ADVERTISEMENT

ಸಂಗತ: ಅಧಿಕ ಅಂಕ ಮತ್ತು ಪ್ರಚಾರದ ಸರಕು

ನಾ ದಿವಾಕರ
Published 11 ಏಪ್ರಿಲ್ 2025, 23:30 IST
Last Updated 11 ಏಪ್ರಿಲ್ 2025, 23:30 IST
   

ಭಾರತದಲ್ಲಿ ಶಾಲಾ ಶಿಕ್ಷಣ ಎನ್ನುವುದು ಜ್ಞಾನ ವೃದ್ಧಿಗಿಂತಲೂ ಹೆಚ್ಚಾಗಿ, ಕಲಿತ ಮಕ್ಕಳು ಮುಂದಿನ ಹಂತಕ್ಕೆ ಸಾಗಲು ನೆರವಾಗುವ ಬೌದ್ಧಿಕ ಸೇತುವೆಯಂತೆ ಆಗಿರುವುದು ವಾಸ್ತವ. ಹಾಗಾಗಿ, ತೇರ್ಗಡೆಯಾಗು ವುದು ಮಕ್ಕಳ ಬುದ್ಧಿಶಕ್ತಿಯನ್ನು ಅಳೆಯುವ ಒಂದು ಮಾನದಂಡವಾಗಿ, ವಾರ್ಷಿಕ ಪರೀಕ್ಷೆಗಳಲ್ಲಿ
ಅನುತ್ತೀರ್ಣವಾಗುವುದು ಅಪಮಾನಕರವಾಗಿ ಪರಿಣಮಿಸಿದೆ. ಪ್ರತಿವರ್ಷ ನಡೆಯುವ ಪರೀಕ್ಷೆಗಳ ಫಲಿತಾಂಶಗಳು ವಿದ್ಯಾರ್ಥಿಗಳ ಅರ್ಹತೆಯನ್ನು ಅಳೆಯುವ ಮಾಪಕಗಳಾಗಿರುವಂತೆಯೇ, ಶಾಲೆಗಳು ಅಥವಾ ಶಿಕ್ಷಣ ಇಲಾಖೆಯ ಕಾರ್ಯಕ್ಷಮತೆಯನ್ನು ನಿರ್ಧರಿಸುವ ಮಾಪಕಗಳಾಗಿಯೂ ಕಾಣುತ್ತವೆ.

ಆದರೆ ಬದಲಾದ ಭಾರತದಲ್ಲಿ ಶಿಕ್ಷಣ ಮತ್ತು ಶೈಕ್ಷಣಿಕ ಕ್ಷೇತ್ರ ಹೆಚ್ಚು ಹೆಚ್ಚು ವಾಣಿಜ್ಯೀಕರಣಕ್ಕೆ ಒಳಗಾಗುತ್ತಿರುವುದು, ಇಡೀ ಶಿಕ್ಷಣ ವ್ಯವಸ್ಥೆಯನ್ನೇ ರೂಪಾಂತರಗೊಳಿಸಿದೆ. ಸರ್ಕಾರಗಳು ಸಾರ್ವತ್ರಿಕ ಶಿಕ್ಷಣವನ್ನು ತಳಮಟ್ಟದವರೆಗೂ ತಲುಪಿಸುವ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದರಿಂದ, ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಖಾಸಗಿ ಶಾಲೆ, ಕಾಲೇಜು, ಕೋಚಿಂಗ್‌ ಕೇಂದ್ರಗಳು ಇಡೀ ವ್ಯವಸ್ಥೆಯ ವಾರಸುದಾರಿಕೆಯನ್ನು ವಹಿಸಿಕೊಂಡಿವೆ.

ಈ ವಾತಾವರಣದಲ್ಲೇ ವಾರ್ಷಿಕ ಪರೀಕ್ಷೆಗಳು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ನಡುವೆ ಸೃಷ್ಟಿಸುವಂತಹ ಹರ್ಷೋಲ್ಲಾಸ ಮತ್ತು ವಿಷಾದವು ಸಮಾಜದ ಮೇಲೆ ಎಂತಹ ಕೆಟ್ಟ ಪರಿಣಾಮ ಬೀರುತ್ತವೆ ಎನ್ನುವುದನ್ನು ಗಂಭೀರವಾಗಿ ಪರಾಮರ್ಶಿಸಬೇಕಿದೆ.ಅತಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳನ್ನು ಪ್ರಶಂಸಿಸುವುದು ಅಂತಹ ವಿದ್ಯಾರ್ಥಿಗಳ ಭವಿಷ್ಯದ ಓದಿಗೆ ಪೂರಕವಾಗಿರುತ್ತದೆ. ಆದರೆ ಈ ಪ್ರಶಂಸೆ ಮತ್ತು ಶ್ಲಾಘನೆಯು ವ್ಯಕ್ತಿಗತ ನೆಲೆಯಲ್ಲಿ ನಾಲ್ಕು ಗೋಡೆಗಳ ನಡುವೆ ಇರುವುದಕ್ಕೂ ಸಾರ್ವಜನಿಕ ಸುದ್ದಿಯಾಗುವುದಕ್ಕೂ ಇರುವ ಸೂಕ್ಷ್ಮ ಅಂತರವನ್ನು ಗ್ರಹಿಸಬೇಕಿದೆ.

ADVERTISEMENT

ತಮ್ಮ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಸಕಲ ಮಾರ್ಗಗಳನ್ನೂ ಅನುಸರಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ, ಹೆಚ್ಚು ಅಂಕ ಗಳಿಸುವ ಪ್ರತಿ ವಿದ್ಯಾರ್ಥಿಯೂ ಮುಂಬರುವ ವರ್ಷಕ್ಕೆ ಪ್ರವೇಶದ ಹೆಚ್ಚಳಕ್ಕೆ ಸಹಾಯ ಮಾಡುವ ಸರಕಿನಂತೆ ಕಾಣುತ್ತಿರುವುದು ಈ ಸಂದರ್ಭದಲ್ಲಿ ಗಮನಿಸಬೇಕಾದ ಸಂಗತಿ. ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹೀರಾತುಗಳು ಈ ಯಶಸ್ವಿ ವಿದ್ಯಾರ್ಥಿಗಳ ದೃಷ್ಟಿಯಿಂದ ಆಪ್ಯಾಯಮಾನ ಎನಿಸುತ್ತವಾದರೂ ಇದಕ್ಕಾಗಿ ಸಂಸ್ಥೆಗಳು ಹೂಡುವ ಬಂಡವಾಳದ ದೃಷ್ಟಿಯಲ್ಲಿ, ಈ ನಗುಮೊಗಗಳೆಲ್ಲವೂ ಭವಿಷ್ಯದ ಸಾಂಸ್ಥಿಕ ಲಾಭ ಗಳಿಕೆಯ ಕಚ್ಚಾವಸ್ತುಗಳಾಗಿಬಿಡುತ್ತವೆ. ಸಂಸ್ಥೆಯ ಸಾಧನೆಯನ್ನು ಬಿಂಬಿಸುವುದು ತಪ್ಪಲ್ಲ. ಆದರೆ ಅದನ್ನು ಪ್ರಚಾರದ ಸರಕಿನಂತೆ ಬಳಸುವುದು ಬೌದ್ಧಿಕ ಅಪ್ರಾಮಾಣಿಕತೆ.

ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಮನಃಸ್ಥಿತಿ ಮತ್ತು ಅವರ ಅಂತರಾಳದ ನೋವು ಇಲ್ಲಿ ಗಣನೆಗೇ ಬರುವುದಿಲ್ಲ. ಅನುತ್ತೀರ್ಣವಾಗುವುದೇ ಅಪಮಾನಕರ ಎಂದು ಭಾವಿಸುವ ಸಮಾಜದಲ್ಲಿ, ಹಲವು ಕಾರಣಗಳಿಗಾಗಿ ಯಶಸ್ಸು ಗಳಿಸಲಾಗದ ವಿದ್ಯಾರ್ಥಿಗಳು ಮನನೊಂದು ಖಿನ್ನತೆಗೆ ಒಳಗಾಗುವುದು ಪ್ರತಿವರ್ಷ ನಾವು ಕಾಣುತ್ತಿರುವ ವಿದ್ಯಮಾನ. ನೂರಾರು ಚಹರೆಗಳನ್ನು ಒಳಗೊಂಡ, ಪುಟಗಟ್ಟಲೆ ಪ್ರಕಟವಾಗುವ ಯಾವುದೇ ಶಾಲಾ ಜಾಹೀರಾತಿನಲ್ಲೂ, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಾಂತ್ವನ ಹೇಳುವ ಒಂದು ಸಾಲು ಸಹ ಇರುವುದಿಲ್ಲ. ಇದು, ಶೈಕ್ಷಣಿಕ ಮಾರುಕಟ್ಟೆಯ ಬೌದ್ಧಿಕ ಕ್ರೌರ್ಯದ ಸಂಕೇತ ಎಂದೇ ಹೇಳಬೇಕಾಗಿದೆ.

ಫಲಿತಾಂಶ ಪ್ರಕಟವಾದ ನಂತರ ಸಾಲುಸಾಲಾಗಿ ನಡೆಯುವ ಪ್ರತಿಭಾ ಪ್ರದರ್ಶನ ಮತ್ತು ಉತ್ತಮ ಅಂಕ ಗಳಿಸಿದವರ ಸನ್ಮಾನ ಕಾರ್ಯಕ್ರಮಗಳು ಈ ಪ್ರಕ್ರಿಯೆಯ ಮುಂದುವರಿಕೆಯಾಗಿ ಕಾಣುತ್ತವೆ. ಎಲ್ಲ ಶಾಲೆಗಳೂ ಈ ರೀತಿಯ ಪ್ರತಿಭೆಗಳನ್ನು ಸನ್ಮಾನಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಇದಲ್ಲದೆ ನಮ್ಮ ಜಾತಿ ವ್ಯವಸ್ಥೆಯಲ್ಲಿ ಪ್ರತಿಯೊಂದು ಜಾತಿ, ಉಪಜಾತಿ, ಮತ, ಸಮುದಾಯವೂ ‘ತಮ್ಮ ಸಮಾಜದ ಯಶಸ್ವಿ ಮಕ್ಕಳನ್ನು’ ಪುರಸ್ಕರಿಸಲು ಮುಂದಾಗುತ್ತವೆ.

ಮಕ್ಕಳ ಸಾಧನೆಗೆ ತಮ್ಮ ಸಂಸ್ಥೆಯ ಕಾರ್ಯಕ್ಷಮತೆ ಮತ್ತು ದಕ್ಷತೆಯೇ ಕಾರಣ ಎಂದು ಬಿಂಬಿಸಿಕೊಳ್ಳುವ ಶಿಕ್ಷಣದ ಮಾರುಕಟ್ಟೆ ಪ್ರಕ್ರಿಯೆಯಲ್ಲಿ, ಅನುತ್ತೀರ್ಣ ರಾದ ಅಥವಾ ಕಡಿಮೆ ಸಾಧನೆ ಮಾಡಿರುವ ಮಕ್ಕಳು ಅನಾಥರಾಗಿಬಿಡುತ್ತಾರೆ. ಈ ಮಕ್ಕಳನ್ನು ಒಂದೆಡೆ ಕೂರಿಸಿ ಸಾಂತ್ವನ ಹೇಳುವ, ಆತ್ಮಸ್ಥೈರ್ಯವನ್ನು ತುಂಬುವ ಅಥವಾ ಮುಂದಿನ ಹೆಜ್ಜೆಗೆ ಅವಶ್ಯವಾದ ಮಾರ್ಗದರ್ಶನ ನೀಡುವ ಕ್ರಮವನ್ನು ಎಲ್ಲಿಯೂ ಕಾಣ ಲಾಗುವುದಿಲ್ಲ. ಇದು ಅನುತ್ತೀರ್ಣರಾದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕಳಂಕಿತರಾದ ಅಥವಾ ಅಪಮಾನಕ್ಕೆ ಒಳಗಾದ ಭಾವನೆಯನ್ನು ಉಂಟುಮಾಡುತ್ತದೆ. ಮಕ್ಕಳ ಖಿನ್ನತೆಗೆ ಇದೂ ಒಂದು ಕಾರಣ ಎನ್ನುವುದನ್ನು ಮನಶ್ಶಾಸ್ತ್ರೀಯ ನೆಲೆಯಲ್ಲಿ, ಸಮಾಜಶಾಸ್ತ್ರೀಯ ನೆಲಗಟ್ಟಿನಲ್ಲಿ ಅರ್ಥಮಾಡಿಕೊಳ್ಳಬೇಕಿದೆ.

ಅನುತ್ತೀರ್ಣರಾದ ಮಕ್ಕಳು ಶೈಕ್ಷಣಿಕ ಮಾರುಕಟ್ಟೆಗೆ ಬೇಡ ಎನಿಸಬಹುದು, ಆದರೆ ಸಮಾಜಕ್ಕೆ ಅವರು ಬೇಕಾಗುತ್ತಾರೆ. ಏಕೆಂದರೆ ಅವರಲ್ಲಿ ಮತ್ತೊಂದು ಆಯಾಮದ ಪ್ರತಿಭೆ, ಕೌಶಲ ಅಡಗಿರುತ್ತದೆ. ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಮಕ್ಕಳ ಯಶಸ್ಸನ್ನು ಅಂಕಪಟ್ಟಿ ಸಮೇತ ಪ್ರದರ್ಶಿಸುವ ಮುನ್ನ ಪ್ರತಿ ವ್ಯಕ್ತಿಯೂ ಈ ಸೂಕ್ಷ್ಮವನ್ನು ಗ್ರಹಿಸಬೇಕಿದೆ. ಈ ಪ್ರವೃತ್ತಿಯು ಮತ್ತೊಂದು ಬದಿಯಲ್ಲಿ ನೋವು ತಂದೊಡ್ಡುತ್ತದೆ. ಶಿಕ್ಷಣದ ಮಾರುಕಟ್ಟೆಯ ದೃಷ್ಟಿಯಲ್ಲಿ ಮಕ್ಕಳು ಸರಕುಗಳಾಗಿ, ಕಚ್ಚಾವಸ್ತುಗಳಾಗಿ ಕಾಣಬಹುದು. ಆದರೆ ಸಮಾಜದ ದೃಷ್ಟಿಯಲ್ಲಿ ಅವರೇ ದೇಶದ ಭವಿಷ್ಯದ ಆಸ್ತಿ ಎನ್ನುವುದನ್ನು ಪ್ರಜ್ಞಾವಂತ ಸಮಾಜ ಅರ್ಥಮಾಡಿಕೊಳ್ಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.