ADVERTISEMENT

ನುಡಿ ಬೆಳಗು: ಬೆಂದ ಮಡಿಕೆಯ ಹಾಗೆ ಗಟ್ಟಿಗೊಂಡು

ರೇಣುಕಾ ನಿಡಗುಂದಿ
Published 5 ಫೆಬ್ರುವರಿ 2026, 23:30 IST
Last Updated 5 ಫೆಬ್ರುವರಿ 2026, 23:30 IST
   

‌ಈಗ ಇನ್ನೊಬ್ಬರನ್ನು ನಿಂದಿಸುತ್ತಾ, ಹೀಯಾಳಿಸುತ್ತಲೇ ಕಾಲಕಳೆಯುವ ಜನರಿದ್ದಾರೆ. ನಮ್ಮ ಕಚೇರಿಯಲ್ಲೊಬ್ಬ ಮಾತಾ ಪ್ರಸಾದ ಎಂಬ ವ್ಯಕ್ತಿಯಿದ್ದ. ಆತ ಎಷ್ಟು ಸಭ್ಯ, ಸಜ್ಜನನೆಂದರೆ ಯಾರು ಯಾವ ಕೆಲಸ ಹೇಳಿದರೂ ಇಲ್ಲವೆನ್ನದೇ ಮಾಡಿಕೊಡುತ್ತಿದ್ದ. ಕಚೇರಿ ಹೊರಗಿನ ಕೆಲಸ ಕಾರ್ಯಗಳನ್ನು ವಹಿಸಲಾಗಿತ್ತು. ಪೋಸ್ಟ್ ಆಫೀಸು, ಬ್ಯಾಂಕು, ಟ್ರಾನ್ಸ್‌ಪೋರ್ಟ್, ಹೀಗೇ ಹಲವು ವಿಧದ ಕೆಲಸ. ದಿಲ್ಲಿಯ ಬಿರುಬೇಸಿಗೆ, ಕಡು ಚಳಿ ಎನ್ನದೇ ಸದಾ ಹೊರಗಡೆಯ ಕೆಲಸಗಳನ್ನೇ ಮಾಡುತ್ತಿದ್ದ. ಸಂಬಳ ಹೆಚ್ಚಳವಾಗುವ ಸಮಯದಲ್ಲಿ ಮಾತಾ ಪ್ರಸಾದ ಎಂಬ ಒಬ್ಬ ನೌಕರನಿದ್ದಾನೆ ಎಂಬುದೂ ಮರೆತುಹೋಗುತ್ತಿತ್ತು ಅಧಿಕಾರಿಗಳಿಗೆ. ‘ನಿನಗೇನು ಕೆಲಸವಿದೆ? ನಿನಗೇನು ಬರುತ್ತದೆ? ನೀನೊಬ್ಬ ಕತ್ತೆ’ ಎಂದು ಬಯ್ಯುವವರೇ ಇದ್ದರು. ಒಂದಿನ ಮಾತಾ ಪ್ರಸಾದ ಬಂದು ಸಿಹಿ ಹಂಚಿದ. ಅವನಿಗೆ ಯಾವುದೋ ಸರ್ಕಾರಿ ಇಲಾಖೆಯಲ್ಲಿ ಕೆಲಸ ಸಿಕ್ಕಿತ್ತು. ಒಬ್ಬ ಪ್ರಾಮಾಣಿಕ ವ್ಯಕ್ತಿಯನ್ನು ನಾವು ಕಳೆದುಕೊಂಡೆವು. ನಿಂದಕರನ್ನು ತಿದ್ದಬಹುದೇ? ನಾವೇ ಬೆಂದ ಮಡಿಕೆಯ ಹಾಗೆ ಗಟ್ಟಿಗೊಳ್ಳಬೇಕಾಗುತ್ತದೆ.

ಒಮ್ಮೆ ಬಟ್ಟೆ ವ್ಯಾಪಾರಿಯೊಬ್ಬ ಕತ್ತೆ ಹಾಗೂ ಕುದುರೆಯನ್ನು ಸಾಕಿಕೊಂಡಿದ್ದ. ಕತ್ತೆಗೆ ಭಾರವಾದ ಬಟ್ಟೆ ಮೂಟೆಗಳನ್ನು ಹೊರಿಸಿ ಕುದುರೆ ಮೇಲೆ ಕುಳಿತು ಪ್ರಯಾಣ ಆರಂಭಿಸಿದ. ಮಾರ್ಗ ಮಧ್ಯೆ ದಣಿವಾರಿಸಿಕೊಳ್ಳಲು ಮರದಡಿ ವಿರಮಿಸಿದ. ಆಗ ಕುದುರೆ ಮೆಲ್ಲನೆ ಕತ್ತೆಯ ಹತ್ತಿರ ಹೋಗಿ ‘ಎಂಥಾ ಜನ್ಮವಪ್ಪಾ ನಿಂದು? ಜೀವನ ಪೂರ್ತಿ ಭಾರವಾದ ವಸ್ತುಗಳನ್ನು ಹೊರುವುದೇ ನಿನ್ನ ಹಣೆ ಬರಹವಾಯ್ತು ಅಲ್ವಾ... ಇಂತಹ ದುರ್ಗತಿ ಯಾರಿಗೂ ಬೇಡಪ್ಪಾ. ಮುಂದಿನ ಜನ್ಮ ಅಂತ ಇದ್ರೆ ಕತ್ತೆಯಾಗಿ ಮಾತ್ರ ಹುಟ್ಟಲಾರೆ’ ಎಂದು ಪರಿಹಾಸ್ಯ ಮಾಡಿ ನಕ್ಕಿತು. ಈ ಮಾತು ಕೇಳಿ ಕತ್ತೆಗೆ ತುಂಬಾ ಅವಮಾನವಾಯಿತು. ಸೊಕ್ಕಿನ ಕುದುರೆಗೆ ಬುದ್ಧಿ ಕಲಿಸುವ ಯೋಚನೆ ಮಾಡಿತು. ಕೆಲ ಹೊತ್ತಿನ ನಂತರ ವ್ಯಾಪಾರಿ ಪ್ರಯಾಣ ಮುಂದುವರಿಸಲು ಸರಕನ್ನು ಕತ್ತೆಯ ಮೇಲೆ ಹೇರಿದಾಗ ಕತ್ತೆ ಅದನ್ನು ಬೀಳಿಸಿ ತಾನೂ ನೆಲಕ್ಕೆ ಬಿದ್ದು ಒದ್ದಾಡತೊಡಗಿತು. ಇದರಿಂದ ದಿಗಿಲುಗೊಂಡ ವ್ಯಾಪಾರಿ ‘ಅಯ್ಯೋ ಪಾಪ! ಕತ್ತೆಯ ಆರೋಗ್ಯ ಸರಿಯಿಲ್ಲವೆಂದು ತೋರುತ್ತದೆ’ ಎಂದುಕೊಂಡು ಆ ಭಾರವಾದ ಬಟ್ಟೆ ಮೂಟೆಗಳನ್ನು ಕುದುರೆ ಮೇಲೆ ಹೊರಿಸಿ ಪ್ರಯಾಣ ಮುಂದುವರಿಸಿದ. ಯುಕ್ತಿಯಿಂದ ಕುದುರೆಗೆ ಬುದ್ಧಿ ಕಲಿಸಿದ ಕತ್ತೆ ಮನಸ್ಸಿನಲ್ಲೇ ನಗುತ್ತಿತ್ತು.

ಬಹಳ ವರ್ಷಗಳಿಂದ ತಮ್ಮೊಂದಿಗೆ ಕೆಲಸಮಾಡುವ ಮನೆಗೆಲಸದ ಸಹಾಯಕಿಯನ್ನು ಕೆಟ್ಟದಾಗಿ ಬಯ್ಯುವ ನಿಂದಿಸುವ, ಅವಮಾನಿಸುವ ಜನರಿದ್ದಾರೆ. ಹೆಚ್ಚಿನವರು ಮನೆಗೆಲಸದವರನ್ನು ಬದಲಿಸುವುದಿಲ್ಲ. ಹಳಬರಾದರೆ ಅವರಲ್ಲಿ ನಂಬಿಕೆಯಿರುತ್ತದೆ. ಅವರ ಅಡಚಣೆಗಳಿಗೆ ಆರ್ಥಿಕ ನೆರವು ನೀಡುವವರಿಗೂ ಅವರು ವಂಚಿಸಲಾರರೆಂಬ ಭರವಸೆಯಿರುತ್ತದೆ. ಬದಲಿಗೆ ಮಾಲೀಕರ ಔದಾರ್ಯದ ಋಣ ತೀರಿಸಲು ಶೋಷಣೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ. ಈಗಿನ ಅಪಾರ್ಟ್‌ಮೆಂಟುಗಳಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಒಕ್ಕೂಟವು ಮನೆಗೆಲಸದವರ ಸಂಬಳವನ್ನು ನಿಗದಿಪಡಿಸಿರುತ್ತದೆ. ಹಾಗಿರುವಾಗಲೂ ಕಡಿಮೆ ಸಂಬಳ, ಲೈಂಗಿಕ ಶೋಷಣೆ, ಅವಹೇಳನ, ಅವಮಾನಗಳನ್ನೂ ನುಂಗಿಕೊಂಡು ಕೆಲಸ ಮಾಡುವ ಜನರಿದ್ದಾರೆ. ಇನ್ನೊಂದು ಕಡೆ ಚಾಲಾಕಿತನದಿಂದ ಮನೆಯವರನ್ನು ಮರಳುಮಾಡಿ ತಮ್ಮ ಕಾರ್ಯ ಸಾಧಿಸುವವರೂ ಉಂಟು. ಎಲ್ಲ ತರಹದ ಜನರಿರುವ ಈ ಲೋಕದಲ್ಲಿ ನಿಂದಕರ ನಿಂದೆಗೆ ನೋಯದೇ ನಾವೇ ನಮ್ಮನ್ನು ಗಟ್ಟಿಗೊಳಿಸಿಕೊಳ್ಳಬೇಕಾದ ಅಗತ್ಯವಿದೆ.

ADVERTISEMENT