ADVERTISEMENT

ವೈದ್ಯರು ಮತ್ತು ಕನ್ನಡ ಬಳಕೆ

ಕನ್ನಡವನ್ನು ಇತರ ವೃತ್ತಿನಿರತರಿಗಿಂತ ಹೆಚ್ಚಾಗಿ ತಮ್ಮ ವೃತ್ತಿಯ ಭಾಗವಾಗಿ, ಸಂವಹನಕ್ಕಾಗಿ ಬಳಸಬೇಕಾದ ಅನಿವಾರ್ಯ ವೈದ್ಯ ವೃತ್ತಿಗಿದೆ

ಡಾ.ಕೆ.ಎಸ್.ಪವಿತ್ರ
Published 9 ಡಿಸೆಂಬರ್ 2019, 20:15 IST
Last Updated 9 ಡಿಸೆಂಬರ್ 2019, 20:15 IST
sangata_10-12-19
sangata_10-12-19   

ಕನ್ನಡ ಪುಸ್ತಕ ಪ್ರಾಧಿಕಾರವು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ 12 ಪುಸ್ತಕಗಳನ್ನು ಕನ್ನಡದಲ್ಲಿ ವೈದ್ಯರಿಂದ ಬರೆಸಿ ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ವೇಳೆ ನನಗೆ ನೆನಪಾಗುವುದು, ಈಚೆಗೆ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ, ಕಿರಿಯ ವೈದ್ಯರು ಕನ್ನಡದಲ್ಲಿ ಮಾತನಾಡುವುದಿಲ್ಲವೆಂಬ ಕಾರಣಕ್ಕೆ ಕೆಲವರಿಂದ ಬೆಂಗಳೂರಿನ ಮಿಂಟೊ ಆಸ್ಪತ್ರೆಯಲ್ಲಿ ನಡೆದ ಗಲಾಟೆ.

‘ವೈದ್ಯರು ಎಂದಮಾತ್ರಕ್ಕೆ ಅವರು ಕನ್ನಡದಲ್ಲಿ ಮಾತನಾಡುವುದಿಲ್ಲ. ಅವರಿಗೆ ಕನ್ನಡ ಕಲಿಯುವ ಅಗತ್ಯವಾಗಲೀ ಆಸಕ್ತಿಯಾಗಲೀ ಇರುವುದಿಲ್ಲ’ ಎಂಬ ಅಭಿಪ್ರಾಯ ಕೆಲವರಲ್ಲಿ, ಈ ಗಲಾಟೆಯಿಂದ ಮೂಡಿರಬಹುದು. ಆದರೆ ಕನ್ನಡಕ್ಕೆ ಸಂಬಂಧಪಟ್ಟಂತೆ ವೈದ್ಯರು ತಮ್ಮ ವೃತ್ತಿಯಲ್ಲಿ ಅನುಸರಿಸುವ ಕ್ರಮಗಳನ್ನು ನಾವು ಇಲ್ಲಿ ಗಮನಿಸಬೇಕು.

ವೈದ್ಯಕೀಯ ವೃತ್ತಿಗೆ ಯಾರೂ ಧುತ್ತೆಂದು ಬರುವುದಿಲ್ಲವಷ್ಟೆ! ಪ್ರಾಥಮಿಕ- ಪ್ರೌಢಶಾಲೆ- ಪಿಯುಸಿ ಹಂತಗಳಲ್ಲಿ ಮೊದಲು 3, ನಂತರ 2 ಭಾಷೆಗಳನ್ನು ಕಲಿತೇ ಆಮೇಲೆ ವಿಜ್ಞಾನಕ್ಕೆ ತಮ್ಮ ಕಲಿಕೆಯನ್ನು ಸೀಮಿತವಾಗಿಸುತ್ತಾರೆ. ಈ ಹಂತದಲ್ಲಿ ಕಲಿಕಾ ಮಾಧ್ಯಮವು ಇಂಗ್ಲಿಷ್‌ ಭಾಷೆಯಾದರೂ, ಕನ್ನಡದಲ್ಲಿ ಮಾತನಾಡಲು, ಬರೆಯಲು ಹೆಚ್ಚಿನವರಿಗೆ ಬರುತ್ತದೆ. ಇನ್ನು ಬೇರೆಡೆಯಿಂದ ವೈದ್ಯಕೀಯ ಪದವಿ ಓದಲು ನಮ್ಮ ರಾಜ್ಯಕ್ಕೆ ಬರುವ ವಿದ್ಯಾರ್ಥಿಗಳು ಕನ್ನಡವನ್ನು ಓದಿರಲಾರರು ನಿಜ. ಆದರೆ, ಸುಮಾರು 25 ವರ್ಷಗಳಿಂದಲೇ ಕನ್ನಡದ ವಿಶೇಷ ಬೋಧನಾ ತರಗತಿಗಳು ರಾಜ್ಯದ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ನಡೆಯುತ್ತಲೇ ಬಂದಿವೆ. ಇದರಿಂದ, ರೋಗಿಗಳೊಡನೆ ಸಂಭಾಷಣೆ ನಡೆಸುವಷ್ಟು ಕೌಶಲ ಸಿದ್ಧಿಸಿರುತ್ತದೆ.

ADVERTISEMENT

ರೋಗಿಗೆ ಆರಾಮದ ಭಾವನೆ ಮೂಡುವಂತೆ ನೋಡಿಕೊಳ್ಳುವುದು ಅತಿಮುಖ್ಯ ಎಂಬುದನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತದೆ. ಹಾಗಾಗಿ ಕನ್ನಡಿಗನಾಗಿ, ಕನ್ನಡಾಭಿಮಾನಿಯಾಗಿ ವೈದ್ಯನೊಬ್ಬ ಹಿಂದಿ ಅಥವಾ ತಮಿಳು ಮಾತನಾಡುವ ರೋಗಿಯೊಡನೆ ‘ನೀನು ಕನ್ನಡದಲ್ಲಿ ಮಾತನಾಡಿದರೆ ಮಾತ್ರ ನಿನಗೆ ಚಿಕಿತ್ಸೆ’ ಎಂದು ಬೆದರಿಸುವುದು ಸೂಕ್ತವೇ? ಅಂಥ ಸಂದರ್ಭದಲ್ಲಿ ವೈದ್ಯನಿಗೆ ತನಗೆ ಬರುವ ಅಥವಾ ಬರದ ಹಿಂದಿ, ತಮಿಳು ಇನ್ಯಾವುದೇ ಭಾಷೆಯಲ್ಲಿ ಅಥವಾ ಎಲ್ಲರಿಗೂ ಅರ್ಥವಾಗಬಹುದಾದ ಇಂಗ್ಲಿಷ್ ಪದಗಳನ್ನು ಉಪಯೋಗಿಸುವ ಅನಿವಾರ್ಯ ಒದಗಬಹುದು. ಇಲ್ಲಿ ವೈದ್ಯನ ಗಮನವೆಲ್ಲವೂ ಇರಬೇಕಾದದ್ದು ರೋಗಿಯ ನರಳುವಿಕೆಯನ್ನು ಕಡಿಮೆ ಮಾಡುವುದರತ್ತ.

ದೇಶದ ಎಲ್ಲೆಡೆಯಿಂದ ಬಂದು ವೈದ್ಯ ವಿದ್ಯಾರ್ಥಿಗಳು ಕಲಿಯುವ, ವಿವಿಧ ಭಾಷೆಯ ರೋಗಿಗಳು ಬರುವ, ಅಂತರರಾಷ್ಟ್ರೀಯ ಖ್ಯಾತಿಯ ನಿಮ್ಹಾನ್ಸ್‌ನಲ್ಲಿ ಓದಿದ ನನಗೆ, ಆ ಸಮಯದಲ್ಲಿ ಕನ್ನಡ ಬರುವುದು ಎಂತಹ ದೊಡ್ಡ ಸಾಮರ್ಥ್ಯ ಎಂಬುದು ಅರಿವಾಗಿತ್ತು. ಅನ್ಯ ಭಾಷೆಯ ವಿದ್ಯಾರ್ಥಿಗಳು ನನ್ನನ್ನು ‘ಕನ್ನಡತಿ’ ಎಂದು ಕೀಳರಿಮೆಯಿಂದ ಕಾಣಲಿಲ್ಲ. ಬದಲಿಗೆ, ‘ಇವರು ಕನ್ನಡದ ರೋಗಿಗಳಿಗೆ ಸುಲಭವಾಗಿ ಪ್ರಿಯವಾಗುವ ವೈದ್ಯರು’ ಎಂಬ ಗೌರವ, ಸ್ವಲ್ಪ ಅಸೂಯೆಯಿಂದಲೇ ನೋಡುತ್ತಿದ್ದುದು ನನಗೆ ನೆನಪಿದೆ. ಅವರದ್ದು ನಗುಬರಿಸಬಹುದಾದ ಕನ್ನಡವೇ ಆದರೂ, ರೋಗಿಗಳ ಬಳಿ ಹೇಗಾದರೂ ಪ್ರಯೋಗಿಸಿ, ಕಲಿಯುತ್ತಿದ್ದದ್ದೂ ನೆನಪಿದೆ.

ಸರಾಗವಾಗಿ ಕನ್ನಡ ಮಾತನಾಡಲಾಗದ ವೈದ್ಯರೂ ರೋಗಿಗಳ ಬಳಿ ಕನ್ನಡದಲ್ಲಿ ಆರೋಗ್ಯ ಸಮಸ್ಯೆ ವಿವರಿಸುವುದನ್ನು ಕಲಿತಿರುತ್ತಾರೆ. ರಾಜ್ಯದ ಬಹುತೇಕ ವೈದ್ಯಕೀಯ ಕಾಲೇಜುಗಳಲ್ಲಿ ಕನ್ನಡ ಸಂಘಗಳು ಇವೆ. ಕೆಲವು ಬಹು ಕ್ರಿಯಾಶೀಲವಾಗಿದ್ದರೆ, ಇನ್ನು ಕೆಲವು ರಾಜ್ಯೋತ್ಸವವನ್ನಾದರೂ ಆಚರಿಸದೇ ಬಿಡುವುದಿಲ್ಲ. ಅಂದರೆ ಕನ್ನಡವನ್ನು ಉಳಿಸುವಲ್ಲಿ, ಬಳಸುವಲ್ಲಿ, ಬೆಳೆಸುವಲ್ಲಿ ವೈದ್ಯರು ಹಿಂದೆ ಬಿದ್ದಿಲ್ಲ!

ಕನ್ನಡವನ್ನು ಬೇರೆ ವೃತ್ತಿಗಳಲ್ಲಿರುವ ಇತರರಿಗಿಂತ ತಮ್ಮ ವೃತ್ತಿಯ ಭಾಗವಾಗಿ, ಸಂವಹನಕ್ಕಾಗಿ ಬಳಸಬೇಕಾದ ಅನಿವಾರ್ಯ ವೈದ್ಯ ವೃತ್ತಿಗಿದೆ. ಹೀಗಿದ್ದೂ ವೈದ್ಯಕೀಯ ಸಾಹಿತ್ಯ ರಚನೆಯನ್ನು ಕನ್ನಡದಲ್ಲಿ ಮಾಡುವ ವೈದ್ಯರ ಸಂಖ್ಯೆ ಹೇಳಿಕೊಳ್ಳುವಂತಿಲ್ಲ. ಇದಕ್ಕೆ ಕಾರಣಗಳು ಎರಡು. ಮೊದಲನೆಯದು, ಬರೆಯುವುದಕ್ಕೆ ಸಮಯದ ಶಿಸ್ತು, ಸಮಯಾವಕಾಶ ಎರಡೂ ಬೇಕು. ಹೀಗಾಗಿ, ವೈದ್ಯಕೀಯ ಸಾಹಿತ್ಯ ರಚನೆಯನ್ನು ತಮ್ಮ ವೃತ್ತಿಯ ಒಂದು ಭಾಗವಾಗಿ, ರೋಗಿಗಳಿಗೆ ನೀಡುವ ಅರಿವೂ ಚಿಕಿತ್ಸೆಯ ಒಂದು ಅಂಶವೇ ಎಂಬುದನ್ನು ಗಂಭೀರವಾಗಿ ಪರಿಗಣಿಸುವವರು ಕಡಿಮೆ. ಎರಡನೆಯದು, ಬರವಣಿಗೆ ಕಲೆಯ ಸಮಸ್ಯೆ. ಮಾತುಗಳಲ್ಲಿ ಸರಳವಾಗಿ ತಿಳಿಸಬಹುದಾದ ನಮ್ಮ ಅರಿವನ್ನು ಬರಹ ರೂಪಕ್ಕಿಳಿಸುವುದು ಸುಲಭವಲ್ಲ. ಅದರಲ್ಲಿಯೂ ವೈದ್ಯಕೀಯ ವಿಷಯಗಳನ್ನು ಸರಳ ಕನ್ನಡದಲ್ಲಿ ಬರೆಯಲು ವೈದ್ಯನಾದವನು ಶ್ರಮಪಡಬೇಕು. ಹಾಗಾಗಿ, ಈ ವಿಚಾರದಲ್ಲಿ ಪ್ರಾಧಿಕಾರದ ವೈದ್ಯಕೀಯ ಪುಸ್ತಕಗಳ ಮಾಲಿಕೆಯ ಬಿಡುಗಡೆ ಒಂದು ಮುಖ್ಯ ಹೆಜ್ಜೆ.

ಈ ಎರಡು ವರ್ಷಗಳಲ್ಲಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕನ್ನಡ ಬರಹಗಾರರ ಬಳಗವೇ ಬೆಳೆದು ನಿಂತಿದೆ. ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯವನ್ನು ಬೆಳೆಸುವ, ಜನರಿಗೆ ಕನ್ನಡದಲ್ಲಿ ವೈದ್ಯಕೀಯ ವಿಷಯಗಳ ಅರಿವು ಮೂಡಿಸುವ ನಿಟ್ಟಿನಲ್ಲಿ ಸಂಘದ ಜೊತೆಗೆ ಸರ್ಕಾರ ಕೈಜೋಡಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.