
ನುಡಿ ಬೆಳಗು
ಒಮ್ಮೆ ಒಬ್ಬ ತಂದೆ ಮತ್ತು ಪುಟ್ಟ ಮಗಳು ಸೇತುವೆಯೊಂದನ್ನು ದಾಟುತ್ತಿರುತ್ತಾರೆ. ಆಗ ಅಪ್ಪ ಮಗಳ ಹತ್ತಿರ ತನ್ನ ಕೈ ಹಿಡಿದುಕೊಳ್ಳಲು ಹೇಳುತ್ತಾನೆ. ಆ ಪುಟ್ಟ ಮಗಳು ‘ಅಪ್ಪಾ, ನೀನೇ ನನ್ನ ಕೈ ಹಿಡಿದುಕೋ’ ಎನ್ನುತ್ತಾಳೆ. ಗೊಂದಲಗೊಂಡ ಅಪ್ಪ, ‘ಎಲ್ಲ ಒಂದೇ ಅಲ್ಲವೇ’ ಎನ್ನುತ್ತಾನೆ. ಆಗ ಅವಳು ‘ನಾನು ನಿನ್ನ ಕೈ ಹಿಡಿದರೆ ಅಕಾಸ್ಮಾತ್ ಆಗಿ ಬಿಟ್ಟುಬಿಡಬಹುದು. ಆದರೆ ನೀನು ಯಾವ ಕಾರಣಕ್ಕೂ ಕೈ ಬಿಡುವುದಿಲ್ಲವಲ್ಲ’ ಎನ್ನುತ್ತಾಳೆ. ಅ ಪುಟ್ಟ ಬಾಲೆಗೆ ಅಪ್ಪನ ಮೇಲಿರುವ ಭರವಸೆಯ ಮತ್ತೊಂದು ಹೆಸರೇ ಸ್ನೇಹ.
ಸ್ನೇಹಿತನೆಂದರೆ ಒರಗಿಕೊಳ್ಳಲು ಸದಾ ಇರುವ ಭರವಸೆಯ ಹೆಗಲು. ನಮ್ಮೆಲ್ಲ ನೋವುಗಳನ್ನು ಅಹವಾಲುಗಳನ್ನು ಆಲಿಸಲು ಯಾವತ್ತೂ ತೆರೆದಿರುವ ಕಿವಿ. ಸಾಂತ್ವನ ನೀಡುವ ಮಡಿಲು. ಮಹಾಭಾರತ ಯುದ್ಧದ ಸಂದರ್ಭದಲ್ಲಿ ಕೃಷ್ಣ ಬಂದು ಕರ್ಣನ ಹತ್ತಿರ ‘ಮಾರಾಯ, ನೀನೇ ಹಿರಿಯ ಪಾಂಡವ, ಬಂದು ಸಿಂಹಾಸನದ ಮೇಲೆ ಕುಳಿತುಕೋ. ಪಾಂಡವರು ಮತ್ತು ಕೌರವರು ಇಬ್ಬರೂ ಆಗ ಸುಮ್ಮನಿರುತ್ತಾರೆ, ಯುದ್ಧವೂ ಆಗುವುದಿಲ್ಲ’ ಎನ್ನುತ್ತಾನಷ್ಟೇ. ಆಗ ನ್ಯಾಯವಾಗಿಯೇ ಕೌರವನ ಹತ್ತಿರ ಹೋಗಿ, ‘ಗಾಂಧಾರೀ ಪುತ್ರಾ, ಯುದ್ಧದ ತಲೆಬಿಸಿಯೇ ಬೇಡ ಬಿಡು. ನಾನೇ ಕುಂತಿಯ ಹಿರಿಯ ಮಗನಂತೆ. ರಾಜನಾಗು ಅಂತ ಕರೆಯುತ್ತಿದ್ದಾರೆ. ರಾಜ ನಾನಾದರೇನು ನೀನಾದರೇನು, ನೀನೂ ನನ್ನ ತಮ್ಮನೇ. ಆರಾಮಾಗಿ ರಾಜ್ಯವಾಳಿಕೊಂಡು ಇದ್ದುಬಿಡೋಣʼ ಎಂದು ಎರಡು ಕಡೆಯೂ ಒಳ್ಳೆಯವನಾಗಿದ್ದು ರಾಜನೂ ಆಗಿಬಿಡಬಹುದಾಗಿದ್ದ ಸುವರ್ಣಾವಕಾಶ ಕರ್ಣನಿಗಿತ್ತು. ಆದರೆ ಕರ್ಣ ಕೃಷ್ಣನಿಗೆ ಕೊಟ್ಟ ಉತ್ತರ ನಾವೆಲ್ಲ ನೆನಪಿಟ್ಟುಕೊಳ್ಳಬೇಕಾದದ್ದು. ‘ಯುದ್ಧದಲ್ಲಿ ಸತ್ತರೂ ಪರವಾಗಿಲ್ಲ, ಸುಯೋಧನನ ಸ್ನೇಹಕ್ಕೆ ಎರಡು ಬಗೆಯುವುದಿಲ್ಲ’ ಎಂದೇ ಹೇಳುತ್ತಾನೆ ಕರ್ಣ. ರಾಜ್ಯಲಕ್ಷ್ಮಿಯನ್ನು ಕಡೆಗಣ್ಣಿನಿಂದಲೂ ನೋಡದೇ ಮೃತ್ಯುವನ್ನು ಅಪ್ಪಿಕೊಂಡ ಕರ್ಣನದು ನಿಜವಾದ ಸ್ನೇಹ. ತನ್ನ ಹೆಂಡತಿಯ ಕುತ್ತಿಗೆಯ ಸರವನ್ನು ಎಳೆದು ಹರಿದುಹಾಕಿದ ಕರ್ಣನಿಗೆ ‘ಕೆಳಗೆ ಬಿದ್ದ ಮುತ್ತುಗಳನ್ನು ಆಯ್ದುಕೊಡಲೇ ಗೆಳೆಯಾ?’ ಎಂದ ಪ್ರಾಣಸ್ನೇಹಿತ ಕೌರವನೆಡೆ ಆತನ ನಿಷ್ಠೆ ಯೋಗ್ಯವೇ ಬಿಡಿ.
ಇದು ನಿಜವಾದ ಸ್ನೇಹ. ಅತ್ಯಂತ ದೊಡ್ಡ ನಟ ಯಾರು, ಜನಪ್ರಿಯ ಕ್ರಿಕೆಟಿಗ ಯಾರು ಎನ್ನುವ ಸಮೀಕ್ಷೆಗಳಂತೆ ಜಗತ್ತಿನಲ್ಲಿ ಅತ್ಯುತ್ತಮ ಸ್ನೇಹಿತರು ಯಾರು ಎಂಬ ಸಮೀಕ್ಷೆ ನಡೆದರೆ ಮೊದಲ ಸ್ಥಾನದಲ್ಲಿ ನಿಲ್ಲುವವರು ಕರ್ಣ ಮತ್ತು ದುರ್ಯೋಧನರೇ ಅನ್ನುವುದು ನನ್ನ ಅಭಿಪ್ರಾಯ. ಕಾರಣ ಜಗತ್ತಿನ ಎಲ್ಲ ಶಕ್ತಿಗಳು ಎದುರಾಗಿ ನಿಂತರೂ ನಿಮ್ಮ ಅತ್ಯುತ್ತಮ ಸ್ನೇಹಿತ ಎಂದಿಗೂ ನಿಮ್ಮ ಕೈಬಿಡುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ವ್ಯವಹಾರದಲ್ಲಿ ಮೋಸ ಹೋಗಿ ನ್ಯಾಯಾಲಯದ, ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವವರು ಹೆಚ್ಚಾಗಿದ್ದಾರೆ. ದುರ್ದೈವವಶಾತ್ ಯಾರನ್ನು ಸ್ನೇಹಿತರೆಂದು ನಂಬಿರುತ್ತಾರೋ ಅಂಥವರಿಂದಲೇ ವಂಚನೆಗೊಳಗಾಗುವ ಪ್ರಸಂಗಗಳನ್ನು ಹೆಚ್ಚು ಹೆಚ್ಚು ನೋಡುತ್ತಿದ್ದೇವೆ. ಐಹಿಕ ಸುಖಗಳ ಬೆನ್ನು ಹತ್ತಿದ, ತತಕ್ಷಣದ ಶ್ರೀಮಂತಿಕೆಯ ಕನಸು ಕಾಣುವ ಮೂರ್ಖ ಜನರು ತಮ್ಮನ್ನು ನಂಬಿದವರಿಗೆ ಮೋಸ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ವ್ಯಾವಹಾರಿಕ ದೃಷ್ಟಿಯಿಂದ ಬೆಳೆಸುವ ಸ್ನೇಹ ತನ್ನ ಉದ್ದೇಶ ಮುಗಿದ ಕೂಡಲೇ ಬಿಸಿಲು ಸೋಕಿದ ಮಂಜಿನ ಹನಿಯಂತೆ ಮಾಯವಾಗುವುದನ್ನು ಅನುಭವಿಸುತ್ತಿದ್ದೇವೆ. ಆದರೂ ತಮಾಷೆಯೆಂದರೆ ಸ್ನೇಹದ ಹೆಸರಿನ ಈ ಸ್ವಾರ್ಥ ಸಂಬಂಧವೇ ರಾರಾಜಿಸುತ್ತಿರುವುದಕ್ಕೆ ಸಾಕ್ಷಿಯೂ ಆಗಿದ್ದೇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.