ಮಂಗಳ ಗ್ರಹಕ್ಕೆ ಹೋದೆವು, ಚಂದ್ರನಲ್ಲಿ ಇಳಿದೆವು, ನಿಮಿಷಗಳಲ್ಲಿ ರೈಲಿನ ವೇಗ ಅಳೆದವು, ಜಿಡಿಪಿ ಬೆಳೆಸಿದೆವು, ಒಳ್ಳೊಳ್ಳೆ ಭಾಷಣ ಮಾಡಿದೆವು, ಇತ್ತೀಚೆಗೆ ಒಂಬತ್ತನೇ ತರಗತಿಯ ಬಾಲಕಿಯೊಬ್ಬಳು ತನ್ನ ವಸತಿಶಾಲೆಯ ಶೌಚಾಲಯದಲ್ಲಿ ಮಗುವನ್ನೂ ಹೆತ್ತಳು.
ಹೊಟ್ಟೆಯಲ್ಲಿ ಇರೋದು ಗಂಡಾ ಹೆಣ್ಣಾ ಎಂದು ದುಡ್ಡಿಗಾಗಿ ಕದ್ದು ನೋಡುವ ಆಸ್ಪತ್ರೆಗಳು, ಅದೇ ಆಸ್ಪತ್ರೆಯ ಕಸದ ಬುಟ್ಟಿಗೆ ಎಳೆಗೂಸುಗಳನ್ನು ಎಸೆದುಹೋಗುವ ಹೆತ್ತವರು, ಇಷ್ಟಪಟ್ಟವರನ್ನೇ ತುಂಡು ತುಂಡಾಗಿ ಕತ್ತರಿಸಿ ಎಸೆಯುವ ಮನಃಸ್ಥಿತಿಗಳು… ಈಗಿನ ಸಭ್ಯ ಸುಸಂಸ್ಕೃತ ಸಮಾಜದಲ್ಲಿ ಏನುಂಟು ಏನಿಲ್ಲ?
ನಮ್ಮ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 80,813 ಬಾಲಕಿಯರು ಗರ್ಭಿಣಿಯರಾದ ಪ್ರಕರಣಗಳು ದಾಖಲಾಗಿವೆ ಎಂದು ಇತ್ತೀಚೆಗೆ ಒಂದು ವರದಿ, ಮೈ ನಡುಗಿಸುವ ಸುದ್ದಿಯನ್ನು ಬಹಿರಂಗಪಡಿಸಿದೆ. ಹೆಣ್ಣನ್ನು ಕೇವಲ ಸುಖಿಸುವ ಮತ್ತು ಮಗು ಹೆರುವ ವಸ್ತುವನ್ನಾಗಿ ಮಾತ್ರ ನೋಡುವುದರ ಸ್ಥಿತಿಯ ಪರಿಣಾಮ ಇದು. ಈ ತರಹದ ಘಟನೆಗಳು ಬೆಳಕಿಗೆ ಬಂದಾಗಲೆಲ್ಲಾ (ಬೆಳಕಿಗೆ ಬಾರದೆ ಉಳಿದವು ಅದೆಷ್ಟೋ) ಹಾಗೆ ಮಾಡಬೇಕು, ಹೀಗೆ ಮಾಡಬೇಕು... ಎನ್ನುತ್ತಾ ಎದ್ದು ಕೂರುತ್ತೇವೆ. ಮಾತಿನ ಮಂಟಪ ಕಟ್ಟುತ್ತೇವೆ. ಕಟ್ಟುನಿಟ್ಟಿನ ಆದೇಶಗಳೂ ಹೊರಬರುತ್ತವೆ. ಹಾಗಾದರೆ ಈ ಹಿಂದೆ ಆದೇಶಗಳು ಇರಲಿಲ್ಲವೇ? ಈ ನೆಲದಲ್ಲಿ ಎಲ್ಲವೂ ಕಟ್ಟುನಿಟ್ಟಾಗಿವೆ. ಆದರೆ, ನಡೆಯುವುದು ಮಾತ್ರ ನಡೆಯುತ್ತಲೇ ಇರುವುದೇಕೆ?
ಗಾಂಧಿ ಕನಸಿನ ಗ್ರಾಮ ಸ್ವರಾಜ್ಯ, ಸಮಾನತೆಯ ಭಾರತ, ಮಹಿಳಾ ಸಬಲೀಕರಣ... ಇವೆಲ್ಲ ಕೇವಲ ಭಾಷಣಗಳಲ್ಲಿ ಮತ್ತು ಕಾಗದಗಳಲ್ಲಿ ಮಾತ್ರ ಜೀವಂತವಾಗಿವೆಯೇ? ಆಧುನಿಕ ಭಾರತದ ಮುಖವಾಡದ ಹಿಂದಿರುವ ಭೀಕರ ವಾಸ್ತವ ಇದು. ತಂತ್ರಜ್ಞಾನದಲ್ಲಿ ನಾವು ಮುಂಚೂಣಿಯಲ್ಲಿದ್ದರೂ, ಮಾನವೀಯ ಮೌಲ್ಯಗಳಲ್ಲಿ ಎಷ್ಟೊಂದು ಹಿಂದಿದ್ದೇವೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?
ಯಾಕಾಗಿ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ? ಇದು ಕಾನೂನುಗಳ ಸೋಲಾ? ಅದರ ಅನುಷ್ಠಾನದ ಸೋಲಾ? ಕಾನೂನುಗಳ ಬಗ್ಗೆ ಸಾಮಾನ್ಯ ಜನರಿಗೆ ಎಷ್ಟು ತಿಳಿದಿದೆ? ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾಕೆ ಅಷ್ಟೊಂದು ವಿಳಂಬ? ಸಂತ್ರಸ್ತರು ದೂರು ನೀಡಲು ಭಯದಿಂದ ಹಿಂಜರಿಯುವುದೇಕೆ? ಇದಕ್ಕೆಲ್ಲಾ ಉತ್ತರ ನಾವು ಕೊಡುವ ಶಿಕ್ಷಣದಲ್ಲಿ ಇರಬೇಕಿತ್ತು. ನಮ್ಮ ಶಿಕ್ಷಣದಲ್ಲಿ ಉತ್ತರಗಳಿಲ್ಲ, ಬರೀ ಅಂಕಗಳಿವೆ ಅಷ್ಟೇ! ಶಿಕ್ಷಣದಲ್ಲಿ ಕೊರತೆಯಾಗಿ ಕಾಣಿಸುತ್ತಿರುವ ನೈತಿಕತೆ ಸಮಾಜದಲ್ಲೂ ಕ್ಷೀಣವಾಗಿದೆ. ನೈತಿಕ ಶಿಕ್ಷಣ ಎನ್ನುವುದು ಒಂದು ಪಠ್ಯವೋ, ತರಗತಿಯ ಒಂದು ಪಿರಿಯೆಡ್ಡೋ ಅಲ್ಲ; ಅದು ನಾಗರಿಕ ಬದುಕಿನ ಭಾವಕೋಶ ಎನ್ನುವುದು ನಮಗೆ ಮರೆತುಹೋಗಿದೆ. ಭಾವಕೋಶ ಬರಿದಾದೊಡೆ ಬದುಕಿನಲ್ಲಿ ಆರ್ದ್ರತೆ ನಿರೀಕ್ಷಿಸಬಹುದೆ?
ನಮ್ಮ ಸಾಮಾಜಿಕ ಮನೋಭಾವದಲ್ಲಿ ಬೇರೂರಿರುವ ಪುರುಷಾಧಿಪತ್ಯ, ಹೆಣ್ಣನ್ನು ಎರಡನೇ ದರ್ಜೆಯ ಪ್ರಜೆಯಾಗಿ ನೋಡುವ ದೃಷ್ಟಿಕೋನವೂ ಇಂತಹ ಕೃತ್ಯಗಳಿಗೆ ಪ್ರೇರೇಪಣೆ ನೀಡುತ್ತಿದೆ.
ಬಾಹ್ಯಾಕಾಶಕ್ಕೆ ಹೋಗಲು ಬೇಕಾದ ತಂತ್ರಜ್ಞಾನ ನಮ್ಮ ಬಳಿ ಇದೆ. ಹೆಣ್ಣುಶಿಶು ಗರ್ಭದಲ್ಲಿ ಇದೆಯೇ ಎಂದು ಪತ್ತೆ ಹಚ್ಚಿ ಗರ್ಭಪಾತ ಮಾಡಿಸುವ ವ್ಯವಸ್ಥೆಯೂ ನಮ್ಮಲ್ಲಿದೆ. ಇದು ತಂತ್ರಜ್ಞಾನದ ಪ್ರಗತಿಯ ದುರುಪಯೋಗ ಮಾತ್ರವಲ್ಲ, ನಮ್ಮ ಸಮಾಜದ ಒಳಗೊಳಗೇ ಕೊಳೆತುಹೋಗಿರುವ ಸ್ಥಿತಿ. ಇಂತಹ ಸಂದರ್ಭಗಳಲ್ಲಿ, ನಾವು ಯಾರನ್ನು ದೂಷಿಸಬೇಕು? ಸರ್ಕಾರವನ್ನೇ, ವ್ಯವಸ್ಥೆಯನ್ನೇ, ಅಥವಾ ನಮ್ಮನ್ನೇ? ಈ ಪ್ರಶ್ನೆಗೆ ನೇರ ಉತ್ತರವಿಲ್ಲ. ಏಕೆಂದರೆ ಇದು ಬಹುಪದರಗಳಲ್ಲಿ ಅಡಗಿ ಕೂತ ಸಮಸ್ಯೆಯಾಗಿದೆ. ಸಮಾಜವಾಗಿ ನಾವು ನಮ್ಮ ಮಕ್ಕಳನ್ನು, ವಿಶೇಷವಾಗಿ ಹೆಣ್ಣುಮಕ್ಕಳನ್ನು, ಕೇವಲ ವಸ್ತುವಾಗಿ ನೋಡದೇ ಮನುಷ್ಯರಾಗಿ, ಸ್ವತಂತ್ರ ವ್ಯಕ್ತಿಗಳಾಗಿ ನೋಡಲು ಕಲಿಸಬೇಕಿದೆ. ಸಮಾಜದ ಬದಲಾವಣೆ ಎಂಬುದು ಪ್ರತಿಯೊಬ್ಬರಲ್ಲೂ ಆಗಬೇಕಾದ ಬದಲಾವಣೆಯನ್ನು ವ್ಯಾಖ್ಯಾನಿಸುತ್ತದೆ.
ನಾವು ಈ ದೇಶವನ್ನು ‘ಮಾತೆ’ ಎನ್ನುತ್ತೇವೆ. ನಾಡನ್ನು ‘ತಾಯಿ’ ಎನ್ನುತ್ತೇವೆ. ನೆಲವೂ ಹೆಣ್ಣು. ಹರಿಯುವ ನದಿಯೂ ಹೆಣ್ಣು. ಎಲ್ಲೆಲ್ಲೂ ಇರುವ ಹೆಣ್ಣಿನ ಮೇಲಿರುವ ಗೌರವ ನಿಜದ ಹೆಣ್ಣಿನ ಮೇಲೆ ಯಾಕಿಲ್ಲವೊ? ಈ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ಸಿಕ್ಕಾಗ ಮಾತ್ರ ಈ ಅಸಹ್ಯಕರ ಘಟನೆಗಳು ನಿಲ್ಲುತ್ತವೆ.
ಶಿಕ್ಷಣ ಎನ್ನುವುದು ಕೇವಲ ಪುಸ್ತಕದ ರಾಶಿಯಲ್ಲ. ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳೂ ಅಲ್ಲ. ಶಿಕ್ಷಣವೆಂಬುದು ಪ್ರಜ್ಞೆ. ಇದೇ ಪ್ರಜ್ಞೆಗಾಗಿ ಅಂಬೇಡ್ಕರ್ ಸದಾ ಯತ್ನಿಸಿದ್ದು.
ಯಾವಾಗ ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿಯನ್ನು ಗೌರವಿಸುತ್ತಾನೋ, ಯಾವಾಗ ಹೆಣ್ಣು ಕೇವಲ ಹೆಣ್ಣಾಗಿರದೆ ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತದೆಯೋ, ಯಾವಾಗ ಆ ಹೆಣ್ಣು ತಾನು ಸುರಕ್ಷಿತವಾಗಿ, ಸಮಾಜದಲ್ಲಿ ಸಮಾನ ಸ್ಥಾನಮಾನದಲ್ಲಿ ಇರುತ್ತೇನೆ ಎಂದು ಭಾವಿಸುತ್ತಾಳೋ... ಆಗ ಮಾತ್ರ ಅದು ನಿಜವಾಗಿಯೂ ಅಭಿವೃದ್ಧಿ ಹೊಂದಿದ ಸಮಾಜವಾಗುತ್ತದೆ. ಅಲ್ಲಿಯವರೆಗೂ ಅಂತಹ ಸಮಾಜ ಕೇವಲ ಕಾಲ್ಪನಿಕ; ಈಗ ನಮ್ಮ ಸಮಾಜ ಇದೆಯಲ್ಲ, ಅಂತಹದ್ದು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.