
ಮಕ್ಕಳು ಮೊಬೈಲ್ ಬಳಸುವುದನ್ನು ನಿರ್ಬಂಧಿಸುವ ಚಿಂತನೆಯು ಚರ್ಚೆಯಲ್ಲಿದೆ. ಆದರೆ, ‘ಮೊಬೈಲ್ ನೀತಿಸಂಹಿತೆ’ಯ ಹೆಚ್ಚಿನ ಅಗತ್ಯ ಇರುವುದು ಹಿರಿಯರಿಗೆ.
ಪ್ರೌಢಶಾಲೆ ಹಂತದವರೆಗಿನ ಮಕ್ಕಳು ಮೊಬೈಲ್ ಬಳಸುವು ದನ್ನು ನಿರ್ಬಂಧಿಸಲು ರಾಜ್ಯ ಸರ್ಕಾರ ಚಿಂತಿಸುತ್ತಿದೆ. ಈ ಕುರಿತು ಅಧ್ಯಯನ ಮಾಡಲು ತಜ್ಞರ ಸಮಿತಿಯೊಂದನ್ನು ರಚಿಸಲು ಮುಂದಾಗಿದೆ. ಆದರೆ, ಇಂಥ ಪ್ರಯತ್ನವು ವೈಫಲ್ಯ ವನ್ನು ತನ್ನೊಳಗೇ ಇಟ್ಟುಕೊಂಡು ಹುಟ್ಟುವ ಕೂಸಾಗಿರುತ್ತದೆ ಎನ್ನುವ ಅರಿವು ನಮಗಿರಬೇಕು.
ಮೊಬೈಲ್ ವ್ಯಸನ ಬರೀ ಮಕ್ಕಳ ಸಮಸ್ಯೆಯಲ್ಲ. ಇದು ವಯಸ್ಕರು, ವೃದ್ಧರನ್ನು ಒಳಗೊಂಡು ಇಡೀ ಸಮಾಜಕ್ಕೆ ಅಂಟಿಕೊಂಡಿರುವ ಗೀಳು. ಮಕ್ಕಳ ಮೊಬೈಲ್ ವ್ಯಸನದ ಕುರಿತು ಸಹಾಯ ಕೇಳಿಕೊಂಡು ಆತಂಕದಿಂದ ನನ್ನ ಬಳಿಗೆ ಬರುವ ಪೋಷಕರಿಗೆ ನಾನು ಕೇಳುವ ಕೆಲವು ಪ್ರಾಥಮಿಕ ಪ್ರಶ್ನೆಗಳು ಹೀಗಿರುತ್ತವೆ: ಮನೆಯಲ್ಲಿ ವಯಸ್ಕರ ಮೊಬೈಲ್–ಟಿ.ವಿ ಬಳಕೆ ಎಷ್ಟಿದೆ? ದೊಡ್ಡವರು ಪಾಲಿಸದ ನಿಯಮಗಳನ್ನು ಮಕ್ಕಳ ಮೇಲೆ ಮಾತ್ರ ಹೇಗೆ ಹೇರುತ್ತೀರಿ? ಕುಟುಂಬದ ಎಲ್ಲಾ ಸದಸ್ಯರಿಗೆ ಅನ್ವಯವಾಗುವ ‘ನೀತಿಸಂಹಿತೆ’ ರೂಪಿಸಿಕೊಳ್ಳಲು ಸಿದ್ಧರಿದ್ದೀರಾ?
ಮಕ್ಕಳ ಮೊಬೈಲ್ ಬಳಕೆಗೆ ಸಂಬಂಧಿಸಿದಂತೆ ಎರಡು ಪ್ರಮುಖ ವಿಚಾರಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಮೊದಲನೆಯದು, ಮಕ್ಕಳು ಕಲಿಯುವುದು ನಾವು ಹೇರುವಶಿಸ್ತು ನಿರ್ಬಂಧಗಳಿಂದಲ್ಲ. ಅಥವಾ ನಮ್ಮ ಉಪದೇಶ, ಬುದ್ಧಿ ವಾದ ಗಳಿಂದಲೂ ಅಲ್ಲ. ಮಕ್ಕಳು ನಾವು ಕೊಡುವ ಮಾದರಿಗಳನ್ನು ಅನುಸರಿಸುತ್ತಾರೆ. ಬೆಳವಣಿಗೆಯ ಹಂತದಲ್ಲಿರುವ ಮಕ್ಕಳ ಮಿದುಳು ಸುತ್ತಲಿನ ವಾತಾವರಣದ ಅಂಶ ಗಳನ್ನು ಗ್ರಹಿಸುತ್ತಾ ಹೊಸ ಹೊಸಸಂಪರ್ಕ ಜಾಲಗಳನ್ನು ರೂಪಿಸಿ ಕೊಳ್ಳುತ್ತದೆ. ಈ ಸಂಪರ್ಕ ಜಾಲಗಳೇ ಮುಂದೆ ನಮ್ಮೆಲ್ಲರ ವ್ಯಕ್ತಿತ್ವವಾಗಿ ಗೋಚರಿಸುತ್ತದೆ.
ಕೌಟುಂಬಿಕ ಮತ್ತು ಸಾಮಾಜಿಕ ಪರಿಸರ ವ್ಯಕ್ತಿಯನ್ನು ಹೇಗೆ ರೂಪಿಸು ತ್ತದೆ ಎನ್ನುವುದರ ಕುರಿತು ನರವಿಜ್ಞಾನಿಗಳು ಸಾಕಷ್ಟು ಸಂಶೋಧನೆ ಮಾಡಿದ್ದಾರೆ. ಒಟ್ಟಾರೆ ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಇಲ್ಲದ ನೈತಿಕತೆ, ನಿರ್ಬಂಧಗಳನ್ನು ಮಕ್ಕಳ ಮೇಲಷ್ಟೇ ಹೇರಿದರೆ ಅದು ಗಾಳಿಗೆ ಗುದ್ದುವುದರಷ್ಟೇ ಪರಿಣಾಮಕಾರಿಯಾಗಿರುತ್ತದೆ!
ಎರಡನೆಯದು, ಮೊಬೈಲ್ ವ್ಯಸನವನ್ನು ಸಂಪೂರ್ಣ ಜನಸಮುದಾಯಕ್ಕೆ ಅಂಟಿಸಿ ಹಣ ಮಾಡುವ ದೊಡ್ಡದೊಂದು ದಂಧೆಯೇ ಚಾಲ್ತಿಯಲ್ಲಿದೆ. ಸಾಮಾಜಿಕ ಮಾಧ್ಯಮಗಳು, ಗೇಮಿಂಗ್ ಆ್ಯಪ್‌ಗಳು ಮುಂತಾದವುಗಳು ನಮಗರಿವಿಲ್ಲದಂತೆಯೇ ನಮ್ಮ ಮಿದುಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತವೆ. ಸಾಕಷ್ಟು ವಿಜ್ಞಾನಿಗಳು ಈ ಕುರಿತುಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ ಹೆಚ್ಚಿನ ಬದಲಾವಣೆ ಗಳಾಗಿಲ್ಲ. ಟೆಕ್ ಕಂಪನಿಗಳ ಬಳಿ ಪ್ರಪಂಚದ ಎಲ್ಲಾ ದೇಶದ ಸರ್ಕಾರಗಳ ಮೇಲೆ ಪ್ರಭಾವ ಬೀರಲು ಸಾಧ್ಯವಾಗುವಷ್ಟು ಹಣದ ಖಜಾನೆಯಿದೆ. ಹಾಗಾಗಿಯೇ ಇವತ್ತಿನ ಆರ್ಥಿಕ ವ್ಯವಸ್ಥೆಯನ್ನು ಗ್ರೀಸ್‌ನ ಅರ್ಥಶಾಸ್ತ್ರಜ್ಞ ಯಾನಿಸ್ ವೆರೊಫೆಕಿಸ್ ‘ಟೆಕ್ನೋಫ್ಯೂಡಲಿಸಂ’ ಎಂದು ಕರೆಯುತ್ತಾನೆ. ಡಿಜಿಟಲ್ ಜಮೀನುಗಳನ್ನು ಹಿಡಿತ ದಲ್ಲಿಟ್ಟುಕೊಂಡು ಇವರು ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದ್ದಾರೆ.
ನಮ್ಮ ಸರ್ಕಾರಗಳು ‘ನಿರ್ಬಂಧ ಕಾನೂನು’ಗಳ ಕುರಿತು ಮಾತ್ರ ಯೋಚಿಸುತ್ತವೆ. ಆದರೆ, ಇಡೀ ಜನ ಸಮೂಹದಲ್ಲಿ ಎಚ್ಚರಿಕೆ ಮೂಡಿಸುವಅಗತ್ಯವಿದೆ. ಸರ್ಕಾರ ಶಾಲಾ ಪರಿಸರದಲ್ಲಿ ಮಾತ್ರ ಮೊಬೈಲ್ ಬಳಕೆಯ ಮೇಲೆ ನಿರ್ಬಂಧ ಹೇರಲು ಸಾಧ್ಯ ವಿದೆ. ಆದರೆ, ಒಮ್ಮೆ ಮೊಬೈಲ್ ಗೀಳು ಅಂಟಿಕೊಂಡರೆ ಮಕ್ಕಳು ಎಲ್ಲಾ ನಿರ್ಬಂಧಗಳನ್ನು ಮೀರುವ ಕಳ್ಳದಾರಿಗಳನ್ನು ಹುಡುಕಿ ಕೊಳ್ಳುತ್ತಾರೆ. ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆಯ ನಿಷೇಧವನ್ನು ಜಾರಿಗೊಳಿಸುವುದು ಅಸಾಧ್ಯ. ಮೊಬೈಲ್ ಕೈಯಲ್ಲಿ ಇಲ್ಲದಿದ್ದರೂ ಮಿದುಳಿಗೆ ಅಂಟಿಕೊಂಡಿರುವ ಗೀಳು ಅವರ ಏಕಾಗ್ರತೆ, ಅಧ್ಯಯನಶೀಲತೆ, ಭಾವನಾತ್ಮಕ ಸಮತೋಲನ ಎಲ್ಲವನ್ನೂ ಕುಂಠಿತಗೊಳಿಸುತ್ತದೆ. ಅಪ್ರಾಪ್ತವಯಸ್ಕರ ಲೈಂಗಿಕ ಚಟುವಟಿಕೆಗಳು, ಹಿಂಸೆಯ ಪ್ರಚೋದನೆ ಗಳಿಗೆ ಕೂಡ ಮೊಬೈಲ್ ಕಾರಣವಾಗಿದೆ.
ನನ್ನ ಬಳಿ ಸಹಾಯ ಕೇಳುವ ಕುಟುಂಬಗಳಿಗೆ ಹೀಗೊಂದು ಮಾದರಿ ನೀತಿಸಂಹಿತೆಯನ್ನು ಜಾರಿಗೊಳಿಸಲು ಪ್ರೋತ್ಸಾಹಿಸುತ್ತೇನೆ. ಅದು ಹೀಗಿರುತ್ತದೆ:ಮನೆಯಲ್ಲಿ ಎಲ್ಲರೂ ಮೊಬೈಲ್‌ಗಳನ್ನು ಒಂದು ಸಾಮಾನ್ಯ ಸ್ಥಳದಲ್ಲಿಡಬೇಕು. ತಮ್ಮ ಕೋಣೆಗಳಲ್ಲಿ ಹಾಸಿಗೆಯಬಳಿ ಇಟ್ಟುಕೊಳ್ಳುವಂತಿಲ್ಲ. ಅಗತ್ಯವಿದ್ದಾಗ ಉಪಯೋಗಿಸಿ ಮತ್ತೆ ಅಲ್ಲೇ ಇಡಬೇಕು. ಹೀಗೆ ಎಲ್ಲರೂ ತಾವು ಮೊಬೈಲ್ ಉಪಯೋಗಿಸುವ ಒಟ್ಟು ಸಮಯದ ಬಗೆಗೆ ಮುಕ್ತವಾಗಿರಲೇ ಬೇಕು. ಅಂತರ್ಜಾಲವನ್ನು ಉಪಯೋಗಿಸುವಾಗ ತಮ್ಮ ಕೋಣೆಗಳಲ್ಲಿ ಕೂರುವಂತಿಲ್ಲ. ಎಲ್ಲರಿಗೂ ಕಾಣುವಂತಹ ಸ್ಥಳದಲ್ಲಿರಬೇಕು.
ಸ್ನಾನ, ಊಟ, ತಿಂಡಿ ಮೊದಲಾದ ಸಮಯಗಳಲ್ಲಿ ಹಾಗೂ ಕುಟುಂಬದವರು ಒಟ್ಟಾಗಿ ಹೊರಗೆ ಅಥವಾ ಪ್ರವಾಸಕ್ಕೆ ಹೋದಾಗ ಮೊಬೈಲ್ ಅನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ತುರ್ತು ಕರೆಗಳಿದ್ದಾಗ ಒಂದೆರೆಡು ವಾಕ್ಯ ಗಳಲ್ಲಿ ಅದನ್ನು ಮುಗಿಸಬೇಕು.
ವಿದ್ಯಾಭ್ಯಾಸದ ಅಥವಾ ವೃತ್ತಿಯ ಕರೆಗಳನ್ನು ಹೊರತುಪಡಿಸಿದರೆ ದಿನಕ್ಕೆ ಮಾಡಬಹುದಾದ ಅಥವಾ ಸ್ವೀಕರಿಸ ಬಹುದಾದ ಹರಟೆ ಕರೆ ಮತ್ತು ಸಂದೇಶಗಳಿಗೆ ಸಮಯದ ಮಿತಿಯನ್ನು ಇಟ್ಟುಕೊಳ್ಳಬೇಕು.
ಯಾರಾದರೂ ನಿಯಮಗಳನ್ನು ಪಾಲಿಸದಿದ್ದಲ್ಲಿ ಇತರರು ಅದನ್ನು ಹೇಳುವ ಮೊದಲು ಅವರೇ ಸ್ವಯಂಪ್ರೇರಿತರಾಗಿ ತಪ್ಪೊಪ್ಪಿಕೊಂಡು ಕ್ಷಮೆ ಯಾಚಿಸಬೇಕು. ಎಲ್ಲರಿಗೂ ಎಲ್ಲರ ಮೊಬೈಲ್‌ನ್ನು ಪರೀಕ್ಷಿಸಲು ಅವಕಾಶವಿರಬೇಕು. ವೃತ್ತಿಯ ಅಥವಾ ವಿದ್ಯಾಭ್ಯಾಸದ ಅಗತ್ಯಗಳನ್ನು ಹೊರತುಪಡಿಸಿದರೆ (ದುಡಿಯುವವರನ್ನೂ ಸೇರಿಸಿ) ಎಲ್ಲರ ಮೊಬೈಲ್ ಬಿಲ್‌ಗಳಿಗೆ ಮಿತಿ ಇರಬೇಕು.
ಎಷ್ಟು ಕುಟುಂಬಗಳು ಇಂತಹ ನೀತಿಸಂಹಿತೆಯನ್ನು ರೂಪಿಸಿಕೊಂಡು ಪ್ರಾಮಾಣಿಕವಾಗಿ ಜಾರಿಗೆ ತರಲು ಸಿದ್ಧರಿರ ಬಹುದು? ಪೋಷಕರು ಆತ್ಮಶೋಧನೆ ಮಾಡಿಕೊಳ್ಳದಿದ್ದರೆ ಮಕ್ಕಳನ್ನು ದೂರುವುದು ವ್ಯರ್ಥ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.