ADVERTISEMENT

ಸಂಗತ: ಬೆಂಗಳೂರು ನಾಟಕ ಅಕಾಡೆಮಿಯೆ?

ಡಾ.ಡಿ.ಎಸ್‌.ಚೌಗಲೆ
Published 27 ಜುಲೈ 2025, 23:59 IST
Last Updated 27 ಜುಲೈ 2025, 23:59 IST
.
.   

ಕರ್ನಾಟಕ ನಾಟಕ ಅಕಾಡೆಮಿಯೋ, ಬೆಂಗಳೂರು ನಾಟಕ ಅಕಾಡೆಮಿಯೋ? –‘ಕರ್ನಾಟಕ ನಾಟಕ ಅಕಾಡೆಮಿ’ಯ 2025–26ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಮತ್ತು ದತ್ತಿನಿಧಿ ಪ್ರಶಸ್ತಿಗಳನ್ನು ನೋಡಿದಾಗ ಎದುರಾಗುವ ಪ್ರಶ್ನೆಯಿದು.

ಅಕಾಡೆಮಿಯ ಪುರಸ್ಕಾರಗಳಲ್ಲಿ ಸಿಂಹಪಾಲು ರಾಜಧಾನಿ ಬೆಂಗಳೂರಿನ ಪಾಲಾಗಿದೆ. ‘ಕರ್ನಾಟಕ ನಾಟಕ ಅಕಾಡೆಮಿ’ ಸರ್ಕಾರದ ಅಡಿಯ, ಪ್ರಜಾಸತ್ತಾತ್ಮಕವಾದ ಒಂದು ಸ್ವಾಯತ್ತ ಸಂಸ್ಥೆ. ಪ್ರಜಾಸತ್ತಾತ್ಮಕ ಸಂಸ್ಥೆಯೊಂದು ತಾನು ನೀಡುವ ಪ್ರಶಸ್ತಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪಾಲಿಸದಿರುವುದು ಸರ್ವಾಧಿಕಾರಿ ಧೋರಣೆಯೇ ಸರಿ.

ಅಕಾಡೆಮಿಯ ಪುರಸ್ಕೃತರಲ್ಲಿ ಹದಿಮೂರಕ್ಕೂ ಹೆಚ್ಚು ಜನ ಬೆಂಗಳೂರು ನಗರ, ದಕ್ಷಿಣ ಹಾಗೂ ಗ್ರಾಮಾಂತರ ಜಿಲ್ಲೆಗೆ ಸೇರಿದವರಾಗಿದ್ದಾರೆ. ಶಶಿಧರ ಅಡಪ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು, ಅವರ ಪ್ರತಿಭೆಯ ಕುರಿತು ಎರಡು ಮಾತಿಲ್ಲ. ಮತ್ತೊಬ್ಬ ಪ್ರತಿಭಾವಂತ ರಂಗಕರ್ಮಿ ಮಾಲತೇಶ ಬಡಿಗೇರ ಅವರು ಗದಗ ಜಿಲ್ಲೆಯ ಮೂಲದವರು. ಆದರೆ, ಇವರಿಬ್ಬರೂ ಪ್ರಸ್ತುತ ಬೆಂಗಳೂರು ನಗರವಾಸಿಗಳು. ಬೆಂಗಳೂರನ್ನು ಕಾರ್ಯಕ್ಷೇತ್ರ ಮಾಡಿಕೊಂಡ ರಂಗಕರ್ಮಿಗಳನ್ನು ರಾಜಧಾನಿಯೊಂದಿಗೆ ಗುರ್ತಿಸುವ ಬದಲು ಮೂಲ ಜಿಲ್ಲೆಗಳೊಂದಿಗೆ ಗುರ್ತಿಸಿದಾಗ, ಗದಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕಲಾವಿದರಿಗೆ ಅನ್ಯಾಯ ಆಗುವುದು ಸಹಜ. ಇದನ್ನು ಅಕಾಡೆಮಿ ಗಮನಿಸಬೇಕಿತ್ತವೆ? 

ADVERTISEMENT

ಪ್ರಾದೇಶಿಕ ನ್ಯಾಯ ಹಾಗೂ ಸಾಮಾಜಿಕ ನ್ಯಾಯವನ್ನು ಅಕಾಡೆಮಿಯ ಅಧ್ಯಕ್ಷರಾದ ಕೆ.ವಿ. ನಾಗರಾಜಮೂರ್ತಿ ಮತ್ತು ಸರ್ವಸದಸ್ಯರು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಸಮರ್ಪಕ ಮಹಿಳಾ ಪ್ರಾತಿನಿಧ್ಯದ ಪಾಲನೆಯಾಗಿಲ್ಲ. ಶರಣತತ್ವ ಮತ್ತು ಸಮಾಜವಾದ ಸಿದ್ಧಾಂತಗಳ ಕುರಿತು ಮಾತನಾಡುವ ಅಧ್ಯಕ್ಷರು ಅಕಾಡೆಮಿಯ ಪ್ರಶಸ್ತಿ ಆಯ್ಕೆ ಸಂದರ್ಭದಲ್ಲಿ ತಾವು ಪ್ರತಿಪಾದಿಸುವ ತತ್ವ ಮತ್ತು ಸಿದ್ಧಾಂತಗಳನ್ನು ಪಾಲಿಸಬೇಕಿತ್ತು. 

ಲಿಂಗ ಸಮಾನತೆ ಮತ್ತು ಪ್ರಾದೇಶಿಕ ಪ್ರಾತಿನಿಧ್ಯಕ್ಕೆ ಸಮಕಾಲೀನ ಸಂದರ್ಭದಲ್ಲಿ ವಿಶೇಷ ಮಹತ್ವವಿದೆ. ಧಾರ್ಮಿಕ ಅಲ್ಪಸಂಖ್ಯಾತರು, ಹಿಂದುಳಿದ ಸಮುದಾಯಗಳು ಹಾಗೂ ಹಿಂದುಳಿದ ಪ್ರದೇಶಗಳ ಪ್ರತಿಭೆಗಳನ್ನು ಗಮನಿಸಿ ಗುರ್ತಿಸಬೇಕಾದುದು ಸಾರ್ವಜನಿಕರ ತೆರಿಗೆ ಹಣದಿಂದ ಅನುದಾನ ಪಡೆಯುವ ಅಕಾಡೆಮಿಯ ಆದ್ಯ ಕರ್ತವ್ಯ. ನೇಪಥ್ಯದಲ್ಲೇ ಉಳಿದ ಪ್ರತಿಭಾವಂತರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಿರುವುದು ಒಂದು ಸಾರ್ವಜನಿಕ ಸಾಂಸ್ಕೃತಿಕ ಸಂಸ್ಥೆಯ ಹೊಣೆಗಾರಿಕೆಯೂ ಹೌದು. ಈ ಜವಾಬ್ದಾರಿಯಿಂದ ಅಕಾಡೆಮಿ ನುಣುಚಿಕೊಂಡಿದೆ. ಎಡವಿ ರುವುದೆಲ್ಲಿ ಎನ್ನುವ ಆತ್ಮಾವಲೋಕನ ಮಾಡಿಕೊಂಡು, ಅಕಾಡೆಮಿ ತನ್ನ ಮುಂದಿನ ಹೆಜ್ಜೆಗಳನ್ನು ಇಡಬೇಕಾಗಿದೆ.

ಕೊನೆಯ ಪಕ್ಷ, ಮಹಿಳಾ ರಂಗಕರ್ಮಿಗಳ ಪರವಾಗಿ ಅಕಾಡೆಮಿಯ ಸದಸ್ಯೆಯರಾದರೂ ಗಟ್ಟಿಯಾಗಿ ವಾದಿಸಬೇಕಿತ್ತು. ಸಮರ್ಪಕ ಮಹಿಳಾ ಪ್ರಾತಿನಿಧ್ಯ ಕ್ಕಾಗಿ ಹಟದಿಂದ ಪಟ್ಟು ಹಿಡಿದು ನಿಲ್ಲಬೇಕಿತ್ತು. ಪುರಸ್ಕೃತರ ಪಟ್ಟಿಯಲ್ಲಿ ಮಹಿಳೆಯರ ಸಂಖ್ಯೆ ತೀರಾ ಕನಿಷ್ಠ ಆಗಿರುವುದನ್ನು ನೋಡಿದರೆ, ಆಯ್ಕೆ ಪ್ರಕ್ರಿಯೆಯಲ್ಲಿ ಸದಸ್ಯೆಯರ ಭಾಗವಹಿಸುವಿಕೆ ಎಷ್ಟರಮಟ್ಟಿಗಿತ್ತು ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ.

ಹವ್ಯಾಸಿ ಮತ್ತು ವೃತ್ತಿರಂಗಭೂಮಿಯಲ್ಲಿ ಗಮನಾರ್ಹವಾಗಿ ಸೇವೆ ಸಲ್ಲಿಸಿರುವವರ ಸಂಖ್ಯೆ ಸಾಕಷ್ಟಿದೆ. ರಂಗಭೂಮಿಗೆ ಗಣನೀಯ ಸೇವೆ ಸಲ್ಲಿಸಿರುವವರು ನಾಡಿನೊಳಗೂ ಇದ್ದಾರೆ, ಹೊರಗೂ ಇದ್ದಾರೆ. ಅವರನ್ನು ಹುಡುಕಿ ಗುರ್ತಿಸುವ ಕೆಲಸವನ್ನು ಅಕಾಡೆಮಿ ನಿರ್ವಹಿಸಿರುವಂತಿಲ್ಲ. ‘ಮಹಿಳೆಯರಿಗೆ ಆದ್ಯತೆ’ ಎನ್ನುವ ಮಾತು ಪ್ರಸ್ತುತ ಬರೀ ಘೋಷವಾಕ್ಯವಾಗಿ ಉಳಿದಿದೆಯೇ ಹೊರತು, ಕಾರ್ಯರೂಪಕ್ಕೆ ಬಂದಿಲ್ಲ. ಮೂವತ್ತ ನಾಲ್ಕು ಪುರಸ್ಕೃತರಲ್ಲಿ ಕೇವಲ ಮೂವರು ಕಲಾವಿದೆಯರಷ್ಟೇ ಇರುವಂತೆ ಆಯ್ಕೆ ಮಾಡಿರುವ ಅಕಾಡೆಮಿಯ ಕ್ರಮ ಅತ್ಯಂತ ಲಜ್ಜಗೇಡಿತನದ್ದು ಮತ್ತು ಖಂಡನೀಯವಾದುದು.

ಬಳ್ಳಾರಿ, ರಾಯಚೂರು, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಧಾರವಾಡ– ಹುಬ್ಬಳ್ಳಿ ಪರಿಸರದಲ್ಲಿ ರಂಗಭೂಮಿಯಲ್ಲಿ ತೊಡಗಿಕೊಂಡಿರುವ ಮಹಿಳೆ ಮತ್ತು ಪುರುಷ ಕಲಾವಿದರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ತಮ್ಮಷ್ಟಕ್ಕೆ ತಾವು ರಂಗಭೂಮಿ ಚಟುವಟಿಕೆಗಳಲ್ಲಿ ನಿರತರಾಗಿರುವ ಅವರಿಗೆ ಪ್ರಭಾವಿ ಹಿನ್ನೆಲೆಯಿಲ್ಲ, ಅವರ ಬೆನ್ನಿಗೆ ನಿಲ್ಲುವವರು ಯಾರೂ ಇಲ್ಲ. ಅಂಥವರನ್ನು ಹುಡುಕುವ ಕಾರ್ಯವನ್ನು ಅಕಾಡೆಮಿಯಲ್ಲದೆ ಬೇರೆ ಯಾರು ಮಾಡಬೇಕು?

ಅಕಾಡೆಮಿ ಪುರಸ್ಕಾರಗಳಲ್ಲಿ ನಾಡಿನ ಅತಿದೊಡ್ಡ ಜಿಲ್ಲೆ ಎಂಬ ಹೆಗ್ಗಳಿಕೆಯ ಬೆಳಗಾವಿಗೆ ದೊರೆತಿರುವುದು ಒಂದೇ ಒಂದು ಪ್ರಶಸ್ತಿ. ಎಲ್ಲವೂ ರಾಜಧಾನಿ ಕೇಂದ್ರಿತವೇ ಆಗಿರುತ್ತದೆ. ಬೆಂಗಳೂರಿನಿಂದ ದೂರವಿರುವುದು ಎಂದರೆ, ಪ್ರಚಾರ– ಪ್ರಶಸ್ತಿಯಿಂದ ದೂರವಿರುವುದೂ ಎಂದಾಗಿದೆ.

ಅಕಾಡೆಮಿಯ ಕಾರ್ಯ ಚಟುವಟಿಕೆಗಳು ನಾಡಿನಲ್ಲಿ ಯಾವ ಪ್ರಮಾಣದಲ್ಲಿ ವಿಕೇಂದ್ರೀಕರಣಗೊಂಡಿವೆ ಎನ್ನುವುದನ್ನು ಗಮನಿಸಿದರೆ, ಅಲ್ಲೂ ನಿರಾಸೆ ಎದ್ದು ಕಾಣುತ್ತದೆ. ದಕ್ಷಿಣದ ಮೈಸೂರು, ಬೆಂಗಳೂರು, ತುಮಕೂರು ಮುಂತಾದ ಕಡೆಗೆ ಅಕಾಡೆಮಿ ಹೆಚ್ಚು ಸಕ್ರಿಯವಾಗಿದೆ. ಅಕಾಡೆಮಿಯ ಹೆಚ್ಚಿನ ಚಟುವಟಿಕೆಗಳು ದಕ್ಷಿಣ ಕರ್ನಾಟಕದಲ್ಲಿ ನಡೆಯುತ್ತಿವೆ. ಆ ಭಾಗದಲ್ಲಿ ಸಾಕಷ್ಟು ರಂಗ ಸಂಘಟನೆಗಳು, ರೆಪರ್ಟರಿಗಳು ಈಗಾಗಲೇ ಕ್ರಿಯಾಶೀಲವಾಗಿವೆ. ಅಂತಹ ಪ್ರದೇಶಗಳಿಗಿಂತ, ರಂಗ ಚಟುವಟಿಕೆಗಳ ಕೊರತೆ ಎಲ್ಲಿದೆಯೋ ಅಲ್ಲಿ ಅಕಾಡೆಮಿಯ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು. ‘ಬೆಂಗಳೂರು ಕೇಂದ್ರಿತ’ ಎನ್ನುವ ಹಣೆಪಟ್ಟ ಕಳಚಿಕೊಳ್ಳುವುದು ಅಕಾಡೆಮಿಯ ಹಿತದೃಷ್ಟಿಯಿಂದ ಒಳ್ಳೆಯದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.