ADVERTISEMENT

ಸಂಗತ: ಕಡುಬಿನ ರುಚಿಗೆ ತಿಂದದ್ದೇ ಆಧಾರ ಅಲ್ಲವೇ?

ಪ್ರಜಾವಾಣಿ ವಿಶೇಷ
Published 27 ಅಕ್ಟೋಬರ್ 2025, 23:30 IST
Last Updated 27 ಅಕ್ಟೋಬರ್ 2025, 23:30 IST
   

‘ದೇವನೂರರಿಗೊಂದು ದಾಳಿಂಬೆ ಕೊಡಿ’ (ಅ. 11) ಎನ್ನುವ ನನ್ನ ಬರಹಕ್ಕೆ ನೀಡಿರುವ ಪ್ರತಿಕ್ರಿಯೆಯಲ್ಲಿ (ಅ. 18), ನಾನು ಕೊಡ ಹೇಳಿದ ದಾಳಿಂಬೆಯಲ್ಲಿ ಹುಸಿ ದೇಶಪ್ರೇಮ ಮತ್ತು ಧರ್ಮಪ್ರೇಮದ ಗೀಳಿನ ಮತಾಂಧ ಸಂಘಟನೆಗಳಿಗೆ ಹೆಚ್ಚು ಪಾಲು ನೀಡುವೆ ಎಂದು ದೇವನೂರ ಮಹಾದೇವ ಅವರು ನನ್ನನ್ನು ಛೇಡಿಸಿದ್ದಾರೆ. 1939ರಲ್ಲಿ ಸಂಘದ ಶಾಖೆಗೆ ಅಂಬೇಡ್ಕರ್‌ ಕೊಟ್ಟ ಭೇಟಿಯನ್ನು (ರಾಹುಲ್ ಶಾಸ್ತ್ರಿಯವರ ಪುಸ್ತಕದ ಉಲ್ಲೇಖವನ್ನು ಒಪ್ಪದೆ), ಸಾಕ್ಷಿಗಳಿಲ್ಲದ ಕಟ್ಟುಕತೆ ಮತ್ತು ಸತ್ಯಕ್ಕೆ ದೂರವಾದ ಮಾಹಿತಿ ಎಂದು ಹೇಳಿದ್ದಾರೆ.

ಸಂಘದ ಶಾಖೆಗೆ ಬಾಬಾ ಸಾಹೇಬರು ಭೇಟಿ ಕೊಟ್ಟಿದ್ದಕ್ಕೆ ದಾಖಲೆ ಕೇಳುವಾಗ, ಸರಿಸುಮಾರು 85 ವರ್ಷಗಳ ಹಿಂದೆ ಶಾಖೆಯಲ್ಲಿ ಬಂದ ಅತಿಥಿಗಳನ್ನು ದಾಖಲಿಸಿಕೊಳ್ಳುವ ಛಾಯಾಚಿತ್ರ ಅಥವಾ ವಿಡಿಯೊ ದಾಖಲಾತಿ ಮಾಡಿಕೊಳ್ಳುವ ತಂತ್ರಜ್ಞಾನವಿತ್ತೇ ಎಂಬ ಬಗ್ಗೆ ಅವರು ಯಾಕೆ ಯೋಚಿಸುವುದಿಲ್ಲ? ವ್ಯಕ್ತಿಯೊಬ್ಬ ಹೊಟ್ಟೆ ತುಂಬ ಕಡುಬು ತಿಂದು, ಅದು ರುಚಿ ಇಲ್ಲ ಎಂದು ವಾದಿಸಿದರೆ ಕಡುಬಿನ ರುಚಿಗೆ ತಿಂದದ್ದೇ ಮೂಲ ಆಧಾರ ಎನ್ನಬೇಕಲ್ಲವೇ?

1963ರಲ್ಲಿ ನೆಹರೂರವರು ಭಾರತದ ಗಣರಾಜ್ಯೋತ್ಸವ ದ ಪರೇಡ್‌ನಲ್ಲಿ ಭಾಗವಹಿಸಲು ಆರ್‌ಎಸ್‌ಎಸ್‌ಗೆ ಅವಕಾಶ ನೀಡಿದ್ದು ಸುಳ್ಳೇ? ಅದು ಸತ್ಯ ಎಂದು ದೇವನೂರರು ಒಪ್ಪುತ್ತಾರಾದರೆ, ಅದೇ ನೆಹರೂ, ದುಂಡು ಮೇಜಿನ ಚರ್ಚೆಯಲ್ಲಿ ಸಂಘದ ಹಿರಿಯರನ್ನು ಕರೆದು ಸಲಹೆ ಕೇಳಿದ್ದನ್ನು ಫೋಟೊಗಳಿಲ್ಲ ಎಂಬ ಕಾರಣಕ್ಕೆ ಘಟನೆಯೇ ಸುಳ್ಳು ಎಂದು ಹೇಗೆ ಹೇಳಬಲ್ಲರು?

ADVERTISEMENT

1969ರಲ್ಲಿ ಉಡುಪಿಯಲ್ಲಿ, ವಿಶ್ವ ಹಿಂದೂ ಪರಿಷತ್ತಿನ ನೇತೃತ್ವದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಸಂತರು ತುಂಬಿದ ವೇದಿಕೆಯಲ್ಲಿ ಮಾತನಾಡಿದ ಸಂಘದ ಹಿರಿಯ, ನನ್ನದೇ ಒಡಲ ಭಾಷೆಯಲ್ಲಿ ಹೇಳುವುದಾದರೆ ಪರಮ ಪೂಜ್ಯ ಗೋಲ್ವಲ್ಕರ್,  ಜಾತಿಯ ಹೆಸರಲ್ಲಿ ಹಿಂದೂ ಧರ್ಮ ಒಡೆಯದಂತೆ ಜಾಗ್ರತೆ ವಹಿಸೋಣ ಎಂದು ಹೇಳಿದ್ದರು. ಉಡುಪಿಯ ಹಿಂದೂ ಧಾರ್ಮಿಕ ಸಮಾವೇಶದ ನಂತರ ಸಂಘದ ಹಿರಿಯ ಪ್ರಚಾರಕ ಸೂರ್ಯನಾರಾಯಣ ಅವರನ್ನು ಭೇಟಿಯಾದಾಗ, ಅಸ್ಪೃಶ್ಯತೆ ಕೆಲವೇ ಕೆಲವು ಕೊಳಕು ಮನುಷ್ಯರ ಮನಸ್ಸುಗಳಲ್ಲಿ ತುಂಬಿದೆ. ಆ ಮನಸ್ಸುಗಳ ವಿರುದ್ಧ ಹೋರಾಡಲು ಸಂಘದ ಕಾರ್ಯಕರ್ತರು ದೀರ್ಘ ಕಾಲ ಶ್ರಮಿಸಬೇಕಾಗಬಹುದು ಎಂದು ಹೇಳಿದ್ದನ್ನು ದಾಖಲಿಸಿದರೆ, ಅದು ಸುಳ್ಳಿನ ಗೋಪುರ ಎಂದು ಅಪ್ಪಣೆ ಕೊಡಿಸಲು ಈ ನಾಡಿನ ಹಿರಿಯ ಚಿಂತಕ ದೇವನೂರ ಅವರಿಗೆ ಏನಧಿಕಾರವಿದೆ?

ಸಂಘದ ಸ್ಥಾಪಕ ಸರಸಂಚಾಲಕ ಡಾಕ್ಟರ್ ಜೀ ಮತ್ತು ಎರಡನೇ ಸರ ಸಂಚಾಲಕ ಗೋಲ್ವಲ್ಕರ್ ಅವರಿಂದ ಪ್ರೇರಿತರಾದ ಮೂರನೇ ಸರ ಸಂಚಾಲಕ ಬಾಳಸಾಹೇಬ್ ದೇವರಸ್, ಹಿಂದೂ ಧರ್ಮದ ಮೇಲು–ಕೀಳು, ಜಾತೀಯತೆ ಬಗ್ಗೆ ಮಾತನಾಡುತ್ತ, ‘ಜಗತ್ತಿನಲ್ಲಿ ಮನುಷ್ಯ ಮನುಷ್ಯನನ್ನು ಮುಟ್ಟಲಾಗದ ಅಸ್ಪೃಶ್ಯತೆ ತಪ್ಪಲ್ಲವಾದರೆ, ಪ್ರಪಂಚದ ಯಾವ ಅಪರಾಧವೂ ತಪ್ಪಲ್ಲ’ ಎಂದು ಘೋಷಿಸಿದ್ದರು. ಸಂಘ ಒಪ್ಪದವರೂ ಇದನ್ನು ಸುಳ್ಳೆನ್ನಬಹುದು.

ನನ್ನ ಮನೆಯ ಕೂಗಳತೆಯ ದೂರದಲ್ಲಿರುವ ಮುಸ್ಲಿಂ ಬಂಧುಗಳ ಮಸೀದಿಯಲ್ಲಿ ಪ್ರತಿ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತದೆ. ಎಷ್ಟೇ ಕೆಲಸದ ಒತ್ತಡವಿದ್ದರೂ ಅಂದು ಮಸೀದಿಗೆ ಹಾಜರಾಗಿ, ಭಾರತದ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸುವಾಗ, ನನ್ನೂರ ಮುಸ್ಲಿಂ ಬಂಧುಗಳ ಬಗ್ಗೆ ಗೌರವ ಹೊಂದಿದ್ದೇನೆ. ಇದೇ ಗೌರವ–ಹೆಮ್ಮೆಯನ್ನು ವಿಧಾನಸೌಧದೊಳಗೆ ಪಾಕಿಸ್ತಾನಕ್ಕೆ ಜೈ ಎಂದವರ ಜೊತೆ ಇಟ್ಟುಕೊಳ್ಳಲು ಸಂಘ ನನಗೆ ಕಲಿಸಿಲ್ಲ.

ದೇವನೂರರಿಗೆ ಒಂದು ಸ್ಪಷ್ಟನೆ ನೀಡಬೇಕಾಗಿದೆ. ‘ಆರ್‌ಎಸ್‌ಎಸ್ ಆಳ ಅಗಲ’ ಎಂಬ ಪುಸ್ತಕಕ್ಕೆ ಪ್ರಾಸ್ತಾವಿಕ ನುಡಿ ಬರೆದ ಗಣ್ಯರೊಬ್ಬರು, ಈ ಪುಸ್ತಕ ಆರ್‌ಎಸ್‌ಎಸ್‌ನ ನಿಜಸ್ವರೂಪ ತಿಳಿಸಿ ಸಂವಿಧಾನದ ಮತ್ತು ದೇಶದ ಏಕತೆ ಗಟ್ಟಿಗೊಳಿಸಲು ಶಕ್ತಿ ನೀಡುತ್ತಿದೆ ಎಂದು ಘೋಷಿಸಿದ್ದರು ಎಂದು ಬರೆದಿದ್ದೆ. ಅದಕ್ಕವರು ಪ್ರಾಸ್ತಾವಿಕ ನುಡಿ ಬರೆದದ್ದೇ ಇಲ್ಲ ಎಂದಿದ್ದಾರೆ. ವಾಸ್ತವಿಕವಾಗಿ ಅದು ಪ್ರಕಾಶಕರ ನುಡಿ. ಅದನ್ನು ಬರೆದವರು ಅಭಿರುಚಿ ಗಣೇಶ್ ಎನ್ನುವವರು. ಇದನ್ನು ದೇವನೂರರು ಅಲ್ಲಗಳೆಯಲಾರರು ಎಂದು ನನ್ನ ಭಾವನೆ.

ಗೋಲ್ವಲ್ಕರ್ ಅವರು ಚಾತುರ್ವರ್ಣದಲ್ಲಿ ನಂಬಿಕೆ ಇರಿಸಿರುವವರೆಂದೂ, ಸಾವರ್ಕರ್ ಮನುಸ್ಮೃತಿಯೇ ಹಿಂದೂ ಕಾಯ್ದೆ ಎಂದಿದ್ದಾರೆ, ಅದಕ್ಕೆ ನಿಮ್ಮ ನಿಲುವೇನು ಎಂದೂ ದೇವನೂರರು ನನ್ನನ್ನು ಪ್ರಶ್ನಿಸಿದ್ದಾರೆ. ಅವರ ಈ ಪ್ರಶ್ನೆಗಳ ಹಿಂದಿನ ಮರ್ಮಗಳನ್ನು ಅರಿತೂ, ಆರ್‌ಎಸ್‌ಎಸ್‌ನ ಒಟ್ಟು ಸಿದ್ಧಾಂತವಿರುವುದು ಹಿಂದೂ–ಒಂದು ಎಂಬುದನ್ನು ಮತ್ತೆ ಪ್ರಸ್ತಾಪಿಸುವೆ‌; ಹಿಂದೆ ಚಾತುರ್ವರ್ಣ ಇದ್ದರೆ, ಮನುಸ್ಮೃತಿಯ ಚರ್ಚೆ ಇದ್ದದ್ದೇ ಹೌದೆಂದು ತಾವು ವಾದಿಸುತ್ತಿದ್ದರೂ, ಸಂಘದ ಮೂಲಕ ಇಡೀ ಸಮಾಜ ಒಂದಾಗುತ್ತಿದೆ. ಸಂಘದ ಮನೆ ಎಂದವರಾರೂ ಚಾತುರ್ವರ್ಣವನ್ನು ಆಚರಿಸುತ್ತಲೂ ಇಲ್ಲ, ಅನುಭವಿಸುತ್ತಲೂ ಇಲ್ಲ. ಮನುಸ್ಮೃತಿಯ ಬಗ್ಗೆ ಯಾರೇನೇ ಹೇಳಿದರೂ ಸಂಘದ ಜಾತಿ ಒಂದೇ– ಹಿಂದೂ, ಹಿಂದೂ, ಹಿಂದೂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.