
ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾತಂಡ ಭಾರತದ ವಿರುದ್ಧ ಗೆಲುವು ಸಾಧಿಸಿದ ನಂತರ, ವಿಜೇತ ತಂಡದ ಮುಖ್ಯ ಕೋಚ್ ಶುಕ್ರಿ ಕಾನ್ರಾಡ್ ಅವರುಸುದ್ದಿಗಾರರ ಮುಂದೆ ಬಳಸಿದ ‘ಗ್ರೋವೆಲ್’ ಎಂಬ ಪದ ವಿವಾದ ಸೃಷ್ಟಿಸಿತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಒಂದು ಪದ ಕೆಲವೊಮ್ಮೆ ಮರೆತುಹೋದ ಇತಿಹಾಸದ ನೋವನ್ನು ನೆನಪಿಸಬಹುದು. ಅಂದರೆ, ಕೆಲವು ಪದಗಳು ಹಲವಾರು ರಾಜಕೀಯ, ಜನಾಂಗೀಯ, ಮತ್ತು ಸಾಂಸ್ಕೃತಿಕ ಸಂದರ್ಭಗಳ ಅನುಸಾರ ಹುಟ್ಟಿಕೊಂಡಿರುತ್ತವೆ. ಹಾಗಾಗಿ ಮೇಲ್ನೋಟಕ್ಕೆ ಕಾಣಿಸುವ ಅರ್ಥಕ್ಕಷ್ಟೇ ನಾವು ಸೀಮಿತ ವಾಗದೆ, ಪದದ ಹಿಂದಿನ ಹಲವಾರು ಒಳಾರ್ಥಗಳನ್ನೂ ಮನಸ್ಸಿನಲ್ಲಿ ಇಟ್ಟುಕೊಂಡು ಪದಗಳನ್ನು ಬಳಸಬೇಕು. ಪ್ರಾಯಶಃ ಇದೇ ಮಾತನ್ನು ಬಸವಣ್ಣ ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂದು ಹೇಳಿರಬಹುದು.
ದಕ್ಷಿಣ ಆಫ್ರಿಕಾ ತಂಡ ಸಾಧಿಸಿದ ಜಯಭೇರಿಯನ್ನು ಪದಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ ಕಾನ್ರಾಡ್ ಅವರು, ತಿಳಿದೋ ತಿಳಿಯದೆಯೋ ‘ಗ್ರೋವೆಲ್’ ಪದ ಬಳಸಿದರು. ಭಾರತ ತಂಡವನ್ನು ತಮ್ಮ ಮುಂದೆ ತಗ್ಗಿ ನಡೆಯುವಂತೆ ಬಗ್ಗು ಬಡಿಯುವುದು ತಮ್ಮ ತಂಡದ ಉದ್ದೇಶವಾಗಿತ್ತು ಎಂಬ ಅರ್ಥ ಸೂಚಿಸುವ ಕಾನ್ರಾಡ್ ಅವರ ಮಾತುಗಳು, ವಸಾಹತುಶಾಹಿ ಕಾಲದ ಜನಾಂಗೀಯ ಧೋರಣೆ ಮತ್ತು ವಸಾಹತುಶಾಹಿ ಅಹಂಕಾರದ ಅಭಿವ್ಯಕ್ತಿಯಂತಿತ್ತು.
ಅಂತರರಾಷ್ಟ್ರೀಯ ಕ್ರೀಡೆಗಳ ಉದ್ದೇಶವು ಸ್ಪರ್ಧೆ ಅಥವಾ ಗೆಲುವಿಗಷ್ಟೇ ಸೀಮಿತವಾಗಿರುವುದಿಲ್ಲ. ಕ್ರೀಡೆಯು ಹಲವು ಮಹತ್ವದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಪಾತ್ರಗಳನ್ನು ನಿಭಾಯಿಸುತ್ತದೆ. ಉಭಯ ದೇಶಗಳ ನಡುವೆ ನಡೆಯುವ ಕ್ರೀಡೆಯು ಪರಸ್ಪರ ಸ್ನೇಹ ಮತ್ತು ಸಹಕಾರವನ್ನು ಉತ್ತೇಜಿಸುತ್ತದೆ. ಕ್ರೀಡೆಗಳಲ್ಲಿ ಆಟಗಾರರ ಸಾಮರ್ಥ್ಯ ಮತ್ತು ಶ್ರೇಷ್ಠತೆಯ ಜೊತೆಗೆ ಅವರ ಮನೋಧೋರಣೆಯೂ ಪ್ರದರ್ಶನವಾಗುತ್ತದೆ. ಕ್ರೀಡಾ ವೇದಿಕೆಯಲ್ಲಿ ಮತ್ತು ಹೊರಜಗತ್ತಿನಲ್ಲಿ ಕ್ರೀಡಾಪ್ರೇಮಿಗಳು ತಮ್ಮ ನೆಚ್ಚಿನ ಆಟಗಾರರ ಮತ್ತು ಆ ಆಟಗಾರರನ್ನು ತರಬೇತು ಮಾಡುವವರನ್ನು ಗಮನಿಸಿ ಅವರಿಂದ ಕಲಿಯುತ್ತಿರುತ್ತಾರೆ. ಬಹಳಷ್ಟು ಬಾರಿ ಕ್ರೀಡಾಕೂಟಗಳು, ಆಟಗಾರರು ಮತ್ತು ಅಭಿಮಾನಿಗಳು ಪರಸ್ಪರ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಅರಿಯಲು ಸಹಾಯಕವಾಗುತ್ತವೆ. ಹೀಗಿರುವಾಗ, ಬರೀ ಒಂದು ಟೆಸ್ಟ್ ಸರಣಿಯನ್ನು ಜಯಿಸಿದ ಸಂತೋಷದ ಭರದಲ್ಲಿ ಹಿಂದೆಮುಂದೆ ನೋಡದೆ ‘ಗ್ರೋವೆಲ್’ ಪದ ಬಳಸಿದ್ದು ಶುಕ್ರಿ ಕಾನ್ರಾಡ್ ಅವರ ಕ್ರೀಡಾ ಮನೋಭಾವವನ್ನು ಪ್ರಶ್ನಿಸುವಂತೆ ಮಾಡುತ್ತದೆ. ಏಕೆಂದರೆ, ಈ ಪದವು ವಸಾಹತುಗಾರರು ಸ್ಥಳೀಯರ ಕುರಿತು ತಮ್ಮ ಶ್ರೇಷ್ಠತೆಯನ್ನು ಮೆರೆಯುವ ಮತ್ತು ಸ್ಥಳೀಯರನ್ನು ಅಧೀನದಲ್ಲಿ ಇಟ್ಟುಕೊಳ್ಳುವ ಅರ್ಥದಲ್ಲಿ ಬಳಸುತ್ತಿದ್ದರು. ಈ ಪದದ ಮೂಲ ಉದ್ದೇಶ, ಮತ್ತೊಬ್ಬನನ್ನು ಗೌರವ ವಂಚಿತರನ್ನಾಗಿ ಮಾಡಿ ಅವರು ತಮಗೆ ವಿಧೇಯತೆಯನ್ನು ತೋರಿಸುವಂತೆ ಮಾಡುವುದು. ಈ ಪದವನ್ನು, ಗುಲಾಮರನ್ನು ಹೊಂದಿದ್ದ ಮಾಲೀಕರು, ಮಿಲಿಟರಿ ಅಧಿಕಾರಿಗಳು ಮತ್ತು ವಸಾಹತುಶಾಹಿ ದೊರೆಗಳು ಬಲಹೀನರನ್ನು ಉದ್ದೇಶಿಸಿ ಬಳಸುತ್ತಿದ್ದರು. ಇಷ್ಟೆಲ್ಲಾ ರಾಜಕೀಯ ಮತ್ತು ಜನಾಂಗೀಯ ದ್ವೇಷದ ಒಳಪದರಗಳಿರುವ ಪದವನ್ನು ಅಜಾಗರೂಕತೆಯಿಂದ ಬಳಸಿದ್ದನ್ನು ಶುಕ್ರಿ ಕಾನ್ರಾಡ್‌ರ ಪದಜ್ಞಾನದ ಕೊರತೆ ಎಂದು ಅರ್ಥೈಸಲಾಗುವುದಿಲ್ಲ.
ಗ್ರೋವೆಲ್ ಪದವು ವಿವಾದ ಸೃಷ್ಟಿ ಮಾಡುತ್ತಿರುವುದು ಇದು ಮೊದಲ ಸಲವಲ್ಲ. 1976ರಲ್ಲಿ ದಕ್ಷಿಣ ಆಫ್ರಿಕಾ ಮೂಲದ ಮತ್ತು ಇಂಗ್ಲೆಂಡ್ ತಂಡದ ನಾಯಕರಾಗಿದ್ದ ಟೋನಿ ಗ್ರೆಗ್ ಅವರು, ವೆಸ್ಟ್ ಇಂಡೀಸ್ ತಂಡವನ್ನು ಕುರಿತು ‘ಗ್ರೋವೆಲ್’ ಪದವನ್ನು ಬಳಸಿ, ಎದುರಾಳಿಗಳನ್ನು ಬಗ್ಗು ಬಡಿಯುವ ಮಾತಾಡಿದ್ದರು. ಟೋನಿ ಗ್ರೆಗ್ ಅವರ ಹೇಳಿಕೆ ತೀಕ್ಷ್ಣ ಪ್ರತಿಕ್ರಿಯೆಯನ್ನು ಹುಟ್ಟುಹಾಕಿತ್ತು. ವೆಸ್ಟ್ ಇಂಡೀಸ್ ಆಟಗಾರರು, ಪತ್ರಕರ್ತರು ಮತ್ತು ಅಭಿಮಾನಿಗಳು ಆ ಹೇಳಿಕೆಯಿಂದ ನೋವನುಭವಿಸಿದರು. ಗುಲಾಮಗಿರಿ, ಅವಮಾನ ಮತ್ತು ಕಪ್ಪು ಜನಾಂಗದ ಅಧೀನತೆಗಳನ್ನು ಆ ಪದವು ನೆನಪಿಸಿತ್ತು. ಕ್ಲೈವ್ ಲಾಯ್ಡ್ ನೇತೃತ್ವದ ವೆಸ್ಟ್ ಇಂಡೀಸ್ ಆಟಗಾರರು ಅದನ್ನು ವೈಯಕ್ತಿಕ ಹಾಗೂ ಸಾಮೂಹಿಕ ಅವಮಾನ ಎಂದು ತೀವ್ರವಾಗಿ ಖಂಡಿಸಿದರು. ನಂತರ ವೆಸ್ಟ್ ಇಂಡೀಸ್ ಆಟಗಾರರು ಆ ಹೇಳಿಕೆಯನ್ನು ಪ್ರೇರಣೆಯಾಗಿ ಬಳಸಿಕೊಂಡು ಅತ್ಯಂತ ಶ್ರೇಷ್ಠ ಆಟವಾಡಿ, ಸರಣಿಯಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದರು.
ಪ್ರಸ್ತುತ ಶುಕ್ರಿ ಕಾನ್ರಾಡ್ ಅವರ ಹೇಳಿಕೆಯನ್ನು ಹಿರಿಯ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ಪಾರ್ಥಿವ್ ಪಟೇಲ್, ಆಕಾಶ್ ಚೋಪ್ರಾ ಮತ್ತು ಸುನಿಲ್ ಗವಾಸ್ಕರ್ ಅವಮಾನಕಾರಿ ಮತ್ತು ಅನವಶ್ಯಕವೆಂದು ಟೀಕಿಸಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಡೇಲ್ ಸ್ಟೇಯ್ನ್ ಕೂಡ ಆ ಹೇಳಿಕೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ನಮ್ಮ ಮಾತುಗಳು ಸ್ಪರ್ಧಾ ಮನೋಭಾವವನ್ನು ತೋರಿಸಬೇಕೇ ಹೊರತು, ಮರೆಯಾಗಿರುವ ನೋವಿಗೆ ಮರುಜೀವ ಕೊಡಬಾರದು ಎಂದು ಹೇಳಿ ಕಾನ್ರಾಡ್ ಮಾತುಗಳನ್ನು ಖಂಡಿಸಿದ್ದಾರೆ.
ಭಾಷೆ ಎಂದಿಗೂ ಮುಗ್ಧವಾಗಿರುವುದಿಲ್ಲ ಮತ್ತು ಮನುಷ್ಯರ ಇತಿಹಾಸವನ್ನು ಶಾಶ್ವತವಾಗಿ ತನ್ನೊಳಗೆ ಹಿಡಿದಿಟ್ಟುಕೊಂಡಿರುತ್ತದೆ. ಹಾಗಾಗಿ, ಮಾತನಾಡುವ ಸಂದರ್ಭದಲ್ಲಿ ಪದಪ್ರಯೋಗದ ಬಗ್ಗೆ ಎಚ್ಚರಿಕೆ ಮತ್ತು ವಿವೇಕ ಅಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.