ADVERTISEMENT

ಸಂಗತ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ- ಮೋದಿ ಮೌನ ಮತ್ತು ಮಾನವೀಯತೆ!

ಲಖಿಂಪುರ– ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖರ ಹೇಳಿಕೆಗಳು ವ್ಯಕ್ತಿ ಸ್ವಾತಂತ್ರ್ಯ ಹಾಗೂ ಶಾಂತಿಯುತ ಪ್ರತಿಭಟನೆಯ ಹಕ್ಕಿನ ನಿರ್ಭೀತ ಉಲ್ಲಂಘನೆಯಾಗಿವೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 19:31 IST
Last Updated 11 ಅಕ್ಟೋಬರ್ 2021, 19:31 IST
Sangata_12-10-2021.jpg
Sangata_12-10-2021.jpg   

ಉತ್ತರಪ್ರದೇಶದ ಲಖಿಂಪುರ- ಖೇರಿ ಜಿಲ್ಲೆಯಲ್ಲಿ ಇದೇ 3ರಂದು ಸಂಜೆ, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿ ಹಿಂದಿರುಗು ತ್ತಿದ್ದ ರೈತರ ಮೇಲೆ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರಿಗೆ ಸೇರಿದ ವಾಹನ ಹಾಯ್ದು ನಾಲ್ವರು ರೈತರು ಮೃತಪಟ್ಟಿದ್ದು ದೇಶದಾದ್ಯಂತ ತೀವ್ರ ಟೀಕೆಗೆ ಒಳಗಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿಯ ಕೆಲವು ಪ್ರಮುಖ ನಾಯಕರ ಹೇಳಿಕೆಗಳು, ನಮ್ಮ ಸಂವಿಧಾನವು ಪ್ರಜೆಗಳಿಗೆ ನೀಡಿರುವ ವ್ಯಕ್ತಿ ಸ್ವಾತಂತ್ರ್ಯ ಹಾಗೂ ಶಾಂತಿಯುತ ಪ್ರತಿಭಟನೆಯ ಹಕ್ಕಿನ ನಿರ್ಭೀತ ಉಲ್ಲಂಘನೆಯಾಗಿವೆ.

ಯಾವುದೇ ವ್ಯಕ್ತಿಯನ್ನು ಬಂಧಿಸುವಾಗ ಕಾನೂನಿನ ಪ್ರಕಾರ ಅನುಸರಿಸಬೇಕಾದ ಪ್ರಕ್ರಿಯೆಗೆ ವಿರುದ್ಧವಾಗಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿದರು. ಬಂಧಿಸಿ 24 ಗಂಟೆಗಳು ಕಳೆದರೂ ಅವರನ್ನು ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸಲಿಲ್ಲ ಹಾಗೂ ಅಧಿಕೃತವಾದ ಪೊಲೀಸ್‌ ಠಾಣೆಯಲ್ಲಿ ಇರಿಸದೆ ಖಾಸಗಿ ಕಟ್ಟಡದಲ್ಲಿ ಇರಿಸಿದ್ದರು. ಅವರಿಗೆ ವಕೀಲರನ್ನು ಸಂಪರ್ಕಿಸುವ, ತಮ್ಮ ಕುಟುಂಬದವ ರೊಡನೆ ದೂರವಾಣಿಯಲ್ಲಿ ಮಾತನಾಡುವ ಅವಕಾಶ ವನ್ನೂ ನಿರಾಕರಿಸಲಾಯಿತು. ವಿರೋಧ ಪಕ್ಷಗಳ ಧುರೀಣರು ಸ್ಥಳಕ್ಕೆ ಭೇಟಿ ನೀಡಿ ರೈತ ಕುಟುಂಬಗಳಿಗೆ ಸಾಂತ್ವನ ಹೇಳಲು ಆ ಸಂದರ್ಭದಲ್ಲಿ ಅವಕಾಶ ಕೊಡಲಿಲ್ಲ. ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಬಹಿರಂಗ ಸಭೆಗಳನ್ನು ನಡೆಸುವಂತಿಲ್ಲ ಎಂಬ ಷರತ್ತಿನೊಡನೆ ಅವಕಾಶ ಕಲ್ಪಿಸಬಹುದಿತ್ತು ಅಲ್ಲವೇ?

ಖೇರಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅಜಯ್‌ ಮಿಶ್ರಾ ಅವರಿಗೆ ನರೇಂದ್ರ ಮೋದಿ ಅವರು ಸಂಪುಟದಲ್ಲಿ ಸ್ಥಾನ ಕಲ್ಪಿಸಿ, ಹೇಳಿಕೇಳಿ ‘ಕಾನೂನು ಸುವ್ಯವಸ್ಥೆ’ ನೋಡಿಕೊಳ್ಳುವ ಗೃಹ ಖಾತೆಯ ರಾಜ್ಯ ಸಚಿವರ ಹೊಣೆ ವಹಿಸಿದ್ದಾರೆ! ಹತ್ಯಾಕಾಂಡ ನಡೆದ ಮಾರನೆಯ ದಿನವೇ ಅವರು ‘ನನ್ನ ಮಗ ಆ ಸ್ಥಳದಲ್ಲಿ ಇರಲಿಲ್ಲ. ಒಂದು ವೇಳೆ ಇದ್ದಿದ್ದರೆ ಆತನನ್ನು ಕೊಂದುಹಾಕುತ್ತಿದ್ದರು’ ಎಂಬ ಅಚ್ಚರಿಯ ಹೇಳಿಕೆ ಕೊಟ್ಟರು! ಪ್ರತ್ಯಕ್ಷದರ್ಶಿಗಳು ಹೇಳಿದ್ದೇ ಬೇರೆ. ಘಟನೆ ನಡೆದ ಸಮಯದಲ್ಲಿ ಮಿಶ್ರಾ ಅವರ ಮಗ ಆಶಿ‌ಷ್‌ ಅಲ್ಲಿದ್ದರು ಎಂಬುದನ್ನು ಈಗ ಪೊಲೀಸರೇ ಖಚಿತಪಡಿಸಿದ್ದಾರೆ. ಆಶಿಷ್‌ ಹೆಸರನ್ನು ತಡವಾಗಿ ಎಫ್‌ಐಆರ್‌ನಲ್ಲಿ ಸೇರಿಸಿದ್ದೇಕೆ?

ADVERTISEMENT

ಸಚಿವ ಮಿಶ್ರಾ ಅವರು ರೈತರಿಗೆ ಎಚ್ಚರಿಕೆ ಕೊಡಲು ಹೇಳಿದ್ದ ಮಾತುಗಳನ್ನು ನೋಡಿ: ‘ನನ್ನ ನಿಜವಾದ ತಾಕತ್ತು ತೋರಿದರೆ ಈ ರೈತರು ಗ್ರಾಮ ಬಿಡಿ, ಜಿಲ್ಲೆಯನ್ನೇ ಬಿಟ್ಟು ಓಡಬೇಕಾಗುತ್ತದೆ. ನನ್ನ ವಿರುದ್ಧ ಕಪ್ಪುಬಾವುಟ ಎತ್ತಿ ಹಿಡಿದರೆ ಪರಿಣಾಮ ನೆಟ್ಟಗಿರುವು ದಿಲ್ಲ’. ಸಂವಿಧಾನ, ಪ್ರಮಾಣವಚನ, ಶಿಷ್ಟಾಚಾರದ ನಡವಳಿಕೆ ಎಲ್ಲವೂ ಕಸದ ಬುಟ್ಟಿ ಸೇರಿದವೇ? ಇಂತಹವರು ನಮ್ಮೆಲ್ಲರ ಕೇಂದ್ರ ಸಚಿವರು!

ಬಿಜೆಪಿಯ ಮತ್ತೊಬ್ಬ ನಾಯಕ, ಹರಿಯಾಣದ ಮುಖ್ಯಮಂತ್ರಿ ಮನೋಹರಲಾಲ್‌ ಕಟ್ಟರ್‌ ಅವರು ಕಾರ್ಯಕ್ರಮವೊಂದರಲ್ಲಿ ಪಕ್ಷದ ಕಾರ್ಯಕರ್ತರಿಗೆ ಕೊಟ್ಟ ಅಪ್ಪಣೆ ಹೀಗಿದೆ: ‘ಸ್ವಯಂಸೇವಕರ ತಂಡಗಳನ್ನು ರಚಿಸಿಕೊಳ್ಳಿ, ಈ ತಂಡಗಳು ದೊಣ್ಣೆಗಳನ್ನು ಕೈಗೆತ್ತಿಕೊಂಡು, ಪ್ರತಿಭಟನಾನಿರತ ರೈತರ ಏಟಿಗೆ ಎದಿರೇಟು ನೀಡಬೇಕು’.

ಇದರಿಂದ ಸಂವಿಧಾನದ ಆಶಯಗಳನ್ನು ಧಿಕ್ಕರಿ ಸಿದಂತೆ ಆಗುವುದಿಲ್ಲವೇ? ಅಷ್ಟೇ ಮುಖ್ಯವಾಗಿ, ಹಿಂಸಾಚಾರಕ್ಕೆ– ಶ್ರೀರಕ್ಷೆಯ ಭರವಸೆಯೊಡನೆ– ಮುಖ್ಯಮಂತ್ರಿಯೇ ಪ್ರಚೋದಿಸಿದಂತೆ ಆಗಲಿಲ್ಲವೇ? ಹರಿಯಾಣ, ದೆಹಲಿ, ಉತ್ತರಪ್ರದೇಶದ ಪೊಲೀಸರ ಜೊತೆಗೆ ರಾಜಕೀಯ ಪಕ್ಷದ ಇಂತಹ ಒಂದು ಸಶಸ್ತ್ರ ಕಾರ್ಯಕರ್ತರ ಪಡೆಯೂ ಬೇಕೆ?

ಎಂಟು ಜನ ಜೀವ ಕಳೆದುಕೊಂಡ ಈ ಕ್ರೂರ ಕೃತ್ಯದಿಂದ ಪ್ರಧಾನಿಯೂ ಒಳಗೊಂಡಂತೆ ಯಾರೊಬ್ಬ ಬಿಜೆಪಿ ನಾಯಕರಿಗೂ ತಲ್ಲಣವಾಗ
ಲಿಲ್ಲ (ವರುಣ್‌ ಗಾಂಧಿಯವರನ್ನು ಹೊರತುಪಡಿಸಿ! ಅದರ ಪರಿಣಾಮವನ್ನು ಅವರು, ಅವರ ತಾಯಿ ಈಗಾಗಲೇ ಅನುಭವಿಸುತ್ತಿದ್ದಾರೆ!). ದೆಹಲಿಯಿಂದ ಲಖನೌಗೆ ಬಂದು ಚುನಾವಣೆಯ ಹಿನ್ನೆಲೆಯಲ್ಲಿ 75 ಹೊಸ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿಗೆ, ಸಮೀಪದ ಲಖಿಂಪುರ- ಖೇರಿಗೆ ಭೇಟಿ ಕೊಡುವುದು ಅಗತ್ಯವೆನಿಸಲಿಲ್ಲ. ‘ಆಜಾದಿ 75: ನಯಾ ಭಾರತ್‌ ಕಾ ನಯಾ ಉತ್ತರಪ್ರದೇಶ್‌’ ಸಭೆಯಲ್ಲೂ ರೈತರ ಭೀಕರ ಹತ್ಯೆ ಕುರಿತು ಒಂದೇ ಒಂದು ಮಾತು ಅವರಿಂದ ಬರಲಿಲ್ಲ. ಮೋದಿಯವರ ಮೌನವನ್ನು ಅರ್ಥೈಸುವುದಾದರೂ ಹೇಗೆ? ಇದು ಕೇವಲ ರಾಜನೀತಿಯ ಪ್ರಶ್ನೆ ಅಲ್ಲ, ಮಾನವೀಯತೆಯ ಪ್ರಶ್ನೆ. ಅವರ ಮೌನ ಕಿವಿ ಒಡೆಯುವಂತೆ ಶಬ್ದ ಮಾಡಿದೆ!

2012ರಲ್ಲಿ ತಾವು ಗುಜರಾತಿನ ಮುಖ್ಯಮಂತ್ರಿ ಯಾಗಿದ್ದಾಗ, ‘ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ‘ಮೌನ್‌’ ಮೋಹನ್‌ ಸಿಂಗ್‌ ಎಂದು ಕರೆಯುವುದು ಹೆಚ್ಚು ಸೂಕ್ತ, ಏಕೆಂದರೆ ಅವರು ಯಾವ ವಿಷಯದ ಕುರಿತೂ ಬಾಯೇ ಬಿಡುವುದಿಲ್ಲ’ ಎಂದು ಹಂಗಿಸಿದವರು ಇದೇ ಮೌನಮೂರ್ತಿ ಮೋದಿಯವರಲ್ಲವೇ!ಇದೇ ಸಂದರ್ಭದಲ್ಲಿ ಅವರು ಹೇಳಿದ ಮತ್ತೊಂದು ಮಾತು: ‘ಕೇಂದ್ರದಲ್ಲಿರುವ ಯುಪಿಎ ಸರ್ಕಾರವು ತನ್ನ ರಾಜಕೀಯ ಎದುರಾಳಿಗಳನ್ನು ಮಣಿಸಲು ಸಿಬಿಐ ಅನ್ನು ಬಳಸುತ್ತಿದೆ!’ಆದರೆ, ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಯಂತಹ ಶಾಸನಬದ್ಧ ಸ್ವತಂತ್ರ ಸಂಸ್ಥೆಗಳು ಹಿಂದೆಂದೂ ಇಲ್ಲದ ರೀತಿಯಲ್ಲಿ ರಾಜಕೀಯ ವಿರೋಧಿಗಳನ್ನು ಬಗ್ಗುಬಡಿಯುವ ಅಸ್ತ್ರಗಳಾಗಿ ಈಗ ಬಳಕೆಯಾಗುತ್ತಿವೆ. ಎಂತಹ ವಿಪರ್ಯಾಸ!

ಲೇಖಕ: ಕೆಪಿಸಿಸಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.