ADVERTISEMENT

ಸಂಗತ: ಗುರುವಿನ ಗರಡಿಮನೆಯಲ್ಲಿ ವಿಜ್ಞಾನದ ಬೆಳಕು

ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಬೆಳೆಸುವುದು ಶಿಕ್ಷಕರ ಹೊಣೆಗಾರಿಕೆ. ಸಮರ್ಥ ಗುರುವಿನ ಗರಡಿಯಲ್ಲಿ ಮಕ್ಕಳು ವೈಜ್ಞಾನಿಕ ಮನೋಭಾವ ರೂಢಿಸಿಕೊಳ್ಳುವಂತೆ ಆಗಬೇಕು.

ಮಹೇಶ್ವರ ಹುರಕಡ್ಲಿ ಬಾಚಿಗೊಂಡನಹಳ್ಳಿ
Published 26 ಫೆಬ್ರುವರಿ 2026, 23:30 IST
Last Updated 26 ಫೆಬ್ರುವರಿ 2026, 23:30 IST
   

ಸರಿಯಾಗಿ ಬೆಳಗಿನ 9.45ಕ್ಕೆ ಶಾಲೆಯ ಗಂಟೆ ಢಣ ಢಣ ಢಣವೆಂದು ಢಂಕಾನಾದಗೈದು ಮೂಕವಾಯಿತು. ಅಂಗಳದ ತುಂಬಾ ಚೆದುರಿಬಿದ್ದಿದ್ದ ಮಲ್ಲಿಗೆಯ ಹೂವುಗಳಂತೆ ಎಲ್ಲೆಡೆ ಹರಡಿದ್ದ ಮಕ್ಕಳು ಪ್ರಾರ್ಥನಾ ಸ್ಥಳಕ್ಕೆ ದೌಡಾಯಿಸಿ ಲಗುಬಗೆಯಿಂದ ನಾಡಗೀತೆ ಹಾಡಿಮುಗಿಸಿ ಹಾಲು ಕುಡಿಯಲು ಅನುವಾದರು. ಆಗ ಐದನೇ ತರಗತಿಯ ಮಕ್ಕಳು ಗುಂಪು ಕಟ್ಟಿಕೊಂಡು ಶಿಕ್ಷಕರ ಬಳಿಬಂದರು. ಅವರಲ್ಲಿ ಓರ್ವ ಪುಟಾಣಿ ‘ಮಿಸ್ ಮಿಸ್ ಈಕೀ ನಿಂಬೆಣ್ ದಾಟಿ ಬುಟಾಳ್ ಮಿಸ್. ನಿಂಬೆಣ್ ದಾಟಿದ್ರ ಕಾಲಾಗೆಲ್ಲಾ ಗುಳ್ಳ್ಯಾಗಿ ನೌವಕಾವ್ ಮಿಸ್’ ಎಂದು ಒಂದೇ ಉಸುರಿಗೆ ಉಲಿಯಿತು.

ಹಾವು ತುಳಿದಂತೆ ಹೆದರಿ ಗುಬ್ಬಿಯಾಗಿದ್ದ ಆ ಮಗು‌ ತನಗೇನೋ ಕೇಡು ಕಾದಿದೆಯೆಂಬ ಆತಂಕದಲ್ಲಿತ್ತು. ಮೂರು ದಾರಿಗಳು ಸೇರುವ ಕಡೆಗಳಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆ ಸಂದರ್ಭದಲ್ಲಿ‌ ನಿಂಬೆಹಣ್ಣು, ವೀಳ್ಯದೆಲೆ, ಅಡಿಕೆ ಹಾಗೂ ಒಂದು ರೂಪಾಯಿ ನಾಣ್ಯ ಇಟ್ಟುಹೋಗಿರುವುದನ್ನು ಗ್ರಾಮೀಣ ಭಾರತದಲ್ಲಿ ನೋಡದವರಿಲ್ಲ. ಅಂಥ ನಿಂಬೆಹಣ್ಣುಗಳನ್ನು ದಾಟುವುದು ಅಪಾಯಕರ ಎನ್ನುವುದು ಗ್ರಾಮೀಣರ ನಂಬಿಕೆ. ರಸ್ತೆಯಲ್ಲಿ ಚೆಲ್ಲಿದ ನಿಂಬೆಹಣ್ಣು, ಉಪ್ಪು, ಒಣ ಮೆಣಸಿನಕಾಯಿಗಳನ್ನು ತುಳಿಯದಂತೆ ಹಾಗೂ ದಾಟದಂತೆ ಪೋಷಕರು ಮಕ್ಕಳಿಗೆ ಹೇಳುವುದಿದೆ. ರಸ್ತೆಯಲ್ಲಿನ ಈ ವಸ್ತು ಗಳು ಮಕ್ಕಳ ಕಣ್ಣಿಗೆ ಭಯೋತ್ಪಾದಕರಂತೆ ಕಾಣಿಸುವುದಿದೆ. ಹೀಗೆ ರಸ್ತೆಯಲ್ಲಿ ಚೆಲ್ಲಿದ್ದ ನಿಂಬೆಹಣ್ಣನ್ನು ದಾಟಿದ ಆತಂಕ ಮಗುವಿನದಾಗಿತ್ತು.

ಮೌಢ್ಯಗಳು ಬಲವಾಗಿ ಬೇರೂರಿರುವ ದೇಶದ ಅಸಂಖ್ಯ ಹಳ್ಳಿಗಳಲ್ಲಿ ಶಾಲೆಗಳು ಮಾತ್ರ ವೈಚಾರಿಕತೆ ಹಾಗೂ ವೈಜ್ಞಾನಿಕತೆಯನ್ನು ಬಿತ್ತಲು ಸಾಧ್ಯ. ಆದರೆ ಇಲ್ಲೊಂದು ಸಮಸ್ಯೆಯಿದೆ. ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕಾದ ಶಿಕ್ಷಕರು, ಅದರಲ್ಲೂ ವಿಶೇಷವಾಗಿ ವಿಜ್ಞಾನ ವಿಷಯ ಬೋಧಿಸುವ ಶಿಕ್ಷಕರು ಎಷ್ಟರಮಟ್ಟಿಗೆ ವೈಚಾರಿಕತೆ ಅಳವಡಿಸಿಕೊಂಡಿದ್ದಾರೆ? ಅವರ ಬದುಕಿನಲ್ಲಿ ವೈಜ್ಞಾನಿಕ ಮನೋಭಾವ ಎಷ್ಟರಮಟ್ಟಿಗೆ ಹಾಸುಹೊಕ್ಕಾಗಿದೆ?

ADVERTISEMENT

ತರಗತಿಯಲ್ಲಿ ಬರೀ ಪಾಠಬೋಧನೆಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳುವ ಅನೇಕ ಶಿಕ್ಷಕರು ‘ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ಅಪಘಾತಗಳು ಹೆಚ್ಚು’ ಎಂಬಂಥ ಸಂಗತಿಯನ್ನು ಯಾವುದೇ ಪೂರ್ವಾಪರ ಅಧ್ಯಯನವಿಲ್ಲದೆ ಢಾಳಾಗಿ‌ ನಂಬುತ್ತಾರೆ. ತಮ್ಮ ಪೂರ್ವಗ್ರಹವನ್ನು ಮಕ್ಕಳ ಸಮ್ಮುಖದಲ್ಲಿ ಸಾರುತ್ತಾರೆ. ಇಂಥ ನಡವಳಿಕೆ ವಿಜ್ಞಾನಕ್ಕೆ ಹಾಗೂ ವೈಚಾರಿಕತೆಗೆ ಮಾಡುವ ಅಪಚಾರವಲ್ಲದೇ ಮತ್ತೇನಲ್ಲ.

‘ಮೂಢನಂಬಿಕೆ ಹೊಂದಿರುವ ಒಬ್ಬ ಅವಿದ್ಯಾವಂತ ವ್ಯಕ್ತಿಗಿಂತಲೂ ಮೂಢನಂಬಿಕೆ ಹೊಂದಿರುವ ಒಬ್ಬ ವಿದ್ಯಾವಂತ ವ್ಯಕ್ತಿ ಹೆಚ್ಚು ಅಪಾಯಕಾರಿ’ ಎಂಬ ಮಾತು ಈ ಸಂದರ್ಭಕ್ಕೆ ಅತ್ಯಂತ ಸೂಕ್ತವಾಗಿದೆ. ಯಾವುದೇ ವ್ಯಕ್ತಿ ತಾನು ಮೌಢ್ಯಕ್ಕೆ ಬಲಿಯಾಗುವುದಕ್ಕೂ ಮುಂಚೆ ಒಬ್ಬ ಸಾಮಾನ್ಯ ಪ್ರಜೆಆಗಿರುತ್ತಾನೆ. ಆತ ಬೆಳೆದ ಮನೆಯ ವಾತಾವರಣದಲ್ಲೋ ಅಥವಾ ಬೆಳೆದು ಬಂದ ಪರಿಸರದಲ್ಲೋಬೆಸೆದುಕೊಂಡಿದ್ದ ಮೂಢನಂಬಿಕೆಗಳು ಆತನ ಸುಪ್ತ ಮನಸ್ಸಿನ ಮೇಲೆ ಪ್ರಭಾವ ಬೀರಿರುತ್ತವೆ. ಇಂತಹ ವ್ಯಕ್ತಿ ಮೂಢನಂಬಿಕೆಗಳಿಗೆ‌ ಬಲಿಯಾಗುವುದರಿಂದ ಆಗುವ ಅಪಾಯಕ್ಕಿಂತ ಅದೇ ವ್ಯಕ್ತಿ ಶಿಕ್ಷಣ ಪಡೆದ ಮೇಲೂ ಮೂಢನಂಬಿಕೆಗಳಿಗೆ ಬಲಿಯಾದರೆ ಉಂಟಾಗುವ ಅಪಾಯಗಳು ಅನೂಹ್ಯವಾಗಿರುತ್ತವೆ.

ಶಿಕ್ಷಣ ಪಡೆದ ವ್ಯಕ್ತಿ ಶಿಕ್ಷಕನಾಗಿ ಬದಲಾದಮೇಲೂ ಮೌಢ್ಯಗಳನ್ನು ಹೊತ್ತು ಮೆರೆಯುವಂತಾದರೆ ಅದು ಘೋರ ದುರಂತವೇ ಸರಿ. ಶಿಕ್ಷಕರಾದವರು ಮೊದಲು ಅಧ್ಯಯನಶೀಲ ರಾಗಬೇಕು,‌ ತಮ್ಮೊಳಗಿನ ಅಂಧಕಾರವನ್ನು ಅಳೆಯಬೇಕು ಹಾಗೂ ನಿಧಾನವಾಗಿ ಅವುಗಳನ್ನು ಮನದ ಪುಟದಿಂದ ಅಳಿಸಬೇಕು ಮತ್ತು ಇದಕ್ಕಾಗಿ ಸಾಕಷ್ಟು ಅಧ್ಯಯನ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ವ್ಯಕ್ತಿತ್ವವನ್ನು ಹುರಿಗೊಳಿಸಿಕೊಳ್ಳಬೇಕು; ತಾವು ಗಳಿಸಿದ ಅರಿವನ್ನು ಮಕ್ಕಳಲ್ಲಿ ಬಿತ್ತಬೇಕು. ಬೆಳೆಯುತ್ತಿರುವ ಮಕ್ಕಳ ಹೆಜ್ಜೆ ಹೆಜ್ಜೆಯಲ್ಲೂ ಕಾಣುವ ಮೂಢನಂಬಿಕೆಗಳ‌ ಅಳಿಸುವಲ್ಲಿ ಅವಿರತವಾಗಿ ಶ್ರಮಿಸಬೇಕು. ಇಲ್ಲವಾದರೆ ಪೀಳಿಗೆಯಿಂದ ಪೀಳಿಗೆಗೆ ಸಾಗುವ ಪಿಡುಗಾಗಿ ಮೂಢನಂಬಿಕೆಗಳು ಕಾಲಕಾಲಕ್ಕೆ ಹೊಸ‌ ಹೊಸ ರೂಪ‌ ಪಡೆದು ಗಟ್ಟಿಆಗುವ ವೈರಸ್‌ಗಳಂತಾಗುತ್ತವೆ. ಮಕ್ಕಳ ಮೂಲಕ ಕುಟುಂಬ ಹಾಗೂ ಸಮಾಜವನ್ನು ತಲಪುವ ಅವಕಾಶ ಇರುವುದರಿಂದ ಎಳೆಯರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿರುತ್ತದೆ.

ಮಕ್ಕಳಲ್ಲಿ ವೈಚಾರಿಕತೆ ಮೂಡಿಸುವುದು ಶಿಕ್ಷಕರ ಹೊಣೆಗಾರಿಕೆ ಎನ್ನುವುದರಲ್ಲಿ ಅನುಮಾನವೇನೂ ಇಲ್ಲ. ಆದರೆ, ಮೌಢ್ಯ ನಿವಾರಣೆ ಎನ್ನುವುದು ಶಿಕ್ಷಕರ ಜವಾಬ್ದಾರಿ ಮಾತ್ರವಲ್ಲ; ಅವರೊಂದಿಗೆ ಪೋಷಕರು, ಜನಸಾಮಾನ್ಯರು ಹಾಗೂ ವ್ಯವಸ್ಥೆ ಕೂಡ ಪ್ರಧಾನ ಪಾತ್ರವಹಿಸುತ್ತದೆ.

ಮೌಢ್ಯ ಮತ್ತು ಕಂದಾಚಾರಗಳನ್ನು ನಿವಾರಿಸಲು ಸರ್ಕಾರ ಗಳು ಶಾಲಾ ಕಾಲೇಜುಗಳಲ್ಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕು. ಜನಸಾಮಾನ್ಯರಿಗಾಗಿ ಬೀದಿನಾಟಕ,‌‌ ಉಚಿತ ಕಾರ್ಯಾಗಾರ, ಕಾನೂನು ತಿಳಿವಳಿಕೆ ಹಾಗೂ ಮೌಢ್ಯ ವಿರೋಧಿ ಸಹಾಯವಾಣಿ ತರಬೇಕು. ಶಾಲಾ–ಕಾಲೇಜುಗಳಲ್ಲಿ  ಕಾಲಕಾಲಕ್ಕೆ ಶಿಕ್ಷಕರಿಗೆ ತರಬೇತಿ, ಸೌಲಭ್ಯ ಹಾಗೂ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಮೌಢ್ಯ-ಮೂಢನಂಬಿಕೆಗಳು ಸಮುದಾಯದಿಂದ ದೂರವಾಗುವ ಪ್ರಕ್ರಿಯೆಗೆ ವೇಗ ದೊರೆಯುತ್ತದೆ.

ದೇಶದ ಅಭಿವೃದ್ಧಿಗೆ ತೊಡಕಾಗಿರುವ ಮೂಢನಂಬಿಕೆಗಳನ್ನು ತೊಡೆದುಹಾಕಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಇದು ಸಾಧ್ಯವಾದಲ್ಲಿ ಶಿಕ್ಷಣದ ಪ್ರಮುಖ ಉದ್ದೇಶವಾದ ಅರಿವು ಸಿದ್ಧಿಸಿದಂತಾಗುತ್ತದೆ. ವಿದ್ಯಾರ್ಥಿಗಳನ್ನು ಪರೀಕ್ಷೆಗಳಿಗೆ ಸಿದ್ಧಪಡಿಸುವುದಷ್ಟೇ ಶಿಕ್ಷಕರ ಕರ್ತವ್ಯವಾಗಿರದೆ, ಮಕ್ಕಳ ವ್ಯಕ್ತಿತ್ವ ನಿರ್ಮಾಣವೂ ಅವರ ಹೊಣೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.