
ಭಾರತದಲ್ಲಿನ ಕುಟುಂಬ ವ್ಯವಸ್ಥೆ ಮುಖ್ಯವಾಗಿ ಪಿತೃಪ್ರಧಾನವಾದುದು. ಈ ವ್ಯವಸ್ಥೆಯಲ್ಲಿ ಪ್ರತಿಯೊಂದು ನಿರ್ಧಾರ, ಆಡಳಿತ, ಪುರುಷರದ್ದೇ. ಆದರೆ, ಹಲವೆಡೆ ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಜಾರಿಯಲ್ಲಿದ್ದುದನ್ನು ಇತಿಹಾಸದಲ್ಲಿ ಕಾಣಬಹುದು. ಕೆಲವೊಂದು ಕಡೆ ಮಾತೃವಂಶ ಕುಟುಂಬ ವ್ಯವಸ್ಥೆ ಇಂದಿಗೂ ಜೀವಂತವಾಗಿದೆ. ಆಸ್ಟ್ರೇಲಿಯಾದ ಆದಿವಾಸಿ ಸಮುದಾಯದಲ್ಲಿ ಶೇ 40ರಷ್ಟು ಭಾಗ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯೇ ಇರುವುದನ್ನು ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ, ಆ ದೇಶದ ಆದಿವಾಸಿ ಲೇಖಕರಾದ ಜೂಲಿ ಜಾನ್ಸನ್ ಹೇಳಿದ್ದಾರೆ.
ಆಸ್ಟ್ರೇಲಿಯಾ ಮಾತ್ರವಲ್ಲ, ನೆರೆಯ ಕೇರಳದಲ್ಲಿಯೂ ಕೆಲವು ಮಾತೃಪ್ರಧಾನ ಸಮುದಾಯಗಳು ಇವೆ. ಆದರೆ, ನಮ್ಮಲ್ಲಿ ಕೆಲವೇ ಕೆಲವು ಆದಿವಾಸಿ ಸಮುದಾಯಗಳು ಮಾತ್ರವೇ ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಹೊಂದಿವೆ. ಅವುಗಳಲ್ಲಿ, ರಾವುಳೆರ (ಪಂಜರಿ ಯರವ), ಕೊರಗ ಮತ್ತು ಮಲೆಕುಡಿಯ ಸಮುದಾಯಗಳು ಸೇರಿವೆ. ರಾವುಳೆರ ಸಮುದಾಯಕ್ಕೆ ಸೇರಿರುವುದು ನನಗೆ ಹೆಮ್ಮೆಯ ಸಂಗತಿ.
ಈ ಆದಿವಾಸಿ ಸಮುದಾಯದಲ್ಲಿ, ಹುಟ್ಟಿನಿಂದ ಸಾಯುವವರೆಗೆ ನಡೆಯುವ ಎಲ್ಲ ವಿಧಿವಿಧಾನಗಳಲ್ಲಿ ಪ್ರತಿಯೊಬ್ಬರೂ ಚೆಮ್ಮದಿಂದ (ಒಕ್ಕಲು/ಕುಲದಿಂದ) ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಈ ಸಮುದಾಯದಲ್ಲಿ ಒಟ್ಟು 13 ಚೆಮ್ಮಗಳೂ, 33 ಉಪ ಚೆಮ್ಮಗಳೂ ಇವೆ.
ಪ್ರತಿಯೊಂದು ಚೆಮ್ಮಕ್ಕೂ ಒಂದು ಹೆಣ್ಣು ದೇವರು, ಒಂದು ಗಂಡು ದೇವರು ಇವೆ. ಹೆಣ್ಣು ಮಗು ಹುಟ್ಟಿದರೆ ಹೆಚ್ಚು ಸಂಭ್ರಮಪಡುತ್ತಾರೆ, ಇದು ಇವರಲ್ಲಿ ಬಹಳ ವಿಶೇಷವಾಗಿದೆ. ತಮ್ಮ ವಂಶ ಮುಂದುವರಿಸಲು ಮಗಳು ಹುಟ್ಟಿದ್ದಾಳೆ ಎನ್ನುವುದು ಅವರ ಸಂಭ್ರಮಕ್ಕೆ ಕಾರಣ. ಹೆಣ್ಣು ಹುಟ್ಟಿದ್ದರ ಸಂಕೇತವಾಗಿ ಮನೆಯ ಮುಂದಿನ ಬಾಗಿಲಿಗೆ ಮೊರ, ತೆಂಗಿನ ಚಿಪ್ಪು ಹಾಗೂ ಬಿದಿರಿನಿಂದ ಮಾಡಿದ ತೊಟ್ಟಿಲನ್ನು ಕಟ್ಟುತ್ತಾರೆ. ಮೊರ, ತೆಂಗಿನ ಚಿಪ್ಪು ಕಟ್ಟುವ ಉದ್ದೇಶ, ಹುಟ್ಟಿರುವ ಹೆಣ್ಣು ಮನೆಯವರನ್ನು ಆಹಾರ ಕೊಟ್ಟು ನೋಡಿಕೊಳ್ಳಲಿ ಎಂಬುದರ ಆಶಯ. ತನ್ನ ಚೆಮ್ಮದ ಸಂತಾನ ಮುಂದುವರಿಸಲು ಹೆಣ್ಣು ಹುಟ್ಟಿದ್ದಾಳೆ ಎಂಬುದನ್ನು ತೋರಿ
ಸುವ ಗುರುತಿನ ಚಿಹ್ನೆಯೇ ತೊಟ್ಟಿಲು.
ರಾವುಳೆರ ಆದಿವಾಸಿ ಸಮುದಾಯದಲ್ಲಿ ಹೆಣ್ಣುಮಕ್ಕಳು ಸೋದರಮಾವನನ್ನು ಮದುವೆಯಾಗುವಂತಿಲ್ಲ ಎಂಬ ನಿಯಮವಿದೆ. ಸೋದರಮಾವ ತನ್ನ ತಾಯಿಯ ಕುಲಕ್ಕೆ ಸೇರುವುದರಿಂದ ಮಾವನೊಂದಿಗೆ ಅಕ್ಕನ ಮಗಳ ಮದುವೆ ಸಂಬಂಧ ನಡೆಯುವುದಿಲ್ಲ. ಆದರೆ, ಸೋದರಮಾವನ ಮಗನನ್ನು ಮದುವೆ ಆಗಬಹುದು. ರಾವುಳೆರ ಸಮುದಾಯದಲ್ಲಿ ವಿಧವಾ ವಿವಾಹ ಮತ್ತು ಮರು ವಿವಾಹಕ್ಕೆ ಪ್ರೋತ್ಸಾಹವಿದೆ. ಗಂಡ ತೀರಿಕೊಂಡರೆ ಅಥವಾ ಕಾರಣಾಂತರಗಳಿಂದ ದೂರವಾದರೆ ಮತ್ತೊಂದು ವಿವಾಹಕ್ಕೆ ಮುಕ್ತ ಅವಕಾಶವಿದೆ. ಇದಕ್ಕೆ ಕುಡೊಳಿ ಎಂದು ಕರೆಯುತ್ತಾರೆ.
ರಾವುಳೆರ ಸಮುದಾಯದಲ್ಲಿ, ಮದುವೆಯ ವಯಸ್ಸಿಗೆ ಬಂದಿರುವ ಮಗಳಿಗೆ ವರ ಒಪ್ಪಿಗೆಯಾದರೆ, ಆಕೆಯ ಮನೆಯವರು ವರಪರೀಕ್ಷೆ ನಡೆಸುತ್ತಾರೆ. ಮದುವೆ ಒಪ್ಪಂದ ಆದ ದಿನದಿಂದ ಮದುವೆ ದಿನದವರೆಗೂ ಆಕೆಗೆ ಆಹಾರ ಧಾನ್ಯಗಳನ್ನು ಮತ್ತು ಖರ್ಚಿಗೆ ಬೇಕಾದ ಹಣವನ್ನು ಗಂಡಿನ ಮನೆಯವರು ಕೊಡಬೇಕು. ಅಲ್ಲದೆ, ಮದುವೆಯಾಗಲಿರುವ ಗಂಡು ಹೆಣ್ಣಿನ ಮನೆಗೆ ಕಾಡಿನಿಂದ ಸೌದೆ ತಂದು ಸೀಳಿಹಾಕಬೇಕು. ಈ ರೀತಿಯ ಕೆಲಸಗಳನ್ನು ಸರಿಯಾಗಿ ನಿರ್ವಹಿಸಿದರೆ, ಆತನಿಗೆ ಮಗಳನ್ನು ಕೊಟ್ಟು ಮದುವೆ ಮಾಡಬಹುದು ಎಂದು ಹೆಣ್ಣಿನ ಮನೆಯವರು ನಿರ್ಧರಿಸುತ್ತಾರೆ. ಅವರಿಗೆ ಒಪ್ಪಿಗೆಯಾದರೆ, ಮದುವೆಗೆ ತಗಲುವ ಸಂಪೂರ್ಣ ಖರ್ಚನ್ನು ಗಂಡಿನ ಮನೆಯವರೇ ನೋಡಿಕೊಳ್ಳಬೇಕು. ಮದುಮಗಳಿಗೆ ಚಿನ್ನಾಭರಣ ಮತ್ತು ಸೀರೆ ತಂದು ಗಂಡಿನ ಕಡೆಯವರೇ ಅಲಂಕಾರ ಮಾಡಿ ಮದುವೆ ಮಾಡಿ ಕರೆದುಕೊಂಡು ಹೋಗುತ್ತಾರೆ.
ಈ ಸಮುದಾಯದಲ್ಲಿ ಹೆಣ್ಣುಮಕ್ಕಳು ಬೇರೆ ಸಮುದಾಯದ ಹುಡುಗನನ್ನು ಮದುವೆಯಾದರೆ, ಅವರನ್ನು ಜಾತಿ ಶುದ್ಧ ಮಾಡಿ ತಮ್ಮ ಸಮುದಾಯದ ಒಂದು ಚೆಮ್ಮ(ಕುಲ)ಕ್ಕೆ ಸೇರಿಸಿಕೊಳ್ಳುತ್ತಾರೆ. ಹುಡುಗಿಯ ಚೆಮ್ಮವನ್ನು ಹೊರತುಪಡಿಸಿ ಇತರ ಯಾವುದಾದರೂ ಚೆಮ್ಮಕ್ಕೆ ಸೇರಿಸಿಕೊಳ್ಳಬೇಕು. ಗಂಡು ಮಕ್ಕಳು ಬೇರೆ ಸಮುದಾಯದ ಹೆಣ್ಣನ್ನು ಮದುವೆಯಾದರೆ, ಅವರಿಗೂ ಈ ನಿಯಮ ಅನ್ವಯವಾಗುತ್ತದೆ.
ಈ ಸಮುದಾಯದಲ್ಲಿ ಯಾರಾದರೂ ತೀರಿಕೊಂಡಾಗ, ಸ್ಮಶಾನಕ್ಕೆ ಹೆಣ್ಣುಮಕ್ಕಳಿಗೆ ಪ್ರವೇಶವಿಲ್ಲ. ಹೆಣ್ಣುಮಕ್ಕಳಿಗೆ ನೋವು ಕೊಡಬಾರದು ಎನ್ನುವುದು ಈ ನಿರ್ಬಂಧಕ್ಕೆ ಕಾರಣ. ಆದರೆ, ತಿಥಿಯ ದಿನ ನಡೆಯುವ ಪುಂಡ ತುಡೆಕಿಂಜಿಯೇ (ಪುಂಡ ಅಳಿಸುವುದು) ಎಂಬ ಬಹುಮುಖ್ಯವಾದ ಕಾರ್ಯವನ್ನು ಹೆಣ್ಣುಮಕ್ಕಳೇ ಮಾಡುತ್ತಾರೆ. ನ್ಯಾಯ ಪಂಚಾಯ್ತಿಗಳು ಹೆಣ್ಣುಮಕ್ಕಳನ್ನು ಒಳಗೊಂಡು ನಡೆಯುತ್ತವೆ. ಪಂಚಾಯ್ತಿ ಸಂದರ್ಭದಲ್ಲಿ ಮಹಿಳೆಯರಿಗೂ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅವಕಾಶವಿದೆ.
ಭ್ರೂಣದಲ್ಲೇ ಹೆಣ್ಣನ್ನು ಚಿವುಟುವ ಪ್ರಯತ್ನಗಳು ನಡೆಯುವ ಹಾಗೂ ಹೆಣ್ಣನ್ನು ಸ್ವತಂತ್ರ ವ್ಯಕ್ತಿತ್ವವನ್ನು ಹತ್ತಿಕ್ಕುವ ಪ್ರಯತ್ನಗಳೇ ವ್ಯಾಪಕವಾಗಿರುವ ಸಮಾಜದಲ್ಲಿ, ಹೆಣ್ಣನ್ನು ಗೌರವದಿಂದ, ಕುಟುಂಬದ ಮುಖ್ಯಸ್ಥೆಯಾಗಿ ನೋಡುವ ಆದಿವಾಸಿ ಸಮುದಾಯ ಮಾದರಿಯಾಗಬೇಕಾಗಿದೆ.
ರಾವುಳೆರ ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಹಿಂದುಳಿದಿದೆ. ಆದರೆ, ಆಚಾರ ವಿಚಾರಗಳಲ್ಲಿ ಹಿಂದುಳಿದಿಲ್ಲ. ರಾವುಳೆರ ರೀತಿಯ ಮಾತೃಪ್ರಧಾನ ಸಮುದಾಯಗಳನ್ನು ಗುರ್ತಿಸಿ, ವಿಶೇಷವಾಗಿ ಆದಿವಾಸಿ ಸಮುದಾಯಗಳನ್ನು ಗುರ್ತಿಸಿ, ಆ ಸಮುದಾಯಗಳ ಮೌಲ್ಯಗಳನ್ನು ಮುಖ್ಯವಾಹಿನಿ ಅಳವಡಿಸಿಕೊಳ್ಳಬೇಕಾಗಿದೆ.
ಲೇಖಕ: ವೃತ್ತಿಪರ ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.