
ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆ ನೀಡಲು ಸರ್ಕಾರ ನೀತಿ ರೂಪಿಸಿದೆ. ಮೂಲ ಸೌಕರ್ಯಗಳನ್ನು ಒದಗಿಸದೆ ಹೋದರೆ ರಜೆಯ ಉದ್ದೇಶ ಈಡೇರದು.
‘ಗೃಹಲಕ್ಷ್ಮಿ’, ‘ಶಕ್ತಿ’ ಯೋಜನೆಗಳ ಮೂಲಕ ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದ್ದ ರಾಜ್ಯ ಸರ್ಕಾರ, ‘ಮುಟ್ಟಿನ ರಜೆ’ಯನ್ನು ನೀಡುವ ಮೂಲಕ ಮತ್ತೊಂದು ಮಹಿಳಾಪರ ನಿರ್ಧಾರ ಕೈಗೊಂಡಿದೆ.
ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿನ ಉದ್ಯೋಗಸ್ಥ ಮಹಿಳೆಯರಿಗೆ ವೇತನ ಸಹಿತ ಮುಟ್ಟಿನ ರಜೆ ನೀಡುವ ಸರ್ಕಾರದ ನೀತಿಯ ಕುರಿತು ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಚುಮುಚುಮು ಚಳಿಯಲ್ಲಿ ವಾಯುವಿಹಾರದಲ್ಲಿದ್ದ ಮಧ್ಯವಯಸ್ಕ ಪುರುಷರ ಗುಂಪಿನಲ್ಲಿಯೂ ಮುಟ್ಟಿನ ರಜೆ ಕುರಿತಾದ ಚರ್ಚೆ ನಡೆದುದನ್ನು ಗಮನಿಸಿರುವೆ. ಪರ–ವಿರೋಧ ಚರ್ಚೆಗಳ ನಂತರ ವ್ಯಕ್ತಿಯೊಬ್ಬರು, ‘ಬಹಳ ಹಿಂದಿ
ನಿಂದಲೂ ಮನೆಗಳಲ್ಲಿ ಋತುಚಕ್ರದ ಸಮಯ ಹೆಣ್ಣುಮಕ್ಕಳನ್ನು ದೈನಂದಿನ ಕೆಲಸಗಳಿಂದ ಹೊರಗಿಡುತ್ತಿರಲಿಲ್ಲವೇ...ರಜೆಯೂ ಹಾಗೆಯೇ... ಒಂದೆರಡು ದಿನಗಳಾದರೂ ಕೆಲಸ ಮಾಡುವ ಸ್ಥಳಗಳು ಸ್ವಚ್ಛ ಹಾಗೂ ಶುಭ್ರವಾಗಿರುತ್ತವೆ’ ಎಂದು ಚರ್ಚೆಗೆ ಹೊಸ ಆಯಾಮ ನೀಡಿದ್ದನ್ನು ನೋಡಿ ಗಾಬರಿ
ಆಯಿತು.
ಋತುಸ್ರಾವವೆಂಬ ಸ್ವಾಭಾವಿಕ ಜೈವಿಕ ಪ್ರಕ್ರಿಯೆಯನ್ನು ಮಹಿಳೆಯ ದೌರ್ಬಲ್ಯವೆಂದು ಭಾವಿಸುವ ಅಂದಿನ ಮತ್ತು ಇಂದಿನ ಸಮಾಜದಲ್ಲಿ, ಮುಟ್ಟಿನ ರಜೆಯೂ ಹೆಣ್ಣನ್ನು ಇನ್ನೊಂದು ರೀತಿಯಲ್ಲಿ ಅಸ್ಪೃಶ್ಯಳು ಮತ್ತು ಅಸಹಾಯಕಳನ್ನಾಗಿಸುವ ಅಪಾಯವನ್ನು ತಳ್ಳಿಹಾಕುವಂತಿಲ್ಲ.
ಹಿಂದೆಲ್ಲಾ ಗುಟ್ಟಿನಲ್ಲಿ ತೊಟ್ಟಿಕ್ಕುತ್ತಿದ್ದ ಮುಟ್ಟಿನ ಕಥೆಗಳು ಇಂದು ಗಟ್ಟಿಯಾಗಿ ಕೇಳುತ್ತಿವೆ. ಆದರೂ ಮುಟ್ಟಿನ ಗುಟ್ಟು ಕರಗುತ್ತಿಲ್ಲ. ಅನೇಕ ಸಮುದಾಯಗಳಲ್ಲಿ ಇಂದಿಗೂ ಮುಟ್ಟಿನ ಅನುಭವವು ಸಾಂಸ್ಕ್ರತಿಕ ನಿಷೇಧಗಳು ಮತ್ತು ತಾರತಮ್ಯದ ಸಾಮಾಜಿಕ ರೂಢಿಗಳಿಂದ ನಿರ್ಬಂಧಿಸಲ್ಪಟ್ಟಿದೆ. ಮುಟ್ಟನ್ನು ನಿಭಾಯಿಸಲು ಬೇಕಾದ ಸಾಮಾಜಿಕ, ಮಾನಸಿಕ ತಯಾರಿ ಇಲ್ಲದ ಕಾರಣದಿಂದಲೇ ಮುಟ್ಟನ್ನು ಒಂದು ರೀತಿ ಅಸಹ್ಯಕರವಾಗಿ ಸಮಾಜ ನೋಡಿದರೆ, ಹೆಣ್ಣುಮಕ್ಕಳು ಮುಟ್ಟನ್ನು ಹೊರೆ ಎಂದು ಭಾವಿಸುತ್ತಾ ಕೀಳರಿಮೆಯಿಂದ ನರಳುತ್ತಾರೆ. ಮುಟ್ಟಿನ ಸಂದರ್ಭದಲ್ಲಿ ಬಟ್ಟೆಯ ಕಲೆಗೆ ಹೆದರಿ ಸರಿಯಾಗಿ ಕೂರಲು, ನಿಲ್ಲಲು, ಸಮರ್ಥವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದೆ ಕುಗ್ಗಿಹೋಗುತ್ತಾರೆ.
ಬಹುತೇಕ ಸಂದರ್ಭಗಳಲ್ಲಿ ಮುಟ್ಟನ್ನು ಕುರಿತಾದ ತಪ್ಪು ಕಲ್ಪನೆಗಳು ಹೆಣ್ಣುಮಕ್ಕಳನ್ನು ಅವಮಾನಿಸುವಂತೆ, ಬೆದರಿಸುವಂತೆ ಮತ್ತು ಲಿಂಗಾಧಾರಿತ ಹಿಂಸೆಯನ್ನು ಪ್ರೇರೇಪಿಸುವಂತೆ ಇರುತ್ತವೆ. ಅಂತಹ ಸಂದರ್ಭದಲ್ಲಿ ಮುಟ್ಟಿಗಾಗಿ ಮೀಸಲಿಡಲಾದ ರಜೆ ಎಷ್ಟು ವೈಜ್ಞಾನಿಕ, ವೈಚಾರಿಕ ಎಂಬುದನ್ನು ಸೂಕ್ಷ್ಮವಾಗಿ ಗ್ರಹಿಸಬೇಕಿದೆ.
ಮುಟ್ಟಿನ ರಜೆಯು ಮಹಿಳಾ ನೌಕರರ ಆರೋಗ್ಯ ಮತ್ತು ಕೆಲಸದ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಗತಿಪರ ಹೆಜ್ಜೆಯಾದರೂ, ಹೆಣ್ಣುಮಕ್ಕಳು ತಮ್ಮ ಪೂರ್ಣ ಸಾಮರ್ಥ್ಯವನ್ನು ತಲಪುವಲ್ಲಿ ಮುಟ್ಟಿನ ನೈರ್ಮಲ್ಯ ಪ್ರಮುಖ ಪಾತ್ರ ವಹಿಸುತ್ತದೆ. ಮುಟ್ಟಿನ ಆರೋಗ್ಯ ಮತ್ತು ಶುಚಿತ್ವದ ನಿರ್ವಹಣೆಯ ಕುರಿತ ಯುನಿಸೆಫ್ ವರದಿ ಪ್ರಕಾರ, ಪ್ರತಿ ತಿಂಗಳು ವಿಶ್ವದಾದ್ಯಂತ ಎರಡು ಶತಕೋಟಿಗೂ ಹೆಚ್ಚು ಹೆಣ್ಣುಮಕ್ಕಳು ಮುಟ್ಟಾಗುತ್ತಿದ್ದು– ಬಹುತೇಕರು ‘ಮುಟ್ಟಿನ ಬಡತನ’ ಎದುರಿಸುತ್ತಿದ್ದಾರೆ. ಮುಟ್ಟಿನ ಉತ್ಪನ್ನಗಳ ಹೆಚ್ಚಿನ ಬೆಲೆ, ನೀರು ಮತ್ತು ನೈರ್ಮಲ್ಯ ಸೌಲಭ್ಯಗಳ ಕೊರತೆಯು ಈ ಬಡತನಕ್ಕೆ ಕಾರಣವಾಗಿದ್ದು, ಇದರಿಂದಲೇ ಶಾಲಾ-ಕಾಲೇಜುಗಳಲ್ಲಿ ಅನೇಕ ವಿದ್ಯಾರ್ಥಿನಿಯರು ಗೈರಾಗುತ್ತಾರೆ. ಮುಟ್ಟಿನ ಬಡತನ ಲಿಂಗ ಅಸಮಾನತೆಗೆ ಕಾರಣವಾಗಿದೆ; ಮಹಿಳಾ ಸಬಲೀಕರಣದ ಹಾದಿಯಲ್ಲಿ ದೊಡ್ಡ ತೊಡಕಾಗಿದೆ.
ಸರ್ಕಾರ ಮುಟ್ಟಿನ ರಜೆಯ ಜೊತೆಗೆ ಹೆಣ್ಣುಮಕ್ಕಳು ಕೆಲಸ ಮಾಡುವ ಸ್ಥಳಗಳಲ್ಲಿ, ಶಾಲಾ–ಕಾಲೇಜುಗಳಲ್ಲಿ ಸ್ವಚ್ಛ ಶೌಚಾಲಯ, ನೀರು, ಸ್ಯಾನಿಟರಿ ಪ್ಯಾಡ್‌ಗಳ ವಿಲೇವಾರಿಗೆ ಅವಕಾಶ ಕಲ್ಪಿಸುವ ಕಟ್ಟುನಿಟ್ಟಿನ ಕಾನೂನುಗಳನ್ನು ತರಬೇಕಿದೆ. ಮರುಬಳಕೆಯ ಮುಟ್ಟಿನ ಉತ್ಪನ್ನಗಳನ್ನು ಶಾಲಾ–ಕಾಲೇಜು ಹಾಗೂ ಕೆಲಸದ ಸ್ಥಳಗಳಲ್ಲಿ ನೀಡುವುದರಿಂದ ಹೆಣ್ಣುಮಕ್ಕಳು ಘನತೆಯಿಂದ ಕಲಿಯಲು, ಸಮರ್ಥವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ. ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯ ನಿರ್ವಹಣೆಯು ಮಾನವ ಹಕ್ಕುಗಳು ಮತ್ತು ಘನತೆಯ ಮೂಲಭೂತ ವಿಷಯವಾಗಿದೆ.
ಮುಟ್ಟಿನ ಬಗೆಗೆ ಸಮಾಜದಲ್ಲಿ ಈಗಲೂ ಇರುವ ಅಜ್ಞಾನವನ್ನು ಹಾಗೂ ಮುಟ್ಟಿನ ಕುರಿತಾಗಿ ಹೆಣ್ಣುಮಕ್ಕಳ ಕೀಳರಿಮೆಗಳನ್ನು ಹೋಗಲಾಡಿಸಿ ವೈಜ್ಞಾನಿಕ ತಿಳಿವಳಿಕೆಯನ್ನು ಮೂಡಿಸಬೇಕಾಗಿದೆ. ಶಾಲೆ ಕಾಲೇಜುಗಳಲ್ಲಿ ಹುಡುಗರನ್ನು ಒಳಗೊಂಡ ‘ಋತುಚಕ್ರದ ಶಿಕ್ಷಣ’ ಕಾರ್ಯಕ್ರಮಗಳನ್ನು ಹಮ್ಮಿ
ಕೊಳ್ಳುವ ಮೂಲಕ, ಮುಟ್ಟನ್ನು ಕುರಿತಾದ ಪೂರ್ವಗ್ರಹಗಳನ್ನು ತೊಡೆದುಹಾಕಲು ಪ್ರಯತ್ನಿಸಬೇಕಾಗಿದೆ.
ಭಾರತದಲ್ಲಿ ಮುಟ್ಟಿನ ರಜೆಯ ಸ್ವೀಕಾರವು ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಂಸ್ಥಿಕ ಅಂಶಗಳ ಮೇಲೆ ಅವಲಂಬಿತ ಆಗಿದೆ. ತಿಂಗಳಿಗೊಂದು ಮುಟ್ಟಿನ ರಜೆಯ ಕಾರಣ ಔದ್ಯೋಗಿಕ ಸಮಯದಲ್ಲಿ ಉದ್ಯೋಗಿಗಳ ಸಂಖ್ಯೆ ಕ್ಷೀಣಿಸಲು ಕಾರಣವಾಗುತ್ತದಲ್ಲದೆ, ಸಮಾನ ಕೆಲಸ ಸಮಾನ ಅವಕಾಶಗಳಿಗೆ ಈ ರಜೆ ಅಡ್ಡಿಯಾಗುತ್ತದೆ ಎನ್ನಲಾಗುತ್ತಿದೆ.
ಹೆಣ್ಣು ಮಕ್ಕಳ ಮುಟ್ಟಿನ ರಜೆ ಕೌಟುಂಬಿಕವಾಗಿ ಬಳಕೆ ಆಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಮುಟ್ಟಿನ ರಜೆಗಳನ್ನು ಪಡೆಯಲು ಸಾಧ್ಯವಿಲ್ಲದ ಪರಿಸ್ಥಿತಿಗಳು ಎದುರಾದಲ್ಲಿ ಅಚ್ಚರಿಯೂ ಇಲ್ಲ. ಹಾಗಾಗಿಯೇ, ರಜಾನೀತಿಯನ್ನು ಅನುಷ್ಠಾನಗೊಳಿಸುವಲ್ಲಿಗೆ ಸರ್ಕಾರದ ಹೊಣೆಗಾರಿಕೆ ಮುಗಿಯುವುದಿಲ್ಲ. ಈ ನೀತಿಯು ಮುಟ್ಟಿನ ಮೂಲ ಸೌಕರ್ಯಗಳನ್ನು ಒಳಗೊಂಡಂತೆ, ಮುಟ್ಟನ್ನು ಗ್ರಹಿಸುವ ನಮ್ಮ ಸಮಾಜದ ಮನಃಸ್ಥಿತಿಯನ್ನು ಬದಲಾಯಿಸಬೇಕು; ಲಿಂಗ ಸಮಾನತೆಯೆಡೆಗಿನ ಮಹತ್ವದ ಹೆಜ್ಜೆಯಾಗಿ, ಆ
ಮೂಲಕ ಮಹಿಳಾ ಸಬಲೀಕರಣಕ್ಕೆ ದಾರಿ ಮಾಡಿಕೊಡಬೇಕು. ಈ ನಿಟ್ಟಿನಲ್ಲೂ ಸರ್ಕಾರ ಯೋಚಿಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.