‘ಸಿಂಧೂರ ಕಾರ್ಯಾಚರಣೆ’ ಸಂದರ್ಭದಲ್ಲಿ ಯುದ್ಧ ವಿಮಾನ ನಷ್ಟ ಉಂಟಾಗಿದೆ ಎಂಬ ಮಾಹಿತಿಯನ್ನು ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಬಹಿರಂಗಪಡಿಸಿದ್ದಾರೆ. ಹಾಗಾಗಿ ಈ ವಿಚಾರದಲ್ಲಿ ಸ್ವಲ್ಪಮಟ್ಟಿನ ಸ್ಪಷ್ಟತೆ ಮೂಡಿದೆ. ಸರ್ಕಾರ ಈ ವಿಚಾರದಲ್ಲಿ ಈವರೆಗೆ ನುಣುಚಿಕೊಳ್ಳುವ ಉತ್ತರ ನೀಡುತ್ತಿತ್ತು. ಭಾರತೀಯ ವಾಯುಪಡೆಗೆ ಯುದ್ಧ ವಿಮಾನ ನಷ್ಟ ಉಂಟಾಗಿದೆ ಎಂದು ಅನಿಲ್ ಚೌಹಾಣ್ ಹೇಳಿದ್ದಾರೆ. ಆದರೆ ನಿಖರ ಸಂಖ್ಯೆಯನ್ನು ಅವರು ಹೇಳಿಲ್ಲ. ‘ಯುದ್ಧ ತಂತ್ರಕ್ಕೆ ಸಂಬಂಧಿಸಿ ಮಾಡಿದ ತಪ್ಪುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು’ ಮತ್ತು ತಕ್ಷಣವೇ ಅವನ್ನು
ಸರಿಪಡಿಸಿಕೊಳ್ಳಲಾಯಿತು ಎಂದು ಅವರು ಹೇಳಿದ್ದಾರೆ. ವಾಯುಪಡೆಯ ಕಾರ್ಯಾಚರಣೆ ವಿಭಾಗದ ಮಹಾನಿರ್ದೇಶಕ ಏರ್ ಮಾರ್ಷಲ್ ಎ.ಕೆ.ಭಾರ್ತಿ ಅವರು ಕೂಡ ‘ನಷ್ಟಗಳು ಸಂಘರ್ಷದ ಭಾಗವೇ ಆಗಿರುತ್ತವೆ’, ಎಲ್ಲ ಪೈಲಟ್‌ಗಳು ಸುರಕ್ಷಿತವಾಗಿ ಹಿಂದಿರುಗಿದ್ದಾರೆ ಎಂದು ಹೇಳಿದ್ದರು. ಇದು ವಿವಿಧ ರೀತಿಯ ವ್ಯಾಖ್ಯಾನಗಳಿಗೆ ದಾರಿ ಮಾಡಿಕೊಟ್ಟಿತ್ತು. ದೇಶದ ಒಳಗೆ ಮತ್ತು ಹೊರಗೆ ಈ ಕುರಿತಂತೆ ವಿವಿಧ ರೀತಿಯ ಊಹಾಪೋಹಗಳು, ವ್ಯಾಖ್ಯಾನಗಳು ಮತ್ತು ಪ್ರಶ್ನೆಗಳು ಎದ್ದಿದ್ದವು. ಸಿಡಿಎಸ್ ಹೇಳಿಕೆಯಿಂದ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಂತಾಗಿದೆ. ನಷ್ಟ ಉಂಟಾಗಿದೆ ಎಂಬ ಅವರ ಹೇಳಿಕೆಯಿಂದ ‘ಸಿಂಧೂರ ಕಾರ್ಯಾಚರಣೆ’ಯ ಮಹತ್ವದ ವಿಚಾರದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಸಂಘರ್ಷದ ಸಂದರ್ಭದಲ್ಲಿ ನಷ್ಟ ಉಂಟಾಗುವುದನ್ನು ತಪ್ಪಿಸಲಾಗದು ಮತ್ತು ದೇಶವು ಅದಕ್ಕೆ ಸನ್ನದ್ಧ
ವಾಗಿರಬೇಕು. ನಷ್ಟ ಎಷ್ಟೇ ದೊಡ್ಡದಾಗಿದ್ದರೂ ಅದನ್ನು ಸ್ವೀಕರಿಸಬೇಕು.
ಅನಿಲ್ ಚೌಹಾಣ್ ಅವರ ಹೇಳಿಕೆಯು ಕೆಲವು ಹೊಸ ಪ್ರಶ್ನೆಗಳನ್ನು ಎತ್ತಿದೆ. ಕಾರ್ಯಾಚರಣೆ ನಡೆದ ಮೂರು ವಾರಗಳ ಬಳಿಕ ಸಿಂಗಪುರದಲ್ಲಿ ನಡೆದ ಸುರಕ್ಷತೆಗೆ ಸಂಬಂಧಿಸಿದ ಸಮಾವೇಶವೊಂದರ ಸಂದರ್ಭದಲ್ಲಿ ಬ್ಲೂಮ್‌ಬರ್ಗ್ ಟಿ.ವಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಅವರು ಮಾತನಾಡಿದ್ದಾರೆ. ಈ ಬಹಿರಂಗಪಡಿಸುವಿಕೆಯನ್ನು ಭಾರತದಲ್ಲಿಯೇ ಮಾಡಬೇಕಿತ್ತು. ಏಕೆಂದರೆ, ವಿಮಾನ ನಷ್ಟಕ್ಕೆ ಸಂಬಂಧಿಸಿ ದೇಶದೊಳಗೆ ನಿರಂತರವಾಗಿ ಪ್ರಶ್ನೆಗಳನ್ನು ಎತ್ತಲಾಗಿತ್ತು. ಸರ್ಕಾರ ಮತ್ತು ಆಡಳಿತ ಪಕ್ಷದ ರಾಜಕೀಯ ನಾಯಕರು ಈ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದರು. ಹೀಗಾಗಿ, ಮಾಹಿತಿಯನ್ನು ಆರಂಭದಲ್ಲಿ ಮುಚ್ಚಿಡಲಾಯಿತು ಎಂಬ ಭಾವನೆ ಉಂಟಾಗುವುದು ಸಹಜವೇ ಆಗಿದೆ. ಯುದ್ಧ ತಂತ್ರಕ್ಕೆ ಸಂಬಂಧಿಸಿದ ಅಥವಾ ಕಾರ್ಯಾಚರಣೆಯ ವಿವರಗಳ ಕುರಿತು ಪ್ರಶ್ನೆಗಳನ್ನು ಕೇಳಿರಲಿಲ್ಲ. ರಾಷ್ಟ್ರೀಯವಾದಿ ಸಾಮಾಜಿಕ ಮಾಧ್ಯಮಗಳಲ್ಲಿ ಜನರಲ್ ಚೌಹಾಣ್ ಅವರನ್ನು ಅವರು ನೀಡಿದ ಹೇಳಿಕೆಗಾಗಿ ಟೀಕಿಸಲಾಗಿದೆ. ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸಲು ದಾರಿಗಳು ಇಲ್ಲ. ಹಾಗಿದ್ದರೂ ಯುದ್ಧದ ಕುರಿತು ಜನರ ಸಾಮಾನ್ಯ ಗ್ರಹಿಕೆ ಏನು ಎಂಬುದನ್ನು ಇದು ತೋರಿಸುತ್ತದೆ.
‘ಸಿಂಧೂರ ಕಾರ್ಯಾಚರಣೆ ಕುರಿತು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಯನ್ನು ಈ ದೃಷ್ಟಿಯಿಂದ ನೋಡಬೇಕು. ಒಂದು ಯುದ್ಧವು ಯಾವ ಪ್ರಮಾಣದ್ದೇ ಆಗಲಿ, ಯಾವ ಸ್ವರೂಪದ್ದೇ ಆಗಲಿ, ರಾಷ್ಟ್ರಮಟ್ಟದಲ್ಲಿ ದೊಡ್ಡ ಬೆಳವಣಿಗೆ. ಈ ಕಾರ್ಯಾಚರಣೆಯು ಪಾಕಿಸ್ತಾನದ ಜೊತೆಗಿನ ಭಾರತದ ಸಂಬಂಧಕ್ಕೆ ಹೊಸದೊಂದು ಆಯಾಮವನ್ನು ಸೇರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಈ ಕುರಿತು ಮಾತನಾಡಿದ್ದರು. ಸಂಸತ್ತು ದೇಶದ ಅತ್ಯುನ್ನತ ಪ್ರಜಾಸತ್ತಾತ್ಮಕ ವೇದಿಕೆ. ಹಾಗಾಗಿ ಕಾರ್ಯಾಚರಣೆ ಕುರಿತು ಚರ್ಚಿಸುವ ಹಕ್ಕು ಸಂಸತ್ತಿಗೆ ಇದೆ. ಮಾಹಿತಿಯನ್ನು ಕೇಳಿ ಪಡೆಯುವ, ಪ್ರಶ್ನೆಗಳನ್ನು ಕೇಳುವ ಮತ್ತು ನಿರ್ಧಾರಗಳಿಗಾಗಿ ಸರ್ಕಾರವನ್ನು ಉತ್ತರದಾಯಿಯನ್ನಾಗಿ ಮಾಡುವ ಹಕ್ಕು ಸಂಸತ್ತಿಗೆ ಇದೆ. ಎಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಗಳೂ ಈ ಹಕ್ಕಿಗೆ ಮನ್ನಣೆ ನೀಡಿವೆ. ಭಾರತದಲ್ಲಿಯೂ ಇಂತಹ ಪೂರ್ವನಿದರ್ಶನ ಇದೆ. ಸಂಘರ್ಷದ ಸಂದರ್ಭದಲ್ಲಿ ವಿರೋಧ ಪಕ್ಷಗಳು ಸರ್ಕಾರದ ಜೊತೆಗೆ ನಿಂತಿದ್ದವು ಮತ್ತು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಬೆಂಬಲ ಘೋಷಿಸಿದ್ದವು. ಪಾಕಿಸ್ತಾನದ ಜೊತೆಗೆ ಸಂಘರ್ಷ ನಡೆಸಿದ್ದು ಸರ್ಕಾರ ಅಲ್ಲ, ಬದಲಿಗೆ ಭಾರತ ಈ ಸಂಘರ್ಷ ನಡೆಸಿದೆ ಎಂಬುದು ನಮ್ಮ ಗಮನದಲ್ಲಿ ಇರಬೇಕು. ಹಾಗಾಗಿ, ಕಾರ್ಯಾಚರಣೆ ಹೇಗೆ ನಡೆಯಿತು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ದೇಶಕ್ಕೆ ಇದೆ. ವಿವಿಧ ಮೂಲಗಳು ಅಲ್ಪಸ್ವಲ್ಪ ಮಾಹಿತಿಯನ್ನು ಕಂತು ಕಂತಲ್ಲಿ ಬಹಿರಂಗಪಡಿಸಿದರೆ ನಿಜವಾದ ಚಿತ್ರಣವು ಯಾರಿಗೂ ತಿಳಿಯದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.