ADVERTISEMENT

ನುಡಿ ಬೆಳಗು: ಬದಲಾಗಬೇಕಿದೆ ಪಾವಿತ್ರ್ಯದ ಕಲ್ಪನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 23:30 IST
Last Updated 22 ಫೆಬ್ರುವರಿ 2026, 23:30 IST
   

ಪುಣ್ಯಸ್ಥಳಗಳಿಗೆ ಹೋಗಿಬರುವವರಿಗೆ ಅಲ್ಲಿಂದ ತಮ್ಮ ಬಾಂಧವರಿಗೆ ಏನನ್ನು ತರದಿದ್ದರೂ ಪವಿತ್ರವಾದ ನೀರನ್ನು ತರಬೇಕೆಂಬ ಹಂಬಲವಿರುತ್ತದೆ. ಅದು ನಮ್ಮ ಗಂಗಾನದಿಯ ನೀರೋ ಅಥವಾ ಮೆಕ್ಕಾದ ಝಂ ಝಂ ನೀರೋ ಯಾವುದೇ ಇರಲಿ, ದಿವ್ಯಪಾನೀಯವನ್ನು ಒಂದೆರಡು ಗುಟುಕಿನಷ್ಟಾದರೂ ಸರಿ, ಕುಡಿದು ಪಾವನರಾಗಲು ತವಕಿಸುವುದು ಸಾಮಾನ್ಯ. ಬಹುಶಃ ಈ ಬಗೆಯ ನಂಬಿಕೆಯಿಂದ ದೈವವಿಶ್ವಾಸಿಗಳ ಬದುಕು ಸಹನೀಯ ಎನಿಸಿದೆ. ಮನುಷ್ಯ ಜೀವನದ ದೀರ್ಘ ಇತಿಹಾಸದಲ್ಲಿ ಹೇಗೆ ಯಾರಿಗೆ ಯಾವಾಗ ಯಾವ ಮಣ್ಣು, ನೀರು, ಮರ, ಕಲ್ಲುಗಳು ಪವಿತ್ರ ಅಂತ ಅನಿಸಿಬಿಟ್ಟಿತು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹೊರಟರೆ ಬುದ್ಧಿಬಲ ಮತ್ತು ದರ್ಪ ಮನುಷ್ಯರನ್ನು ಧಾರ್ಮಿಕವಾಗಿ ಒಡೆದು ಆಳಿದ ಚಿತ್ರಗಳು ಕಾಣುತ್ತವೆ.

ಜೀವ ಜಗತ್ತಿಗೆ ಆಸರೆಯಾಗಿರುವುದು ಸದ್ಯಕ್ಕೆ ಒಂದೇ ಭೂಮಿ. ಮನುಷ್ಯನನ್ನೂ ಒಳಗೊಂಡು ಎಂಟು ಲಕ್ಷಕ್ಕೂ ಹೆಚ್ಚು ಜೀವರಾಶಿ ಈ ಮಣ್ಣಿನಲ್ಲಿ ಆಶ್ರಯ ಪಡೆದಿವೆ. ನೂರಾರು ದೇಶ, ಸಾವಿರಾರು ಭಾಷೆ ಮತ್ತು ಅಸಂಖ್ಯಾತ ಸಾಂಸ್ಕೃತಿಕ ಚಹರೆಗಳಿಂದ ತುಂಬಿದ ಈ ನೆಲವನ್ನು ತಂತಮ್ಮ ಅನುಕೂಲಕ್ಕೆ ತಕ್ಕಂತೆ ಎಲ್ಲರೂ ಪುಣ್ಯ ಭೂಮಿ, ಗಂಡುಮೆಟ್ಟಿನ ನೆಲ, ಪ್ರವಾದಿಗಳು, ಸಂತರು, ದಾರ್ಶನಿಕರು ಹುಟ್ಟಿದ ದಿವ್ಯವೂ ಪವಿತ್ರವೂ ಆದ ಮಣ್ಣಿದು ಎಂದು ಭಾವಿಸಿದ್ದಾರೆ. ತಮ್ಮ ರಾಜಕೀಯ ಆಡಳಿತದ ಕಾರಣಕ್ಕೆ ಭೌಗೋಳಿಕವಾಗಿ ಭೂಮಿಯನ್ನು ಹಂಚಿಕೊಂಡಿರುವ ಎಲ್ಲರೂ ಪ್ರಾಕೃತಿಕ ಸಂಪತ್ತನ್ನು ಮನುಷ್ಯ ಹಿತಕ್ಕಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಅದೇ ಕಾರಣಕ್ಕೆ ಅವೆಲ್ಲವೂ ದೈವಸೃಷ್ಟಿಯೆಂಬ ಹೆಸರಿನಲ್ಲಿ ಮನುಷ್ಯಕೇಂದ್ರಿತ ನೀತಿಗಳನ್ನು ರೂಪಿಸುತ್ತಾ ಬರಲಾಗಿದೆ. ಸಾವಿರಾರು ಮೈಲಿ ದೂರದ ನಿರ್ದಿಷ್ಟ ಪ್ರದೇಶದ ಮಣ್ಣು, ನೀರು, ಮರವನ್ನು ಪವಿತ್ರವೆಂದು ಸಾರಿರುವ ಹಿಂದಿನ ಧಾರ್ಮಿಕ ಆರ್ಥಿಕ ಹಿತಾಸಕ್ತಿಗಳು ಕೆಲವರ ಐಹಿಕ ವೈಭೋಗಕ್ಕೆ ಸಾಕ್ಷಿಯಾಗಿವೆ.

ನಿಸ್ಸಂದೇಹವಾಗಿ ಇದೊಂದು ಬೌದ್ಧಿಕ ದಾರಿದ್ರ್ಯವನ್ನು ಪೋಷಿಸುವ ರಾಜಕೀಯ ಕಲೆಗಾರಿಕೆ. ಅದೇ ಹೊತ್ತಿಗೆ ತಾವು, ತಮ್ಮವರ ಬದುಕನ್ನು ಸಾವಿರಾರು ವರ್ಷಗಳ ಕಾಲದಿಂದ ರೂಪಿಸಿದ ಸ್ಥಳೀಯವಾದ ಕಣ, ಬಯಲು, ದನಕರು, ಬಾವಿ, ಹಳ್ಳ, ಮರಗಿಡ ಮುಂತಾದುವನ್ನು ಕೇವಲ ಲೌಕಿಕವೆಂದು ಕೀಳಾಗಿಸುವ ಕುತಂತ್ರ ಕೂಡ. ಶ್ರಮಮೂಲ ಬದುಕಿಗೆ ಯಾವುದು ಅಗತ್ಯವೂ ಅನಿವಾರ್ಯವೂ ಆಗಿದೆಯೋ ಅವೆಲ್ಲವೂ ಪವಿತ್ರವೇ ಆಗಿದೆ. ಮನುಷ್ಯನ ಜೀವನಕ್ಕೆ ನಿತ್ಯವೂ ನೇರವಾಗಿ ಉಪಯೋಗಕ್ಕೆ ಬರುವ ಅವನ ಸುತ್ತಲಿನ ಕಣ, ಬಣವೆ, ಕೆರೆ, ಬಾವಿ, ಹಳ್ಳದ ನೀರು, ಜಾಲಿ, ಹುಣಸೆ, ಬೇವಿನ ಮರಗಳು, ಹಸು, ಎತ್ತು, ಎಮ್ಮೆ, ಕುರಿ, ಮೇಕೆ ಮುಂತಾದ ಪ್ರಾಣಿಗಳು ನಮ್ಮ ಪವಿತ್ರ ಭಾವನೆಯ ಕೇಂದ್ರವಾಗಬೇಕು. ಜನಪದರ ಆಚರಣೆಯಲ್ಲಿ ಇರುವ ಈ ಬಗೆಯ ಪ್ರಾಧಾನ್ಯವನ್ನು ವಿದ್ಯಾವಂತ ಧಾರ್ಮಿಕರು ಸೇರಿ ರೂಪಿಸಿದ ಪಾವಿತ್ರ್ಯ ನುಂಗಿ ಹಾಕಿದೆ. ಇದು ಇನ್ನೂ ಮುಂದುವರಿದು ಹೆಣ್ಣಿನ ಗುಣಶೀಲವನ್ನು ಗಂಡು ಅಳೆಯುವ ಮಾನದಂಡವೂ ಆಗಿರುವುದು ವಿಚಿತ್ರ. ತಾನಿಡುವ ಪ್ರತಿ ಹೆಜ್ಜೆಯ ಕೆಳಗಿರುವ ಮಣ್ಣು, ನಿತ್ಯ ಕುಡಿಯುವ ನೀರು, ತಿನ್ನುವ ಅನ್ನದ ಜೊತೆಜೊತೆಗೆ ಕಷ್ಟಸುಖಗಳಿಗೆ ಆತುಕೊಳ್ಳುವ ನೆರೆಹೊರೆಯನ್ನು ಪವಿತ್ರವೆಂದು ಪರಿಗಣಿಸಿ ಬದುಕಬೇಕು. ದೂರದ ಪಾವಿತ್ರ್ಯಕ್ಕಿಂತ ಸಮೀಪದ ಸಂಬಂಧವೇ ಇಷ್ಟವಾಗಬೇಕು. ಇಲ್ಲದಿದ್ದರೆ ಪಾವಿತ್ರ್ಯದ ಹಂಗು ತೊರೆದು ಎಲ್ಲವನ್ನು ಸಮಾನವಾಗಿ ಪರಿಭಾವಿಸಬೇಕು. ಯಾಕೆಂದರೆ ಪ್ರಕೃತಿ ಮನುಕುಲಕ್ಕೆ ಅನಿವಾರ್ಯವೇ ಹೊರತು ಮನುಷ್ಯನಿಂದ ನಿಸರ್ಗಕ್ಕೆ ಯಾವ ಪ್ರಯೋಜನವೂ ಇಲ್ಲ. ಮಾನವ ಜನ್ಮ ದೊಡ್ಡದೂ ಅಲ್ಲ, ಪವಿತ್ರವೂ ಅಲ್ಲ. ಆನೆ ಇರುವೆಗಳ ರೀತಿ ವಿವಿಧ ಆಕಾರ ಮತ್ತು ಗಾತ್ರದ ಬೇರೆ ಬೇರೆ ಜೀವಿಗಳ ಹಾಗೆ ಮಾನವನೂ ಒಂದು ಜಂತು ಅಷ್ಟೇ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.