ADVERTISEMENT

ಸಂಪಾದಕೀಯ | ಪಡಿತರ ಧಾನ್ಯಗಳ ಕಳ್ಳಸಾಗಣೆ; ನಿಯಂತ್ರಣಕ್ಕೆ ಬಿಗಿ ಕ್ರಮ ಅಗತ್ಯ

ಬಡವರ ಘನತೆ ಎತ್ತಿಹಿಡಿಯುವುದು ಅನ್ಯಭಾಗ್ಯ ಯೋಜನೆಯ ಗುರಿ. ಈ ದಿಸೆಯಲ್ಲಿ ಪಡಿತರ ಅಕ್ಕಿ ಕಳ್ಳಸಾಗಣೆ ದಂಧೆಗೆ ಮೂಗುದಾರ ಹಾಕಬೇಕಿದೆ.

ಸಂಪಾದಕೀಯ
Published 12 ಡಿಸೆಂಬರ್ 2025, 0:24 IST
Last Updated 12 ಡಿಸೆಂಬರ್ 2025, 0:24 IST
<div class="paragraphs"><p>ಪಡಿತರ</p></div>

ಪಡಿತರ

   

ರಾಜ್ಯದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಪಡಿತರ ಚೀಟಿದಾರರಿಗೆ ವಿತರಣೆಯಾಗುವ ಆಹಾರ ಧಾನ್ಯಗಳ ಕಳ್ಳಸಾಗಣೆ ದಶಕಗಳ ಕಾಲದಿಂದಲೂ ನಡೆಯುತ್ತಲೇ ಇದೆ. ಅನ್ನಭಾಗ್ಯ ಯೋಜನೆಯಡಿ ವಿತರಿಸುತ್ತಿರುವ ಅಕ್ಕಿ ಹೊರರಾಜ್ಯಗಳಿಗಷ್ಟೇ ಅಲ್ಲ, ದುಬೈ, ಸಿಂಗಪುರ ಸೇರಿದಂತೆ ವಿದೇಶಗಳಿಗೂ ಕಳ್ಳಸಾಗಣೆ ಆಗುತ್ತಿದೆ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಸದನದಲ್ಲೇ ಆರೋಪಿಸಿದ್ದಾರೆ. ಈ ಕುರಿತ ಪ್ರಶ್ನೆಗೆ ಉತ್ತರ ನೀಡಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ ಅವರು, ಪ್ರಸಕ್ತ ವರ್ಷದ ಏಪ್ರಿಲ್‌ನಿಂದ ನವೆಂಬರ್‌ವರೆಗಿನ ಅವಧಿಯಲ್ಲಿ ಪಡಿತರ ಅಕ್ಕಿ ಕಳ್ಳಸಾಗಣೆ ಪ್ರಕರಣಗಳಲ್ಲಿ
570 ಮಂದಿಯನ್ನು ಬಂಧಿಸಿ, 29,600 ಕ್ವಿಂಟಲ್‌ ಅಕ್ಕಿ ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಒದಗಿಸಿದ್ದಾರೆ. ಸಚಿವರ ಉತ್ತರವು ಪಡಿತರ ಧಾನ್ಯಗಳ ಕಳ್ಳಸಾಗಣೆ ಅವ್ಯಾಹತವಾಗಿ ಮುಂದುವರಿದಿರುವುದನ್ನು ಖಚಿತಪಡಿಸುವುದರ ಜೊತೆಯಲ್ಲೇ, ರಾಜ್ಯದಲ್ಲಿ ಪಡಿತರ ವಿತರಣಾ ವ್ಯವಸ್ಥೆಯು ದೋಷಮುಕ್ತವಾಗಿಲ್ಲ ಎಂಬುದನ್ನು ಬಹಿರಂಗಪಡಿಸಿದೆ. ಪಡಿತರ ಧಾನ್ಯಗಳ ಕಳ್ಳಸಾಗಣೆ ಕುರಿತು ಲೋಕಾಯುಕ್ತವು 2011ರಿಂದ ಈಚೆಗೆ ಹಲವು ಬಾರಿ ವರದಿಗಳನ್ನು ನೀಡಿದೆ. ಮಹಾಲೇಖಪಾಲರ (ಸಿಎಜಿ) ವರದಿಗಳಲ್ಲೂ ಹಲವು ಬಾರಿ ಬೆಳಕು ಚೆಲ್ಲಲಾಗಿತ್ತು. ಆಹಾರ ಧಾನ್ಯಗಳ ಸಾಗಾಣಿಕೆಯ ಗುತ್ತಿಗೆ ಪಡೆದಿರುವ ಗುತ್ತಿಗೆದಾರರೇ ಮಾರ್ಗ ಬದಲಿಸಿ ಆಹಾರ ಧಾನ್ಯ ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣಗಳೂ ವರದಿಯಾಗುತ್ತಿವೆ. ಸರ್ಕಾರದ ಅಧಿಕಾರಿಗಳು ಶಾಮೀಲು ಆಗಿರುವುದ ರಿಂದಲೇ ಬಡವರ ಹೊಟ್ಟೆ ತುಂಬಿಸ ಬೇಕಾದ ಪಡಿತರ ಧಾನ್ಯಗಳನ್ನು ಕಾಳಸಂತೆಗೆ ಸಾಗಿಸುವ ದಂಧೆ ನಿರಾತಂಕವಾಗಿ ಮುಂದುವರಿದಿದೆ.

ದೇಶದ ಎಲ್ಲ ನಾಗರಿಕರಿಗೂ ಅಗತ್ಯ ಪ್ರಮಾಣದ ಆಹಾರದ ಲಭ್ಯತೆಯ ಖಾತರಿ ಒದಗಿಸುವ ಉದ್ದೇಶದಿಂದ ಅನುಷ್ಠಾನದಲ್ಲಿರುವ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಅನ್ನಭಾಗ್ಯ ಯೋಜನೆ ಜಾರಿಯಲ್ಲಿದೆ. ಆದರೆ, ಪಡಿತರ ಧಾನ್ಯಗಳ ಕಳ್ಳಸಾಗಣೆ ಹಾವಳಿ ನಿಯಂತ್ರಿಸಲು ಸರ್ಕಾರ ವಿಫಲವಾಗಿರುವುದರಿಂದ ಬಡವರಿಗೆ ಆಹಾರ ಭದ್ರತೆಯ ಖಾತರಿಯೇ ಇಲ್ಲದಂತಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ತೂಕದಲ್ಲಿ ಮೋಸ, ಪಡಿತರ ವಿತರಣೆಗೆ ಸತಾಯಿಸುವುದು ನಡೆಯುತ್ತಿದೆ. ಇದರಿಂದ ಹಿರಿಯ ನಾಗರಿಕರು, ಮಹಿಳೆಯರು ಮತ್ತು ನಿತ್ಯ ದುಡಿಮೆಗೆ ಹೋಗುವ ಜನರು ಪಡಿತರ ಧಾನ್ಯ ಪಡೆಯಲು ಪರದಾಡಬೇಕಾದ ಸ್ಥಿತಿ ಇದೆ. ಬಡ ಕುಟುಂಬಗಳು ಸೇವಿಸುವ ಆಹಾರದಲ್ಲಿ ಪೌಷ್ಟಿಕತೆ ಹೆಚ್ಚಿಸುವ ಉದ್ದೇಶದಿಂದ ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡಿ, ತೊಗರಿ ಬೇಳೆ, ಸಕ್ಕರೆ, ಅಡುಗೆ ಎಣ್ಣೆ ಮುಂತಾದ ಅಗತ್ಯ ಪದಾರ್ಥಗಳನ್ನು ಒಳಗೊಂಡ ಇಂದಿರಾ ಕಿಟ್‌ ವಿತರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರದ ಈ ಯೋಜನೆಯ ಹಿಂದಿರುವ ಉದ್ದೇಶವು ಉತ್ತಮವಾದುದೇ ಆದರೂ, ಅಕ್ಕಿ ವಿತರಣೆಯಲ್ಲಿ ಲೋಪಗಳಾಗದಂತೆ ಹೆಚ್ಚು ಎಚ್ಚರ ವಹಿಸಬೇಕಾಗುತ್ತದೆ. ಪಡಿತರ ಚೀಟಿದಾರರಿಗೆ ಕಡಿಮೆ ಪ್ರಮಾಣದ ಅಕ್ಕಿ ವಿತರಿಸುವಾಗ ಕಳ್ಳಸಾಗಣೆ ನಡೆದರೆ ಈ ಪಡಿತರವನ್ನೇ ನೆಚ್ಚಿಕೊಂಡು ಬದುಕು ಸಾಗಿಸುವ ಕುಟುಂಬಗಳ ಮೇಲೆ ಘೋರ ದುಷ್ಪರಿಣಾಮ ಆಗುತ್ತದೆ.

ADVERTISEMENT

ಪಡಿತರ ಅಕ್ಕಿಯನ್ನು ವಿವಿಧ ಬ್ರ್ಯಾಂಡ್‌ಗಳ ಹೆಸರಿನಲ್ಲಿ ದುಬಾರಿ ದರಕ್ಕೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಆರೋಪಗಳಿವೆ. ಪಡಿತರ ಸಾಗಣೆ ಮತ್ತು ವಿತರಣೆ ಮೇಲೆ ನಿಗಾ ಇಡುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಇದಕ್ಕಾಗಿ ಆಧಾರ್‌ ಜೋಡಣೆ, ಬೆರಳಚ್ಚು ಗುರುತಿನ ದೃಢೀಕರಣ, ಪಡಿತರ ಧಾನ್ಯಗಳ ಸಾಗಾಣಿಕೆ ವಾಹನಗಳಿಗೆ ಜಿಪಿಎಸ್‌ ಸಾಧನ ಅಳವಡಿಕೆ, ಗೋದಾಮುಗಳಲ್ಲಿ ನಿಗಾ ಇಡುವಂತಹ ಕ್ರಮಗಳನ್ನು ಕೈಗೊಂಡಿದೆ. ಆದರೆ, ಈ ಯಾವ ಕ್ರಮಗಳೂ ಪಡಿತರ ಧಾನ್ಯಗಳ ವಿತರಣಾ ವ್ಯವಸ್ಥೆಯಲ್ಲಿನ ದೋಷ ಸರಿಪಡಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಈಗ ವರದಿಯಾಗುತ್ತಿರುವ ಪ್ರಕರಣಗಳು ದೃಢಪಡಿಸುತ್ತವೆ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮಾಡುವ ಆಯ್ಕೆಯನ್ನು ಸರ್ಕಾರ ಪರಿಗಣಿಸಬಹುದು. ಅಗತ್ಯ ಪ್ರಮಾಣದ ಅಕ್ಕಿ ಲಭ್ಯವಿಲ್ಲದ ಕಾರಣದಿಂದ ಕೆಲವು ಸಮಯ ರಾಜ್ಯದಲ್ಲಿ ಡಿಬಿಟಿ ಜಾರಿಗೊಳಿಸಿದ ಅನುಭವವನ್ನು ಇದಕ್ಕಾಗಿ ಬಳಸಿಕೊಳ್ಳಬಹುದು. ಫಲಾನುಭವಿಗಳು ಸರ್ಕಾರ ನೀಡಿದ ಹಣ ಬಳಸಿಕೊಂಡು ತಮ್ಮ ಆಯ್ಕೆಯ ಧಾನ್ಯ ಖರೀದಿಸುವುದಕ್ಕೂ ಅವಕಾಶ ದೊರಕುತ್ತದೆ. ಬಡವರ ಜೀವನದ ಘನತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಶ್ರೀಮಂತ ಕಾಳಸಂತೆಕೋರರ ಲಾಭಕ್ಕಾಗಿ ಅಲ್ಲ. ಅನ್ನಭಾಗ್ಯ ಯೋಜನೆಯ ಅನುಷ್ಠಾನದಲ್ಲಿರುವ ಲೋಪದೋಷಗಳಿಗೆ ತುರ್ತಾಗಿ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ಇಲ್ಲವಾದರೆ, ಬಡವರ ಹೊಟ್ಟೆ ತುಂಬಿಸುವುದಕ್ಕಾಗಿ ಜಾರಿಯಲ್ಲಿರುವ ಯೋಜನೆಯು ಕಾಳಸಂತೆಕೋರರ ದುರ್ಲಾಭಕ್ಕೆ ಬಳಕೆಯಾಗಿ, ಆಹಾರ ಭದ್ರತೆಯ ಖಾತರಿ ಒದಗಿಸುವ ಮೂಲ ಉದ್ದೇಶವೇ ವಿಫಲವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.