ADVERTISEMENT

ಸಂಗತ: ಗಾಂಧಿಯನ್ನು ರಾಜಕೀಯ ಗುರಾಣಿ ಮಾಡಿಕೊಂಡ ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 19:11 IST
Last Updated 2 ಫೆಬ್ರುವರಿ 2026, 19:11 IST
   
‘ವಿಬಿ–ಜಿ ರಾಮ್ ಜಿ’ ಕಾಯ್ದೆಯ ಅನುಕೂಲಗಳನ್ನು ಅರ್ಥ ಮಾಡಿಕೊಳ್ಳದ ಕಾಂಗ್ರೆಸ್‌, ಗಾಂಧೀಜಿ ಹೆಸರು ಬಳಸಿಕೊಂಡು ರಾಜಕೀಯ ಸಂಕಥನಗಳ ಕಟ್ಟುತ್ತಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದ ‘ವಿಬಿ–ಜಿ ರಾಮ್ ಜಿ’ ಕಾಯ್ದೆ ಈಗ ಕರ್ನಾಟಕದಲ್ಲಿ ಸುದ್ದಿಯಲ್ಲಿದೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಬದಲಾಯಿಸಿ ಹೊಸ ಸ್ವರೂಪದಲ್ಲಿ ಜಾರಿಗೆ ತಂದಿರುವುದನ್ನು ಕಾಂಗ್ರೆಸ್ ಪಕ್ಷ ಆಕ್ಷೇಪಿಸಿದೆ. ಆದರೆ, ಈ ವಿರೋಧ ಎಲ್ಲಿ ವ್ಯಕ್ತವಾಗಬೇಕಿತ್ತೋ ಅಲ್ಲಿ ಪ್ರಕಟಗೊಳ್ಳದೆ ಕರ್ನಾಟಕ ವಿಧಾನಮಂಡಲದ ಅಧಿವೇಶನದಲ್ಲಿ ಅನಾವರಣಗೊಂಡಿದೆ. ರಾಜ್ಯಪಾಲರ ಭಾಷಣದಲ್ಲಿ ಈ ವಿಚಾರ ಸೇರಿಸಿ ಕೇಂದ್ರ ಸರ್ಕಾರದ ಪ್ರತಿನಿಧಿಯಾದ ರಾಜ್ಯಪಾಲರ ಬಾಯಲ್ಲೇ ಕೇಂದ್ರದ ಕಾಯ್ದೆಯನ್ನು ಹಳಿಯುವ ವಿಫಲ ಪ್ರಯತ್ನ ನಡೆದಿದೆ. ಇನ್ನೊಂದೆಡೆ, ಗಾಂಧಿಯನ್ನು ಗುರಾಣಿಯಾಗಿಸಿಕೊಂಡು ರಾಜಕೀಯ ಸಂಕಥನ ಕಟ್ಟುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿದೆ.

ಹೊಸ ಕಾಯ್ದೆಯಲ್ಲಿ ಗಾಂಧಿ ಹೆಸರನ್ನು ಕೈ ಬಿಡಲಾಗಿದೆ ಎಂಬುದು ಕಾಂಗ್ರೆಸ್‌ಗೆ ಸಂಕಟ ಸೃಷ್ಟಿಸಿದೆಯೇ ವಿನಾ, ಈ ಕಾಯ್ದೆಯಿಂದ ಭಾರತದ ವಿಕಸಿತ ಗ್ರಾಮಗಳ ಬಲವರ್ಧನೆಗೆ ಆಗುವ ಅನುಕೂಲಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸದೆ ಇರುವುದು ಚೋದ್ಯವೇ ಸರಿ.

ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕಾಂಗ್ರೆಸ್ ಪಾತ್ರ ಇಲ್ಲ ಎಂದು ಯಾರೂ ವಾದಿಸುವುದಿಲ್ಲ. ಆದರೆ, ಆ ಇತಿಹಾಸವನ್ನು ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಸರಕಾಗಿ ಬಳಸುವ ಕಾಂಗ್ರೆಸ್ ನಡೆ ಆಕ್ಷೇಪಾರ್ಹ. ಗಾಂಧಿ ಹೆಸರನ್ನು ಮುಂದಿಟ್ಟುಕೊಂಡು ತನ್ನ ಬೇಳೆ ಬೇಯಿಸಿಕೊಳ್ಳುವ ಆ ಪಕ್ಷದ ನಾಯಕರಿಗೆ ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಯಾವ ಸ್ವರೂಪದಲ್ಲಿ ಇರಬೇಕೆಂದು ಮಹಾತ್ಮ‌ ಗಾಂಧಿ‌ ಆಡಿದ ಮಾತುಗಳು ಮರೆತು‌ಹೋಗಿವೆ. ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ವಿಸರ್ಜಿಸಿ, ಅದನ್ನು ಲೋಕಸೇವಕ ಸಂಘವಾಗಿ‌ ಪರಿವರ್ತಿಸಬೇಕೆಂಬುದು ಗಾಂಧಿಯವರ ಆಶಯವಾಗಿತ್ತು.

ADVERTISEMENT

ಹತ್ಯೆಯಾಗುವುದಕ್ಕೆ ಕೆಲ ದಿನಗಳಿಗೆ ಮುಂಚೆ ‘ಹರಿಜನ’ ಪತ್ರಿಕೆಯಲ್ಲಿ ಗಾಂಧಿ ಈ ವಿಚಾರವನ್ನು ಪ್ರತಿಪಾದಿಸಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ಬೇಕಾದ ಅಗತ್ಯವನ್ನು ಕಾಂಗ್ರೆಸ್ ಪೂರೈಸಿದೆ. ಹೀಗಾಗಿ, ಅದು ರಾಜಕೀಯ ಪಕ್ಷವಾಗಿ ಉಳಿಯದೆ, ಗ್ರಾಮೀಣ ಸೇವೆ ಹಾಗೂ ಅಸ್ಪೃಶ್ಯತೆ ನಿವಾರಣಾ ಕಾರ್ಯದಲ್ಲಿ ಮಗ್ನವಾಗಬೇಕೆಂದು ಬಯಸಿದ್ದರು. ಆದರೆ, ಗಾಂಧಿಯ ಆಶಯ ಜಾರಿಗೆ ಬರಲಿಲ್ಲ. ದಶಕಗಳ ಕಾಲ ಗಾಂಧೀಜಿಯ ಈ ಅಭಿಪ್ರಾಯವನ್ನು ವ್ಯವಸ್ಥಿತವಾಗಿ ಮರೆಮಾಡಿದ ಕಾಂಗ್ರೆಸ್ ನಾಯಕರು– ಪಠ್ಯಪುಸ್ತಕಗಳಲ್ಲಿ, ಭಾಷಣಗಳಲ್ಲಿ, ಪಕ್ಷದ ಚಿಂತನೆಗಳಲ್ಲಿ ಈ ವಿಚಾರಕ್ಕೆ ಸ್ಥಾನ ಹಾಗೂ ಆದ್ಯತೆ ನೀಡಲಿಲ್ಲ. ಏಕೆಂದರೆ, ಗಾಂಧೀಜಿಯ ಮಾತು ಕಾಂಗ್ರೆಸ್‌ನ ಶಾಶ್ವತ ಅಧಿಕಾರ ರಾಜಕಾರಣಕ್ಕೆ ವಿರುದ್ಧವಾಗಿತ್ತು.

‘ವಿಬಿ–ಜಿ ರಾಮ್ ಜಿ’ ಕಾಯ್ದೆ ಕುರಿತು ದೇಶದಲ್ಲಿ ನಡೆಯಬೇಕಾಗಿರುವುದು ಸಂವಿಧಾನಾತ್ಮಕ, ಸಾಮಾಜಿಕ ಮತ್ತು ಆಡಳಿತಾತ್ಮಕ ಚರ್ಚೆ. ಕಾಯ್ದೆಯ ಉದ್ದೇಶ, ಪರಿಣಾಮ, ಲಾಭ–ಹಾನಿ ಕುರಿತು ಸ್ಪಷ್ಟ ವಾದ–ಪ್ರತಿವಾದಗಳು ನಡೆಯಬೇಕು. ಆದರೆ, ಕಾಯ್ದೆಯ ವಿಧಿಗಳನ್ನು ಪ್ರಶ್ನಿಸುವ ಬದಲು, ಗಾಂಧೀಜಿಯ ಹೆಸರನ್ನು ಮುಂದಿಟ್ಟುಕೊಂಡು ಭಾವನಾತ್ಮಕ ಸಂಕಥನ ಸೃಷ್ಟಿಸುವ ತಂತ್ರವನ್ನು ಕಾಂಗ್ರೆಸ್‌ ಅನುಸರಿಸುತ್ತಿದೆ.

ಸತ್ಯ, ತರ್ಕ ಮತ್ತು ನೈತಿಕತೆಯ ಮೇಲೆ ಚರ್ಚೆ ಸಾಗಬೇಕೆಂದು ಗಾಂಧೀಜಿ ವಾದಿಸುತ್ತಿದ್ದರು. ಆದರೆ, ಕಾಂಗ್ರೆಸ್ ಸಾಂವಿಧಾನಿಕ ಮೌಲ್ಯಗಳನ್ನು ಗಾಳಿಗೆ ತೂರಿ, ರಾಜ್ಯಪಾಲರ ಭಾಷಣದಲ್ಲಿ ‘ವಿಬಿ–ಜಿ ರಾಮ್ ಜಿ’ ವಿರೋಧಿಸಲು ಮುಂದಾಗಿದ್ದು ಆ ಪಕ್ಷದ ನೈತಿಕ ಅಧಃಪತನಕ್ಕೆ ಸಾಕ್ಷಿ. ಗಾಂಧಿ ಹೆಸರು, ಅವರ ಫೋಟೊ ಹಾಗೂ ಅವರ ಉಲ್ಲೇಖಗಳು ಕಾಂಗ್ರೆಸ್‌ ಪಕ್ಷಕ್ಕೆ ರಾಜಕೀಯ ಅಲಂಕಾರ ಮಾತ್ರ.

ಸಂಕಥನ ರಾಜಕಾರಣ ಎಂಬುದು ಈಗ ವಾದ ಸೋತವರ ಶಸ್ತ್ರ. ಈ ಹಿಂದೆ ಪೌರತ್ವ ಕಾಯ್ದೆ ಜಾರಿ ಸಂದರ್ಭದಲ್ಲಿ ಕಾಂಗ್ರೆಸ್ ಇದೇ ಮಾರ್ಗ ತುಳಿದಿತ್ತು. ರಫೇಲ್ ವಿಮಾನಗಳ ಖರೀದಿ ವಿಚಾರದಲ್ಲಿ ಇಂಥದ್ದೇ ಒಂದು ಸಂಕಥನ ರೂಪಿಸುವುದಕ್ಕೆ ಬಳಸಿ ವಿಫಲವಾಯಿತು. ಪಾಕಿಸ್ತಾನದ ಜತೆಗೆ ನಡೆದ ವೈಮಾನಿಕ ಸಂಘರ್ಷ ಕಾಲದಲ್ಲೂ ರಾಷ್ಟ್ರದ ಹಿತವನ್ನು ಬದಿಗಿಟ್ಟು ರಫೇಲ್ ಕುರಿತಂತೆ ಸುಳ್ಳುಗಳ ಸರಮಾಲೆಯನ್ನೇ ಹೆಣೆದಿತ್ತು. ಕೃಷಿ ಕಾಯ್ದೆಯ ವಿರೋಧ, ತೆರಿಗೆ ವಿಚಾರದಲ್ಲೂ ಇದೇ ಸಂಕಥನದ ಯುದ್ಧಕ್ಕೆ ಇಳಿದಿತ್ತು. ವೋಟ್ ಚೋರಿ ಎಂಬ ಅಣಕಕ್ಕೂ ಬೆಲೆ ಸಿಗದೇ ಇರುವಾಗ ಈಗ ಗಾಂಧಿ‌‌ ಕೂಡ ಕಾಂಗ್ರೆಸ್‌ನ ಅಸ್ತಿತ್ವ ರಕ್ಷಣೆಯ ಹೋರಾಟದಲ್ಲಿನ ಅಸ್ತ್ರವಾಗಿರುವುದು ರಾಷ್ಟ್ರಪಿತನಿಗೆ ಮಾಡುವ ಅಪಮಾನದ ಪರಾಕಾಷ್ಠೆಯೇ ಸರಿ.

ಇಂದಿನ ಕಾಂಗ್ರೆಸ್ ರಾಜಕಾರಣ ಸಂಕಥನಗಳ ಮೇಲೆ ನಿಂತಿದೆ. ತತ್ತ್ವಗಳು ದುರ್ಬಲವಾದಾಗ, ಭಾವನೆಗಳನ್ನು ಬಳಸಲಾಗುತ್ತದೆ. ಆಡಳಿತದ ಪರ್ಯಾಯ ದೃಷ್ಟಿಕೋನ ಇಲ್ಲವಾದಾಗ ಇತಿಹಾಸವನ್ನು ಬಳಸಿ ಅನಗತ್ಯವಾಗಿ ಗದ್ದಲ ಸೃಷ್ಟಿಸಲಾಗುತ್ತದೆ. ‘ವಿಬಿ–ಜಿ ರಾಮ್ ಜಿ’ ವಿಚಾರದಲ್ಲೂ ಇದೇ ನಡೆಯುತ್ತಿದೆ.

ಜನ ತಾನು ಹೇಳಿದ್ದನ್ನೆಲ್ಲ‌ ನಂಬುತ್ತಾರೆ ಎಂಬ ಕಾಂಗ್ರೆಸ್ ನಾಯಕರ ಪುರಾತನ ನಂಬಿಕೆ ಈಗ ನೆಲೆ ಕಳೆದುಕೊಂಡಿದೆ. ಉಚಿತ ಅನುಚಿತದ ಸಾರ್ವಜನಿಕ ಪ್ರಜ್ಞೆ ಜಾಗೃತವಾಗಿ ದಶಕಗಳು ಕಳೆದಿವೆ. ಹೀಗಾಗಿ, ಕಾಂಗ್ರೆಸ್ ಕಟ್ಟುವ ಸಂಕಥನಗಳೆಲ್ಲ ಮರಳಿನ ಸೌಧದಂತೆ ಚುನಾವಣೆಯಿಂದ‌ ಚುನಾವಣೆಗೆ ಕುಸಿಯುತ್ತಿವೆ.

ಲೇಖಕ: ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.