ADVERTISEMENT

ನುಡಿ ಬೆಳಗು: ಸಮಪಾಲು

ಪ್ರಜಾವಾಣಿ ವಿಶೇಷ
Published 5 ನವೆಂಬರ್ 2025, 22:27 IST
Last Updated 5 ನವೆಂಬರ್ 2025, 22:27 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ರೈತನೊಬ್ಬ ತನ್ನ ಹೊಲದಲ್ಲಿ ಬಾವಿಯನ್ನು ತೋಡಿಸುತ್ತಿದ್ದ. ಸುತ್ತಮುತ್ತ ಅಂಥಾ ನೀರಿನ ಸೌಕರ್ಯ ಇರಲಿಲ್ಲ. ಇದ್ದ ಬಾವಿಗಳ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ. ಅನಿವಾರ್ಯ ಜೀವನಾಧಾರವಾದ ಅದನ್ನೇ ಕುಡಿಯುತ್ತಿದ್ದರು. ರೈತನು ತೋಡುತ್ತಿದ್ದ ಬಾವಿಯಲ್ಲಿ ನೀರು ಸಿಕ್ಕಿತು. ಈಗವನಿಗೆ ತನ್ನ ಜಮೀನಿನಲ್ಲಿ ಸಿಕ್ಕ ನೀರಿನ ಬಗ್ಗೆ ಎಲ್ಲರಲ್ಲೂ ಹೇಳಿಕೊಳ್ಳಬೇಕೆಂದು ಆಸೆಯಾಯಿತು. ಸಿಕ್ಕವರ ಬಳಿಯೆಲ್ಲಾ ತನ್ನ ಜಮೀನಿನ ನೀರು ತುಂಬಾ ಸಿಹಿಯಾಗಿದೆ, ತುಂಬಾ ರುಚಿಕರವಾಗಿದೆ ಎಂದೆಲ್ಲಾ ಹೇಳತೊಡಗಿದ. ಈ ಗೀಳು ಅವನನ್ನು ಹೇಗೆ ಆವರಿಸಿಕೊಳ್ಳುತ್ತಾ ಹೋಯಿತೆಂದರೆ ಅದರ ಬಗ್ಗೆ ಕಥೆಗಳನ್ನು ಕಟ್ಟತೊಡಗಿದ, ‘ರಾತ್ರಿ ತನ್ನ ಕನಸಿನಲ್ಲಿ ದೇವತೆಯೊಬ್ಬಳು ಕಾಣಿಸಿಕೊಂಡು ನಿನ್ನ ಜಮೀನಿನಲ್ಲಿ ಸಿಕ್ಕಿರುವುದು ಅಮೃತ ಜಲ, ದೇವಲೋಕದಿಂದ ಸೀದಾ ಇಲ್ಲಿಗೇ ಬಂದಿದೆ. ನಿನ್ನ ಅದೃಷ್ಟಕ್ಕೆ ಎಣೆಯೇ ಇಲ್ಲ’ ಎಂದು ಹೇಳಿದ್ದಳು. ನನ್ನಂಥಾ ಅದೃಷ್ಟವಂತ ಮತ್ಯಾರಿದ್ದಾರೆ...’ ಹೀಗೇ ಏನೇನೋ ಹೇಳಲು ಆರಂಭಿಸಿದ್ದ. ಬರಬರುತ್ತಾ ಅದು ಅಹಂಕಾರಕ್ಕೂ‌ ತಿರುಗಿತ್ತು.

ರೈತನ ಅತಿಯಾದ ಮಾತುಗಳಿಂದ ಜನರಿಗೆ ಬೇಸರವೂ ಆಗಿತ್ತು. ಸಿಕ್ಕಸಿಕ್ಕವರ ಬಳಿ ರೈತ `ನನ್ನ ಬಾವಿಯ ನೀರಿನ ರುಚಿ ನೀವು ನೋಡಬೇಕು, ಅಸಾದೃಶವಾಗಿದೆ’ ಎಂದು ಹೇಳುತ್ತಿದ್ದ. ಕರೆದುಕೊಂಡು ಹೋಗಿ ನೀರು ಕುಡಿಸಿ ಹೊಗಳಿಸಿಕೊಳ್ಳುತ್ತಿದ್ದ. ಊರವರಿಗೆ ಮಾತ್ರ ಒಂದು ಹನಿ ನೀರನ್ನೂ ಮನೆಗೆ ತೆಗೆದುಕೊಂಡು ಹೋಗಲು ಬಿಡುತ್ತಿರಲಿಲ್ಲ. ಇದನ್ನೆಲ್ಲಾ ನೋಡುತ್ತಿದ್ದ ಹಿರಿಯನೊಬ್ಬ `ಭೂಮಿತಾಯಿ ಕೊಟ್ಟರೆ ನಮಗೆ. ಈ ಹುಚ್ಚಾಟದಿಂದ ಏನು ಪ್ರಯೋಜನ’ ಎಂದ. ಇದನ್ನು ಕೇಳಿ ಸಿಟ್ಟಿಗೆದ್ದ ರೈತ, ‘ನಿನ್ನ ಭೂಮಿಯಲ್ಲಿ ಇಂಥಾ ನೀರು ಸಿಗಲಿಲ್ಲ ಎನ್ನುವ ಹೊಟ್ಟೆಉರಿ. ನನ್ನ ಬಾವಿಯ ನೀರು ರುಚಿಕರವಿಲ್ಲ ಎಂದು ಒಬ್ಬ ಸಣ್ಣ ಹುಡುಗನ ಹತ್ತಿರ ಹೇಳಿಸಿಬಿಡು ನೋಡೋಣ’ ಎಂದು ಸವಾಲು ಒಡ್ಡುತ್ತಾನೆ. ಹಿರಿಯನಿಗೆ ಇವನಿಗೆ ಬುದ್ಧಿ ಕಲಿಸದೆ ಬೇರೆ ಗತ್ಯಂತರವೇ ಇರಲಿಲ್ಲ. ಹತ್ತು ಜನ ಹುಡುಗರನ್ನು ಕರೆಸಿ ಅವರಿಗೆ ಸಿಹಿಯನ್ನು ತಿನ್ನಿಸಿ ನಂತರ ರೈತನ ಬಳಿಗೆ ಕರೆತರುತ್ತಾನೆ. ಸಿಹಿ ತಿಂದಿದ್ದ ಆ ಮಕ್ಕಳು ಬಾವಿಯ ನೀರನ್ನು ಕುಡಿದು ಸಪ್ಪೆ ಎನ್ನುತ್ತಾರೆ. ಅರೆ ಇದೇನಿದು ಈ ಮಕ್ಕಳು ಹೀಗೆ ಹೇಳುತ್ತಿದ್ದಾರಲ್ಲಾ ಎಂದು ರೈತನಿಗೆ ಆಶ್ಚರ್ಯವಾಗುತ್ತದೆ. ಅವಮಾನವೂ ಆಗುತ್ತದೆ. ಆ ಮಕ್ಕಳಿಗೆ ಎಷ್ಟೇ ಹೇಳಿಕೊಟ್ಟರೂ ಸುಳ್ಳು ಹೇಳುವ ವಯಸ್ಸಂತೂ ಅಲ್ಲ. ಇದರಲ್ಲೇನೋ ಮಸಲತ್ತಿದೆ ಎನ್ನಿಸಿದರೂ, ಅವಮಾನದಿಂದ ತಲೆತಗ್ಗಿಸುತ್ತಾನೆ.

ADVERTISEMENT

ಎಲ್ಲವನ್ನು ಗಮನಿಸಿದ ಹಿರಿಯ ಹೇಳಿದ, ‘ನೀನು ಸೋಲೊಪ್ಪಿಕ್ಕೊಳ್ಳುವ ಅಗತ್ಯ ಖಂಡಿತಾ ಇಲ್ಲ. ಇದೆಲ್ಲಾ ನಾನೇ ಮಾಡಿದ್ದು ಮಕ್ಕಳಿಗೆ ಸಿಹಿಕೊಟ್ಟು ಕರೆದುಕೊಂಡು ಬಂದೆ. ಒಂದು ನೆನಪಿಟ್ಟುಕೋ ಪ್ರಕೃತಿ ಪ್ರೀತಿಯಿಂದ ನಮಗೆ ಏನನ್ನು ಕೊಡುತ್ತದೆಯೋ ಅದನ್ನು ತೆಗೆದುಕೊಳ್ಳುವುದಷ್ಟೇ ನಮ್ಮ ಕೆಲಸ. ನಮ್ಮದೇ ಜಮೀನಿನಲ್ಲಿ ಸಿಕ್ಕರೂ ಅದರಲ್ಲಿ ಎಲ್ಲರಿಗೂ ಸಮಪಾಲಿದೆ. ನಾಲ್ಕು ಜನರಿಗೆ ಉಪಯೋಗವಾಗುವ ಹಾಗೆ ಅದನ್ನು ನಾವು ಬಳಸಿಕೊಳ್ಳಬೇಕು’ ಎನ್ನುತ್ತಾನೆ. ಹಿರಿಯನ ಮಾತುಗಳಿಂದ ಬುದ್ಧಿ ಕಲಿತ ರೈತ, ತನ್ನ ಬಾವಿಯ ನೀರನ್ನು ಯಾರು ಬೇಕಾದರೂ ತೆಗೆದುಕೊಳ್ಳಬಹುದು ಎಂದು ಘೋಷಿಸಿದ.

ನಮಗೆ ದಕ್ಕಿದ ಒಳ್ಳೆಯದನ್ನು ನಾಲ್ಕು ಜನರಿಗೆ ಹಂಚಬೇಕು. ಅದೇ ಸಾರ್ಥಕತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.