ADVERTISEMENT

ಸಂಗತ: ಖಾದಿ ರಾಷ್ಟ್ರಧ್ವಜ ಬೇಡವಾಯಿತೆ?

ರಾಹುಲ ಬೆಳಗಲಿ
Published 14 ಆಗಸ್ಟ್ 2025, 23:30 IST
Last Updated 14 ಆಗಸ್ಟ್ 2025, 23:30 IST
   

ರಸ್ತೆಬದಿ ಬೈಕ್‌ ನಿಲ್ಲಿಸಿ, ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತಿರುವ ಯುವಕನ ಬಳಿ ಬಡ ವೃದ್ಧನೊಬ್ಬ ಬಂದು ಪುಟ್ಟದಾದ ರಾಷ್ಟ್ರಧ್ವಜ ಕೊಡಲು ಮುಂದಾಗುತ್ತಾನೆ. ಯುವಕ ನಿರಾಕರಿಸುತ್ತಾನೆ. ಕಿರಾಣಿ ಅಂಗಡಿಯೊಂದರಲ್ಲಿ ವಿವಿಧ ಆಕಾರದ ರಾಶಿಗಟ್ಟಲೆ ರಾಷ್ಟ್ರಧ್ವಜಗಳನ್ನು ಮಾರಾಟಕ್ಕೆ ಇಟ್ಟಿರುವುದು ಕಾಣಿಸುತ್ತದೆ. ಮನಸ್ಸು ಹಂಬಲಿಸಿದರೂ ಆತ ಅವುಗಳನ್ನು ಖರೀದಿಸುವುದಿಲ್ಲ. ಆತ ನೇರವಾಗಿ ಬೃಹತ್ ಸಮಾರಂಭವೊಂದು ಸಮಾರೋಪಗೊಂಡ ಸ್ಥಳಕ್ಕೆ ಬರುತ್ತಾನೆ. ಅಲ್ಲಿ ಮೈದಾನದ ಮೇಲೆ, ಮಣ್ಣಿನಡಿ ಅಲ್ಲಲ್ಲಿ ಬಿದ್ದ ಪುಟ್ಟ ರಾಷ್ಟ್ರಧ್ವಜಗಳನ್ನು ಕೈಗೆತ್ತಿಕೊಳ್ಳುತ್ತಾನೆ. ತನ್ನ ಬೆನ್ನ ಹಿಂದಿನ ಬ್ಯಾಗಿನಲ್ಲಿ ಜೋಪಾನವಾಗಿ ಇಟ್ಟುಕೊಳ್ಳುತ್ತಾನೆ. 

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಈ ಜಾಹೀರಾತು, ಟಿ.ವಿ ವಾಹಿನಿಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಆಗುತ್ತಿದೆ. ಇಡೀ ವಿಡಿಯೊದಲ್ಲಿ ಕಾಣಸಿಗುವುದು ಪ್ಲಾಸ್ಟಿಕ್ ರಾಷ್ಟ್ರಧ್ವಜ. ವಿಶಿಷ್ಟವಾದ ದಿನದ ಸಂದರ್ಭದಲ್ಲಿ ಪ್ಲಾಸ್ಟಿಕ್ ಹಾವಳಿ ಕಾಡದಿರಲಿ ಎಂಬ ಸಂದೇಶ ಜಾಹೀರಾತಿನಲ್ಲಿದೆ. ಪ್ಲಾಸ್ಟಿಕ್ ಧ್ವಜಗಳನ್ನು ಬಳಸಬೇಡಿ ಮತ್ತು ಪರಿಸರಕ್ಕೆ ಹಾನಿ ಉಂಟು ಮಾಡಬೇಡಿ ಎಂಬುದನ್ನು ಅದರಲ್ಲಿ ಬಹು ಸೂಕ್ಷ್ಮವಾಗಿ ಹೇಳಲಾಗಿದೆ.

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಬಹುತೇಕ ಕಾರ್ಯಕ್ರಮಗಳಲ್ಲಿ ವಿವಿಧ ಆಕಾರಗಳ ಮತ್ತು ಬಗೆಬಗೆಯ ಗುಣಮಟ್ಟದ ರಾಷ್ಟ್ರಧ್ವಜಗಳು ಬಳಕೆ ಆಗುತ್ತವೆ. ಹೆಚ್ಚಿನ ಧ್ವಜಗಳು ಪ್ಲಾಸ್ಟಿಕ್‌ನವು. ತೆಳುವಾದ ಬಟ್ಟೆ ಅಥವಾ ಕಾಗದದ ಧ್ವಜಗಳೂ  ಇರುತ್ತವೆ. ಕೆಲವು ಕಡೆಯಂತೂ ಉದ್ದನೆಯ ತ್ರಿವರ್ಣ ಧ್ವಜವನ್ನು ತಲೆಯ ಮೇಲೆ ಇಟ್ಟುಕೊಂಡು, ಮನಸೋಇಚ್ಛೆ ಕೈಯಲ್ಲಿ ಹಿಡಿದು ಮೆರವಣಿಗೆ ಮಾಡಲಾಗುತ್ತದೆ. ಕಾರ್ಯಕ್ರಮದಲ್ಲಿ ಭಾವನಾತ್ಮಕವಾಗಿ ಪಾಲ್ಗೊಂಡರೂ ಮತ್ತು ಮನದುಂಬಿ ಸಂಭ್ರಮಿಸಿದರೂ ರಾಷ್ಟ್ರಧ್ವಜವನ್ನು ಸಮರ್ಪಕವಾಗಿ ಗೌರವಿಸದಿದ್ದರೆ, ಅದು ಧ್ವಜಸಂಹಿತೆಯ ಉಲ್ಲಂಘನೆ ಆಗುತ್ತದೆ.

ADVERTISEMENT

ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳ ನಂತರವಾದರೂ ರಾಷ್ಟ್ರಧ್ವಜದ ಸಂಹಿತೆ ಮತ್ತು ಬಳಕೆ ಬಗ್ಗೆ ನಾವು ಇನ್ನಷ್ಟು ಜಾಗ್ರತೆ ವಹಿಸಬೇಕಿತ್ತು. 2002ರ ರಾಷ್ಟ್ರಧ್ವಜ ಸಂಹಿತೆಯಂತೆ, ಖಾದಿಯಿಂದ ಸಿದ್ಧವಾದ ರಾಷ್ಟ್ರಧ್ವಜಗಳ ಬಳಕೆಗೆ ಆದ್ಯತೆ ನೀಡಬೇಕಿತ್ತು. ಆದರೆ, 2022ರಲ್ಲಿ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಭಾಗವಾಗಿ ‘ಹರ್ ಘರ್ ತಿರಂಗಾ’ ಅಭಿಯಾನದಡಿ ಕೇಂದ್ರ ಸರ್ಕಾರವು ಧ್ವಜ ಸಂಹಿತೆಗೆ ಮಾಡಿದ ತಿದ್ದುಪಡಿ ಹಲವು ಬದಲಾವಣೆಗೆ ಕಾರಣವಾಯಿತು. ರಾಷ್ಟ್ರಧ್ವಜ ಈಗ ಖಾದಿಯದ್ದೇ ಆಗಿರಬೇಕಿಲ್ಲ. ಯಂತ್ರದಿಂದ ಸಿದ್ಧವಾದ ಹತ್ತಿ, ಪಾಲಿ‌ಸ್ಟರ್, ಉಣ್ಣೆ ಅಥವಾ ರೇಷ್ಮೆ ಬಟ್ಟೆಯ ರಾಷ್ಟ್ರಧ್ವಜಗಳನ್ನು ಹಾರಿಸಬಹುದು ಎಂಬ ನಿಯಮ ತಂದಿತು. ‘ಪ್ರತಿಯೊಂದು ಮನೆಯ ಮೇಲೂ ರಾಷ್ಟ್ರಧ್ವಜ ಹಾರಿಸಬೇಕು’ ಎಂಬುದನ್ನು ಸಾರಿ ಹೇಳಿತು. 

ಇದರ ನಂತರದಲ್ಲಿ ನಡೆದ ಬೆಳವಣಿಗೆಗಳು ಮತ್ತು ಆದ ಪರಿಣಾಮಗಳು ಅಷ್ಟಿಷ್ಟಲ್ಲ. ‘ರಾಷ್ಟ್ರಧ್ವಜ ಖರೀದಿಸಬೇಕು, ಪ್ರದರ್ಶಿಸಬೇಕು ಮತ್ತು ಹಾರಿಸಬೇಕು ಅಷ್ಟೇ’ ಎಂಬ ಮನೋಭಾವ ಗಾಢವಾಗಿ ಬೇರೂರಿತು. ಧ್ವಜವು ಗುಣಮಟ್ಟದಿಂದ ಕೂಡಿದೆಯೇ ಇಲ್ಲವೇ ಎಂಬುದನ್ನು ಅರಿಯದೇ, ಹಟಕ್ಕೆ ಬಿದ್ದಂತೆ ದೇಶಭಕ್ತಿ ಪ್ರದರ್ಶಿಸುವುದು ಆದ್ಯತೆ ಪಡೆಯಿತು. ಕಡಿಮೆ ದರದಲ್ಲಿ ಸಿಗುವ ಧ್ವಜವನ್ನು ಪ್ರದರ್ಶಿಸಿ ಅಥವಾ ಹಾರಿಸಿ ಸ್ವಾತಂತ್ರ್ಯ ದಿನ ಆಚರಿಸಿದರೆ ಸಾಕು ಎಂಬ ಭಾವನೆ ಮೂಡಿತು.

ನಾವೆಲ್ಲ ಗೌರವಿಸಬೇಕಾದ ರಾಷ್ಟ್ರಧ್ವಜಕ್ಕೆ ಒದಗಿರುವ ಸ್ಥಿತಿ ಎಂತಹದ್ದು ಎಂಬುದಕ್ಕೆ ಧಾರವಾಡ ಜಿಲ್ಲೆಯ ಗರಗ ಕ್ಷೇತ್ರೀಯ ಸೇವಾ ಸಂಘ ಮತ್ತು ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘಕ್ಕೆ ಭೇಟಿ ನೀಡಿದರೆ ಸ್ಪಷ್ವವಾಗುತ್ತದೆ. ಇಡೀ ದೇಶಕ್ಕೆ ರಾಷ್ಟ್ರಧ್ವಜಗಳನ್ನು ಪೂರೈಸುವ ಈ ಎರಡೂ ಸಂಘಗಳಲ್ಲಿ ನಿರಾಸೆಯ ನೆರಳು ಆವರಿಸಿದೆ. ಶುದ್ಧವಾದ ಖಾದಿಯಿಂದ ಮತ್ತು ಭಾರತೀಯ ಪ್ರಮಾಣೀಕರಣ ಸಂಸ್ಥೆಯಿಂದ (ಬಿಐಎಸ್‌) ಪ್ರಮಾಣೀಕೃತಗೊಂಡು ತಯಾರಿಸಲಾಗುವ ಖಾದಿ ರಾಷ್ಟ್ರಧ್ವಜಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಆದರೆ, ಮೂರು ವರ್ಷಗಳಿಂದ ಅವುಗಳನ್ನು ಕೇಳುವವರೇ ಇಲ್ಲ.

ಜೂನ್‌, ಜುಲೈ ವೇಳೆಗೆ ಸಿದ್ಧಗೊಂಡು, ಆಗಸ್ಟ್ ತಿಂಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಾಷ್ಟ್ರಧ್ವಜಗಳು ನವದೆಹಲಿ ಸೇರಿದಂತೆ ವಿವಿಧ ರಾಜ್ಯಗಳಿಗೆ ರವಾನೆ ಆಗುತ್ತಿದ್ದವು. ವಿವಿಧ ರಾಜ್ಯಗಳ ಸರ್ಕಾರದಿಂದ ಮತ್ತು ಇಲಾಖೆಗಳಿಂದ ಅಲ್ಲದೇ, ವಿವಿಧ ಖಾಸಗಿ ಸಂಸ್ಥೆಗಳಿಂದಲೂ ಬೇಡಿಕೆ ವ್ಯಕ್ತವಾಗುತಿತ್ತು. ವರ್ಷಪೂರ್ತಿ ಕೆಲಸ ಮಾಡಿ, ರಾಷ್ಟ್ರಧ್ವಜಗಳನ್ನು ಸಿದ್ಧಪಡಿಸಿದರೂ ಬೇಡಿಕೆ ನೀಗಿಸಲು ಹರಸಾಹಸ ಪಡಬೇಕಿತ್ತು. ಆದರೆ, ಮೂರು ವರ್ಷಗಳಿಂದ ಖಾದಿ ರಾಷ್ಟ್ರಧ್ವಜಗಳಿಗೆ ಬೇಡಿಕೆ ಕುಸಿದಿದೆ.

ವಿವಿಧ ಆಕಾರಗಳ ರಾಷ್ಟ್ರಧ್ವಜಗಳ ಟನ್‌ಗಟ್ಟಲೆ ಸಂಗ್ರಹವಿದೆ. ಆದರೆ, ಅವುಗಳ ಬಳಕೆಗೆ ಯಾರೂ ಆಸಕ್ತಿ ತೋರುತ್ತಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ, ಖಾದಿ ರಾಷ್ಟ್ರಧ್ವಜ ತನ್ನ ಗರಿಮೆ, ಮಹತ್ವ ಮತ್ತು ಮೌಲ್ಯ ಕಳೆದುಕೊಳ್ಳುವುದಂತೂ ನಿಶ್ಚಿತ ಎಂಬ ಆತಂಕ ಸಂಘದ ಸದಸ್ಯರದು.

ಖಾದಿ ಸ್ವಾತಂತ್ರ್ಯ ಹೋರಾಟದ ಅಂತರ್ಜಲವಾಗಿತ್ತು. ಖಾದಿ ಬಟ್ಟೆ ಉತ್ಪನ್ನ ಮತ್ತು ಬಳಕೆ ಹೆಮ್ಮೆಯ ವಿಷಯ ಆಗಿತ್ತು. ದಶಕಗಳು ಕಳೆದಂತೆ ಖಾದಿಯ ರಾಷ್ಟ್ರಧ್ವಜವು ಅಭಿಮಾನದ ಪ್ರತೀಕ ಆಗಬೇಕಿತ್ತು. ಆದರೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.