ADVERTISEMENT

ಸಂಗತ: ‘ಶಾಸನ’ ಮೀರಿಸಿದ ಶ್ವಾನ ಪ್ರೀತಿ

ನಾಯಿ ಸಾಕುವುದು ಈಗ, ಭಾವ ಬೆಸುಗೆಯ ಭಾಗವೇ ಆಗಿದೆ

ರಾಘವೇಂದ್ರ ಕೆ ತೊಗರ್ಸಿ
Published 3 ಜನವರಿ 2025, 23:30 IST
Last Updated 3 ಜನವರಿ 2025, 23:30 IST
   

ನಿಯತ್ತಿಗೆ ಅನ್ವರ್ಥವಾಗಿ ನಾಯಿಯನ್ನು ಉಲ್ಲೇಖಿಸುವುದು ಸಾಮಾನ್ಯ. ಮನುಷ್ಯನಿಗೆ ಅತ್ಯಂತ ನಂಬುಗೆಯ ಪ್ರಾಣಿ ನಾಯಿ ಎನ್ನುವುದನ್ನೇ ಇಲ್ಲಿನ ‘ನಿಯತ್ತು’ ಧ್ವನಿಸುತ್ತದೆ. ಮನುಷ್ಯ ತನ್ನ ಹೊಲ–ಮನೆ ರಕ್ಷಣೆ, ಬೇಟೆಯ ಸಹಾಯಕ್ಕೆ ನಾಯಿಯನ್ನು ಸಾಕುತ್ತಿದ್ದುದು ಇತಿಹಾಸ. ಆದರೆ ಈಗ ಅನುಕೂಲಕ್ಕಿಂತ ಖುಷಿ
ಮತ್ತು ನೆಮ್ಮದಿಗಾಗಿ ಸಾಕುತ್ತಿದ್ದಾನೆ. ಆಧುನಿಕ ಜೀವನಶೈಲಿಯಲ್ಲಿ ‘ಪೆಟ್‌’ ಪೋಷಣೆ ಹವ್ಯಾಸವೂ ಹೌದು. ಒತ್ತಡದ ಜೀವನದಲ್ಲಿ ಆತ್ಮತೃಪ್ತಿಗೂ ಅದು ಕಾರಣವಾಗಿದೆ. ಮನುಷ್ಯ ತನ್ನ ಸಾಂಗತ್ಯಕ್ಕಾಗಿ ಸಹಜೀವಿಯಂತೆ, ಕುಟುಂಬ ಸದಸ್ಯನ ಸ್ಥಾನವನ್ನು ಕೊಟ್ಟಿದ್ದಾನೆ. ಭಾವ ಬೆಸುಗೆಯ ಬದುಕಿನ ಭಾಗ ಎನ್ನುವಂತೆ ನಾಯಿ ಸಾಕುವುದು ಬದಲಾದ ಜೀವನಕ್ರಮದ ಒಂದು ಭಾಗವೇ ಆಗಿದೆ.

ತಮ್ಮ ಖುಷಿಗಾಗಿ ಸಾಕುಪ್ರಾಣಿ ನಾಯಿಗೆ ಒಡವೆ–ವಸ್ತ್ರದ ಅಲಂಕಾರವನ್ನು ಮಾಡಿ, ಫೋಟೊ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವವರಿದ್ದಾರೆ. ಪ್ರೀತಿಯ ನಾಯಿಯ ಜನ್ಮದಿನವನ್ನು ಆಚರಿಸಿ ಸಂಭ್ರಮಿ ಸುವವರೂ ಇದ್ದಾರೆ. ಬಹುತೇಕ ಶ್ವಾನ ಪ್ರಿಯರಿಗೆ ಅವರ ಮನೆಯ ಮುದ್ದಿನ ಸದಸ್ಯನಿಗೆ ‘ನಾಯಿ’ ಎಂದರೆ ಕೋಪ ಬರುತ್ತದೆ. ಅದಕ್ಕೆಂದೇ ಒಲುಮೆಯ ಹೆಸರು ಇರುವಾಗ ನಾಯಿ ಎಂದು ಸಂಬೋಧಿಸುವುದು ಅದಕ್ಕೆ ಮಾಡುವ ಅವಮಾನ ಎಂದು ಅವರು ಗ್ರಹಿಸುತ್ತಾರೆ. ಬೆಕ್ಕು, ಪಕ್ಷಿ, ಮೀನು, ಮೊಲಗಳನ್ನು ಸಾಕಿದರೂ ನಾಯಿಗೆ ಇರುವ ಕಿಮ್ಮತ್ತು ಬೇರೆ ಪ್ರಾಣಿಗಳಿಗೆ ಇಲ್ಲ. ಕೆಲವೊಮ್ಮೆ ಆ ಮನೆಯ ಮನುಷ್ಯನೊಬ್ಬನಿಗೂ ಇಲ್ಲದೇ ಇರಬಹುದು. 

ಬೆಂಗಳೂರು ಉತ್ತರ ತಾಲ್ಲೂಕಿನ ಹೆಗ್ಗಡದೇವನ ಪುರ ಎಂಬಲ್ಲಿ ಸಾಕುನಾಯಿಯ ಅಗಲಿಕೆಯ ನೋವು ಸಹಿಸಲು ಆಗದೆ, ಅದರ ಮಾಲೀಕರಾಗಿದ್ದ ರಾಜಶೇಖರ್‌ ಎನ್ನುವ ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು ಈಗ ಸುದ್ದಿಯಾಗಿದೆ. ಅವರು ಜರ್ಮನ್ ಷೆಪರ್ಡ್ ತಳಿಯ ನಾಯಿಯನ್ನು ಒಂಬತ್ತು ವರ್ಷಗಳಿಂದ ಸಾಕಿದ್ದರು. ಅದಕ್ಕೆ ‘ಬೌನ್ಸಿ’ ಎಂಬ ಆಕರ್ಷಣೀಯ ಹೆಸರನ್ನು ಇಟ್ಟಿದ್ದರು. ಬೌನ್ಸಿ ಅನಾರೋಗ್ಯಕ್ಕೆ ತುತ್ತಾಗಿ ಅಸುನೀಗಿದೆ. ಅದರ ಅಂತ್ಯಸಂಸ್ಕಾರವನ್ನೂ ತಮ್ಮಿಷ್ಟದಂತೆ ಮುಗಿಸಿ ಬಂದ ರಾಜಶೇಖರ್‌ ಅವರಿಗೆ ಬೌನ್ಸಿ ಇಲ್ಲದೆ ತಾವು ಇರುವುದು ಬಲುಭಾರ ಎನಿಸಿದೆ. ಹಾಗಾಗಿ, ಅದೇ ನಾಯಿಯ ಚೈನನ್ನು ತಮ್ಮ ಕೊರಳಿಗೆ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

ADVERTISEMENT

ಪ್ರಾಣಿ–ಮನುಷ್ಯನ ನಡುವಿನ ಸಂಬಂಧದ ಪರಾಕಾಷ್ಠೆಯನ್ನು ತಿಳಿಸುವ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಗುತ್ತಿ ಮತ್ತು ನಾಯಿಯ ಅಭೇದ ಸಂಬಂಧ ಇರಬಹುದು. ಸಿದ್ಧಲಿಂಗಯ್ಯ ಅವರು ‘ಕತ್ತೆ ಧರ್ಮ’ ಎಂಬ ಕಥನ ಕವನದಲ್ಲಿ ಹೇಳುವ ಮಧುಗಿರಿ ಪಟ್ಟಣದ ಸಿದ್ಧಯ್ಯನೆಂಬ ಅಗಸನ ಬದುಕನ್ನು ಒಂದುಕಡೆ ನೆನಪಿಸುತ್ತದೆ. ಮತ್ತೊಂದು ಕಡೆ, ಚಾರಿತ್ರಿಕ ಮಹತ್ವದ ‘ಆತಕೂರು’ ಶಾಸನವನ್ನೂ ಕಣ್ಣೆದುರಿಗೆ ತರುತ್ತದೆ. ‘ಕಾಳಿ’ ಎಂಬ ಬೇಟೆನಾಯಿಗೊಂದು ಸಮಾಧಿ, ಅದರ ಸಂರಕ್ಷಣೆಗೆ ಜಮೀನನ್ನು ಮೀಸಲು ಇಟ್ಟ ವಿವರವನ್ನು ಆ ಶಾಸನ ಹೇಳುತ್ತದೆ. ನಾಯಿಯ ಸ್ಮಾರಕಕ್ಕಾಗಿ ಪ್ರಕಟಿಸಿದ ವಿಶಿಷ್ಟ ಶಿಲಾಶಾಸನ ಅದು.

ಶಾಸನ ಪರಂಪರೆಯಲ್ಲೇ ಅನನ್ಯ ಎನ್ನಿಸುವ ಆತಕೂರು ಶಾಸನವು ಕನ್ನಡ ನಾಡಿನ ರಾಜಕೀಯ ಚರಿತ್ರೆಗೂ ಮಹತ್ವದ ನಿದರ್ಶನ. ರಾಷ್ಟ್ರಕೂಟರು ಮತ್ತು ಚೋಳರ ನಡುವೆ ವೈರತ್ವ ಇತ್ತು. ಅದು ರಾಷ್ಟ್ರಕೂಟರ 3ನೇ ಕೃಷ್ಣ ಮತ್ತು ಚೋಳರ 3ನೇ ರಾಜಾದಿತ್ಯನ ನಡುವೆ ತಕ್ಕೊಲಂ ಎಂಬಲ್ಲಿ ಯುದ್ಧಕ್ಕೆ ಕಾರಣವಾಗುತ್ತದೆ. ರಾಷ್ಟ್ರಕೂಟರಿಗೆ ಗಂಗರು ಬೆಂಬಲವನ್ನು ನೀಡುತ್ತಾರೆ. ಆ ಯುದ್ಧದಲ್ಲಿ ರಾಷ್ಟ್ರಕೂಟರು ಗೆಲ್ಲುತ್ತಾರೆ. ಆ ಹೋರಾಟವನ್ನು ಕಂ‌ಡಿದ್ದ ಗಂಗರ ರಾಜ ಬೂತುಗ ತನ್ನ ಸೇನೆಯಲ್ಲಿ ಪರಾಕ್ರಮವನ್ನು ಮೆರೆದ ವೀರಯೋಧ ಮಣಲೇರನನ್ನು ಪುರಸ್ಕರಿಸುತ್ತಾನೆ. ಆಗ ಬಹುಮಾನವಾಗಿ ಏನು ಬೇಕು ಎಂದು ಆತನನ್ನು ಕೇಳುತ್ತಾನೆ. ಅದಕ್ಕೆ ಆತ ತಮ್ಮ ಯುದ್ಧದಲ್ಲಿ ದುಡಿದ ಬೇಟೆನಾಯಿ ‘ಕಾಳಿ’ ಬೇಕು ಎಂದು ಕೇಳಿ ಪಡೆಯುತ್ತಾನೆ. 

ಕಾಳಿಯನ್ನು ಅಕ್ಕರೆಯಿಂದ ಸಾಕುತ್ತಿದ್ದ ಮಣಲೇರ ಒಮ್ಮೆ ಬೇಟೆಗೆ ಹೋದಾಗ, ಕಾಡುಹಂದಿಯೊಂದಿಗಿನ ಸೆಣಸಾಟದಲ್ಲಿ ಅದು ವೀರಮರಣ ಹೊಂದುತ್ತದೆ. ಆ ಕಾಳಿಯ ನೆನಪಿಗಾಗಿ ಶಾಸನವನ್ನು ಹೊರಡಿಸಿದ್ದು, ಆ ಶಾಸನಕ್ಕೆ ಹಾನಿ ಮಾಡಿದರೆ ನಾಯಿಯನ್ನು ಕೊಂದ ಪಾಪ ಬರುತ್ತದೆ ಎಂಬ ಶಾಪಾಶಯವನ್ನೂ ಅದರ ಮೇಲೆ ಕೆತ್ತಲಾಗಿದೆ. ಹಂದಿ ಮತ್ತು ನಾಯಿಯ ಚಿತ್ರ ಇರುವ ವಿಶಿಷ್ಟ ಶಾಸನವನ್ನು ಕ್ರಿ.ಶ. 950ರಲ್ಲಿ ಹೊರಡಿಸಲಾಗಿತ್ತು. ಅದನ್ನು ಈಗಿನ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಆತಕೂರು ಎಂಬ ಗ್ರಾಮದ ಚಲ್ಲೇಶ್ವರ ದೇವಾಲಯದ ಬಳಿ ಪ್ರತಿಷ್ಠಾಪಿಸಲಾಗಿತ್ತು. ಈಗ, ಬೆಂಗಳೂರಿನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಅದನ್ನು ಸಂರಕ್ಷಿಸಿ ಇಡಲಾಗಿದೆ.

ಕಾವ್ಯದೊಳಗಿನ ಕತ್ತೆ, ಶಾಸನದ ನಾಯಿ ನಮ್ಮ ಎದುರಿನ ಪ್ರತಿಮೆಯಂತೆ ಕಾಣುತ್ತಿವೆ. ಪ್ರಾಣಿಗಳು ಕೆಲವರ ಭಾವನಾತ್ಮಕ ಬಾಳಿನ ಭಾಗ ಎನ್ನುವ ವಾಸ್ತವ ಸತ್ಯವನ್ನು ಈ ಹೊತ್ತಿನ ಆತ್ಮಹತ್ಯೆ ನೆನಪಿಸುವಂತಿದೆ. ತನ್ನ ಪ್ರೀತಿಪಾತ್ರ ಜೀವವನ್ನು ಕಳೆದುಕೊಂಡಾಗ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಿಗೆ ಮನುಷ್ಯ ಭಾವುಕ ನಾಗುತ್ತಾನೆ ಎನ್ನುವುದಕ್ಕೂ ಈ ಪ್ರಕರಣ ನಿದರ್ಶನವಾಗಿದೆ. ಸಾಕುನಾಯಿಯ ವಿಷಯದಲ್ಲಿ ವಿಕೋಪದ ಜಗಳ, ಹೊಡೆದಾಟಗಳು ಆಗಾಗ ನಡೆಯುತ್ತವೆ. ಅಂದರೆ ನಾಯಿಯ ಮಾಲೀಕನ ಮನಸ್ಸಿನ ತಲ್ಲಣ ಯಾವ ಮಟ್ಟದಲ್ಲಿರುತ್ತದೆ ಎನ್ನುವುದನ್ನು ಈ ಘಟನೆ ತಿಳಿಸುವಂತಿದೆ. ಅಲ್ಲಿ ಮಣಲೇರನು ಕಾಳಿಗೆ ತನ್ನ ಆಸ್ತಿಯ ಒಂದು ಪಾಲನ್ನು ಮುಡಿಪಾಗಿ ಇಟ್ಟರೆ, ಇಲ್ಲಿ ರಾಜಶೇಖರ್‌ ಅವರು ಬೌನ್ಸಿಯ ನೆನಪಿನಲ್ಲಿ ಅನುಗಮನ ಹೊಂದಿ ತಾವೇ ಮುಡಿಪಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.