮನಕ್ಕೆ ಆಯೋಗ ತಂದಿದೆ. ಸರ್ಕಾರ ಅನುವು ಮಾಡಿಕೊಟ್ಟರಷ್ಟೇ ನಿಗದಿತ ಸಮಯದಲ್ಲಿ ಚುನಾವಣೆ ನಡೆಯುವುದಕ್ಕೆ ಸಾಧ್ಯ ಎನ್ನುವ ಆಯೋಗದ ಹೇಳಿಕೆಯೇ ಎಲ್ಲವನ್ನೂ ಹೇಳುವಂತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ನಂಬಿಕೆಯುಳ್ಳ ಯಾವ ಸರ್ಕಾರವೂ ಸ್ಥಳೀಯ ಸಂಸ್ಥೆಗಳಿಗೆ ಜನಪ್ರತಿನಿಧಿಗಳು ಇಲ್ಲದೆ ಇರುವ ಸ್ಥಿತಿಯನ್ನು ಸೃಷ್ಟಿಸಲಾರವು. ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಸ್ವರಾಜ್ಯ ಪರಿಕಲ್ಪನೆಗೆ ಸಮೀಪವಾದ ಸ್ಥಳೀಯ ಸಂಸ್ಥೆಗಳ ವ್ಯವಸ್ಥೆ, ಅಧಿಕಾರ ವಿಕೇಂದ್ರೀಕರಣದ ಮೂಲಕ ಗುಣಮಟ್ಟ ಹಾಗೂ ವೇಗದ ಅಭಿವೃದ್ಧಿ ಚಟುವಟಿಕೆಗಳನ್ನು ಖಾತರಿ ಪಡಿಸುವಂತಹದ್ದು. ಪ್ರಜಾಪ್ರಭುತ್ವದ ಬೇರುಗಳ ರೂಪದಲ್ಲಿ ನೋಡಬಹುದಾದ ಈ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಕ್ರಿಯೆಗೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರಗಳು ತಮ್ಮ ಕೊಡುಗೆ ಸಲ್ಲಿಸುತ್ತಲೇ ಇವೆ ಹಾಗೂ ಅಧಿಕಾರ ಕೇಂದ್ರೀಕರಣದ ಅನಾರೋಗ್ಯಕರ ರಾಜಕೀಯದಲ್ಲಿ ತೊಡಗಿಕೊಂಡಿವೆ.
ಅವಧಿಗೆ ಸರಿಯಾಗಿ ಚುನಾವಣೆ ನಡೆಯದ ಕಾರಣ ರಾಜ್ಯದ ಅನೇಕ ಸ್ಥಳೀಯ ಸಂಸ್ಥೆಗಳು ಚುನಾಯಿತ ಪ್ರತಿನಿಧಿ ಗಳಿಲ್ಲದ ನಿರ್ವಾತ ಸ್ಥಿತಿ ಅನುಭವಿಸುತ್ತಿವೆ; ಅಧಿಕಾರಿಗಳ ಆಡಳಿತದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ವ್ಯವಸ್ಥೆ ಪ್ರಜಾಪ್ರಭುತ್ವದ ಅಣಕವಾಗಿದೆ ಹಾಗೂ ಸಂವಿಧಾನದ 73ನೇ ಮತ್ತು 74ನೇ ತಿದ್ದುಪಡಿಗಳು, ಸ್ಥಳೀಯ ಸಂಸ್ಥೆಗಳಿಗೆ ನೀಡಿರುವ ಸಾಂವಿಧಾನಿಕ ಮಹತ್ವವನ್ನು ಕುಗ್ಗಿಸುವಂತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಉದಾಹರಣೆಯನ್ನೇ ಗಮನಿಸಿ. ಪಾಲಿಕೆಯ ಚುನಾವಣೆಗಳು ಕೊನೆಯದಾಗಿ ನಡೆದದ್ದು ಆಗಸ್ಟ್ 22ರ 2015ರಂದು. 2020ರಲ್ಲಿ ಪಾಲಿಕೆಯ ಸದಸ್ಯರ ಅವಧಿ ಮುಗಿದು ಐದು ವರ್ಷಗಳು ಕಳೆದರೂ, ಚುನಾವಣೆ ನಡೆದಿಲ್ಲ. ವಾರ್ಡ್‌ಗಳಲ್ಲಿ ಚುನಾಯಿತ ಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಅಧಿಕಾರಿಗಳು ನಿರ್ವಹಿಸುವ ಪರಿಸ್ಥಿತಿ ತಲೆದೋರಿದೆ. ನಾಗರಿಕರು ಮತ್ತು ಅಧಿಕಾರಿಗಳ ನಡುವೆ ಕೊಂಡಿಗಳ ರೂಪದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಾರ್ಡ್ ಸದಸ್ಯರಿಲ್ಲದೆ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲವಾಗಿದೆ. ಈಗ, ‘ಬಿಬಿಎಂಪಿ’ ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ರೂಪಾಂತರಗೊಂಡಿದ್ದು, 2026ರಲ್ಲಿ ಚುನಾವಣೆಗಳು ನಡೆಯಬಹುದು ಎಂದು ಹೇಳಲಾಗುತ್ತಿದೆ. ಆದರೆ, ಇಲ್ಲಿಯವರೆಗೂ ಚುನಾವಣೆಯ ಸಿದ್ಧತೆಗಳೇ ಆರಂಭಗೊಂಡಿಲ್ಲ.
ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ವಿಳಂಬ ಮಾಡಿದಷ್ಟೂ ಜನರ ಹಕ್ಕುಗಳನ್ನು ಹತ್ತಿಕ್ಕಿದಂತಾಗುತ್ತದೆ. ಗ್ರಾಮ ಪಂಚಾಯಿತಿಗಳಿಂದ ಮಹಾನಗರ ಪಾಲಿಕೆಗಳವರೆಗೆ ಚುನಾವಣೆಗಳನ್ನು ಸಕಾಲದಲ್ಲಿ ನಡೆಸುವ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸುವ ವ್ಯವಸ್ಥೆ ಸಕ್ರಿಯವಾಗಿರುವಂತೆ ನೋಡಿಕೊಳ್ಳಬೇಕಾದುದು ಜನಪರ ಸರ್ಕಾರದ ಹೊಣೆಗಾರಿಕೆ. ಸ್ಥಳೀಯ ಸಂಸ್ಥೆಗಳು ಇಲ್ಲದೆ ಹೋದರೆ ಜನಸಾಮಾನ್ಯರ ತವಕ ತಲ್ಲಣಗಳು ಆಡಳಿತದ ಗಮನಕ್ಕೆ ಬರುವುದರಲ್ಲಿ ದೊಡ್ಡ ಕಂದಕವೇ ರೂಪುಗೊಳ್ಳುತ್ತದೆ. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಜನರಿಗೆ ನೇರವಾಗಿ ಉತ್ತರದಾಯಿಗಳಾಗಿರುತ್ತಾರೆ. ಅವರು, ಸ್ಥಳೀಯರಾಗಿರುವುದರಿಂದ ಅಲ್ಲಿನ ಸಮಸ್ಯೆಗಳ ಪರಿಚಯವಿರುತ್ತದೆ ಹಾಗೂ ಜನರ ಕುಂದುಕೊರತೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ಸಾಧ್ಯವೂ, ಅನಿವಾರ್ಯವೂ ಆಗುತ್ತದೆ. ಕ್ಷೇತ್ರಗಳ ಪುನರ್ ವಿಂಗಡಣೆ, ಮೀಸಲಾತಿ ಹೊಂದಾಣಿಕೆ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ ಚುನಾವಣೆಗಳನ್ನು ಮುಂದೂಡುವ ಚಾಳಿ ಒಳ್ಳೆಯದಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಪಕ್ಷ ಹಾಗೂ ರಾಜಕೀಯ ಚಟುವಟಿಕೆಯ ದೃಷ್ಟಿಯಿಂದಷ್ಟೇ ನೋಡದೆ, ಬೇರುಮಟ್ಟದ ಅಭಿವೃದ್ಧಿ ಸಾಧ್ಯತೆಗಳ ರೂಪದಲ್ಲಿ ನೋಡಬೇಕಾಗಿದೆ. ಯಾವುದೇ ನೆಪ ಹೇಳದೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ವಿಳಂಬವಿಲ್ಲದೆ ನಡೆಸಲು ಸರ್ಕಾರ ಮುಂದಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.