ADVERTISEMENT

ಸಂಗತ: ‘ಅನ್ನದ ತಟ್ಟೆ’ಗೆ ಸರ್ಕಾರ ಕೊಡದಿರಲಿ ವಿಷ

ಜಿ.ಕೃಷ್ಣ ಪ್ರಸಾದ್
Published 28 ಅಕ್ಟೋಬರ್ 2025, 23:30 IST
Last Updated 28 ಅಕ್ಟೋಬರ್ 2025, 23:30 IST
   

ಬಿಪಿಎಲ್ ಹಾಗೂ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಪ್ರತಿಯೊಬ್ಬ ಸದಸ್ಯರಿಗೆ ನೀಡುತ್ತಿದ್ದ 10 ಕೆ.ಜಿ. ಅಕ್ಕಿಯ ಬದಲು, 5 ಕೆ.ಜಿ. ಅಕ್ಕಿ ಮತ್ತು ಪ್ರತಿ ಕುಟುಂಬಕ್ಕೆ ತೊಗರಿಬೇಳೆ, ಹೆಸರುಬೇಳೆ, ಎಣ್ಣೆ, ಸಕ್ಕರೆ ಮತ್ತು ಉಪ್ಪು ನೀಡಲು ಇತ್ತೀಚೆಗೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಮಹತ್ವದ ತೀರ್ಮಾನ ಸ್ವಾಗತಾರ್ಹವಾಗಿದೆ.

ಪಿಷ್ಟ ಹೊರತುಪಡಿಸಿ, ಪೋಷಕಾಂಶಗಳು ವಿರಳವಾದ ಪಾಲಿಷ್‌ ಅಕ್ಕಿಯನ್ನು ಮೂರೂ ಹೊತ್ತು ಸೇವಿಸುವುದರಿಂದ ಮಧುಮೇಹ ಸೇರಿದಂತೆ ಹಲವಾರು ಕಾಯಿಲೆಗಳಿಗೆ ಆಹ್ವಾನ ನೀಡುವಂತಾಗಿದೆ. ಹಳ್ಳಿಗಳಲ್ಲೂ ಮಧುಮೇಹಿಗಳು ಹೆಚ್ಚುತ್ತಿರುವುದು ಇದೇ ಕಾರಣಕ್ಕೆ. ಆದ್ದರಿಂದ, ಅಕ್ಕಿಯನ್ನು ಕಡಿತಗೊಳಿಸಿ ಬೇಳೆ, ಎಣ್ಣೆ, ಸಕ್ಕರೆ, ಉಪ್ಪು ನೀಡುವ ಸರ್ಕಾರದ ನಿರ್ಧಾರ ಸಮಂಜಸವಾಗಿದೆ.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಪೌಷ್ಟಿಕ ಮತ್ತು ಸಮತೋಲಿತ ಆಹಾರ ಪಡೆಯಬೇಕೆಂಬ ಸರ್ಕಾರದ ಕಾಳಜಿ ಶ್ಲಾಘನೀಯ. ಆದರೆ, ವಿಷಮಯ ತೊಗರಿ, ಕಲಬೆರಕೆ ಖಾದ್ಯ ಎಣ್ಣೆ ಹಾಗೂ ‘ಬಿಳಿ ವಿಷ’ ಎನಿಸಿರುವ ಸಕ್ಕರೆಯನ್ನು ಸರ್ಕಾರವೇ ಉಚಿತವಾಗಿ ನೀಡುತ್ತಿರುವುದು ಕಳವಳಕಾರಿ. ಉಚಿತ ಆಹಾರ ಕಿಟ್ ಹೆಸರಿನಲ್ಲಿ ನಿಧಾನ ವಿಷಗಳು ಅನ್ನದ ತಟ್ಟೆಗೆ ಬರುತ್ತವೆ. ಬುಡಕಟ್ಟು ಸಮುದಾಯಗಳಿಗೆ ಪೌಷ್ಟಿಕ ಆಹಾರ ಪೂರೈಕೆ ಮಾಡುವ ಯೋಜನೆಯಲ್ಲಿ ಗುತ್ತಿಗೆ ಪಡೆದ ಕಂಪನಿಗಳು ಕಳಪೆ ಆಹಾರ ವಿತರಿಸುತ್ತಿರುವುದು ಬಯಲಾಗಿದೆ (ಪ್ರ.ವಾ., ಅ.26). ಇದೇ ರೀತಿಯಾಗಿ, ಉಚಿತ ಆಹಾರ ಕಿಟ್ ಯೋಜನೆಯ ಗುತ್ತಿಗೆ ಪಡೆಯುವ ಖಾಸಗಿ ಕಂಪನಿಗಳು, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಮಣ್ಣುಪಾಲು ಮಾಡುವ ಸಾಧ್ಯತೆಗಳಿವೆ.

ADVERTISEMENT

ಉಚಿತ ಆಹಾರ ಕಿಟ್ ಯೋಜನೆಯನ್ನು, ನಿಜವಾದ ಜನಪರ ಹಾಗೂ ಆರೋಗ್ಯಪೂರ್ಣ ಕಾರ್ಯಕ್ರಮವಾಗಿ ರೂಪಿಸುವ ಅವಕಾಶ ಸರ್ಕಾರಕ್ಕಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಸಕ್ರಿಯವಾಗಿರುವ ಮಹಿಳಾ ಸಂಘಗಳು ಮತ್ತು ರೈತ ಉತ್ಪಾದಕರ ಕಂಪನಿಗಳಿಗೆ ಆರ್ಥಿಕ ನೆರವು ನೀಡಿ, ಸ್ಥಳೀಯವಾಗಿ ಉತ್ಪಾದಿಸಿದ ಗುಣಮಟ್ಟದ ಬೇಳೆ, ಎಣ್ಣೆ ಮತ್ತು ಬೆಲ್ಲವನ್ನು ಪಡಿತರದ ಮೂಲಕ ವಿತರಿಸಿದರೆ ಬಡವರ ಆರೋಗ್ಯ ಕಾಪಾಡಬಹುದು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಗಳೂ ಸೃಷ್ಟಿಯಾಗುತ್ತವೆ.

ತೊಗರಿಬೇಳೆ ಉತ್ಪಾದಿಸುವ ದೊಡ್ಡ ಮಿಲ್‌ಗಳನ್ನು ಒಮ್ಮೆ ಸಂದರ್ಶಿಸಿದರೆ, ಎಷ್ಟು ವಿಷ ನಮ್ಮ ಹೊಟ್ಟೆಗೆ ಸೇರುತ್ತಿದೆ ಎನ್ನುವುದು ಅರಿವಾಗುತ್ತದೆ. ಬಿತ್ತನೆಯಿಂದ ಸಂಸ್ಕರಣೆಯವರೆಗೂ ತೊಗರಿ ವಿಷಮಯ. ತೊಗರಿಗೆ ಕಲಬೆರಕೆಯಾಗುವ ನಿಷೇಧಿತ ಕೇಸರಿಬೇಳೆಯಿಂದ ನರದೌರ್ಬಲ್ಯ, ಲಕ್ವಾ ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳ ಅಪಾಯ ಇದೆ. ತೊಗರಿಗೆ ಹೊಳಪು ಕೊಡಲು ಬಳಸುವ ಮಿನರಲ್ ಆಯಿಲ್ ದೀರ್ಘಾವಧಿಯಲ್ಲಿ ಹೃದಯ ಮತ್ತು ಯಕೃತ್ ಹಾನಿಗೆ ಕಾರಣವಾಗುತ್ತದೆ. ಮೆಟಾನಿಲ್ ಹಳದಿ ಬಣ್ಣವನ್ನೂ ತೊಗರಿಗೆ ಬಳಕೆ ಮಾಡಲಾಗುತ್ತಿದ್ದು, ಅದು ಕಿಡ್ನಿ ಮತ್ತು ಯಕೃತ್ ಹಾನಿಗೆ ಕಾರಣ.

ಇದಕ್ಕೆ ಪರ್ಯಾಯವಾಗಿ, ಗ್ರಾಮೀಣ ಮಟ್ಟದಲ್ಲಿ ಬೇಳೆ ಮಿಲ್‌ಗಳನ್ನು ಮಹಿಳಾ ಸಂಘಗಳ ಮೂಲಕ ಸ್ಥಾಪಿಸಿ ಸ್ಥಳೀಯವಾಗಿ ಬೆಳೆದ ಕಾಳುಗಳನ್ನು ಸಂಸ್ಕರಿಸಿ ಪಡಿತರದ ಮೂಲಕ ವಿತರಿಸಬಹುದು. ರೈತ ಉತ್ಪಾದಕರ ಕಂಪನಿಗಳು ಮತ್ತು ಮಹಿಳಾ ಸಂಘಗಳ ಸಹಯೋಗದಲ್ಲಿ ದೊಡ್ಡ ಪ್ರಮಾಣದ ಬೇಳೆ ಮಿಲ್‌ಗಳನ್ನು ಸ್ಥಾಪಿಸಲು ಸಂಜೀವಿನಿ– ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯನ್ನು ಬಳಸಿಕೊಳ್ಳಬಹುದು. ಇದು ಮಹಿಳೆಯರನ್ನು ಉದ್ಯಮಿಗಳನ್ನಾಗಿಸಲು ಇರುವ ಅತ್ಯುತ್ತಮ ಅವಕಾಶ.

ಪಡಿತರ ವ್ಯವಸ್ಥೆಯ ಎಣ್ಣೆ ಪೂರೈಕೆ ಟೆಂಡರ್‌ಗಳನ್ನು ಪಡೆದ ಕಂಪನಿಗಳು ಅಗ್ಗದ ಮತ್ತು ಕಳಪೆ ಗುಣಮಟ್ಟದ ಎಣ್ಣೆಯನ್ನು ಪೂರೈಸುವ ಸಂಭವ ಹೆಚ್ಚು. ಇಂಥ ಎಣ್ಣೆಗಳಲ್ಲಿ ಲಿಕ್ವಿಡ್ ಪ್ಯಾರಾಫಿನ್‌ನಂತಹ ಪೆಟ್ರೋಲಿಯಂ ತ್ಯಾಜ್ಯಗಳಿರುತ್ತವೆ. ಇವು ಹೃದಯಾಘಾತ, ಕ್ಯಾನ್ಸರ್, ಸ್ಥೂಲಕಾಯ, ರಕ್ತದೊತ್ತಡ ಮುಂತಾದ ರೋಗಗಳಿಗೆ ಕಾರಣವಾಗುತ್ತವೆ.

ಕರ್ನಾಟಕದಲ್ಲಿ ಈಗಾಗಲೇ ಸಾಕಷ್ಟು ಗಾಣದ ಎಣ್ಣೆ ಉತ್ಪಾದನಾ ಘಟಕಗಳು ಸಕ್ರಿಯವಾಗಿವೆ. ಅವುಗಳನ್ನು ಒಕ್ಕೂಟದ ಅಡಿ ತಂದು, ಗುಣಮಟ್ಟದ ಮಾನದಂಡ ರೂಪಿಸಿ, ಸ್ಥಳೀಯವಾಗಿ ಉತ್ಪಾದಿಸಲಾದ ಎಣ್ಣೆಗಳನ್ನು ಪಡಿತರದ ಮೂಲಕ ನೀಡುವುದು ಜನರ ಆರೋಗ್ಯ ಸುಧಾರಿಸಲು ಮಹತ್ವದ ಹೆಜ್ಜೆಯಾಗುತ್ತದೆ.

ಸಕ್ಕರೆ ಉತ್ಪಾದನೆಗೆ ಬಳಸುವ ರಾಸಾಯನಿಕಗಳು ಮಧುಮೇಹ, ಸ್ಥೂಲಕಾಯ ಮತ್ತು ಹೃದಯರೋಗಗಳ ಅಪಾಯವನ್ನು ಹೆಚ್ಚಿಸುತ್ತವೆ. ಸಕ್ಕರೆಯ ಬದಲು ಬೆಲ್ಲ ಅಥವಾ ಬೆಲ್ಲದ ಪುಡಿಯನ್ನು ಪಡಿತರದ ಮೂಲಕ ನೀಡಿದರೆ, ಅದು ಕ್ರಾಂತಿಕಾರಕ ಕ್ರಮ.

ಬೆಲೆ ಕುಸಿತ ಮತ್ತು ಕಾರ್ಖಾನೆಗಳ ವಿಳಂಬ ಹಣ ಪಾವತಿಯಿಂದ ಹೈರಾಣಾಗಿರುವ ಕಬ್ಬು ಬೆಳೆಗಾರರು ರೈತ ಉತ್ಪಾದಕರ ಕಂಪನಿಗಳ ಮೂಲಕ ಆಲೆಮನೆಗಳನ್ನು ಸ್ಥಾಪಿಸಿ ಬೆಲ್ಲ ಪೂರೈಕೆ ಮಾಡಿದರೆ, ಹಳ್ಳಿಗಾಡಿನ ಆಲೆಮನೆಗಳಿಗೂ ಪುನರ್ಜೀವ ಸಿಗುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಈ ಪ್ರಯತ್ನ ಯಶಸ್ವಿಯಾಗಿ ನಡೆದಿದ್ದು, ಅದನ್ನು ಇತರ ಜಿಲ್ಲೆಗಳಿಗೂ ವಿಸ್ತರಿಸಬಹುದು. ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಕಲ್ಯಾಣಕ್ಕೆ ಮುಂದಾಗಿರುವ ಸರ್ಕಾರ, ಪಡಿತರದ ಮೂಲಕ ಗಾಣದ ಎಣ್ಣೆ, ಸ್ಥಳೀಯ ಬೇಳೆ ಮತ್ತು ಬೆಲ್ಲ ನೀಡುವ ಯೋಜನೆ ಕೈಗೊಂಡರೆ, ಅದು ರೈತರ ಕಲ್ಯಾಣಕ್ಕೆ ಹೊಸ ಅಧ್ಯಾಯವನ್ನು ಬರೆಯುವ ಹೆಮ್ಮೆಯ ಹೆಜ್ಜೆಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.