ADVERTISEMENT

ಸಂಗತ | ಮಳೆ ಎಂಬ ಕ್ರಿಯೆಗೆ ಹಾನಿಯ ಪ್ರತಿಕ್ರಿಯೆ!

ಮಳೆನೀರಿನಿಂದ ತುಂಬಿ ಹರಿವ ಒಳಚರಂಡಿಗಳಲ್ಲಿ, ಅವೈಜ್ಞಾನಿಕವಾಗಿ ನಿರ್ಮಿಸುವ ಬಡಾವಣೆಗಳಲ್ಲಿ ಭ್ರಷ್ಟಾಚಾರದ ಬ್ರಹ್ಮಾಂಡ ಸ್ವರೂಪವನ್ನೇ ಕಾಣಬಹುದು.

ನಾ ದಿವಾಕರ
Published 12 ಆಗಸ್ಟ್ 2022, 22:45 IST
Last Updated 12 ಆಗಸ್ಟ್ 2022, 22:45 IST
   

ಮಳೆಗಾಲ ಎಂದರೆ ನಿಸರ್ಗ ಜೀವಿಗಳಿಗೆ ವರದಾನವಾಗಬೇಕು. ಪ್ರಾಣಿ ಪಕ್ಷಿಗಳಿಗೆ, ಜಾನುವಾರುಗಳಿಗೆ, ವ್ಯವಸಾಯವನ್ನೇ ನಂಬಿ ಬದುಕುವ ಕೋಟ್ಯಂತರ ಜನರಿಗೆ ಮತ್ತು ನಗರಗಳಲ್ಲಿ ವಾಸಿಸುವ ಹಿತವಲಯ ದವರಿಗೆ ನಿಸರ್ಗ ಒದಗಿಸುವ ಒಂದು ಸವಲತ್ತೆಂದರೆ ಕಾಲಕಾಲಕ್ಕೆ ನಾವು ಕಾಣುವ ಮಳೆ.

ಕಳೆದ 50 ವರ್ಷಗಳಲ್ಲಿ ಕೆಲವು ಸಮಯವಾದರೂ ಮಳೆಯಿಲ್ಲದೆ, ಒಣಗಿದ ವೃಕ್ಷಗಳ ನಡುವೆ, ಸುರುಟಿಹೋದ ಬೆಳೆಗಳ ನಡುವೆ ಆಹಾರ ಕ್ಷಾಮವನ್ನು ಸಮಾಜ ಎದುರಿಸಿದೆ. ಕುಡಿಯುವ ನೀರಿಲ್ಲದೆ ಜಾನುವಾರುಗಳು ಸಂಕಷ್ಟ ಅನುಭವಿಸಿರುವುದನ್ನು ನೋಡಿದ್ದೇವೆ. ಒಣಗಿದ ಭೂಮಿಯಲ್ಲಿ ತಲೆಯ ಮೇಲೆ ಕೈಹೊತ್ತು ಕುಳಿತ ರೈತನ ಚಿತ್ರಗಳನ್ನು ಕಂಡಿದ್ದೇವೆ. ಕುಡಿಯುವ ನೀರಿಗಾಗಿ ಮೈಲಿಗಟ್ಟಲೆ ನಡೆಯುವ ಅಸಹಾಯಕ ಜನರನ್ನು ಕಂಡಿದ್ದೇವೆ. ಹಾಗೆಯೇ ‘ಮಹಾಸ್ಫೋಟ, ಮೇಘಸ್ಫೋಟ, ಕುಂಭದ್ರೋಣ’ ಹೀಗೆ ಹಲವು ವಿಶೇಷಣಗಳನ್ನು ಹೊತ್ತು ಧರೆಗೆ ಅಪ್ಪಳಿಸುವ ಅತಿವೃಷ್ಟಿಯೂ ಕರ್ನಾಟಕದ ಹಲವೆಡೆ ತನ್ನ ಬಲಪ್ರದರ್ಶನ ಮಾಡುತ್ತಲೇ ಬಂದಿದೆ. ಈ ವರ್ಷವೂ ಇದೇ ಕತೆ ಮರುಕಳಿಸಿದೆ.

ನಮ್ಮ ಸರ್ಕಾರಗಳು ಅಂಕಿಅಂಶಗಳನ್ನು ಅದ್ಭುತವಾಗಿ ಸಂಗ್ರಹಿಸುತ್ತವೆ. ಮಳೆ ಹಾನಿಯಿಂದ ಎಷ್ಟು ಬೆಳೆ ನಾಶವಾಗಿದೆ, ಎಷ್ಟು ಜಾನುವಾರುಗಳು ಸತ್ತಿವೆ, ಎಷ್ಟು ಜನ ಬಲಿಯಾಗಿದ್ದಾರೆ, ಎಷ್ಟು ಮನೆಗಳು ಕುಸಿದಿವೆ, ಎಷ್ಟು ಕಡೆ ಗುಡ್ಡಗಳು ಕುಸಿದಿವೆ, ಸೇತುವೆಗಳು ಭಗ್ನವಾಗಿವೆ ಹೀಗೆ ಪುಂಖಾನುಪುಂಖವಾಗಿ ಹೊರಬೀಳುವ ದತ್ತಾಂಶಗಳ ಬೆನ್ನಲ್ಲೇ ಸತ್ತವರ ಕುಟುಂಬದವರಿಗೆ, ಮನೆ ಕಳೆದು
ಕೊಂಡವರಿಗೆ, ಬೆಳೆ ನಷ್ಟ ಅನುಭವಿಸಿದವರಿಗೆ ಪರಿಹಾರದ ಹಣ ನೀಡಲು ಚೆಕ್ಕುಗಳು ಸಿದ್ಧವಾಗುತ್ತಿರುತ್ತವೆ. ವಾಯುವಿಹಾರದಂತೆ ಒಮ್ಮೆ ಪ್ರವಾಹಪೀಡಿತ ಅಥವಾ ಮಳೆಪೀಡಿತ ಪ್ರದೇಶಗಳಿಗೆ ವೈಮಾನಿಕ ಭೇಟಿ ನೀಡುವ ಮೂಲಕ ದೂರದಿಂದಲೇ ಹಾನಿಯನ್ನು ಅಳೆಯುವ ಮಾಪಕಗಳನ್ನೂ ಸರ್ಕಾರಗಳು ಹೊಂದಿರುವುದರಿಂದ, ಅಂದಾಜುಗಳ ಪಟ್ಟಿ ಸಿದ್ಧವಾಗುತ್ತಲೇ ಇರುತ್ತದೆ. ಸತ್ತವರಿಗೆ ಕಂಬನಿ, ಸಂತ್ರಸ್ತರಿಗೆ ಸಾಂತ್ವನ, ಉಳಿದವರಿಗೆ ಸಂತಾಪಗಳ ಸಾಹಿತ್ಯಕ ಸಾಲುಗಳು ಹವಾನಿಯಂತ್ರಿತ ಕೊಠಡಿಗಳಲ್ಲಿ ಗೂಗಲ್‌
ಡಾಕ್‌ಗಳಲ್ಲಿ ಸಿದ್ಧವಾಗುತ್ತವೆ.

ADVERTISEMENT

ಇತ್ತ ಜನಸಾಮಾನ್ಯರು ರಸ್ತೆಗಳಲ್ಲಿ ತೆಪ್ಪಗಳನ್ನು ಬಳಸುತ್ತಾರೆ, ಶಾಲಾ ಮಕ್ಕಳು ಅಪಾಯಕಾರಿ ಹೊಳ್ಳಗಳನ್ನು ದಾಟಿ ಹೋಗುತ್ತಿರುತ್ತಾರೆ. ಪಶ್ಚಿಮ ಘಟ್ಟಗಳಲ್ಲಿ ಗುಡ್ಡ ಕುಸಿತದಿಂದ ಹತ್ತು ಹಲವಾರು ಮನೆಗಳು ಭೂಗತವಾಗುತ್ತವೆ. ಇಡೀ ಗ್ರಾಮಗಳೇ ಜಲಾವೃತವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲೂ ಜಲಾವೃತ ಪ್ರದೇಶಗಳು ನಿರ್ಮಾಣ ವಾಗುವುದನ್ನು ಕಾಣುತ್ತಿದ್ದೇವೆ. ಒಂದೆರಡು ತಿಂಗಳ ಎಳೆ ವಯಸ್ಸಿನ ಡಾಂಬರು ರಸ್ತೆಗಳಿಗೂ ಆದಷ್ಟು ಬೇಗ ಬಾಯ್ದೆರೆಯುವ ಹಂಬಲ ಇರುವುದರಿಂದ, ರಸ್ತೆಗಳ ಬದಿಯ ಚರಂಡಿಗೆ ಪೈಪೋಟಿ ನೀಡುತ್ತಾ ಹೊಂಡಗಳು ಮದುವಣಿಗರಂತೆ ಸಿದ್ಧವಾಗುತ್ತವೆ. ಅತಿವೃಷ್ಟಿಯಾದ ಸಂದರ್ಭದಲ್ಲೆಲ್ಲಾ ಅವು ಸಾವಿನ ಕೂಪಗಳಾಗಿ ಪರಿಣಮಿಸುತ್ತವೆ.

ಪತ್ರಿಕೆಗಳಲ್ಲಿ ‘ಪ್ರಧಾನಿಯಿಂದ ಉದ್ಘಾಟನೆಯಾದ ಸೇತುವೆ ಆರು ತಿಂಗಳಲ್ಲೇ ಕುಸಿತ’ ಎಂಬ ಸುದ್ದಿ ಬರುತ್ತದೆ. ಸೇತುವೆಗೆ ಬೇಕಿರುವುದು ಉದ್ಘಾಟಕರ ಕೃಪೆ ಅಲ್ಲ, ನಿರ್ಮಾಣದಲ್ಲಿ ಕೈಹಾಕುವ ಎಂಜಿನಿಯರುಗಳು, ಹಣಕಾಸು ಒದಗಿಸುವ ಅಧಿಕಾರಿಶಾಹಿ ಮತ್ತು ಶಾಸನಸಭೆಯಲ್ಲಿ ಅನುಮೋದನೆ ನೀಡುವ ಜನಪ್ರತಿನಿಧಿಗಳ ಕೃಪೆ. ಈ ಕೂಟದ ಭ್ರಷ್ಟಾಚಾರದ ಬ್ರಹ್ಮಾಂಡ ಸ್ವರೂಪವನ್ನು ಕುಸಿದ ಸೇತುವೆಗಳಲ್ಲಿ, ಮಳೆನೀರಿನಿಂದ ತುಂಬಿ ಹರಿವ ರಾಜಕಾಲುವೆಗಳಲ್ಲಿ, ಒಳಚರಂಡಿಗಳಲ್ಲಿ ಮತ್ತು ಅವೈಜ್ಞಾನಿಕವಾಗಿ ನಿರ್ಮಿಸುವ ಬಡಾವಣೆಗಳಲ್ಲಿ, ರಸ್ತೆಗಳಲ್ಲಿ ಕಾಣಬಹುದು.

1990ರ ನಂತರ ನಗರೀಕರಣಕ್ಕೆ ಬಲಿಯಾದ ಮೊದಲ ನಿಸರ್ಗ ಶಿಶು ಎಂದರೆ ಕೆರೆಗಳೇ ಆಗಿರುವುದನ್ನು ಒಪ್ಪಲೇಬೇಕಲ್ಲವೇ? ಒಣಗಿದ ಕೆರೆಗಳಲ್ಲಿ ಇಟ್ಟಿಗೆ ಗೂಡು ಮಾಡುವುದಕ್ಕಿಂತಲೂ ಹೆಚ್ಚು ಲಾಭದಾಯಕ ಉದ್ದಿಮೆಯಾಗಿ ರಿಯಲ್‌ ಎಸ್ಟೇಟ್‌ ಕಂಡಿದ್ದರಿಂದಲೇ ಎಲ್ಲೆಂದರಲ್ಲಿ ‘ಕೆರೆಯಂಗಳದ ಸುಂದರ ನಗರಿಗಳು’ ತಲೆಎತ್ತಿದ್ದನ್ನು ಬೀದರ್‌ನಿಂದ ಚಾಮರಾಜ ನಗರದವರೆಗೂ ಕಾಣಬಹುದು. ಒಳಚರಂಡಿ ನಿರ್ಮಾಣದಲ್ಲಿ ಸಿಮೆಂಟು, ಜಲ್ಲಿ, ಗಾರೆಯೊಂದಿಗೆ ಹಣವನ್ನೂ ನುಂಗಿಹಾಕುವ ಒಂದು ವರ್ಗವನ್ನೇ ನಮ್ಮ ಪ್ರಜಾ
ಪ್ರಭುತ್ವ ವ್ಯವಸ್ಥೆ ಸೃಷ್ಟಿಸಿರುವುದರಿಂದ, ಮಳೆ ಹೆಚ್ಚಾದ ಕೂಡಲೇ ಮನೆಯಂಗಳಗಳೇ ಚರಂಡಿಗಳಾಗಿರುತ್ತವೆ. ಇದಕ್ಕೆ ಹಿತವಲಯದ ಐಷಾರಾಮಿ ಫ್ಲ್ಯಾಟುಗಳೂ ಹೊರತಾಗುವುದಿಲ್ಲ.

ನಿಸರ್ಗದ ಎಲ್ಲ ಕೊಡುಗೆಗಳಿಂದಲೂ ಹಣ ಗಳಿಸುವ ಮನುಷ್ಯನ ಹಪಹಪಿ ಮತ್ತು ಲೋಭಕ್ಕೆ ಬಲಿಯಾಗಿರುವ ಪಶ್ಚಿಮಘಟ್ಟದ ಗುಡ್ಡಗಳು ಬುಡ ಸಡಿಲವಾದರೆ, ಹೆಗಲ ಭಾರ ಹೆಚ್ಚಾದರೆಸಹಜವಾಗಿಯೇ ಕುಸಿಯುತ್ತವೆ. ಇಲ್ಲಿ ಜೀವನ ಮತ್ತು ಜೀವನೋಪಾಯ ಕಳೆದುಕೊಳ್ಳುವ ಸಂತ್ರಸ್ತರು ವರ್ಷಗಟ್ಟಲೆ ಪರಿಹಾರಕ್ಕಾಗಿ ಅಂಗಲಾಚುತ್ತಲೇ ಇರುತ್ತಾರೆ. ಪ್ರವಾಸೋದ್ಯಮ ಎನ್ನುವುದು ನಿಸರ್ಗದ ದೃಷ್ಟಿಯಿಂದ ಪ್ರಯಾಸೋದ್ಯಮವಾಗಿರುವುದಕ್ಕೆ ಈ ಅಮಾಯಕ ಜನರು ಬೆಲೆ ತೆರುವಂತಾಗಿದೆ.

ಯಾರನ್ನು ದೂಷಿಸುವುದು? ಪ್ರಕೃತಿಯನ್ನೋ? ಪ್ರಕೃತಿಯ ನಿಯಮಾನುಸಾರ ಸಮಾಜವನ್ನು ನಿರ್ಮಿಸುವ ಕ್ಷಮತೆ ಮತ್ತು ಅರ್ಹತೆ ಇಲ್ಲದ ಆಡಳಿತ ವ್ಯವಸ್ಥೆಯನ್ನೋ? ಅಥವಾ ಎಲ್ಲವನ್ನೂ ಅನುಭವಿಸುತ್ತಲೂ ಮತ್ತೊಂದು ಮಹಾಮಳೆಯ ನಿರೀಕ್ಷೆಯಲ್ಲಿ ಬದುಕು ಸವೆಸುವ ನಿಷ್ಕ್ರಿಯ ಜನತೆಯನ್ನೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.