ಮನೋಜ್ ಝಾ
ಜನಗಣತಿ ವೇಳೆ ಜಾತಿಗಣತಿಯನ್ನೂ ನಡೆಸುವುದಾಗಿ ಘೋಷಣೆ ಮಾಡುವ ಮೂಲಕ ಮೋದಿ ಸರ್ಕಾರವು ದೇಶವನ್ನು ಅಚ್ಚರಿಗೆ ದೂಡಿದ್ದಲ್ಲದೇ, ವಿರೋಧಿ ಪಾಳಯದ ಪ್ರಮುಖ ಅಸ್ತ್ರವನ್ನು ಇಲ್ಲವಾಗಿಸಿದೆ. ಈ ಬಗ್ಗೆ ಆರ್‌ಜೆಡಿಯ ಹಿರಿಯ ಸಂಸದ ಹಾಗೂ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮನೋಜ್ ಕೆ.ಝಾ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.
ಜಾತಿಗಣತಿಯ ಘೋಷಣೆಯು ನಿಮಗೆ ಅಚ್ಚರಿ ಉಂಟುಮಾಡಿದೆಯೇ?
ಜಾತಿ ಆಧಾರಿತ ಗಣತಿಯನ್ನು ವಿರೋಧಿಸುತ್ತಿದ್ದ ಪಕ್ಷವೇ ಈಗ ಈ ನಿರ್ಧಾರ ತೆಗೆದುಕೊಂಡಿರುವುದು ವಿಸ್ಮಯ ಮೂಡಿಸಿದೆ. ಅವರ ಹಿರಿಯ ನಾಯಕರು ಜಾತಿಗಣತಿ ಬಗ್ಗೆ ಅಪಹಾಸ್ಯ ಮಾಡಿದ್ದರು, ಇದು ಜನರನ್ನು ಒಡೆಯುವ ತಂತ್ರ ಎಂದಿದ್ದರು. ವೈಜ್ಞಾನಿಕವಾದ, ನೈಜವಾದ ಅಂಕಿಅಂಶ ಇಲ್ಲದೇ ಯಾವುದೇ ರೀತಿಯ ಅಭಿವೃದ್ಧಿ ಯೋಜನೆಗಳು, ನೀತಿಗಳು ಅರ್ಥಹೀನ ಎನ್ನುವುದು ಅವರಿಗೆ ಅರ್ಥವಾಗಿದೆಯೇ ಎನ್ನುವುದು ನನ್ನ ಪ್ರಶ್ನೆ.
ಪಹಲ್ಗಾಮ್ ದಾಳಿ ನಂತರ ಭದ್ರತೆಗೆ ಸಂಬಂಧಿಸಿದ ವಿಚಾರ ಚರ್ಚೆಯಲ್ಲಿರುವಾಗ ಈ ಘೋಷಣೆ ಹೊರಬಿದ್ದಿರುವುದು ವಿಚಿತ್ರ ಎನ್ನಿಸುತ್ತಿದೆಯೇ?
ಬೇನಾಮಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳ ಮೂಲಕ ಪರೋಕ್ಷವಾಗಿ ಅವರು ಬಿಹಾರದಲ್ಲಿ ಜಾತಿಗಣತಿಯನ್ನು ನಿಲ್ಲಿಸಲು ಪ್ರಯತ್ನಿಸಿದರು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಚಾರವೇನೆಂದರೆ, ಜಾತಿಗಣತಿ ವಿಚಾರ ಪ್ರಸ್ತಾಪ ಮಾಡಿದಾಗ ವಿ ಪಕ್ಷಗಳ ನಾಯಕರು ಅಪಹಾಸ್ಯ ಮಾಡಿದ್ದರು. ಈಗ ಬಿಜೆಪಿ ವಾಸ್ತವಕ್ಕೆ ಕಣ್ಣು ತೆರೆದಿದೆ ಎಂದರೆ, ನನ್ನ ಪ್ರಕಾರ, ಇದು ಶೇ 85 ಮಂದಿಯ ಜಯ. ಈ ಬಗ್ಗೆ ‘ಬಟೇಂಗೇ ತೋ ಕಾಟೇಂಗೇ’ ಎಂದು ವಿವಿಧ ರೀತಿಯಲ್ಲಿ ಅವಮಾನಿಸುವಂತೆ ಮಾತನಾಡಿದ್ದ ಅವರ ಮುಖ್ಯಮಂತ್ರಿಗಳು ಹಾಗೂ ಹಿರಿಯ ನಾಯಕರ ಗತಿ ಏನು ಎನ್ನುವುದು ನನ್ನ ಆತಂಕವಾಗಿದೆ. ಅವರು ಈಗ ತಮ್ಮ ಮುಖವನ್ನು ಎಲ್ಲಿ ಬಚ್ಚಿಟ್ಟುಕೊಳ್ಳುತ್ತಾರೆ?
ಜಾತಿಗಣತಿ ಘೋಷಣೆಗೆ ಬಿಹಾರ ಚುನಾವಣೆ ಕಾರಣವೇ?
ಒಂದು ಚಿಂತನೆಯನ್ನು ಬಹಳ ಕಾಲ ಅದುಮಿಟ್ಟುಕೊಳ್ಳಲು ಸಾಧ್ಯವಿಲ್ಲ. ಹಿಂದೆ ಏಕೆ ಅದನ್ನು ಸ್ಥಗಿತಗೊಳಿಸಿದ್ದರು ಎನ್ನುವುದರ ಬಗ್ಗೆ ಅವರು ಗಂಭೀರ ಪ್ರಶ್ನೆಗಳನ್ನು ಎದುರಿಸಬೇಕಿದೆ. ಬಿಹಾರದಲ್ಲಿ ಮೀಸಲಾತಿ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾದಾಗ, ಅದನ್ನು ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರಿಸುವಂತೆ ನಾವು ಅವರನ್ನು ವಿನಂತಿಸಿದ್ದೆವು. ಸ್ವತಃ ಪ್ರಧಾನ ಮಂತ್ರಿಯವರೇ ಅನೇಕ ವೇದಿಕೆಗಳಲ್ಲಿ ಜಾತಿಗಣತಿ ವಿರುದ್ಧವಾಗಿ ಮಾತನಾಡಿದ್ದಾರೆ. ಅವರು ಈಗ ಬಿಹಾರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾತಿಗಣತಿ ಘೋಷಣೆ ಮಾಡಿದ್ದರೆ, ಜನ ಅಂತಿಮವಾಗಿ ಯಾರು ಇದರ ಮೂಲ ಕರ್ತೃಗಳು ಎನ್ನುವುದನ್ನು ಅರಿಯುತ್ತಾರೆ ಎನ್ನುವುದನ್ನು ಅವರಿಗೆ ಹೇಳಲಿಚ್ಛಿಸುತ್ತೇನೆ.
ಸರ್ಕಾರ ಸಂಪೂರ್ಣ ಮಾಹಿತಿ ಕೊಟ್ಟಿಲ್ಲವೇಕೆ ?
ಜನಗಣತಿಯನ್ನು ಅವರು ಕೆಲಸಕ್ಕೆ ಬಾರದ ಮಟ್ಟಕ್ಕೆ ಇಳಿಸಿದ್ದಾರೆ. 2021ರಲ್ಲೇ ಜನಗಣತಿ ನಡೆಯಬೇಕಿತ್ತು. ಈಗ ಜಾತಿ ಗಣತಿಯನ್ನು ದಶವಾರ್ಷಿಕ ಗಣತಿ ಜೊತೆ ಸೇರಿಸಿದ್ದಾರೆ. ಜನಗಣತಿಯನ್ನು ಕ್ಷೇತ್ರ ಪುನರ್ ವಿಂಗಡಣೆ ಜೊತೆ ಸೇರಿಸಲಾಗಿದೆ. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರ ಮೀಸಲಾತಿ ಪ್ರಮಾಣವು ಜನಗಣತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆಯನ್ನು ಅವಲಂಬಿಸಿದೆ. ಹೀಗೆ ಸಾಕಷ್ಟು ಸಂಗತಿಗಳನ್ನು ಒಟ್ಟಿಗೆ ಸೇರಿಸಿದ್ದಾರೆ. ಜಾತಿಗಣತಿಗೆ ಯಾವ ರೀತಿಯ ವೈಜ್ಞಾನಿಕ ಕ್ರಮಗಳನ್ನು ಅನುಸರಿಸುತ್ತಿದ್ದೇವೆ, ಎಷ್ಟು ಕಾಲಮಿತಿಯನ್ನು ಹಾಕಿಕೊಂಡಿದ್ದೇವೆ ಎನ್ನುವುದನ್ನು ಕೇಂದ್ರ ಸರ್ಕಾರವು ಜನರ ಮುಂದೆ ಇಡಬೇಕು.
ವಿಪಕ್ಷಗಳು ಜಾತಿ ಗಣತಿಯನ್ನು ರಾಜಕೀಯ ಲಾಭಕ್ಕೆ ಬಳಸುತ್ತಿವೆ ಎನ್ನುತ್ತಿದ್ದಾರೆ. ನೀವು ಅದಕ್ಕೆ ಏನನ್ನುತ್ತೀರಿ ?
ಅವರ ತಿಳಿವಳಿಕೆಯ ಟೊಳ್ಳುತನವನ್ನು ಕಂಡು ನನಗೆ ಆಶ್ವರ್ಯ ಎನ್ನಿಸಿದೆ. ಇದೊಂದು ಗಂಭೀರ ಸಾಮಾಜಿಕ ಹಾಗೂ ಮಾನವ ಶಾಸ್ತ್ರೀಯ ವಿಚಾರ. ಸಚಿವ ಅಶ್ವಿನಿ ವೈಷ್ಣವ್ ಸುಶಿಕ್ಷಿತರು. ಜಾತಿ ಎಂದರೇನು ಎನ್ನುವುದನ್ನು ವಾಸ್ತವಿಕವಾಗಿ ಅರ್ಥ ಮಾಡಿಕೊಳ್ಳಿ ಎಂದು ಅವರಿಗೆ ಸಲಹೆ ನೀಡುತ್ತೇನೆ. ಜಾತಿ ಮತ್ತು ವರ್ಗ ಏಕೆ ಒಟ್ಟಿಗೆ ಹೋಗುತ್ತವೆ? ಕೆಲವು ಜಾತಿಗಳು ಅವುಗಳಿಗೆ ಸಿಗಬೇಕಾದಷ್ಟು ಪ್ರಾತಿನಿಧ್ಯದಿಂದ ಏಕೆ ವಂಚಿತವಾಗಿವೆ? ಇವು ಇವತ್ತಿನ ಚರ್ಚಾ ವಿಚಾರಗಳಾಗಿವೆ. ಇವು ರಾಜಕೀಯ ವಿಚಾರಗಳು ಎಂದರೆ, ವೈಷ್ಣವ್ ಏನು ಹೇಳುತ್ತಿದ್ದಾರೋ ನನಗೆ ಅರ್ಥವಾಗುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.