ADVERTISEMENT

ಸಂಪಾದಕೀಯ: ಇರಾನ್‌ ಮೇಲೆ ಅಮೆರಿಕ–ಇಸ್ರೇಲ್ ದಾಳಿಯು ಸಾಮ್ರಾಜ್ಯಶಾಹಿ ಭಯೋತ್ಪಾದನೆ

ಸಂಪಾದಕೀಯ
Published 2 ಮಾರ್ಚ್ 2026, 0:08 IST
Last Updated 2 ಮಾರ್ಚ್ 2026, 0:08 IST
ಸಂಪಾದಕೀಯ
ಸಂಪಾದಕೀಯ   
ಇರಾಕ್‌, ಲಿಬಿಯಾ, ಗಾಜಾ, ವೆನೆಜುವೆಲಾ ಸಾಲಿಗೆ ಈಗ ಇರಾನ್‌ ಸೇರಿಕೊಂಡಿದೆ. ಸಾಮ್ರಾಜ್ಯಶಾಹಿ ಕಾರ್ಯಾ ಚರಣೆಗೆ ದಾಳಿಕೋರರು ನೀಡುವ ಯಾವುದೇ ಕಾರಣ ಸಮರ್ಥನೀಯವಲ್ಲ.

ಇರಾನ್‌ ಮೇಲೆ ಅಮೆರಿಕ ಮತ್ತು ಇಸ್ರೇಲ್‌ ನಡೆಸಿರುವ ಭೀಕರ ದಾಳಿಯು ಉಭಯ ದೇಶಗಳು ತಮ್ಮ ಸ್ವಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ನಡೆಸಿರುವ ಸೈನಿಕ ಹಾಗೂ ಸಾಮ್ರಾಜ್ಯಶಾಹಿ ಕಾರ್ಯಾಚರಣೆಯಾಗಿದೆ. 2025ರಲ್ಲಿ ನಡೆದ ದಾಳಿಯ ಎಂಟು ತಿಂಗಳ ತರುವಾಯ ಮತ್ತೆ ನಡೆದಿರುವ ದಾಳಿಯು, ಇರಾನ್‌ನ ರಾಜಕೀಯ, ಧಾರ್ಮಿಕ ಹಾಗೂ ಸೇನಾ ನಾಯಕತ್ವ ಮತ್ತು ಅವರ ಕುಟುಂಬಗಳನ್ನು ಗುರಿಯಾಗಿಸಿಕೊಂಡಿದೆ. ಇರಾನ್‌ನ ಅತ್ಯುಚ್ಚ ನಾಯಕ ಅಯಾತೊಲ್ಲಾ ಖಮೇನಿ ಅವರನ್ನು ಹತ್ಯೆ ಮಾಡಲಾಗಿದೆ. ಗಾಜಾದಲ್ಲಿ ನಡೆದಿರುವ ಜನಾಂಗೀಯ ಹತ್ಯೆಗಳಿಗೆ ಜಡವಾಗಿರುವ ಜಗತ್ತು, ವಿಶೇಷವಾಗಿ ಪಶ್ಚಿಮ ದೇಶಗಳು, ಪ್ರಸಕ್ತ ಅಂತರರಾಷ್ಟ್ರೀಯ ಕಾನೂನುಗಳನ್ನು ಮತ್ತೆ ಉಲ್ಲಂಘಿಸಿರುವ ಅಮೆರಿಕ ಮತ್ತು ಇಸ್ರೇಲ್‌ನ ರಾಕ್ಷಸೀಯ ಕೃತ್ಯಗಳಿಂದ ಉಂಟಾಗುವ ಪರಿಣಾಮಗಳ ಬಗ್ಗೆ ವಿಚಲಿತಗೊಳ್ಳುವ ಸಾಧ್ಯತೆ ಕಡಿಮೆ. ಹಿಂದೆ ಬಳಸಿದ ತಂತ್ರಗಳನ್ನೇ ಪ್ರಸಕ್ತ ಪ್ರಹಸನದಲ್ಲೂ ಬಳಸಲಾಗುತ್ತಿದೆ. ಮೊದಲಿಗೆ ರಾಜತಾಂತ್ರಿಕ ಸಂವಾದವನ್ನು ಆರಂಭಿಸುವುದು ಹಾಗೂ ಮಾತುಕತೆಯ ಮುಖವಾಡದಡಿಯೇ ಎದುರಾಳಿಗಳನ್ನು ನಾಶಗೊಳಿಸುವ ತಂತ್ರವಿದು. ಈ ಬಾರಿ ರಾಜತಾಂತ್ರಿಕ ಮಧ್ಯವರ್ತಿಯಾಗಿ ಒಮನ್‌ ಭಾಗವಹಿಸಿತ್ತು ಹಾಗೂ ಮಾತುಕತೆಗಳು ಫಲಪ್ರದವಾಗುವ ಸಾಧ್ಯತೆಯೂ ಇತ್ತು. ಅಮೆರಿಕದೊಂದಿಗಿನ ಮಾತುಕತೆಯಲ್ಲಿ ಇರಾನ್‌ ಸಾಕಷ್ಟು ಒಪ್ಪಂದಗಳಿಗೆ ಬಂದಿತ್ತು. ಆದರೆ, ಈಗಿನ ದಾಳಿಯು ಅಮೆರಿಕ–ಒಮನ್‌ ಹಾಗೂ ಇರಾನ್‌ ನಡುವಣ ಸಂವಾದವು ಒಪ್ಪಂದದ ಸ್ವರೂಪಕ್ಕೆ ಬರುವುದನ್ನು ಹಾಳು ಮಾಡಿದೆ.

ಅಮೆರಿಕ ಮತ್ತು ಇರಾನ್‌ ನಡುವೆ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಿದ್ದ ಒಮನ್‌ನ ವಿದೇಶಾಂಗ ಸಚಿವ ಬದ್ರ್‌–ಅಲ್‌–ಬುಸೈದಿ ಅವರ ಪ್ರತಿಕ್ರಿಯೆಯು, ತ್ವರಿತ ದಾಳಿಯ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸುವಂತಿದೆ. ಅಮೆರಿಕಮತ್ತು ಇರಾನ್‌ ನಡುವಣ ಸಾಮರಸ್ಯ ವನ್ನು ಇಸ್ರೇಲ್‌ ಬಯಸುವುದಿಲ್ಲ ಹಾಗೂ ಆ ಸಂಭಾವ್ಯ ಸೌಹಾರ್ದವನ್ನು ತಡೆಯಲು ಇಸ್ರೇಲ್‌ ಪ್ರಯತ್ನಿಸುತ್ತದೆ ಎಂದು ಭಾವಿಸಲಾಗಿದೆ. ರಾಜತಾಂತ್ರಿಕ ಮಾತುಕತೆಗಳಿಂದ ಸಾಧ್ಯವಾಗಬಹು ದಾದ ಫಲಿತಾಂಶವು, ‘ಗ್ರೇಟರ್‌ ಇಸ್ರೇಲ್‌’ ಗುರಿ ಸಾಧನೆಯ ಕಡೆಗಿನ ‘ಜಿಯೊನಿಸ್ಟ್‌’ಗಳ ಸೈನಿಕ ಕಾರ್ಯಾಚರಣೆಗೆ ಅಡಚಣೆ ಉಂಟು ಮಾಡುವಂತಹದ್ದಾಗಿದೆ. ಇಸ್ರೇಲ್‌ನ ಸೈನಿಕ ಕಾರ್ಯಾಚರಣೆಯನ್ನು ವಿಫಲಗೊಳಿಸುವ ಉದ್ದೇಶ ದಿಂದ ನಡೆದ ಮಾತುಕತೆಗಳನ್ನು ಪ್ರಸಕ್ತ ದಾಳಿ ಹಾಳುಗೆಡವಿದೆ. ಈ ಯುದ್ಧವು ಅರಬ್‌ ರಾಷ್ಟ್ರಗಳೊಂದಿಗೆ ಇರಾನ್‌ಗೆ ಹಗೆತನ ಸೃಷ್ಟಿಸುವುದರೊಂದಿಗೆ, ಆ ಪ್ರದೇಶದಲ್ಲಿ ತೀವ್ರ ಅಸ್ಥಿರತೆ ಉಂಟಾಗಲು ಕಾರಣವಾಗಿದೆ. ಅಮೆರಿಕಕ್ಕೆ ಇರಾನ್‌ ‘ಸನ್ನಿಹಿತ ಬೆದರಿಕೆ’ಯಾಗಿದೆ ಎನ್ನುವ ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರ ಹೇಳಿಕೆ ಈಗಾಗಲೇ ಬಳಕೆಯಾಗಿರುವ ಸವಕಲು ಚಿತ್ರಕಥೆಯಾಗಿದೆ. ವಿಶ್ವಾಸಾರ್ಹ ‍ಪುರಾವೆಗಳಿಲ್ಲದ ಪರಮಾಣು ಶಸ್ತ್ರಾಸ್ತ್ರಗಳ ಯೋಜನೆಗಳು ಹಾಗೂ ಆಡಳಿತ ಬದಲಾವಣೆಯ ಮೂಲಕ ಇರಾನ್ ನಾಗರಿಕರಿಗೆ ‘ಸ್ವಾತಂತ್ರ್ಯ’ ದೊರಕಿಸಿಕೊಡುವ ಮಾತುಗಳ ಹಿಂದಿನ ಹುನ್ನಾರ ಅರ್ಥವಾಗದೆ ಇರುವಂತಹದ್ದೇನೂ ಅಲ್ಲ. ಆರ್ಥಿಕ ಸಂಕಷ್ಟ ಹಾಗೂ ನಾಗರಿಕ ಕ್ಷೋಭೆಯಲ್ಲಿ ಇರಾನ್‌ ಸಿಲುಕಿರುವ ಸೂಕ್ಷ್ಮ ಸಂದರ್ಭವನ್ನು ಆಕ್ರಮಣಕಾರರು ತಮ್ಮ ದಾಳಿಗೆ ಎಚ್ಚರಿಕೆಯಿಂದ ಆರಿಸಿಕೊಂಡಿದ್ದಾರೆ.

ಅರಬ್‌ ಒಕ್ಕೂಟದ ಪಶ್ಚಿಮದ ಮಿತ್ರರು ಇರಾನ್‌ ಪರವಾಗಿ ಧ್ವನಿ ಎತ್ತದೆ ಇದ್ದರೂ, ಅವರು ಪರಿಸ್ಥಿತಿಯ ಲಾಭ ಪಡೆಯುವವರಾಗಿರುವ ಸಾಧ್ಯತೆ ಕಡಿಮೆಯಾಗಿದೆ. ಸೈನಿಕ ಕಾರ್ಯಾಚರಣೆಯಿಂದ ಆಡಳಿತದ ಬದಲಾವಣೆ ಸರಳವಾಗಿ ಸಂಭವಿಸಿರುವುದೂ ವಿರಳ. ಮತ್ತೊಂದು ಗಾಜಾ ಆಗದಂತಿರಲು ಹಾಗೂ ಪ್ಯಾಲೆಸ್ಟೀನಿಯರ ದುರ್ಗತಿ ‍ಪಡೆಯದಿರಲು, ಪ್ರತಿ ಹೋರಾಟ ನಡೆಸುವುದು ಇರಾನ್‌ಗೆ ಅನಿವಾರ್ಯ ಎನ್ನುವಂತಾಗಿದೆ. ಖಮೇನಿ ಹತ್ಯೆಯ ನಂತರ ಇರಾನ್‌ನಲ್ಲಿ ಉಳಿದಿರುವ ನಾಯಕತ್ವ ಹಾಗೂ ‘ರೆವಲ್ಯೂಷನರಿ ಗಾರ್ಡ್ಸ್‌’ ಈಗಿನ ಸವಾಲುಗಳಿಗೆ ಹೇಗೆ ಪ್ರತಿಕ್ರಿಯಿಸಲಿದೆ ಎನ್ನುವುದು ಇರಾನ್‌ನ ಭವಿಷ್ಯವನ್ನು ನಿರ್ಧರಿಸಲಿದೆ. ಖಮೇನಿ ಅವಧಿಯಲ್ಲಿ ಇರಾನ್‌ನಲ್ಲಿ ಒಂದಷ್ಟು ಅತಿರೇಕಗಳಿದ್ದವು ಎನ್ನುವುದು ನಿಜ. ಆದರೆ, ಯಾವುದೇ ಕಾರಣವು ಅಮೆರಿಕ–ಇಸ್ರೇಲ್‌ ದಾಳಿಗೆ ಮತ್ತು ಹತ್ಯೆಗಳಿಗೆ ಸಮರ್ಥನೆ ಆಗಲಾರದು. ಇರಾಕ್‌, ಲಿಬಿಯಾ, ಸಿರಿಯಾ, ಗಾಜಾ, ಲೆಬನಾನ್‌ ಸೇರಿದಂತೆ ಎಲ್ಲೆಲ್ಲಿ ಅಮೆರಿಕದ ಸೇನಾಪಡೆಗಳು ಹಸ್ತಕ್ಷೇಪ ನಡೆಸಿ ಆಕ್ರಮಿಸಿಕೊಂಡಿವೆಯೋ ಆ ಪ್ರದೇಶಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಪಾಠವೊಂದಿದೆ: ಸ್ವಯಂ ನಿಯೋಜಿತ ವಿದೇಶಿ ರಕ್ಷಕರು ಸಂಘರ್ಷದ ನೆಲದಲ್ಲಿ ಸ್ಥಿರ, ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ರೂಪಿಸುವುದು ಅಪರೂಪಕ್ಕಷ್ಟೇ ಸಾಧ್ಯವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.